ಅತೀ ಆತ್ಮವಿಶ್ವಾಸಕ್ಕೆ ಆಪ್ ಸರಕಾರ ತೆತ್ತ ಬೆಲೆ

Update: 2018-01-22 04:58 GMT

ದಿಲ್ಲಿಯ ಆಮ್ ಆದ್ಮಿ ಸರಕಾರ ಕೇಂದ್ರದ ಮೋದಿ ಸರಕಾರಕ್ಕೆ ಸದಾ ಮಗ್ಗುಲ ಮುಳ್ಳು. ವಿರೋಧ ಪಕ್ಷವೇ ಇಲ್ಲ ಎಂಬ ಅಹಂಭಾವದಲ್ಲಿ ದೇಶವಿರೋಧಿ ನೀತಿಗಳನ್ನು ಒಂದೊಂದಾಗಿ ಜಾರಿಗೆ ತರಲು ಹೊರಟಾಗ, ವಿರೋಧ ಪಕ್ಷದ ಸ್ಥಾನವನ್ನು ತುಂಬಿ, ಮೋದಿಯ ಮುಖವಾಡಗಳನ್ನು ಒಂದೊಂದಾಗಿ ಕಳಚತೊಡಗಿದ್ದು ಆಮ್‌ಆದ್ಮಿ ಪಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ. ಬರೇ ಒಂದು ದಶಕದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ರಾಜಕೀಯ ಪಕ್ಷದ ರೂಪಕೊಟ್ಟು, ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು, ದಿಲ್ಲಿಯ ಅಧಿಕಾರ ಹಿಡಿದ ಕೇಜ್ರಿವಾಲ್ ಮುತ್ಸದ್ದಿತನಕ್ಕೆ ಸಾಟಿಯಿಲ್ಲ. ತನ್ನ ರಾಜಕೀಯ ವರ್ಚಸ್ಸು ಬರೇ ದಿಲ್ಲಿಗೆ ಮಾತ್ರವಲ್ಲ ಎನ್ನುವುದನ್ನು ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲೂ ಸಾಬೀತು ಪಡಿಸಿದರು.

ಇಷ್ಟು ಸಣ್ಣ ಅವಧಿಯಲ್ಲಿ ಪ್ರಮುಖ ಪಕ್ಷವಾಗಿ ಬೇರು ಬಿಟ್ಟು, ಜಾತಿ ಧರ್ಮರಾಜಕಾರಣದಾಚೆಗೆ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆಯೊಂದಿಗೆ ಜನಮನವನ್ನು ತಲುಪಿದ ಇನ್ನೊಂದು ಪಕ್ಷವಿಲ್ಲ. ಆಪ್ ಪಕ್ಷದೊಳಗಿರುವ ಪ್ರಜ್ಞಾವಂತ ನಾಯಕರು ಮತ್ತು ಅದರ ಬೆನ್ನಿಗಿರುವ ಪ್ರಜ್ಞಾವಂತ ಮತದಾರರ ಕಾರಣದಿಂದಲೇ ನರೇಂದ್ರ ಮೋದಿಯವರು ಕಾಂಗ್ರೆಸ್‌ಗಿಂತ ಹೆಚ್ಚು ತಲೆಕೆಡಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಕುರಿತಂತೆ. ದಿಲ್ಲಿಯ ಅಧಿಕಾರದ ಚುಕ್ಕಾಣಿಯನ್ನು ಆಪ್ ಹಿಡಿದ ದಿನದಿಂದ ಗರಿಷ್ಠ ಮಟ್ಟದಲ್ಲಿ ಕೇಂದ್ರ ಸರಕಾರ ಕಿರುಕುಳವನ್ನು ನೀಡಿದೆ. ಪೊಲೀಸರ ನಿಯಂತ್ರವನ್ನು ತನ್ನ ಕೈಗೆ ತೆಗೆದುಕೊಂಡು ಕಾನೂನು ವ್ಯವಸ್ಥೆಯ ಮೇಲೆ ಕೇಂದ್ರ ಹಸ್ತಕ್ಷೇಪ ನಡೆಸಿತು. ಲೆಫ್ಟಿನೆಂಟ್ ಗವರ್ನರ್ ಪರ್ಯಾಯ ಸರಕಾರವಾಗಿ ದಿಲ್ಲಿಯನ್ನು ಆಳುವ ಪ್ರಯತ್ನ ನಡೆಸಿದರು. ತನಿಖಾ ಸಂಸ್ಥೆಗಳನ್ನೂ ಕೇಜ್ರಿವಾಲ್ ಸೇರಿದಂತೆ ವಿವಿಧ ಆಪ್ ನಾಯಕರ ವಿರುದ್ಧ ಛೂಬಿಡಲಾಯಿತು.

