×
Ad

ಪ್ರಪಂಚೋದ್ಯ ವಾಯು ಶುದ್ಧೀಕರಣಕ್ಕೆ ಗೋಪುರ: ಚೀನಾ ಸಾಧನೆ

Update: 2018-01-21 23:47 IST

ಹಲವು ವರ್ಷಗಳಿಂದ ವಾಯುಮಾಲಿನ್ಯದ ಸಮಸ್ಯೆಯಿಂದ ತತ್ತರಿಸುತ್ತಿರುವ ಚೀನಾ ಈಗ ಇಡೀ ವಿಶ್ವವೇ ಅಚ್ಚರಿಪಡುವಂತಹ ಸಾಧನೆ ಮಾಡಿದೆ.ಅದೀಗ ಪ್ರಾಯೋಗಿಕವಾಗಿ ಭಾರೀ ಎತ್ತರದ ವಾಯು ಶುದ್ಧೀಕರಣ ಗೋಪುರವೊಂದನ್ನು ನಿರ್ಮಿಸಿದೆ. ಜಗತ್ತಿನ ಅತೀ ದೊಡ್ಡ ವಾಯುಶುದ್ಧೀಕರಣವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿರುವ ಈ ಗೋಪುರವು 330 ಅಡಿಗಳಷ್ಟು ಎತ್ತರವಿದೆ.

ಕ್ಸಿಯಾನ್ ನಗರದಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಶುದ್ಧೀಕರಣ ಘಟಕವು 10 ಚ.ಕಿ.ಮೀ. ಅಂತರದಲ್ಲಿ, 10 ದಶಲಕ್ಷಕ್ಕೂ ಅಧಿಕ ಕ್ಯೂಬಿಕ್ ಮೀಟರ್‌ನಷ್ಟು ವಾಯುವನ್ನು ಶುದ್ಧಗೊಳಿಸಿದೆ. ಗೋಪುರದ ಬುಡದಲ್ಲಿ ಸ್ಥಾಪಿಸಲಾಗಿರುವ ಗ್ರೀನ್‌ಹೌಸ್‌ಗಳ ಮೂಲಕ ಈ ವಾಯುಶುದ್ಧೀಕರಣ ಘಟಕವು ಕಾರ್ಯಾಚರಿಸುತ್ತಿದೆ.

ಕ್ಸಿಯಾನ್ ನಗರದ ಅತ್ಯಂತ ಗಂಭೀರ ಹಂತದಲ್ಲಿದ್ದ ವಾಯುಮಾಲಿನ್ಯದ ಮಟ್ಟವನ್ನು ಈ ಗೋಪುರವು ಈಗ ಸಾಧಾರಣ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಚೀನಾದ ಭೂಪರಿಸರ ವಿಜ್ಞಾನ ಅಕಾಡಮಿಯ ಸಂಶೋಧನಾ ತಂಡದ ವರಿಷ್ಠ ಕಾವೊ ಜುಂಜಿ ತಿಳಿಸಿದ್ದಾರೆ.

ಪೂರ್ಣ ಗಾತ್ರದ ಈ ಗೋಪುರವು 500 ಮೀಟರ್ (1,640 ಅಡಿ) ಎತ್ತರ ಹಾಗೂ 656 ಅಡಿ ಅಗಲ ಪ್ರದೇಶದವರೆಗೆ ಶುದ್ಧೀಕೃತ ವಾಯುವನ್ನು ಬಿಡುಗಡೆಗೊಳಿಸಬಹುದಾಗಿದೆಯೆಂದವರು ಹೇಳಿದ್ದಾರೆ. ಇಲ್ಲಿ ಸ್ಥಾಪಿತವಾಗಿರುವ ಹಸಿರುಮನೆಗಳು ನಗರದ 30 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿದೆ.

ಸುತ್ತಿಗೆಯಿಂದ ಹೊಡೆದರೂ ಹೋಳಾಗದ, ಗಾಜಿನ ಸೇತುವೆ

ಚೀನಾವು ವಿವಿಧ ವಾಸ್ತುಶಿಲ್ಪ ಅದ್ಬುತಗಳ ತವರೆಂದು ಖ್ಯಾತಿ ಪಡೆದಿದೆ. ಅದು ನಿರ್ಮಿಸಿದ ಗಾಜಿನ ಸೇತುವೆ ಹಾಗೂ ಸ್ಕೈವಾಕ್‌ಗಳಿಗಾಗಿ ಅದು ಸಾವಿರಾರು ಕೋಟಿ ಹಣವನ್ನು ಸುರಿದಿದೆ. ಇದೀಗ ಇವುಗಳನ್ನೆಲ್ಲಾ ಮೀರಿಸಿರುವ ಅತ್ಯಂತ ದೊಡ್ಡದಾದ ಗಾಜಿನ ಸೇತುವೆಯೊಂದನ್ನು ದಕ್ಷಿಣ ಚೀನಾದ ಹೆಚಿ ನಗರದಲ್ಲಿ ನಿರ್ಮಿಸಲಾಗಿದು, ಅದು ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಈ ಅತ್ಯದ್ಭುತವಾದ ಗಾಜಿನ ಸೇತುವೆಯನ್ನು ಸಾರ್ವಜನಿಕರಿಗೆ ತೆರೆದಿಡುವ ಮುನ್ನ ಅದರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ ತಪಾಸಣಾ ಕೆಲಸಗಳಲ್ಲಿ ಕಾರ್ಮಿಕರೀಗ ನಿರತರಾಗಿದ್ದಾರೆ. ಗಾಜಿನ ಸೇತುವೆ ಬಲಿಷ್ಠವಾಗಿದೆಯೇ ಎಂಬುದನ್ನು ಖಾತರಿಪಡಿಸಲು ಕಾರ್ಮಿಕರು ಅದನ್ನು ದೊಡ್ಡದೊಡ್ಡ ಸುತ್ತಿಗೆಗಳಿಂದ ಹೊಡೆಯುತ್ತಿರುವುದನ್ನು ಮತ್ತು ಸೇತುವೆಯಲ್ಲಿನ ಗಾಜಿನ ಹೆಂಚುಗಳ ಮೇಲೆ ಜಿಗಿದುಕುಪ್ಪಳಿಸುತ್ತಿರುವುದನ್ನು ತೋರಿಸುವ ವೀಡಿಯೋ ವೊಂದನ್ನು ಚೀನಾದ ಸಿಜಿಟಿವಿಎನ್ ಸುದ್ದಿ ವಾಹಿನಿ ಪ್ರಸಾರ ಮಾಡಿದೆ. ಸುತ್ತಿಗೆಗಳ ಹೊಡೆತದಿಂದ ಗಾಜಿನ ಹೆಂಚುಗಳು ಬೀಳದಿದ್ದರೂ, ಅದರಲ್ಲಿ ಒಂದೆರಡು ಬಿರುಕುಗಳಾಗಿರುವುದನ್ನು ವೀಡಿಯೋ ತೋರಿಸಿದೆ.

ಚೀನಾದ ಅತೀ ಉದ್ದದ ಸ್ಕೈವಾಕ್ ಎನಿಸಿರುವ ಈ ಗಾಜಿನ ಸೇತುವೆಯು 600 ಅಡಿ ಉದ್ದವಿದ್ದು, ನೆಲದಿಂದ ಮೇಲೆ 900 ಮೀಟರ್ ಎತ್ತರದಲ್ಲಿ ನೇತಾಡುತ್ತಿದೆ. ಫೆಬ್ರವರಿ 8ರಂದು ಸೇತುವೆಯು ಸಾರ್ವಜನಿಕರಿಗಾಗಿ ತೆರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