1.27 ಲಕ್ಷ ಕಾರುಗಳನ್ನು ವಾಪಸ್ ಪಡೆಯಲಿರುವ ‘ಆಡಿ’

Update: 2018-01-21 16:56 GMT
ಸಾಂದರ್ಭಿಕ ಚಿತ್ರ

ಫ್ರಾಂಕ್‌ಫರ್ಟ್, ಜ. 21: ಜರ್ಮನಿಯ ಕಾರು ತಯಾರಕ ಕಂಪೆನಿ ಆಡಿಯ ಇತ್ತೀಚಿನ ‘ಯುರೊ-6’ ಡೀಸೆಲ್ ಮಾದರಿಗಳಲ್ಲಿ ಕಡಿಮೆ ಮಾಲಿನ್ಯ ತೋರಿಸುವ ಸಾಫ್ಟ್‌ವೇರನ್ನು ವಾಹನಗಳ ಮೇಲೆ ನಿಗಾ ಇಡುವ ಸಂಸ್ಥೆ ಕೆಬಿಎ ಪತ್ತೆಹಚ್ಚಿದೆ ಹಾಗೂ 1,27,000 ವಾಹನಗಳನ್ನು ವಾಪಸ್ ಪಡೆದುಕೊಳ್ಳುವಂತೆ ಆದೇಶಿಸಿದೆ ಎಂದು ‘ಬಿಲ್ಡ್ ಆ್ಯಮ್ ಸೊನಾಟಗ್’ ವರದಿ ಮಾಡಿದೆ.

 ಅದೇ ವೇಳೆ ಹೇಳಿಕೆಯೊಂದನ್ನು ನೀಡಿರುವ ಕಾರು ತಯಾರಕ ಕಂಪೆನಿ ಆಡಿ, ಜುಲೈಯಲ್ಲಿ ಹೊರತರಲಾದ ವಿ6 ಮತ್ತು ವಿ8 ಟಿಡಿಐ ಇಂಜಿನ್‌ಗಳನ್ನು ಹೊಂದಿರುವ 8,50,000 ಡೀಸೆಲ್ ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆಯಲಾಗುತ್ತಿದ್ದು, ಅದರಲ್ಲಿ ಈ ವಾಹನಗಳೂ ಸೇರಿವೆ ಎಂದು ಹೇಳಿದೆ.

‘‘ವಿವಾದದಲ್ಲಿರುವ ವಾಹನಗಳ ಇಂಜಿನ್ ನಿಯಂತ್ರಣ ಸಾಫ್ಟ್‌ವೇರನ್ನು ಸಂಪೂರ್ಣವಾಗಿ ಪರಿಷ್ಕರಿಸಿ, ಪರಿಶೀಲಿಸಲಾಗುವುದು ಹಾಗೂ ಅಂಗೀಕಾರಕ್ಕಾಗಿ ಕೆಬಿಎಗೆ ಕಳುಹಿಸಲಾಗುವುದು’’ ಎಂದು ಆಡಿ ತಿಳಿಸಿದೆ.

2015ರಲ್ಲಿ ಫೋಕ್ಸ್‌ವ್ಯಾಗನ್ ಕಾರುಗಳು ವಾಯು ಮಾಲಿನ್ಯ ಪರೀಕ್ಷೆಯಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಅದರ ಕಾರುಗಳು ನೈಟ್ರೋಜನ್ ಆಕ್ಸೈಡ್‌ಗೆ ಸಂಬಂಧಿಸಿ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದವು. ಆದರೆ, ವಾಸ್ತವವಾಗಿ, ಅನುಮೋದಿತ ಮಟ್ಟಕ್ಕಿಂತ 40 ಪಟ್ಟು ಹೆಚ್ಚು ನೈಟ್ರೋಜನ್ ಆಕ್ಸೈಡ್ ಹೊರಸೂಸುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News