ಪಂಕಜ್ ಅಡ್ವಾಣಿಗೆ ಪದ್ಮಭೂಷಣ ಸೇರಿದಂತೆ ರಾಜ್ಯದ ಎಂಟು ಜನರಿಗೆ ಪದ್ಮ ಮುಕುಟ

Update: 2018-01-25 18:18 GMT

ಹೊಸದಿಲ್ಲಿ,ಜ.25: ‘ಭಾರತ ರತ್ನ’ದ ಬಳಿಕ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿರುವ ಪದ್ಮ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಮುನ್ನಾದಿನವಾದ ಗುರುವಾರ ಪ್ರಕಟಿಸಲಾಗಿದೆ. ಒಟ್ಟು 85 ಪದ್ಮ ಪ್ರಶಸ್ತಿಗಳ ಪಟ್ಟಿಯು ಮೂರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 73 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತರ ಪೈಕಿ 14 ಮಹಿಳೆಯರಿದ್ದು, ವಿದೇಶಿಯರು/ಎನ್ನಾರೈ/ಪಿಐಒ/ಒಸಿಟಿ ವಿಭಾಗದಲ್ಲಿ 16 ಜನರು ಪ್ರಶಸ್ತಿ ಭಾಗ್ಯವನ್ನು ಪಡೆದಿದ್ದಾರೆ. ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕದ ಎಂಟು ಜನರಿಗೆ ಪದ್ಮ ಗೌರವ ಲಭಿಸಿದೆ. ಸ್ನೂಕರ್ ಕ್ರೀಡಾಪಟು ಪಂಕಜ್ ಅಡ್ವಾಣಿ ಅವರು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸೂಲಗಿತ್ತಿ ನರಸಮ್ಮ ಸಮಾಜಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಖ್ಯಾತ ಕನ್ನಡ ಕವಿ ದೊಡ್ಡರಂಗೇಗೌಡ, ಸೀತವ್ವಾ ಜೋಡಟ್ಟಿ(ಸಮಾಜ ಸೇವೆ), ಆರ್.ಸತ್ಯನಾರಾಯಣ, ಇಬ್ರಾಹೀಂ ಸುತಾರ(ಇಬ್ಬರೂ ಸಂಗೀತ), ರುದ್ರಪಟ್ಣಂ ನಾರಾಯಣ ಸ್ವಾಮಿ ತ್ಯಾಗರಾಜನ್ ಮತ್ತು ತಾರಾನಾಥನ್(ಜಂಟಿಯಾಗಿ-ಸಂಗೀತ ವಿಭಾಗ) ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿ(ಆಧ್ಯಾತ್ಮಿಕ ವಿಭಾಗ) ಅವರು ಕರ್ನಾಟಕಕ್ಕೆ ಹೆಮ್ಮೆಯನ್ನು ತಂದಿರುವ ಇನ್ನಿತರ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

ಪದ್ಮವಿಭೂಷಣ ಪ್ರಶಸ್ತಿ: ತಮಿಳುನಾಡಿನ ಇಳಯರಾಜಾ(ಸಂಗೀತ), ಮಹಾರಾಷ್ಟ್ರದ ಗುಲಾಂ ಮುಸ್ತಫಾ ಖಾನ್(ಸಂಗೀತ) ಮತ್ತು ಕೇರಳದ ಪಿ. ಪರಮೇಶ್ವರನ್(ಸಾಹಿತ್ಯ ಮತ್ತು ಶಿಕ್ಷಣ)

ಪದ್ಮಭೂಷಣ ಪ್ರಶಸ್ತಿ: ಕರ್ನಾಟಕದ ಪಂಕಜ್ ಅಡ್ವಾಣಿ(ಬಿಲಿಯರ್ಡ್ಸ್/ಸ್ನೂಕರ್), ಕೇರಳದ ಫಿಲಿಪೋಸ್ ಮಾರ್ ಕ್ರಿಸೋಸ್ಟಾಮ್(ಆಧ್ಯಾತ್ಮಿಕ), ಜಾರ್ಖಂಡ್‌ನ ಮಹೇಂದ್ರ ಸಿಂಗ್ ಧೋನಿ(ಕ್ರಿಕೆಟ್) ಮತ್ತು ರಷ್ಯಾದ ಅಲೆಕ್ಸಾಂಡರ್ ಕಡಕಿನ್-ವಿದೇಶಿಯ/ಮರಣೋತ್ತರ(ಸಾರ್ವಜನಿಕ ವ್ಯವಹಾರಗಳು) ತಮಿಳುನಾಡಿನ ರಾಮಚಂದ್ರ ನಾಗಸ್ವಾಮಿ(ಪುರಾತತ್ವ), ಅಮೆರಿಕದ ವೇದಪ್ರಕಾಶ ನಂದಾ-ಒಸಿಐ(ಸಾಹಿತ್ಯ ಮತ್ತು ಶಿಕ್ಷಣ), ಗೋವಾದ ಲಕ್ಷ್ಮಣ ಪೈ(ಚಿತ್ರಕಲೆ), ಮಹಾರಾಷ್ಟ್ರದ ಅರವಿಂದ ಪಾರಿಖ್ ಮತ್ತು ಬಿಹಾರದ ಶಾರದಾ ಸಿನ್ಹಾ(ಇಬ್ಬರೂ ಸಂಗೀತ)

ಮಾರ್ಚ್/ಎಪ್ರಿಲ್‌ನಲ್ಲಿ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News