ಕಾರಿಗೆ ರಕ್ತದ ಕಲೆಯಾಗುತ್ತದೆ ಎಂದು ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟು ಹೋದರು!

Update: 2018-01-20 07:30 GMT

ಸಹರಾನ್ಪುರ, ಜ.20: ಕಾರಿಗೆ ರಕ್ತದ ಕಲೆಯಾಗುತ್ತದೆ ಎಂದು ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ಇಬ್ಬರನ್ನು ಉತ್ತರ ಪ್ರದೇಶದ ಪೊಲೀಸರು ಬಿಟ್ಟು ಹೋಗಿದ್ದು, ತೀವ್ರ ರಕ್ತಸ್ರಾವದಿಂದ ಗಾಯಾಳುಗಳು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಅವರೂ ಕೂಡ ಯಾರದೋ ಮಕ್ಕಳು… ನಿಮ್ಮಲ್ಲಿ ನಾನು ಬೇಡಿಕೊಳ್ಳುತ್ತಿದ್ದೇನೆ” ಎಂದು ಗಾಯಾಳುಗಳ ಪರಿಷಯಸ್ಥರು ಪೊಲೀಸರೊಂದಿಗೆ ವಿನಂತಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಈ ಸಂದರ್ಭ ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಪೊಲೀಸ್ “ಕಾರಿಗೆ ರಕ್ತದ ಕಲೆಯಾಗುತ್ತದೆ” ಎಂದಿದ್ದಾರೆ.

ಮೃತಪಟ್ಟವರನ್ನು ಅರ್ಪಿತ್ ಖುರಾನ ಹಾಗು ಸನ್ನಿ ಗಾರ್ಗ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಹೊಂಡಕ್ಕೆ ಬೈಕ್ ಬಿದ್ದಿತ್ತು. ಅಪಘಾತದಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂದರ್ಭ ದಾರಿಹೋಕರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಇವರು ನಿರಾಕರಿಸಿದರು. ಕಾರಿನ ಸೀಟಿಗೆ ರಕ್ತದ ಕಲೆಯಾಗುತ್ತದೆ ಎಂದು ಪೊಲೀಸರು ಹೇಳಿದರು.

ಕೊನೆಗೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಇಬ್ಬರು ಯುವಕರು ಅದಾಗಲೇ ಮೃತಪಟ್ಟಿದ್ದರು.

“ಇದು ಅನಿರೀಕ್ಷಿತ ಘಟನೆಯಾಗಿದೆ. ಅಮಾನವೀಯವಾಗಿ ಪೊಲೀಸರು ವರ್ತಿಸಿದ್ದಾರೆ. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಅವರನ್ನು ಅಮಾನತು ಮಾಡಲಾಗಿದೆ” ಎಂದು ಸಹರಾನ್ಪುರ ರೇಂಜ್ ಡಿಐಜಿ ಇಮ್ಯಾನುವೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News