ಮ್ಯಾನ್ಮಾರ್‌ಗೆ ವಾಪಸ್ ಹೋಗಲು ರೊಹಿಂಗ್ಯಾ ನಿರಾಶ್ರಿತರ ವಿರೋಧ

Update: 2018-01-21 17:01 GMT

ಢಾಕಾ, ಜ. 21: ತಮ್ಮನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಯೋಜನೆಗೆ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿರುವ ರೊಹಿಂಗ್ಯಾ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ.

  ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಯಾಂಗೀ ಲೀ ರವಿವಾರ ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದಾಗ ಹತ್ತಾರು ನಿರಾಶ್ರಿತರು ಬಟ್ಟೆಯ ಬ್ಯಾನರ್‌ಗಳನ್ನು ಹಿಡಿದು ವಾಪಸಾತಿಗೆ ವಿರೋಧ ವ್ಯಕ್ತಪಡಿಸಿದರು.

ವಾಪಸಾಗದಿದ್ದರೆ ತಮ್ಮ ಆಹಾರ ರೇಶನ್ ಕಾರ್ಡ್‌ಗಳನ್ನು ಕಸಿದುಕೊಳ್ಳುವುದಾಗಿ ಬಾಂಗ್ಲಾದೇಶದ ಸೇನಾಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಕೆಲವು ನಿರಾಶ್ರಿತರು ಹೇಳಿದ್ದಾರೆ.

ಕಳೆದ ವಾರ ಸಹಿ ಹಾಕಲಾದ ಒಪ್ಪಂದವೊಂದರ ಪ್ರಕಾರ, ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯ ಮ್ಯಾನ್ಮಾರ್ ಭಾಗದಲ್ಲಿ ಸ್ಥಾಪಿಸಲಾಗಿರುವ ಎರಡು ಸ್ವೀಕಾರ ಕೇಂದ್ರಗಳು ಮತ್ತು ಒಂದು ತಾತ್ಕಾಲಿಕ ಶಿಬಿರದ ಮೂಲಕ ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್ ಸ್ವೀಕರಿಸುತ್ತದೆ. ಈ ಪ್ರಕ್ರಿಯೆಯು ಮಂಗಳವಾರ ಆರಂಭಗೊಂಡು ಎರಡು ವರ್ಷಗಳ ವರೆಗೆ ಮುಂದುವರಿಯುತ್ತದೆ.

ತಮ್ಮ ರಕ್ಷಣೆಯ ಭರವಸೆ ಮತ್ತು ಪೌರತ್ವ ಸಿಗದೆ ಮ್ಯಾನ್ಮಾರ್‌ಗೆ ವಾಪಸ್ ಹೋಗಲು ನಿರಾಶ್ರಿತರು ನಿರಾಕರಿಸಿದ್ದಾರೆ. ಅಂಗೀಕೃತ ಜನಾಂಗೀಯ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ತಮ್ಮನ್ನು ಸೇರಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News