‘ಜಾಕ್ ಪಾಟ್’ ನಿರೀಕ್ಷೆಯಲ್ಲಿ ಮುನ್ರೊ, ಸ್ಟೋಕ್ಸ್, ಲೆವಿಸ್, ಟೈ, ರಾಯ್

Update: 2018-01-22 17:59 GMT

ಬೆಂಗಳೂರು, ಜ.22: ಈ ತಿಂಗಳಾಂತ್ಯದಲ್ಲಿ ಐಪಿಎಲ್‌ನ ಮುಂದಿನ ಆವೃತ್ತಿಗೆ ನಡೆಯಲಿರುವ ಆಟಗಾರರ ಹರಾಜಿನಲ್ಲಿ 280 ವಿದೇಶಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ ನ್ಯೂಝಿಲೆಂಡ್ ಆಟಗಾರ ಕಾಲಿನ್ ಮುನ್ರೊ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ವೆಸ್ಟ್‌ಇಂಡೀಸ್‌ನ ಎವಿನ್ ಲೆವಿಸ್ ಆಸ್ಟ್ರೇಲಿಯದ ಆ್ಯಂಡ್ರೊ ಟೈ, ಇಂಗ್ಲೆಂಡ್‌ನ ಜೇಸನ್ ರಾಯ್ ಬಂಪರ್ ಬೆಲೆಗೆ ಹರಾಜಾಗುವ ಸಾಧ್ಯತೆ ಕಂಡು ಬಂದಿದೆ. ಜ.27 ಮತ್ತು 28ರಂದು ಉದ್ಯಾನನಗರಿಯಲ್ಲಿ ಆಟಗಾರರ ಹರಾಜು ನಡೆಯಲಿದೆ. ಐಪಿಎಲ್‌ನ 8 ಫ್ರಾಂಚೈಸಿ ತಂಡಗಳು ಆಟಗಾರರ ಮೇಲೆ ಕಣ್ಣಿಟ್ಟಿದೆ.

ದುಬಾರಿ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಲ್ಲಿರುವ ಕೆಲವು ವಿದೇಶಿ ಆಟಗಾರರ ವಿವರ ಇಂತಿವೆ.

ಕಾಲಿನ್ ಮುನ್ರೊ (ನ್ಯೂಝಿಲೆಂಡ್)

►155 ಟಿ-20ಯಲ್ಲಿ 3,535 ರನ್, ಶತಕ 4

 ನ್ಯೂಝಿಲೆಂಡ್‌ನ 30ರ ಹರೆಯದ ಆಟಗಾರ ಕಾಲಿನ್ ಮುನ್ರೊ ಅವರು 2018ರಲ್ಲಿ ಮೂರು ಟಿ-20 ಪಂದ್ಯಗಳನ್ನು ಆಡಿದ್ದಾರೆ. 23 ಎಸೆತಗಳಲ್ಲಿ 66 ರನ್, 53 ಎಸೆತಗಳಲ್ಲಿ 104 ರನ್ ಮತ್ತು 43 ಎಸೆತಗಳಲ್ಲಿ 49 ರನ್ ಗಳಿಸಿದ್ದಾರೆ. ಅವರು ಟಿ-20ಯಲ್ಲಿ 3 ಶತಕ ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್. ಕಳೆದ ವರ್ಷ ಅವರು ಟಿ-20ಯಲ್ಲಿ 2 ಶತಕ ದಾಖಲಿಸಿದ್ದರು. ಎಡಗೈ ದಾಂಡಿಗ ಮುನ್ರೊ ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ನ್ಯೂಝಿಲೆಂಡ್ ಪರ ಚೆನ್ನಾಗಿ ಆಡುತ್ತಿದ್ದರೂ, ನಂ.1 ಸ್ಥಾನ ಗಿಟ್ಟಿಸಿಕೊಂಡಿಲ್ಲ.

