ಕ್ರಿಕೆಟ್ ಆಟಗಾರ್ತಿ ಹರ್ಮನ್ ಕೌರ್‌ಗೆ ಡಿವೆಎಸ್ಪಿ ಹುದ್ದೆಗೆ ರೈಲ್ವೇಸ್ ಅಡ್ಡಿ ?

Update: 2018-01-20 18:13 GMT

ಹೊಸದಿಲ್ಲಿ, ಜ.20: ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಪಂಜಾಬ್ ಸರಕಾರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಹುದ್ದೆ ನೀಡಿದ್ದರೂ, ಅವರಿಗೆ ಆ ಹುದ್ದೆ ಸ್ವೀಕರಿಸದಂತೆ ರೈಲ್ವೆಯು ಅಡ್ಡಿಪಡಿಸಿದೆ.

ಕೌರ್ ಅವರು ಪಶ್ಚಿಮ ವಲಯ ರೈಲ್ವೆಯಲ್ಲಿ ಪ್ರಸ್ತುತ ಅಧೀಕ್ಷಕರಾಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹರ್ಮನ್‌ಪ್ರೀತ್ ಕೌರ್‌ಗೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಉಪಾಧೀಕ್ಷಕ ಹುದ್ದೆ ನೀಡಲಾಗಿತ್ತು.

ಕೌರ್ ಪೊಲೀಸ್ ಇಲಾಖೆಗೆ ಸೇರಲು ರೈಲ್ವೆಯು ಇನ್ನೂ ಅವರಿಗೆ ಬಿಡುಗಡೆ ಆದೇಶ ನೀಡಿಲ್ಲ. ರೈಲ್ವೆಯಿಂದ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕೌರ್‌ಗೆ ಪೊಲೀಸ್ ಇಲಾಖೆ ಸೇರಲು ಅಡಚಣೆ ಉಂಟಾಗಿದೆ.

 ‘‘ಪೊಲೀಸ್ ಇಲಾಖೆಯಿಂದ ನೇಮಕಾತಿ ಆದೇಶ ಪತ್ರ ಕೌರ್ ಕೈ ಸೇರಿದ್ದು, ಆಕೆ ಹುದ್ದೆಗೆ ಸೇರಲು ವೈದ್ಯಕೀಯ ವಿಧಿ ವಿಧಾನವನ್ನು ಪೂರ್ಣಗೊಳಿಸಿದ್ದ್ದಾಳೆ. ಪಶ್ಚಿಮ ರೈಲ್ವೆಯೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ಈ ಹುದ್ದೆಯಿಂದ ಬಿಡುಗಡೆಯಾಗಲು ಆಕೆ ಮಾಡಿಕೊಂಡ ಒಪ್ಪಂದದ ಅವಧಿ ಮುಗಿದಿಲ್ಲ. ಈ ಕಾರಣದಿಂದಾಗಿ ಆಕೆಯನ್ನು ರೈಲ್ವೆಯಿಂದ ಬಿಡುಗಡೆಗೊಳಿಸಿಲ್ಲ’’ ಎಂದು ಕೌರ್ ಅವರ ತಂದೆ ಹರ್ಮೇಂದೆರ್ ಸಿಂಗ್ ಭುಲ್ಲಾರ್ ತಿಳಿಸಿದ್ದಾರೆ. ‘‘ಹರ್ಮನ್‌ಪ್ರೀತ್  ಸೇವಾ ಕರಾರುಪತ್ರವನ್ನು ರದ್ದುಗೊಳಿಸುವಂತೆ ರೈಲ್ವೆಗೆ ಮನವಿ ಮಾಡಿದ್ದೇವೆ. ಕೌರ್‌ಗೆ ಪಂಜಾಬ್‌ನಲ್ಲಿ ಮನೆ ಇರುವುದರಿಂದ ಆಕೆಗೆ ಪಂಜಾಬ್‌ನಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ’’ ಎಂದು ಭುಲ್ಲಾರ್ ಹೇಳಿದ್ದಾರೆ.

