×
Ad

ಬೃಹತ್ ಗಾತ್ರದ ವಜ್ರ ಪತ್ತೆ

Update: 2018-01-23 23:58 IST

ಆಫ್ರಿಕ ಖಂಡದ ರಾಷ್ಟ್ರವಾದ ದಕ್ಷಿಣ ಆಫ್ರಿಕ ವಜ್ರದ ಗಣಿಗಾರಿಕೆಗೆ ಪ್ರಖ್ಯಾತಿ ಪಡೆದಿದೆ. ಇದೀಗ ಈ ದೇಶದ ಗಣಿಯೊಂದರಲ್ಲಿ, ಅತ್ಯಂತ ಉತ್ಕೃಷ್ಟ ಗುಣಮಟ್ಟದ ದೊಡ್ಡ ಗಾತ್ರದ ವಜ್ರವೊಂದು ಪತ್ತೆಯಾಗಿದೆ. ಜಗತ್ತಿನಲ್ಲೇ ಈತನಕ ಪತ್ತೆಯಾದ ಉತ್ಕೃಷ್ಟ ಗುಣಮಟ್ಟದ ವಜ್ರಗಳ ಪೈಕಿ, ಗಾತ್ರದಲ್ಲಿ ಇದು ಐದನೇ ಸ್ಥಾನ ಪಡೆದಿದೆಯಂತೆ. ಸುಮಾರು 40 ದಶಲಕ್ಷ ಡಾಲರ್ ಬೆಲೆಬಾಳುವ ಈ ವಜ್ರವನ್ನು, ಜೆಮ್ ಡೈಮಂಡ್ಸ್ ಕಂಪೆನಿಯು ತನ್ನ ಲಿಟ್ಸೆಂಗ್ ಗಣಿಯಿಂದ ಉತ್ಖನನ ಮಾಡಿದೆ. 910 ಕ್ಯಾರಟ್‌ನ ಈ ವಜ್ರವು ಅಸಾಧಾರಣ ಗುಣಮಟ್ಟದ್ದೆಂದು ಜೆಮ್ ಡೈಮಂಡ್ಸ್ ಬಣ್ಣಿಸಿದೆ. 2006ರಲ್ಲಿ ಲಿಟ್ಸೆಂಗ್ ಗಣಿಯ ಒಡೆತನ ವಹಿಸಿಕೊಂಡ ಬಳಿಕ ಈ ಸಂಸ್ಥೆಯು ಅಲ್ಲಿಂದ ಜಗತ್ತಿನ ಕೆಲವು ಅಭೂತಪೂರ್ವ ವಜ್ರಗಳನ್ನು ಉತ್ಪಾದಿಸಿದೆಯಂತೆ. 2006ರಲ್ಲಿ ಲಿಟ್ಸೆಂಗ್ ಗಣಿಯಿಂದ 603 ಕ್ಯಾರಟ್‌ನ ವಜ್ರವೊಂದನ್ನು ಅದು ಉತ್ಪಾದಿಸಿತ್ತೆಂದು ಜೆಮ್ಸ್ ಡೈಮಂಡ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲಿಫರ್ಡ್ ಎಲ್ಫಿಕ್ ತಿಳಿಸಿದ್ದಾರೆ. ಆದರೆ ಈಗ ಪತ್ತೆಯಾಗಿರುವ ವಜ್ರವು ಈವರೆಗೆ ಲಿಟ್ಸೆಂಗ್ ಗಣಿಯಲ್ಲಿ ಉತ್ಖನನಗೊಂಡ ವಜ್ರಗಳಲ್ಲೇ ಅತ್ಯುತ್ಕೃಷ್ಟವಾದುದು. ಇದೊಂದು ಮಹಾನ್ ಅನ್ವೇಷಣೆಯೆಂದು ಅವರು ಬಣ್ಣಿಸಿದ್ದಾರೆ.
ಈ ಅಪರೂಪದ ವಜ್ರ ಪತ್ತೆಯಾದ ಬೆನ್ನಲ್ಲೇ ಜೆಮ್ ಡೈಮಂಡ್ಸ್ ನ ವರ್ಚಸ್ಸು ಕೂಡಾ ಹೆಚ್ಚಿದೆ. ಲಂಡನ್ ಶೇರು ಮಾರುಕಟ್ಟೆಯಲ್ಲಿ ಕಳೆದ ವಾರ ಜೆಮ್ ಡೈಮಂಡ್ಸ್ ಸಂಸ್ಥೆಯ ಶೇರುಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