ಬೆಲ್ಜಿಯಂ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2018-01-25 18:26 GMT

ಹ್ಯಾಮಿಲ್ಟನ್, ಜ.25: ಎರಡನೇ ಹಂತದ ಚತುರ್ರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಪುರುಷರ ಹಾಕಿ ತಂಡ ವಿಶ್ವದ ನಂ.3ನೇ ತಂಡ ಬೆಲ್ಜಿಯಂನ್ನು 5-4 ಅಂತರದಿಂದ ಮಣಿಸಿದೆ.

ಭಾರತ ಮೊದಲ ಹಂತದ ಚತುರ್ರಾಷ್ಟ್ರ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 1-2 ರಿಂದ ಸೋತಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಭಾರತದ ಪರ ರೂಪಿಂದರ್ ಪಾಲ್ ಸಿಂಗ್ ಅವಳಿ ಗೋಲು(4ನೇ, 42ನೇ ನಿಮಿಷ) ಬಾರಿಸಿದರೆ, ಹರ್ಮನ್‌ಪ್ರೀತ್ ಸಿಂಗ್(46ನೇ ನಿ.),ಲಲಿತ್ ಉಪಾಧ್ಯಾಯ(53ನೇ ನಿ.) ಹಾಗೂ ದಿಲ್‌ಪ್ರೀತ್ ಸಿಂಗ್(59ನೇ ನಿ.) ತಲಾ ಒಂದು ಗೋಲು ಬಾರಿಸುವ ಮೂಲಕ ಸತತ ಎರಡನೇ ಗೆಲುವು ತಂದರು.

ಬೆಲ್ಜಿಯಂನ ಪರ ಜಾನ್-ಡೊಹ್ಮೆನ್(17ನೇ ನಿ.),ಫೆಲಿಕ್ಸ್ ಡೆನಾಯೆರ್(37ನೆ ನಿ.), ಅಲೆಕ್ಸಾಂಡರ್ ಹೆಂಡ್ರಿಕ್ಸ್(45ನೇ ನಿ.) ಹಾಗೂ ಟಾಮ್ ಬೂನ್(56ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದ್ದಾರೆ.

ರೂಪಿಂದರ್ 4ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಬೇಗನೆ ಮುನ್ನಡೆ ಒದಗಿಸಿಕೊಟ್ಟರು. 17ನೇ ನಿಮಿಷದಲ್ಲಿ ಗೋಲು ಬಾರಿಸಿರುವ ಜಾನ್ 1-1 ರಿಂದ ಸಮಬಲಗೊಳಿಸಿದರು. 37ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿದ ಬೆಲ್ಜಿಯಂ 2-1 ಮುನ್ನಡೆ ಪಡೆಯಿತು. 42ನೇ ನಿಮಿಷದಲ್ಲಿ ಗೋಲು ಬಾರಿಸಿದ ರೂಪಿಂದರ್ 2-2 ರಿಂದ ಸಮಬಲಗೊಳಿಸಿದರು. 45ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಬೆಲ್ಜಿಯಂಗೆ 3-2 ಮುನ್ನಡೆ ಒದಗಿಸಿಕೊಟ್ಟರು.

46ನೇ ನಿಮಿಷದಲ್ಲಿ ಗೋಲು ಬಾರಿಸಿರುವ ಹರ್ಮನ್‌ಪ್ರೀತ್ ಸ್ಕೋರನ್ನು 3-3 ರಿಂದ ಸಮಬಲಗೊಳಿಸಿದರು. 53ನೆ ನಿಮಿಷದಲ್ಲಿ ಗೋಲು ಬಾರಿಸಿದ ಲಲಿತ್ ಭಾರತಕ್ಕೆ 4-3 ಮುನ್ನಡೆ ಒದಗಿಸಿಕೊಟ್ಟರು. ಬೆಲ್ಜಿಯಂ ಆಟಗಾರ ಬೂನ್ 56ನೇ ನಿಮಿಷದಲ್ಲಿ ಗೋಲು ಬಾರಿಸಿ 4-4 ರಿಂದ ಸಮಬಲ ಸಾಧಿಸಿದರು.

59ನೇ ನಿಮಿಷದಲ್ಲಿ ಗೋಲು ದಾಖಲಿಸಿದ ದಿಲ್‌ಪ್ರೀತ್ ಸಿಂಗ್ ಭಾರತಕ್ಕೆ 5-4 ಅಂತರದ ಗೆಲುವು ತಂದುಕೊಟ್ಟರು. ಭಾರತ ಜ.27 ರಂದು ಜಪಾನ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News