ಸೈಯದ್ ಮುಶ್ತಾಕ್ ಅಲಿ ಟ್ರೋಫಿ: ರೈನಾ ಸತತ 3ನೇ ಅರ್ಧಶತಕ; ಉ.ಪ್ರಕ್ಕೆ ಜಯ

Update: 2018-01-24 18:33 GMT

ಕೋಲ್ಕತಾ, ಜ.24: ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಸುರೇಶ್ ರೈನಾ ಸತತ ಮೂರನೇ ಅರ್ಧಶತಕವನ್ನು ದಾಖಲಿಸಿ ಉತ್ತರ ಪ್ರದೇಶ ತಂಡ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯಲ್ಲಿ ಬರೋಡಾ ವಿರುದ್ಧ್ದ ಏಳು ವಿಕೆಟ್ ಅಂತರದ ಜಯ ಸಾಧಿಸಲು ನೆರವಾದರು.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 193 ರನ್ ಗುರಿ ಪಡೆದಿದ್ದ ಉತ್ತರಪ್ರದೇಶ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಆಗ ಜೊತೆಯಾದ ರೈನಾ ಹಾಗೂ ಆರಂಭಿಕ ಆಟಗಾರ ಉಮಂಗ್ ಶರ್ಮ ಮೊದಲ ವಿಕೆಟ್‌ನಲ್ಲಿ 90 ಎಸೆತಗಳಲ್ಲಿ 160 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.

47 ಎಸೆತಗಳನ್ನು ಎದುರಿಸಿದ ರೈನಾ 5 ಬೌಂಡರಿ, 2 ಸಿಕ್ಸರ್‌ಗಳ ಸಹಿತ 56 ರನ್ ಗಳಿಸಿದರು. ಶರ್ಮ 47 ಎಸೆತಗಳಲ್ಲಿ ಜೀವನಶ್ರೇಷ್ಠ 95 ರನ್ ಕಲೆ ಹಾಕಿದರು.

5 ರನ್‌ನಿಂದ ಶತಕ ವಂಚಿತರಾದ ಶರ್ಮ ಅತೀತ್‌ಗೆ ವಿಕೆಟ್ ಒಪ್ಪಿಸಿದರು. ರೈನಾ ಹಾಗೂ ಶರ್ಮ ಔಟಾದಾಗ ಉತ್ತರಪ್ರದೇಶಕ್ಕೆ 24 ಎಸೆತಗಳಲ್ಲಿ 33 ರನ್ ಅಗತ್ಯವಿತ್ತು. ಅಜೇಯ 26(11 ಎಸೆತ, 4 ಬೌಂಡರಿ) ರನ್ ಗಳಿಸಿದ ರಿಂಕು ಸಿಂಗ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬರೋಡಾ ಉರ್ವಿಲ್ ಪಟೇಲ್(96) ಭರ್ಜರಿ ಅರ್ಧಶತಕದ ಕೊಡುಗೆ ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು. ಮಂಗಳವಾರ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ್ದ ಉತ್ತರಪ್ರದೇಶ ಇದೀಗ ಸತತ 2ನೇ ಜಯ ದಾಖಲಿಸಿದೆ. ಉ.ಪ್ರ ಮೂರು ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದೆ.

ಕರುಣ್ ನಾಯರ್ ಶತಕ: ಕರ್ನಾಟಕಕ್ಕೆ ಭರ್ಜರಿ ಗೆಲುವು

 ಆರಂಭಿಕ ಬ್ಯಾಟ್ಸ್‌ಮನ್ ಕರುಣ್ ನಾಯರ್ ಮಿಂಚಿನ ಶತಕದ(51 ಎಸೆತ, 100) ನೆರವಿನಿಂದ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧದ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ ಪಂದ್ಯದಲ್ಲಿ 123 ರನ್‌ಗಳಿಂದ ಜಯ ಸಾಧಿಸಿದೆ. ಬುಧವಾರ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಹಂಗಾಮಿ ನಾಯಕ ನಾಯರ್ ಶತಕ(100,52 ಎಸೆತ, 7 ಸಿಕ್ಸರ್, 8 ಬೌಂಡರಿ) ಹಾಗೂ ಪವನ್ ದೇಶಪಾಂಡೆ ಅರ್ಧಶತಕ(56) ಸಹಾಯದಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಜಾರ್ಖಂಡ್ 14.2 ಓವರ್‌ಗಳಲ್ಲಿ 98 ರನ್‌ಗೆ ಆಲೌಟಾಯಿತು. ಕೃಷ್ಣ,(2-8)ಮಿಥುನ್(2-23), ಎಸ್.ಅರವಿಂದ್(2-6)ಹಾಗೂ ಸುಚಿತ್(2-13) ತಲಾ 2 ವಿಕೆಟ್ ಪಡೆದರು. ಕರುಣ್ ನಾಯರ್ ತಂಡ 38 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಪವನ್‌ರೊಂದಿಗೆ 3ನೇ ವಿಕೆಟ್‌ಗೆ 130 ರನ್ ಜೊತೆಯಾಟ ನಡೆಸಿದರು. ನಾಯರ್ ಈ ವರ್ಷದ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದರು. ಇತ್ತೀಚೆಗೆ ತಮಿಳುನಾಡು ವಿರುದ್ಧ 111 ರನ್ ಗಳಿಸಿ 79 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News