ಮುತ್ಸದ್ದಿತನದ ಕೊರತೆ, ಕಪಟ ಹಾಗೂ ಹುಚ್ಚುತನ

Update: 2018-01-26 07:10 GMT

ಹಿಂದೂ ಸಮಾಜದ ಅನೇಕರು ಆರಂಭಿಸಿರುವ ಸಂಘಟನೆ ಹಾಗೂ ಚಳವಳಿಗಳಲ್ಲಿ ಕಲಿತ ಸುಮಾರು ಜನ ಸೇರಿಕೊಂಡಿದ್ದಾರೆ. ಸಾಮಾನ್ಯ ಬಹುಸಮಾಜ ಈ ಚಳವಳಿಯಿಂದ ಅಲಿಪ್ತವಾಗಿದೆ ಅಂದರೆ ತಪ್ಪಿಲ್ಲ. ಅಲ್ಲದೆ ಸಮಾಜಸುಧಾರಕರೂ ಈ ಚಳವಳಿಯಲ್ಲಿಲ್ಲ. ಒಟ್ಟಿನಲ್ಲಿ ಈ ಚಳವಳಿಯಲ್ಲಿ ಅಜ್ಞಾನಿಗಳ ಪ್ರಾಬಲ್ಯ ಹೆಚ್ಚಿದೆ. ಹಳೇ ವಿಚಾರಗಳ ಜನರಿಗೆ ಶುದ್ಧಿಯ ಕಲ್ಪನೆ ಅಷ್ಟು ಹಿಡಿಸುವುದಿಲ್ಲ ಹಾಗೂ ಸಮಾಜ ಸುಧಾರಣೆಯತ್ತ ಆಕರ್ಷಿತರಾಗಿರುವವರಿಗೆ ಸಮಾಜ ಸುಧಾರಣೆಯಿಂದಲೇ ಹಿಂದೂ ಸಮಾಜದಲ್ಲಿ ನಿಜವಾದ ಸಂಘಟನೆ ಬೆಳೆದು ಶುದ್ಧೀಕರಣದ ಅಗತ್ಯವಿಲ್ಲದೆಯೇ ಹಿಂದೂ ಸಮಾಜದ ಸಂಖ್ಯಾಬಲ ಎಂದೆಂದೂ ಹೆಚ್ಚುತ್ತ ಹೋಗಬಹುದು ಎಂದೆನಿಸುತ್ತದೆ. ಆದ್ದರಿಂದ ಈ ಎರಡೂ ಪಕ್ಷಗಳು ಈ ಚಳವಳಿಗಳಿಂದ ಬೇರೆಯೇ ಉಳಿದಿವೆ. ಶುದ್ಧಿ ಸಂಘಟನೆಯ ಚಳವಳಿಯಲ್ಲಿ ಕಡಿಮೆ ಜ್ಞಾನವಿರುವ ಜನರನ್ನು ತುಂಬಿಕೊಂಡಿರುವುದರಿಂದ ಆ ಚಳವಳಿಯಿಂದ ಹೇಳಿಕೊಳ್ಳುವಂತಹ ಲಾಭವೇನು ಆಗುತ್ತಿಲ್ಲ. ಅಷ್ಟೇಯಲ್ಲ ಮೋಸ ಹಾಗೂ ಹುಚ್ಚುತನ ಹೆಚ್ಚುತ್ತಿದೆ. ಈಗೀಗ ಹಿಂದೂ ಮುಸಲ್ಮಾನರಲ್ಲಿ ಉಂಟಾಗಿರುವ ವೈಮನಸ್ಸಿನ ಲಾಭವನ್ನು ಕೆಲವರು ಪಡೆಯುತ್ತಿದ್ದಾರೆ.