ಆಡಳಿತ ನಡೆಸುವ ಕಡೆಗೆ ಗಮನ ಕೊಡಲು ಸಾಧ್ಯವಾಗದಂತಹ ಸನ್ನಿವೇಶವನ್ನು ಕೇಂದ್ರ ಸರಕಾರ ಪದೇ ಪದೇ ಆಪ್ ಸರಕಾರಕ್ಕೆ ಸೃಷ್ಟಿಸಿತು. ಇದೀಗ ಆಪ್ ಪಕ್ಷದ ವಿರುದ್ಧ ಚುನಾವಣಾ ಆಯೋಗದ ಮೂಲಕ ಮತ್ತೊಂದು ಭಾರೀ ಪ್ರಹಾರವಾಗಿದೆ. ಲಾಭದಾಯಕ ಹುದ್ದೆಗಳನ್ನು ಹೊಂದಿದ್ದಕ್ಕಾಗಿ ಆಪ್‌ನ 20 ಶಾಸಕರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವಿವಾರ ಅಂಗೀಕರಿಸಿದ್ದಾರೆ. ಆಪ್ ಇದನ್ನು ವಿರೋಧಿಸಿ ಕಾನೂನಿನ ಮೊರೆ ಹೋಗುವ ಸುಳಿವನ್ನು ಈಗಾಗಲೇ ನೀಡಿದೆ. 20 ಶಾಸಕರ ಅನರ್ಹತೆಯಿಂದ 66 ಶಾಸಕರನ್ನು ಹೊಂದಿದ್ದ ಕೇಜ್ರಿವಾಲ್ ಸರಕಾರದ ಬಲ 46ಕ್ಕೆ ಇಳಿಯಲಿದೆ. ಆದರೆ ಸರಕಾರ ಕುಸಿಯುವಂತಹ ಬೆದರಿಕೆಯೇನೂ ಇಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಬಿಜೆಪಿ ಮತ್ತೆ ‘ಕುದುರೆ ವ್ಯಾಪಾರ’ಕ್ಕಿಳಿದರೆ ಸರಕಾರ ಕುಸಿದು ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ. ಇದೇ ಸಂದರ್ಭದಲ್ಲಿ 20 ಶಾಸಕರ ಅನರ್ಹತೆಯನ್ನು ನ್ಯಾಯಾಲಯವೂ ಎತ್ತಿ ಹಿಡಿದರೆ, ಆರು ತಿಂಗಳೊಳಗೆ ಈ ಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ನಡೆಯಬೇಕಾಗಿದೆ. ಅಂದರೆ, ರಾಜಕೀಯ ಚದುರಂಗದಾಟದ ಪರಿಣಾಮವಾಗಿ ದಿಲ್ಲಿಯ ಮತದಾರರು ಮತ್ತೊಂದು ಚುನಾವಣೆಯ ಹೊರೆಯನ್ನು ಹೊರಬೇಕಾಗಿದೆ.

 ಒಂದು ಸಂಘಟನೆಯನ್ನು ಸ್ಥಾಪಿಸಿ ಚಳವಳಿಯನ್ನು ನಡೆಸುವುದು ಬೇರೆ, ಅದೇ ಸಂಘಟನೆ ರಾಜಕೀಯ ಪಕ್ಷವಾಗಿ ಆಡಳಿತ ನಡೆಸುವುದು ಬೇರೆ. ಈ ಸತ್ಯ ಈಗಾಗಲೇ ಕೇಜ್ರಿವಾಲ್ ಅವರಿಗೆ ಅರ್ಥವಾಗಿರಬೇಕು. ಸಂಪೂರ್ಣ ಭ್ರಷ್ಟಾಚಾರ ರಹಿತವಾಗಿ ಒಂದು ರಾಜಕೀಯ ಪಕ್ಷ ಸರಕಾರ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಅವರ ನೆತ್ತಿಯ ಮೇಲೆ ತೂಗುತ್ತಿರುವ ಹತ್ತು ಹಲವು ಆರೋಪಗಳೇ ಸಾಬೀತು ಮಾಡಿವೆ. ಆರ್ಥಿಕವಾಗಿ ಸಬಲವಾಗದೆ ರಾಜಕೀಯ ಪಕ್ಷವಾಗಿ ನೆಲೆ ನಿಲ್ಲಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶ ದೇಶದಲ್ಲಿದೆ. ಪಕ್ಷ ಹಣ ಸಂಗ್ರಹಿಸಲು ಶುರು ಮಾಡಿದಂತೆಯೇ, ಅದು ನಿಧಾನಕ್ಕೆ ಹಲವು ರಾಜಿಗಳನ್ನು ಮಾಡಲೇಬೇಕಾಗುತ್ತದೆ. ಈ ರಾಜಿ ಎಂದರೆ ಕಾನೂನಿನ ದುರ್ಬಳಕೆ ಎಂದೇ ಹೇಳಬೇಕು.