ಬೆನ್ ಸ್ಟೋಕ್ಸ್

►(ಇಂಗ್ಲೆಂಡ್) 92 ಪಂದ್ಯ, 1,721 ರನ್, 46 ವಿಕೆಟ್

 ಇಂಗ್ಲೆಂಡ್‌ನ 26ರ ಹರೆಯದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕಳೆದ ವರ್ಷ 14.5 ಕೋಟಿ ರೂ. ಮೊತ್ತಕ್ಕೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಅವಕಾಶ ಪಡೆದಿದ್ದರು. 316 ರನ್ ಮತ್ತು 12 ವಿಕೆಟ್ ಗಳಿಸಿದ್ದರು. ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಫೈನಲ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾನಮತ್ತನಾಗಿ ಆಸ್ಟ್ರೇಲಿಯದಲ್ಲಿ ಗಲಾಟೆ ಮಾಡಿದ ಕಾರಣಕ್ಕಾಗಿ ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರದಬ್ಬಲ್ಪಟ್ಟಿದ್ದರು.ಕಳೆದ ವರ್ಷ ಐಪಿಎಲ್‌ನಲ್ಲಿ ನೀಡಿದ್ದ ಪ್ರದರ್ಶನದ ನೆರವಿನಲ್ಲಿ ಅವರ ಮೇಲೆ ಕೆಲವು ತಂಡಗಳು ಕಣ್ಣಿಟ್ಟಿವೆ.

ಎವಿನ್ ಲೆವಿಸ್ (ವೆಸ್ಟ್‌ಇಂಡೀಸ್)

►84 ಪಂದ್ಯಗಳಲ್ಲಿ 2,657 ರನ್, ಶತಕ 3

ವೆಸ್ಟ್‌ಇಂಡೀಸ್‌ನ 26ರ ಹರೆಯದ ಆರಂಭಿಕ ದಾಂಡಿಗ ಎವಿನ್ ಲೆವಿಸ್ 2017ರಲ್ಲಿ ಟಿ-20ಯಲ್ಲಿ ಗರಿಷ್ಠ ರನ್ ದಾಖಲಿಸಿದ್ದರು. ಸಿಕ್ಸ್ -ಹಿಟ್ಟರ್ ಲೆವಿಸ್ ಅವರು 62 ಎಸೆತಗಳಲ್ಲಿ 125 ರನ್ ಗಳಿಸಿದ್ದರು. ಆದರೆ ಅವರ ಪ್ರದರ್ಶನ ಸ್ಥಿರವಾಗಿಲ್ಲ. ಅವರ ಸ್ಫೋಟಕ ಬ್ಯಾಟಿಂಗ್‌ನ್ನು ಕಡೆಗಣಿಸುವಂತಿಲ್ಲ. ಕಳೆದ ಜುಲೈ 9ರಂದು ಕಿಂಗ್ಸ್‌ಸ್ಟನ್‌ನಲ್ಲಿ ಭಾರತದ ವಿರುದ್ಧದ ಟಿ-20 ಪಂದ್ಯದಲ್ಲಿ 62 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ ಔಟಾಗದೆ 125 ರನ್ ಗಳಿಸಿದ್ದರು. ಗೆಲುವಿಗೆ 191 ರನ್ ಗಳಿಸಬೇಕಿದ್ದ ವಿಂಡೀಸ್‌ಗೆ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಲು ತಂಡಕ್ಕೆ ನೆರವಾಗಿದ್ದರು. ಬಾಂಗ್ಲಾದಲ್ಲಿ ನಡೆದ ಬಾಂಗ್ಲಾ ಪ್ರೀಮಿಯರ್ ಲೀಗ್‌ನಲ್ಲಿ 12 ಪಂದ್ಯಗಳಲ್ಲಿ 396 ರನ್ ಗಳಿಸಿ ಢಾಕಾ ಡೈನಾಮೆಟ್ಸ್ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.

ಆ್ಯಂಡ್ರೋ ಟೈ: (ಆಸ್ಟ್ರೇಲಿಯ)

►65 ಪಂದ್ಯಗಳಲ್ಲಿ 91 ವಿಕೆಟ್

ಆಸ್ಟ್ರೇಲಿಯದ 31ರ ಹರೆಯದ ಆ್ಯಂಟ್ರೋ ಟೈ 65 ಪಂದ್ಯಗಳಲ್ಲಿ 91 ವಿಕೆಟ್ ಪಡೆದಿದ್ದಾರೆ. ಬಿಗ್ ಬ್ಯಾಶ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಟೈ ಅವರು 2017ರಲ್ಲಿ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಪರ ಆಡಿರುವ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗಳಿಸಿದ್ದರು. ಗಾಯದ ಕಾರಣದಿಂದಾಗಿ 6 ಪಂದ್ಯಗಳಲ್ಲಿ ಆಡಿದ್ದ ಅವರು 12 ವಿಕೆಟ್ ಪಡೆದಿದ್ದರು. ಬಿಬಿಎಲ್‌ನಲ್ಲಿ 6 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಖಾತೆಗೆ ಸೇರಿಸಿಕೊಂಡಿದ್ದ ಅವರು ಇನ್ನೊಂದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ರಶೀದ್ ಖಾನ್(ಅಫ್ಘಾನಿಸ್ತಾನ)