ಧಾರ್ಮಿಕ ಕಲಹವೆಂದರೆ ಮೊದಲೇ ಹುಚ್ಚುತನ. ಧರ್ಮವನ್ನು ಕಡೆಗಾಣಿಸಿ ದಾಗಲೇ ಧಾರ್ಮಿಕ ಕಲಹಗಳು ಹರಡುತ್ತವೆ. ಇಂದು ಧರ್ಮದ ಹೆಸರಿನಲ್ಲಿ ಒಬ್ಬರೊಡನೊಬ್ಬರು ಜಗಳಾಡುತ್ತಿರುವ ಹಿಂದೂ ಮುಸಲ್ಮಾನರಲ್ಲಿ ನಿಜವಾದ ಧಾರ್ಮಿಕ ವೃತ್ತಿಯಿರುವ ನಾಲ್ಕು ಜನರಾದರೂ ಇರುವರೋ ಇಲ್ಲವೋ ಅನ್ನುವುದೇ ಅನುಮಾನ. ಧರ್ಮವನ್ನು ಮತ್ತೆ ಮತ್ತೆ ಒಡೆಯುವ ಜನರೇ ಧರ್ಮದ ಆವೇಶ ತೋರಿಸಿ ಬೇರೆ ಧರ್ಮದ ಜನರ ಪ್ರಾಣ ತೆಗೆಯಲು ನೋಡುತ್ತಿದ್ದಾರೆ. ಧರ್ಮವು ಮನುಷ್ಯನನ್ನು ದೇವದೂತನನ್ನಾಗಿ ಮಾಡಬೇಕು. ಆದರೆ ಹಾಗಾಗದೆ ಧಾರ್ಮಿಕ ಕಲಹಗಳಿಂದ ಮನುಷ್ಯನ ಮನುಷ್ಯತ್ವ ಕಳೆದುಹೋಗಿ ಪಶುತ್ವ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಶಿಕ್ಷಿತ ಗೂಂಡಾಗಳು ದಂಗೆಯೆಬ್ಬಿಸಿ ಒಬ್ಬರೊಬ್ಬರ ತಲೆಯೊಡೆದು ಕೊಲೆ ಮಾಡುತ್ತಾರೆ. ಹಾಗೂ ಸುಶಿಕ್ಷಿತ ಗೂಂಡಾಗಳು ಅಲ್ಪ ಪ್ರಯಾಸದಿಂದ ತಮ್ಮ ಸಮಾಜದಲ್ಲಿ ಜನಪ್ರಿಯವಾಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಅಶಿಕ್ಷಿತ ಗೂಂಡಾಗಳ ದುಷ್ಕೃತ್ಯದ ನಿಜವಾದ ಜವಾಬ್ದಾರಿ ಸುಶಿಕ್ಷಿತ ಗೂಂಡಾಗಳ ಮೇಲೆಯೇ ಇದೆ.

ಏಕೆಂದರೆ ಇವರು ಹೇಳುವುದರಿಂದಲೇ ಅಶಿಕ್ಷಿತ ಜನ ಅತ್ಯಾಚಾರ ಮಾಡಲು ಮುಂದಾಗುತ್ತಾರೆ. ಹಿಂದೂಗಳಲ್ಲಿರುವಂತೆ ಮುಸಲ್ಮಾನರಲ್ಲೂ ಅಶಿಕ್ಷಿತ ಗೂಂಡಾಗಳಿದ್ದಾರೆ. ಪಂಡಿತರಲ್ಲಿರುವಂತೆ ವೌಲಾನಗಳಲ್ಲೂ ಇದ್ದಾರೆ. ನಿಜ ಹೇಳುವುದಾದರೆ ಧರ್ಮದ ಬಗ್ಗೆ ಸೂಕ್ಷ್ಮವಾಗಿ ಯಾರೂ ಯೋಚಿಸುವುದೇ ಇಲ್ಲ. ಧರ್ಮದ ಆದ್ಯ ತತ್ವಗಳ ಬಗ್ಗೆ ಯಾರಿಗೂ ಪರಿವೆಯೇ ಇಲ್ಲ. ದುರಾಗ್ರಹ ಹಾಗೂ ದುರಭಿಮಾನದ ಪ್ರಾಬಲ್ಯ ಎರಡೂ ಸಮಾಜದಲ್ಲಿದೆ. ಕಣ್ಣು ಮುಚ್ಚಿ ಧಾರ್ಮಿಕ ಗ್ರಂಥಗಳನ್ನು ನಂಬುವುದು, ಅಂಧಶ್ರದ್ಧೆ ಹಾಗೂ ಅಜ್ಞಾನ ಇವುಗಳು ಪ್ರತಿಯೊಂದು ಧರ್ಮವನ್ನೂ ಸುತ್ತುವರಿದಿವೆ. ಹಾಗಾಗಿ ಧರ್ಮ ಹಾಗೂ ಸಾರಾಸಾರ ವಿಚಾರ ಇವುಗಳ ನಡುವೆ ಸಂಬಂಧವೇ ಇಲ್ಲದಂತಾಗಿದೆ.