ಈ ಸಂದರ್ಭವನ್ನು ಕೇಂದ್ರದ ವಿರೋಧಿಗಳು ಬಳಸಿಕೊಳ್ಳುವುದು ಸಹಜ. ನರೇಂದ್ರ ಮೋದಿ ಸರಕಾರ, ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಬಿಟ್ಟು ಉಳಿದೆಲ್ಲ ರಾಜ್ಯಗಳ ಪ್ರಾಮಾಣಿಕತೆಯನ್ನು ವಿವಿಧ ತನಿಖಾ ಸಂಸ್ಥೆಗಳ ಮೂಲಕ ಪ್ರಶ್ನಿಸಿದೆ. ಆಪ್ ಸರಕಾರದ ವಿರುದ್ಧವೂ ಹಲವು ಬಾರಿ ಈ ತನಿಖಾ ಸಂಸ್ಥೆಗಳ ಬಳಕೆಯಾಗಿದೆ. ಆದರೆ ಇವೆಲ್ಲವನ್ನೂ ಅಷ್ಟೇ ಸಮರ್ಥವಾಗಿ ಎದುರಿಸಿಕೊಂಡು ಬಂದಿದೆ ಆಪ್ ಸರಕಾರ. ಆದರೆ ಲಾಭದಾಯಕ ಹುದ್ದೆ ವಿವಾದದಲ್ಲಿ ಮಾತ್ರ ಆಪ್ ಸರಕಾರ ರಾತ್ರಿ ನೋಡಿದ ಬಾವಿಗೆ ಹೋಗಿ ಹಗಲೇ ಬಿದ್ದಿದೆ. ಸಂಪೂರ್ಣ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುವುದು ಅಸಾಧ್ಯ ನಿಜ. ಆದರೆ ತನ್ನ ಸರಕಾರದ ಪ್ರತಿಯೊಂದು ನಡೆಯನ್ನೂ ಕೇಂದ್ರ ಸರಕಾರ ಗಮನಿಸುತ್ತಿದೆ ಮತ್ತು ಅಡ್ಡಗಾಲು ಹಾಕಲು ಹೊಂಚು ಹಾಕಿ ನಿಂತಿದೆ ಎನ್ನುವುದು ಗೊತ್ತಿದ್ದೂ ಅತೀ ಆತ್ಮವಿಶ್ವಾಸವನ್ನು ಪ್ರದರ್ಶಿಸಿ 20 ಶಾಸಕರಿಗೆ ಲಾಭದಾಯಕ ಹುದ್ದೆಗಳನ್ನು ಸೃಷ್ಟಿಸಿದ್ದನ್ನು ಕೇಜ್ರಿವಾಲ್ ಅವರ ಅತೀ ಬುದ್ಧಿವಂತಿಕೆ ಎಂದೇ ಕರೆಯಬೇಕಾಗುತ್ತದೆ. ಇದೀಗ ಅದಕ್ಕಾಗಿ ಅವರು ಬೆಲೆಯನ್ನು ತೆರಬೇಕಾದಂತಹ ಸ್ಥಿತಿಗೆ ತಲುಪಿದ್ದಾರೆ.