  ರೈಲ್ವೆ ಉತ್ತೇಜನ ಮಂಡಳಿಯ ಕಾರ್ಯದರ್ಶಿ ರೇಖಾ ಯಾದವ್ ಅವರು ಕೌರ್ ಅವರ ವಾದವನ್ನು ತಿರಸ್ಕರಿಸಿದ್ದಾರೆ. ರೈಲ್ವೆಯು ಕೌರ್ ಮಾಡಿಕೊಂಡಿರುವ ಸೇವಾ ಕರಾರಿನಂತೆ ನೀಡಬೇಕಾದ ಹಣವನ್ನು ಮನ್ನಾ ಮಾಡಲು ಸಿದ್ದ ಎಂದು ಹೇಳಿದ್ದಾರೆ.

 ‘‘ರೈಲ್ವೆಯು ಕ್ರೀಡಾಪಟುಗಳಿಗೆ ಯಾವಾಗಲೂ ಬೆಂಬಲ ನೀಡುತ್ತಿದೆ. ಕೌರ್ ಅವರಿಗೆ ಉತ್ತಮ ಅವಕಾಶ ದೊರೆತರೆ ಖಂಡಿತವಾಗಿಯೂ ರೈಲ್ವೆಯು ಅವರಿಗೆ ಬಿಡುಗಡೆ ಆದೇಶ ನೀಡಲಿದೆ’’ಎಂದು ಅವರು ಹೇಳಿದ್ದಾರೆ.

 ‘‘ಹರ್ಮನ್‌ಪ್ರೀತ್ ಕೌರ್ ಮಾಡಿಕೊಂಡಿರುವ ಕರಾರಿನಂತೆ ಐದು ವರ್ಷ ಸೇವೆ ಸಲ್ಲಿಸಬೇಕಾಗಿದೆ. ಆದರೆ ಅವರು ಮೂರು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ದೇಶಕ್ಕಾಗಿ ಮತ್ತು ರೈಲ್ವೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಮತ್ತು ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅವರು ಮಾಡಿಕೊಂಡ ಕರಾರಿನ ಅವಧಿಯನ್ನು ಕಡಿತಗೊಳಿಸಲಾಗಿದೆ’’ ಎಂದು ಯಾದವ್ ತಿಳಿಸಿದ್ದಾರೆ.

 ಲಭ್ಯ ಮಾಹಿತಿ ಪ್ರಕಾರ ಹರ್ಮನ್‌ಪ್ರೀತ್ ಕೌರ್‌ಗೆ ಕಳೆದ ಐದು ತಿಂಗಳಿನಿಂದ ರೈಲ್ವೆಯು ಸಂಬಳ ಪಾವತಿಸಿಲ್ಲ. ಈ ಬಗ್ಗೆ ಯಾದವ್ ಅವರಲ್ಲಿ ಕೇಳಿದಾಗ ‘‘ ಕಳೆದ ಐದು ತಿಂಗಳಿನಿಂದ ಕೌರ್ ಅವರು ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡುವುದಕ್ಕಾಗಿ ವಿದೇಶದಲ್ಲಿದ್ದರು. ಇದೊಂದು ಖಾಸಗಿ ಟೂರ್ನಮೆಂಟ್ . ನಾವು ಅವರಿಗೆ ಲೀಗ್ ಆಡಲು ನಿರಾಕ್ಷೇಪಣಾ ಪತ್ರ ನೀಡಿದ್ದೆವು. ಇದೀಗ ನಾವು ಅವರಿಗೆ ರಜೆ ನೀಡಿಲ್ಲ. ಅವರು ವಿಶೇಷ ಸಾಂದರ್ಭಿಕ ರಜೆಯಲ್ಲಿದ್ದಾರೆ ’’ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

‘‘ತನ್ನ ಪುತ್ರಿಯನ್ನು ರೈಲ್ವೆಯು ಕರ್ತವ್ಯದಿಂದ ಬಿಡುಗಡೆ ಮಾಡದಿದ್ದರೆೆ ತಾನು ನ್ಯಾಯಾಲಯದ ಮೊರೆ ಹೋಗುವುದಿಲ್ಲ’’ ಎಂದು ಕೌರ್ ತಂದೆ ಹರ್ಮೇಂದೆರ್ ಸಿಂಗ್ ಭುಲ್ಲಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News