ಸತ್ತವರ ಹೆಣ ಹಾಗೂ ಸತ್ತವರ ವಿಚಾರಗಳು 
ಇವುಗಳ ಮೇಲೆಯೇ ಇಂದು ರಂಪಾಟವಾಗುತ್ತಿದೆ. ನಿಜ ಏನು ಅನ್ನುವುದನ್ನು ಯಾರೂ ತಿಳಿದುಕೊಳ್ಳುವುದೇ ಇಲ್ಲ. ಇಂತಹ ಒಬ್ಬ ಧರ್ಮಸಂಸ್ಥಾಪಕ ಏನು ಹೇಳಿದ್ದ, ಅಂತಹ ಧರ್ಮಗ್ರಂಥದಲ್ಲಿ ಏನು ಬರೆದಿತ್ತು ಅನ್ನುವುದಕ್ಕೇ ಹೆಚ್ಚು ಮಹತ್ವವಿರುವುದರಿಂದ ಸತ್ಯ ಅನ್ನುವುದು ಸಂದಿಯೊಂದರಲ್ಲಿ ಕೂತು ಅಳುತ್ತಿದೆ. ಇಂತಹ ಸಮಯದಲ್ಲಿ ಕಪಟ, ಮೋಸ ಮಾಡುವವರ ಸಾಮ್ರಾಜ್ಯ ಬೆಳೆಯುವುದು ಸ್ವಾಭಾವಿಕ.

  ಇತ್ತೀಚೆಗೆ ಸಾಕಷ್ಟು ಮನೆಮಾತಾಗಿರುವ ಖಾನ್-ಮಾಲಿನಿ ಮದುವೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಕಪಟತನ ಹಾಗೂ ಹುಚ್ಚುತನಕ್ಕೆ ಇಂದಿನ ಧಾರ್ಮಿಕ ಕಲಹಗಳಿಂದ ಎಂತಹ ಪ್ರೋತ್ಸಾಹ ಸಿಗುತ್ತಿದೆ ಅನ್ನುವುದು ಗೊತ್ತಾಗುತ್ತದೆ. ಈ ವಿಷಯದ ಬಗೆಗಿನ ಉಳಿದ ವಿಚಾರಗಳನ್ನು ನಾವು ಮೊದಲೇ ಪ್ರಕಟಿಸಿದ್ದೇವೆ, ಆದರೆ ಹಳೆಯ ಗೋರಿಗಳನ್ನು ಅಗೆದು ತೆಗೆಯುವ ಪ್ರಯತ್ನ ಇವತ್ತಿಗೂ ಕೂಡ ಅನೇಕ ಜನರಿಂದ ನಡೆಯುತ್ತಿರುವುದರಿಂದ ಅದೇ ವಿಷಯದ ಕಡೆ ಮತ್ತೆ ಹೊರಳುತ್ತಿದ್ದೇವೆ. ಹಿಂದೂ ಸಮಾಜ ಯಾವ ರೀತಿ ದಾರಿ ತಪ್ಪುತ್ತಿದೆ ಅನ್ನುವುದನ್ನು ಇಂದು ತೋರಿಸಿಕೊಡುವುದಿದೆ.