  ವಿಧಾನಸಭಾ ಸದಸ್ಯರ ಬಲವನ್ನು ಮೀರಿ 21 ಮಂದಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಕೇಜ್ರಿವಾಲ್ ನೇಮಿಸಿದರು. ಸಚಿವ ಸ್ಥಾನ ಸಿಗದ ಶಾಸಕರನ್ನು ತೃಪ್ತಿಪಡಿಸುವ ಅವರ ಕೊನೆಯ ಪ್ರಯತ್ನವಾಗಿತ್ತು. ಇಷ್ಟೇ ಅಲ್ಲ, ನೇಮಕವನ್ನು ತಿದ್ದುಪಡಿ ಮೂಲಕ ಮಾನ್ಯಗೊಳಿಸಲು ಪ್ರಯತ್ನಿಸಿದರು. ಆಪ್ ಎಡವುವುದನ್ನು ಒಂದೆಡೆ ಬಿಜೆಪಿ ಹೊಂಚು ಹಾಕಿ ಕಾಯುತ್ತಿದ್ದರೆ, ದಿಲ್ಲಿಯನ್ನು ಕಳೆದುಕೊಂಡು ಕಾಂಗ್ರೆಸ್ ಆಪ್ ಸರಕಾರ ಎಡವುವುದನ್ನು ಕಾಯುತ್ತಿತ್ತು. ಈ ವಿಷಯದಲ್ಲಿ ಆಪ್‌ನ್ನು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಹಳ್ಳಕ್ಕೆ ಕೆಡವಿತು. ಕೇಂದ್ರ ಸರಕಾರದ ಹಿಡಿತದಲ್ಲಿರುವ ಚುನಾವಣಾ ಆಯೋಗದ ತನಿಖೆ ಆಪ್ ಸರಕಾರಕ್ಕೆ ಪೂರಕವಾಗಿರಲು ಸಾಧ್ಯವೇ ಇಲ್ಲ. ಇಲ್ಲಿ ಚುನಾವಣಾ ಆಯೋಗ ಅವಸರದಲ್ಲಿ ಶಿಫಾರಸು ಮಾಡಿದೆ ಎನ್ನುವುದು ಆಪ್‌ನ ಆರೋಪ. ಅದೇನೇ ಇದ್ದರೂ, ಚುನಾವಣಾ ಆಯೋಗದ ಇಂತಹ ಶಿಫಾರಸು ನಿರೀಕ್ಷಿತ. ಜೊತೆಗೆ ಶಿಫಾರಸನ್ನು ಅಂಗೀಕರಿಸುವುದು ರಾಷ್ಟ್ರಪತಿಗೂ ಅನಿವಾರ್ಯ. ಒಟ್ಟಿನಲ್ಲಿ, ದಿಲ್ಲಿಯ ಸದ್ಯದ ಅತಂತ್ರ ಸ್ಥಿತಿಯ ಹಿಂದೆ ಆಪ್ ನಾಯಕರ ಅತೀ ಆತ್ಮವಿಶ್ವಾಸದ ಕೊಡುಗೆಯಿದ್ದೇ ಇದೆ.

ಕಾನೂನು ಹೋರಾಟವನ್ನು ಹೊರತು ಪಡಿಸಿದ ಎಲ್ಲಾ ಬಾಗಿಲುಗಳು ಆಪ್ ಸರಕಾರಕ್ಕೆ ಮುಚ್ಚಿವೆ. ಈ ಎಲ್ಲಾ ಬೆಳವಣಿಗೆಗಳು ಒಂದನ್ನಂತೂ ಸ್ಪಷ್ಟಪಡಿಸಿವೆ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದಾಗಿ ಕೆಲಸ ಮಾಡಬಲ್ಲವು. ದಿಲ್ಲಿಯಲ್ಲಿ ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ಗೆ ಬಿಜೆಪಿಗಿಂದ ದೊಡ್ಡ ಶತ್ರು ಆಪ್. ಆಮ್ ಆದ್ಮಿ ಕುರಿತಂತೆ ಈ ಎರಡು ಪಕ್ಷಗಳು ಎಷ್ಟರಮಟ್ಟಿಗೆ ಆತಂಕವನ್ನು ಹೊಂದಿದೆ ಎನ್ನುವುದಕ್ಕೆ ಈ ಬೆಳವಣಿಗೆ ಸಾಕ್ಷಿ. ನೇರ ದಾರಿ ಅಲ್ಲದೇ ಇದ್ದರೆ ಅಡ್ಡದಾರಿ. ಆದುದರಿಂದ, ಶತ್ರುಗಳನ್ನು ಆಹ್ವಾನಿಸುವ ಇಂತಹ ಒಳದಾರಿಗಳನ್ನು ಮೊದಲೇ ಗುರುತಿಸಿ ಅದಕ್ಕೆ ಬೇಲಿ ಹಾಕುವುದು ಆಪ್ ನಾಯಕರ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News