ಕುವೈತ್ ಸರಕಾರದಿಂದ ಆ್ಯಮ್ನೆಸ್ಟಿ ಘೋಷಣೆ: ನಿಟ್ಟುಸಿರು ಬಿಟ್ಟ ಭಾರತೀಯ ಕಾರ್ಮಿಕರು

Update: 2018-01-23 17:54 GMT

ಹೈದರಾಬಾದ್, ಜ.23: ಕುವೈತ್ ನಲ್ಲಿ ವೇತನ ಪಾವತಿಯಾಗದ ಕಾರಣದಿಂದ ಅಕ್ರಮವಾಗಿ ತಮ್ಮ ವಾಸವನ್ನು ವಿಸ್ತರಿಸುವ ಒತ್ತಡಕ್ಕೆ ಒಳಗಾಗಿದ್ದ ಭಾರತೀಯ ಮೂಲದ ಕಾರ್ಮಿಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕುವೈತ್  ಸರಕಾರವು ಈ ಕಾರ್ಮಿಕರ ಮೇಲೆ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಘೋಷಣೆ ಮಾಡಿದೆ.

 ಜನವರಿ 29ರಿಂದ ಫೆಬ್ರವರಿ 22ರ ವರೆಗೆ ಆ್ಯಮ್ನೆಸ್ಟಿ (ರಾಜಕೀಯ ಅಪರಾಧಗಳಿಗೆ ಶಿಕ್ಷೆಗೊಳಪಟ್ಟವರಿಗೆ ನೀಡುವ ಕ್ಷಮಾಪಣೆ) ಯನ್ನು ಘೋಷಿಸಲಾಗಿದೆ. ಸರಕಾರದ ಈ ನಡೆಯು ಭಾರತೀಯ ಕಾರ್ಮಿಕರಿಗೆ ಸಾಂತ್ವಾನ ನೀಡಿದೆ ಎಂದು ಅವರ ಪರವಾಗಿ ಸರಕಾರದ ಜೊತೆ ಮಾತುಕತೆ ನಡೆಸಿದ ಸಾಮಾಜಿಕ ಕಾರ್ಯಕರ್ತೆ ಶಹೀನ್ ಸೈಯ್ಯದ್ ತಿಳಿಸಿದ್ದಾರೆ.

ವೇತನ ಸಿಗದೆ ತಮ್ಮ ವಾಸವನ್ನು ವಿಸ್ತರಿಸಿರುವವರ ಪೈಕಿ ಕುವೈತ್ ನ ಖರೀಫಿ ನ್ಯಾಶನಲ್‌ನ ಉದ್ಯೋಗಿಯಾಗಿರುವ ಆಂಧ್ರ ಪ್ರದೇಶದ ನರೇಶ್ ನಾಯ್ಡು ಕೂಡಾ ಒಬ್ಬರಾಗಿದ್ದು ಸದ್ಯ ಒದಗಿಸಲಾಗಿರುವ ಅಮ್ನೆಸ್ಟಿಯನ್ನು ಬಳಸಿಕೊಳ್ಳಲು ಯೋಚಿಸಿದ್ದಾರೆ.

ಕುವೈತ್ ನಲ್ಲಿ ಅವಧಿಗಿಂತ ಹೆಚ್ಚು ವಾಸವಿರುವವರಿಗೆ ದಿನಕ್ಕೆ ಎರಡು ಕುವೈಟಿ ದಿನಾರ್ (424 ರೂ.) ದಂಡ ವಿಧಿಸಲಾಗುತ್ತದೆ. ತಮ್ಮ ವೇತನ ಪಡೆಯದೆ ಇರುವ ಭಾರತೀಯ ಕಾರ್ಮಿಕರು ಈಗಾಗಲೇ ಕುವೈತ್ ನಲ್ಲಿ ಕೆಲವು ತಿಂಗಳುಗಳ ಕಾಲ ಹೆಚ್ಚುವರಿಯಾಗಿ ವಾಸಿಸುತ್ತಿದ್ದು ಈ ದಂಡವನ್ನು ಅವರಿಂದ ಪಾವತಿಸಲು ಸಾಧ್ಯವಿಲ್ಲವಾಗಿದೆ.

ಕೇಂದ್ರ ವಿದೇಶಿ ವ್ಯವಹಾರಗಳ ರಾಜ್ಯ ಸಚಿವರಾದ ವಿ.ಕೆ ಸಿಂಗ್ ಇತ್ತೀಚೆಗೆ ಕುವೈತ್ ಗೆ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಆ್ಯಮ್ನೆಸ್ಟಿಯನ್ನು ಘೋಷಿಸಿದೆ. ತಮ್ಮ ಭೇಟಿಯ ವೇಳೆ ಸಿಂಗ್, ಖರೀಫಿ ನ್ಯಾಶನಲ್ ಕಂಪೆನಿ ವೇತನ ಬಾಕಿಯಿರಿಸಿರುವ ಭಾರತೀಯ ನೌಕರರ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ಕುವೈಟಿ ಸಚಿವರನ್ನು ಭೇಟಿಯಾಗಿದ್ದ ಸಿಂಗ್ ಈ ನೌಕರರ ಮೇಲಿನ ದಂಡವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು. ಆ್ಯಮ್ನೆಸ್ಟಿಯ ಪ್ರಕಾರ ಸದ್ಯ ತಮ್ಮ ಸ್ವದೇಶಗಳಿಗೆ ವಾಪಸಾಗುವ ನೌಕರರು ಮತ್ತೊಮ್ಮೆ ಉದ್ಯೋಗಕ್ಕಾಗಿ ಕುವೈತ್ ಗೆ ತೆರಳಲು ಯಾವುದೇ ಕಾನೂನಾತ್ಮಕ ಅಡಚಣೆಯಿರುವುದಿಲ್ಲ. ಇದೇ ವೇಳೆ, ಖರೀಫಿ ನ್ಯಾಶನಲ್‌ನಲ್ಲಿ ದುಡಿಯುತ್ತಿರುವ ಭಾರತೀಯ ನೌಕರರು ಮತ್ತು ವೇತನ ನೀಡಲು ನಿರಾಕರಿಸಿದಾಗ ಸಂಸ್ಥೆಯನ್ನು ಬಿಟ್ಟು ತೆರಳಿರುವ ನೌಕರರಿಗೆ ಸಂಸ್ಥೆಯು ಹೊಸ ಪ್ರಸ್ತಾಪವನ್ನು ಇಟ್ಟಿದೆ. ಸದ್ಯ ಬಾಕಿಯಿರುವ ವೇತನದ 25ಶೇ. ದಿಂದ 33 ಶೇ. ನೀಡುವುದಾಗಿ ಸಂಸ್ಥೆ ಹೇಳಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಆದರೆ ಸಂಸ್ಥೆಯ ಈ ಕೊಡುಗೆಗೆ ನೌಕರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮಗೆ ಬಾಕಿಯಿರುವ ಸಂಪೂರ್ಣ ವೇತನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಂಸ್ಥೆಯ ನಿರ್ಧಾರ ಇನ್ನೂ ದೃಡಪಟ್ಟಿಲ್ಲದಿರುವುದರಿಂದ ಕೆಲವು ನೌಕರರು ಆ್ಯಮ್ನೆಸ್ಟಿಯ ಲಾಭವನ್ನು ಪಡೆದು ಶೀಘ್ರವಾಗಿ ಭಾರತಕ್ಕೆ ತೆರಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News