 ಓರ್ವ ಸುಶಿಕ್ಷಿತ ಹಿಂದೂ ಸ್ತ್ರೀ ಓರ್ವ ಮುಸ್ಲಿಮನೊಡನೆ ಮದುವೆಯಾಗಿದ್ದಕ್ಕೆ ವರ್ತಮಾನ ಪತ್ರಿಕೆಗಳಲ್ಲಿ ಹಾಗೂ ಸಭೆಗಳಲ್ಲಿ ಯಾವ ರೀತಿಯ ಗೊಂದಲವಾಯಿತೆಂದರೆ ನೋಡಿದವರಿಗೆ ಹಿಂದೂ ಸಮಾಜದ ಮೇಲೆ ಆಕಾಶವೇ ಕಳಚಿ ಬಿತ್ತೇನೋ ಅನಿಸಬೇಕು. ಈ ಘಟನೆ ನಡೆದು ಎರಡು ತಿಂಗಳಾದರೂ ನೋಡಿದವರ ಬಾಯಲ್ಲಿ ಅದೇ ಮಾತು. ಕಳೆದ ಐದು ಹತ್ತು ವರ್ಷಗಳಲ್ಲಿ ಹಿಂದೂ ಸಮಾಜದ ಮೇಲೆ ಸಾಕಷ್ಟು ದೊಡ್ಡ ಆಘಾತಗಳಾಗಿರಬಹುದು. ಆದರೆ ಮಾಲಿನಿ-ಖಾನ್ ವಿವಾಹದಿಂದಾದ ಗೊಂದಲ ಬೇರೆ ಯಾವುದರಿಂದಲೂ ಆಗಲಿಲ್ಲ. ಸ್ವಾಮಿ ಶ್ರದ್ಧಾನಂದರ ಕೊಲೆಯ ಬಗ್ಗೆ ಮರಾಠಿ ಪತ್ರಿಕೆಗಳಲ್ಲಿ ಬರೆಯದಷ್ಟು ಉದ್ದುದ್ದ ಲೇಖನಗಳು ಈ ವಿವಾಹದ ಬಗ್ಗೆ ಬರೆಯಲ್ಪಟ್ಟವು! ಆದರೆ ಖಾನ್-ಮಾಲಿನಿ ವಿವಾಹ ಹಾಗೂ ಶ್ರದ್ಧಾನಂದರ ಕೊಲೆ ಇದರ ತುಲನೆ ನಿಜವಾಗಿಯೂ ಸಾಧ್ಯವೇ? ಮುಸಲ್ಮಾನನೊಡನೆ ವಿವಾಹವಾದ ಹಿಂದೂ ಸ್ತ್ರೀ ಎಷ್ಟೇ ಕಲಿತವಳಾಗಿದ್ದರೂ, ಎಷ್ಟೇ ಉಚ್ಚಜಾತಿಯವಳಾಗಿದ್ದರೂ ಅಥವಾ ದೊಡ್ಡ ಮನೆತನದವಳಾಗಿದ್ದರೂ ಸಂಖ್ಯೆಯ ದೃಷ್ಟಿಯಿಂದ ಆಕೆ ಒಂದೇ (1) ಆಗಿದ್ದಳು. ಹೋಗಲಿ ಆಕೆಯ ಹಿಂದೆ ನೂರಾರು ಸ್ತ್ರೀ ಪುರುಷರು ಆಕೆಯ ಬೆಂಬಲಿಗರಾಗಿಯೂ ಅರಲಿಲ್ಲ. ಅಂದರೆ ಆಕೆ ಮೂಲ ಬ್ರಾಹ್ಮಣ ಮನೆತನದವಳೋ ಇಲ್ಲ ಹಳೆಯ ಹಿಂದೂ ಮನೆತನದವಳೋ ಆಗಿರಲಿಲ್ಲ ಅನ್ನುವ ವಿಷಯವನ್ನು ಪಕ್ಕಕ್ಕಿಟ್ಟು ಯೋಚಿಸಿದರೂ ಆಕೆಯ ಸದ್ಯದ ವಿವಾಹದಿಂದ ಹಿಂದೂ ಸಮಾಜದ ಒಬ್ಬ ವ್ಯಕ್ತಿ ಕಡಿಮೆಯಾದ ಅನ್ನುವುದಷ್ಟೇ ಸಂಖ್ಯಾ ಬಲದ ಬಗ್ಗೆ ಯೋಚಿಸುವಾಗ ಹೇಳಬಹುದು. ಅಷ್ಟೇ ಅಲ್ಲದೆ ಮುಸಲ್ಮಾನ ಸಮಾಜದಲ್ಲಿ ಒಬ್ಬ ಮನುಷ್ಯ ಹೆಚ್ಚಾದ ಎಂದು ಕೂಡ ಕಾನೂನಿನ ದೃಷ್ಟಿಯಲ್ಲಿ ಹೇಳಲಾಗುವುದಿಲ್ಲ.