►87 ಪಂದ್ಯಗಳಲ್ಲಿ 124 ವಿಕೆಟ್

19ರ ಹರೆಯದ ಬೌಲರ್ ರಶೀದ್ ಖಾನ್ ಅವರು ಕಳೆದ ವರ್ಷ ಐಪಿಎಲ್‌ನಲ್ಲಿ ಸನ್ ರೈಸರ್ಸ್‌ ತಂಡದ ಪರ ಆಡಿದ್ದರು. 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರು. 2018ರ ಬಿಬಿಎಲ್‌ನಲ್ಲಿ 12 ವಿಕೆಟ್ ಗಳಿಸಿದ್ದರು.

ಜೋಫ್ರಾ ಅರ್ಚೆರ್

►44 ವಿಕೆಟ್, ಪಂದ್ಯ 36

 ಬಾರ್ಬಡಾಸ್‌ನ 22ರ ವೇಗಿ ಜೋಫ್ರಾ ಅರ್ಚೆರ್ ಈ ತನಕ ಅಂತಾರಾಷ್ಟ್ರೀಯ ಕ್ಯಾಪ್ ಧರಿಸಿಲ್ಲ. ಕೌಂಟಿ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ. ಬಿಬಿಎಲ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ತಂಡದಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಆಡಲು ಆಸಕ್ತಿ ವಹಿಸಿ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೇಸನ್ ರಾಯ್(ಇಂಗ್ಲೆಂಡ್)

►161 ಪಂದ್ಯಗಳಲ್ಲಿ 4,159 ರನ್, 4 ಶತಕ

ಕಳೆದ ವಾರ ಜೇಸನ್ ರಾಯ್ ಅವರು ತನ್ನ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸಿಕೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಅಲೆಕ್ಸ್ ಹೇಲ್ಸ್ ದಾಖಲಿಸಿದ್ದ 171 ರನ್‌ಗಳ ದಾಖಲೆಯನ್ನು ಹಿಂದಿಕ್ಕಿರುವ ರಾಯ್ ಅವರು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 180 ರನ್ ಗಳಿಸಿದರು. ಇದರೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದ ಇಂಗ್ಲೆಂಡ್‌ನ ದಾಂಡಿಗ ಎನಿಸಿಕೊಂಡಿದ್ದಾರೆ. ಆದರೆ ಅವರು ಬಿಬಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.

ಇಶ್ ಸೋಧಿ (ನ್ಯೂಝಿಲೆಂಡ್)

►85 ಪಂದ್ಯ, 95 ವಿಕೆಟ್

 ಮೂಲತಃ ಪಂಜಾಬ್‌ನ ಲೂಧಿಯಾನದ ಇಂದೆರ್‌ಬಿರ್ ಸಿಂಗ್ ಸೋಧಿ ಅವರು ನ್ಯೂಝಿಲೆಂಡ್‌ನ ನಂ.1 ಟ್ವೆಂಟಿ-20 ಬೌಲರ್. 25ರ ಹರೆಯದ ಸೋಧಿ ಅವರು 2017-18ರಲ್ಲಿ 18 ವಿಕೆಟ್ ಪಡೆದಿದ್ದರು. ನ್ಯೂಝಿಲೆಂಡ್‌ನ ದೇಶಿಯ ಟಿ-20 ಟೂರ್ನಿಯಲ್ಲಿ 10 ವಿಕೆಟ್ ಪಡೆದಿದ್ದರು. ಅವರು ಇದೀಗ ಐಪಿಎಲ್‌ನಲ್ಲಿ ಆಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.

ಕ್ವಿಂಟನ್ ಡಿ ಕಾಕ್ (ದ. ಆಫ್ರಿಕ)

►3,708 ರನ್, ಶತಕ 3

 25ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ಅಫ್ರಿಕದ ಆರಂಭಿಕ ದಾಂಡಿಗ. ಅವರೊಬ್ಬ ಅತ್ಯುತ್ತಮ ವಿಕೆಟ್ ಕೀಪರ್. 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 471 ರನ್ ಗಳಿಸಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ 720 ರನ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News