ರೋಹನ್, ಶರಣ್ ಡಬಲ್ಸ್ ಸವಾಲು ಅಂತ್ಯ

Update: 2018-01-22 18:10 GMT

ಮೆಲ್ಬೋರ್ನ್, ಜ.22: ಡಿವಿಜ್ ಶರಣ್ ಹಾಗೂ ರೋಹನ್ ಬೋಪಣ್ಣ ಮೂರನೇ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ರವಿವಾರ ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ನೇರ ಸೆಟ್‌ಗಳಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು.

ಸೋಮವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಫ್ರಾನ್ಸ್‌ನಎಡ್ವರ್ಡ್ ರೋಜರ್‌ರೊಂದಿಗೆ ಡಬಲ್ಸ್ ಪಂದ್ಯ ಆಡಿರುವ ಬೋಪಣ್ಣ ಆಸ್ಟ್ರಿಯದ ಒಲಿವೆರ್ ಮರಾಚ್ ಹಾಗೂ ಕ್ರೊಯೇಷಿಯಾದ ಮ್ಯಾಟ್ ಪಾವಿಕ್ ವಿರುದ್ಧ 4-6, 7-6,(7/5), 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಎರಡು ಗಂಟೆಯೊಳಗೆ ಕೊನೆಗೊಂಡ ಹಣಾಹಣಿಯಲ್ಲಿ ಇಂಡೋ-ಫ್ರಾನ್ಸ್ ಜೋಡಿ ಎರಡರಲ್ಲಿ ಒಂದು ಬ್ರೇಕ್ ಪಾಯಿಂಟ್ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿತು. ಎದುರಾಳಿ ತಂಡ 12 ಬ್ರೇಕ್‌ಪಾಯಿಂಟ್‌ನಲ್ಲಿ 3ರನ್ನು ಸದುಪಯೋಪಡಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಮತ್ತೊಂದು ಡಬಲ್ಸ್ ಪಂದ್ಯದಲ್ಲಿ ಶರಣ್ ಹಾಗೂ ಅಮೆರಿಕದ ರಾಜೀವ್ ರಾಮ್ ಅಗ್ರ ಶ್ರೇಯಾಂಕದ ಪೊಲೆಂಡ್‌ನ ಲುಕಾಸ್ ಕುಬೊಟ್ ಹಾಗೂ ಬ್ರೆಝಿಲ್‌ನ ವಿಶ್ವದ ನಂ.1 ಆಟಗಾರ ಮಾರ್ಸೆಲೊ ಮೆಲೊ ವಿರುದ್ಧ 2 ಗಂಟೆ, 12 ನಿಮಿಷಗಳ ಹೋರಾಟದಲ್ಲಿ 6-3, 6-7(4),4-6 ಸೆಟ್‌ಗಳಿಂದ ಸೋತಿದ್ದಾರೆ.

ರವಿವಾರ ನಡೆದ ಪಂದ್ಯದಲ್ಲಿ ಪೇಸ್-ರಾಜಾ ಜೋಡಿ 1 ಗಂಟೆ, 9 ನಿಮಿಷಗಳ ಹೋರಾಟದಲ್ಲಿ ಕೊಲಂಬಿಯಾದ ಜುಯಾನ್ ಸೆಬಾಸ್ಟಿಯನ್ ಹಾಗೂ ರಾಬರ್ಟ್ ಫರ್ಹಾ ವಿರುದ್ಧ 1-6, 2-6 ಅಂತರದಿಂದ ಶರಣಾಗಿದ್ದರು.

ಇದೀಗ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತ ಭರವಸೆ ಇಟ್ಟಿದ್ದು, ಬೋಪಣ್ಣ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಬೋಪಣ್ಣ ಹಾಗೂ ಹಂಗೇರಿಯದ ಟಿಮಿಯಾ ಬಾಬೊಸ್ ಮೊದಲ ಸುತ್ತಿನ ಪಂದ್ಯದಲ್ಲಿ ಎಲ್ಲೆನ್ ಪೆರೆಝ್ ಹಾಗೂ ಆ್ಯಂಡ್ರೂ ವಿಟ್ಟಿಂಗ್ಟನ್‌ರನ್ನು ಮಣಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News