ಏಕೆಂದರೆ ವಿವಾಹವನ್ನು ನೋಂದಾಯಿಸುವಾಗ ವಧು ಹಾಗೂ ವರ ನಾವಿಬ್ಬರೂ ಯಾವುದೇ ಜಾತಿಗೆ ಸೇರಿದವರಲ್ಲ ಅನ್ನುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಹಾಗಾಗಿ ಮುಸಲ್ಮಾನ ಸಮಾಜದಲ್ಲೂ ಒಬ್ಬ ಮನುಷ್ಯ ಕಡಿಮೆಯಾಗಿದ್ದಾನೆ. ಹೀಗಿರುವಾಗಲೂ ಈ ವಿವಾಹದ ಬಗ್ಗೆ ಎಷ್ಟು ಒದರಾಟ ಕಿರುಚಾಟ! ನಮ್ಮಲ್ಲಿಯ ಜನ ಬೇರೆ ಧರ್ಮಕ್ಕೆ ಹೋಗುವುದರಿಂದ ತಮ್ಮ ಧರ್ಮದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತದೆ ಅನ್ನುವ ಬಗ್ಗೆ ಬಾಯಿ ಮಾಡುವ ಜನರಿಗೆ ನಿಜವಾಗಿಯೂ ಬೇಸರವಾಗುತ್ತಿದ್ದರೆ ಇಷ್ಟು ಚಿಕ್ಕ ವಿಷಯಕ್ಕವರು ಹೆಚ್ಚು ಮಹತ್ವ ಕೊಡದೆ ಸ್ವಧರ್ಮ ಸಂರಕ್ಷಣೆಯ ಬಗ್ಗೆ ಅವರು ಹೆಚ್ಚು ಯೋಚಿಸುತ್ತಿದ್ದರು. ಹಿಂದೂ ಸಮಾಜದಿಂದ ಪ್ರತಿದಿನ ನೂರಾರು ಜನ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ ಅನ್ನುವ ಬಗ್ಗೆ, ತ್ರೈರಾಶಿಕ ದೃಷ್ಟಿಯಿಂದ ಯೋಚಿಸಿದಾಗ ಇವರುಗಳು ಶೋಕತಪ್ತರಾಗಿ ಪ್ರಾಣವನ್ನೇ ಬಿಡಬೇಕಿತ್ತು! ಮನೆಯ ಯಜಮಾನ ತನ್ನ ಮನೆಯಲ್ಲಾಗಿರುವ ದೊಡ್ಡ ದೊಡ್ಡ ಕಂದಕಗಳನ್ನು ಗಮನಿಸದೆ ಗೋಡೆಗೆ ಬಿದ್ದಿರುವ ಸಣ್ಣ ತೂತನ್ನು ನೋಡಿ ಎದೆ ಹೊಡೆದುಕೊಂಡು ಅಳುವ ದೃಶ್ಯ ಎಷ್ಟು ಹಾಸ್ಯಾಸ್ಪದವೋ ಮಾಲಿನಿ -ಖಾನ್ ವಿವಾಹದ ವಿರುದ್ಧ ಆದ, ಆಗುತ್ತಿರುವ ಆಕ್ರೋಶ ಕೂಡ ಅಷ್ಟೇ ಹಾಸ್ಯಾಸ್ಪದವಾಗಿದೆ. ಇಂತಹ ಮೂರ್ಖತನದ ಅಕ್ರೋಶದಿಂದ ಕಂದಕಗಳು ತನ್ನಿಂದ ತಾನೇ ಮುಚ್ಚಲ್ಪಡಲಾರವು.

