ಮೊದಲ ಟ್ವೆಂಟಿ-20: ಪಾಕ್ ವಿರುದ್ಧ ನ್ಯೂಝಿಲೆಂಡ್ ಜಯಭೇರಿ

Update: 2018-01-22 18:05 GMT

ವೆಲ್ಲಿಂಗ್ಟನ್, ಜ.22: ಕಾಲಿನ್ ಮುನ್ರೊ(ಔಟಾಗದೆ 49) ಸಾಹಸದ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 25 ಎಸೆತಗಳು ಬಾಕಿ ಇರುವಾಗಲೇ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಗೆಲುವಿನೊಂದಿಗೆ ಕಿವೀಸ್ ಕಳೆದ ಎರಡು ತಿಂಗಳಿಂದ ತವರು ನೆಲದಲ್ಲಿ ಆಡಿರುವ ಎಲ್ಲ 3 ಪ್ರಕಾರದ ಕ್ರಿಕೆಟ್‌ನಲ್ಲಿ 13 ಪಂದ್ಯಗಳನ್ನು ಜಯಿಸಿದೆ. ಇದರಲ್ಲಿ ಪಾಕ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿ, ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸರಣಿ ಯೂ ಸೇರಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 106 ರನ್ ಗುರಿ ಪಡೆದ ಕಿವೀಸ್ ಇನಿಂಗ್ಸ್‌ನ 4ನೇ ಓವರ್‌ನಲ್ಲಿ 14 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಮಾರ್ಟಿನ್ ಗಪ್ಟಿಲ್(2) ಹಾಗೂ ಗ್ಲೆನ್ ಫಿಲಿಪ್ಸ್(3)ಬೇಗನೆ ವಿಕೆಟ್ ಒಪ್ಪಿಸಿದರು. ಆಗ ಮೂರನೇ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿದ ಮುನ್ರೊ ಹಾಗೂ ಟಾಮ್ ಬ್ರೂಸ್(26)ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು.

  ಬ್ರೂಸ್ ಔಟಾದ ಬಳಿಕ ಮುನ್ರೊಗೆ ಸಾಥ್ ನೀಡಿದ ರಾಸ್ ಟೇಲರ್ 13 ಎಸೆತಗಳಲ್ಲಿ 22 ರನ್ ಕಲೆ ಹಾಕಿದರು. 43 ಎಸೆತಗಳಲ್ಲಿ ಔಟಾಗದೆ 49 ರನ್ ಗಳಿಸಿದ ಮುನ್ರೊ ಮೂರು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಕೇವಲ 1 ರನ್‌ನಿಂದ ಸತತ 4ನೇ ಅರ್ಧಶತಕ ಸಿಡಿಸಿ ಬ್ರೆಂಡನ್ ಮೆಕಲಮ್ ಹಾಗೂ ಕ್ರಿಸ್ ಗೇಲ್ ದಾಖಲೆ ಸರಿಗಟ್ಟುವ ಅವಕಾಶ ಕಳೆದುಕೊಂಡರು.

ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್‌ಗೆ ಒಳಗಾಗಿದ್ದ ಪಾಕ್ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. 6ನೇ ಓವರ್‌ನಲ್ಲಿ 22 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. 8ನೇ ವಿಕೆಟ್‌ಗೆ 30 ರನ್ ಸೇರಿಸಿದ ಬಾಬರ್ ಖಾನ್(41) ಹಾಗೂ ಹಸನ್ ಅಲಿ(23) ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು. ನ್ಯೂಝಿಲೆಂಡ್ ಪರ ಟಿಮ್ ಸೌಥಿ(3-13) ಹಾಗೂ ಸೆಥ್ ರ್ಯಾನ್ಸ್(3-26) ತಲಾ 3 ವಿಕೆಟ್ ಪಡೆದರು. ಸ್ಯಾಂಟ್ನರ್(2-15) ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಪಾಕಿಸ್ತಾನ: 19.4 ಓವರ್‌ಗಳಲ್ಲಿ 105 ರನ್‌ಗೆ ಆಲೌಟ್

(ಬಾಬರ್ ಆಝಂ 41, ಹಸನ್ ಅಲಿ 23, ರ್ಯಾನ್ಸ್ 3-26, ಸೌಥಿ 3-13, ಸ್ಯಾಂಟ್ನರ್ 2-15)

►ನ್ಯೂಝಿಲೆಂಡ್: 15.5 ಓವರ್‌ಗಳಲ್ಲಿ 106/3

(ಮುನ್ರೊ ಔಟಾಗದೆ 49, ಬ್ರೂಸ್ 26, ಟೇಲರ್ ಔಟಾಗದೆ 22, ರಾಯೀಸ್ 2-24)

►ಪಂದ್ಯಶ್ರೇಷ್ಠ: ಕಾಲಿನ್ ಮುನ್ರೊ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News