ಕಿವೀಸ್ ವಿರುದ್ಧ ಕೊನೆಗೂ ಗೆದ್ದ ಪಾಕ್

Update: 2018-01-25 18:49 GMT

ಆಕ್ಲಂಡ್, ಜ.25: ಪಾಕಿಸ್ತಾನ ತಂಡ ಎರಡನೇ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು 48 ರನ್‌ಗಳಿಂದ ಮಣಿಸಿದೆ. ಈ ಮೂಲಕ ಕೊನೆಗೂ ಕಿವೀಸ್ ಕ್ರಿಕೆಟ್ ಪ್ರವಾಸದಲ್ಲಿ ಗೆಲುವಿನ ಖಾತೆ ತೆರೆದಿದೆ.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-5 ಅಂತರದಿಂದ ಸೋತು ವೈಟ್‌ವಾಶ್ ಮುಖಭಂಗಕ್ಕೆ ಈಡಾಗಿದ್ದ ಪಾಕ್ 2ನೇ ಟ್ವೆಂಟಿ-20 ಪಂದ್ಯ ಜಯಿಸುವುದರೊಂದಿಗೆ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

 ಗುರುವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಬಾಬರ್ ಅಝಂ ಹಾಗೂ ಫಖರ್ ಝಮಾನ್ ಅರ್ಧಶತಕದ ನೆರವಿನಿಂದ ಎದುರಾಳಿ ತಂಡದ ಗೆಲುವಿಗೆ 202 ರನ್ ಗುರಿ ನೀಡಿತು.

ಇದಕ್ಕೆ ಉತ್ತರವಾಗಿ ಕಿವೀಸ್ ತಂಡ 18.3 ಓವರ್‌ಗಳಲ್ಲಿ 153 ರನ್‌ಗೆ ಆಲೌಟಾಯಿತು. ಫಹೀಮ್ ಅಶ್ರಫ್(3-22) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಆಮಿರ್(2-28) ಹಾಗೂ ಶಾದಾಬ್ ಖಾನ್(2-37) ತಲಾ ಎರಡು ವಿಕೆಟ್ ಪಡೆದರು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಕಿವೀಸ್ ಒಂದು ಹಂತದಲ್ಲಿ 64 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಬೆನ್ ವೀಲರ್(30) ಹಾಗೂ ಸ್ಯಾಂಟ್ನರ್(37) 7ನೇ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 118ಕ್ಕೆ ತಲುಪಿಸಿದರು.

ಇದಕ್ಕೆ ಮೊದಲು ಪಾಕ್ ತಂಡಕ್ಕೆ ಝಮಾನ್(50) ಹಾಗೂ ಶಹಝಾದ್(44) ಮೊದಲ ವಿಕೆಟ್‌ಗೆ 94 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಸ್ಯಾಂಟ್ನರ್ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿದ ಝಮಾನ್ ಚೊಚ್ಚಲ ಅರ್ಧಶತಕ ದಾಖಲಿಸಿದರು. ಔಟಾಗದೆ 50 ರನ್(29 ಎಸೆತ, 5 ಬೌಂಡರಿ,1 ಸಿಕ್ಸರ್) ಗಳಿಸಿದ ಬಾಬರ್ ಅಝಂ ಪಾಕ್ ಸ್ಕೋರನ್ನು 200ರ ಗಡಿ ದಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News