ಮುಂಬೈ ವಿರುದ್ಧ ಕರ್ನಾಟಕ ಜಯಭೇರಿ

Update: 2018-01-25 18:38 GMT

ಕೋಲ್ಕತಾ, ಜ.25: ಮಾಯಾಂಕ್ ಅಗರವಾಲ್(77) ಹಾಗೂ ಪವನ್ ದೇಶಪಾಂಡೆ(ಔಟಾಗದೆ 48)ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.

 ಗುರುವಾರ ಇಲ್ಲಿ ನಡೆದ ‘ಎ’ ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ ಗೆಲ್ಲಲು 176 ರನ್ ಗುರಿ ಪಡೆದ ಕರ್ನಾಟಕ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿದೆ.

 ಕರ್ನಾಟಕ 5 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆಗ 2ನೇ ವಿಕೆಟ್‌ಗೆ 75 ರನ್ ಜೊತೆಯಾಟ ನಡೆಸಿದ ಮಾಯಾಂಕ್(77,41 ಎಸೆತ, 9 ಬೌಂಡರಿ,3 ಸಿಕ್ಸರ್) ಹಾಗೂ ನಾಯಕ ಕರುಣ್ ನಾಯರ್(30,18 ಎಸೆತ, 2 ಬೌಂಡರಿ, 3 ಸಿಕ್ಸರ್)ತಂಡವನ್ನು ಆಧರಿಸಿದರು.

ಔಟಾಗದೆ ಉಳಿದ ಪವನ್(48 ರನ್, 39 ಎಸೆತ, 4 ಬೌಂಡರಿ)ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ ಸೂರ್ಯಕುಮಾರ್ ಯಾದವ್(ಔಟಾಗದೆ 59) ಹಾಗೂ ಸಿದ್ದೇಶ್ ಲಾಡ್(52) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 175 ರನ್ ಗಳಿಸಿತ್ತು. ಕರ್ನಾಟಕದ ಪರ ಸ್ಟುವರ್ಟ್ ಬಿನ್ನಿ(3-36) ಹಾಗೂ ಎಸ್.ಗೋಪಾಲ್(2-22) ಐದು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News