ಹಿಂದೂ ಸಮಾಜದಲ್ಲಿ ಬೇರೂರಿರುವ ಹೊಲಸು ತಿಳುವಳಿಕೆಗಳಿಂದ ಹಿಂದೂ ಸಮಾಜ ಛಿದ್ರಛಿದ್ರವಾಗಿ ದುರ್ಬಲವಾಗಿದೆ. ಆ ತಿಳುವಳಿಕೆಗಳು ಹಾಗೂ ಯಾವುದೋ ವಿಷಯಕ್ಕೆ ಹೆಚ್ಚು ಮಹತ್ವ ಕೊಟ್ಟು ರಂಪಾಟ ಮಾಡುವುದೆಂದರೆ ಸಮಯದ ಹಾಗೂ ಉತ್ಸಾಹದ ದುರುಪಯೋಗ ಮಾಡಿದಂತೆ. ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ ಧರ್ಮದ ನೂರಾರು ಜನ ಪ್ರತಿ ದಿನ ಬೇರೆ ಧರ್ಮಕ್ಕೆ ಹೋಗುವ ಕಾರಣವೇನು ಅನ್ನುವುದು ಸುಲಭವಾಗಿ ಅರ್ಥವಾಗಬಹುದು. ಅನೇಕರು ಸಾಮಾಜಿಕ ಹಾಗೂ ಧಾರ್ಮಿಕ ಅನ್ಯಾಯಕ್ಕೆ ಬೇಸತ್ತು ತಮ್ಮ ಮನಸಾರೆ ಪರಧರ್ಮವನ್ನು ಅಂಗೀಕರಿಸುತ್ತಿದ್ದಾರೆ. ಹೀಗೆ ಮಾಡುವುದರಲ್ಲಿ ದಲಿತರೇ ಹೆಚ್ಚು. ಅಲ್ಲದೆ ಹಿಂದೂ ಸಮಾಜದ ಅನೇಕ ಜಾತಿಗಳಲ್ಲಿ ವಿಧವಾ ವಿವಾಹಕ್ಕೆ ಅನುಮತಿಯಿಲ್ಲದ ಕಾರಣ ಮೇಲ್ಜಾತಿ ಮನೆತನಗಳ ವಿವಾಹದ ವಿರುದ್ಧವೇ ಇಷ್ಟೊಂದು ಬಾಯಿಯೇಕೆ? ಪಾಂಡವರ ರಾಜಸೂಯ ಯಜ್ಞದ ಸಮಯದಲ್ಲಿ ಸಾಕಷ್ಟು ಬ್ರಾಹ್ಮಣರು ಊಟ ಮಾಡಿದರೂ ಸ್ವರ್ಗದಲ್ಲಿ ಘಂಟಾನಾದವಾಗಲಿಲ್ಲ. ಆದರೆ ಶುಕ ಮುನಿಗಳು ಗಿಳಿಯ ರೂಪದಲ್ಲಿ ಬಂದು ಅನ್ನ ತಿನ್ನಲಾರಂಭಿಸಿದಾಗ ಪ್ರತಿಯೊಂದು ಅಗಳಿಗೂ ಲಕ್ಷಭೋಜನವಾಯಿತೆಂದು ಸ್ವರ್ಗದಲ್ಲಿ ಘಂಟಾನಾದವಾಗತೊಡಗಿತು ಅನ್ನುವ ಒಂದು ಕಥೆಯಿದೆ. ಅಂತಹುದೇ ಮಹತ್ವ ಖಾನ್-ಮಾಲಿನಿ ವಿವಾಹಕ್ಕೆ ಕೊಡಬೇಕೆಂದಿದ್ದರೆ ಗೊತ್ತಿಲ್ಲ ಅಂದರೆ 1 ಮಿಸ್ ಮಾಲಿನಿ ಪಾಣಂದೀಕರ್=1ಲಕ್ಷ ಅಥವಾ 1 ಕೋಟಿ ಹಿಂದೂ ಸ್ತ್ರೀಯರು ಎಂದು ಲೆಕ್ಕ ಮಾಡಬೇಕಾದೀತು! ಎರಡನೆಯದಾಗಿ ಮಾಲಿನಿಭಾಯಿಯವರು ಹಿಂದೂ ಸಮಾಜದ ರೂಢಿಗಳಿಗೆ ಬೇಸತ್ತು ವಿವಾಹವಾಗಲಿಲ್ಲ, ಅದು ಸ್ವಂತ ಒಪ್ಪಿಗೆಯಿಂದ ಹಾಗೂ ಜಾಣತನದಿಂದಾದ ವಿವಾಹವಾಗಿದೆ. ಈ ವಿವಾದ ವಿಷಯದಲ್ಲಿ ಆ ವ್ಯಕ್ತಿಯನ್ನು ದೂಷಿಸಿ, ಅವನನ್ನು ಮಾತಿನಲ್ಲಿ ತೆಗಳಿ ತೊಂದರೆ ಕೊಡುವ ಅಧಿಕಾರ ಈ ಸಮಾಜಕ್ಕಿಲ್ಲ ಹಾಗೂ ಇಂತಹ ವಿವಾಹಗಳು ಅಲ್ಲಲ್ಲಿ ಅಗುವವೆ, ಹೀಗೆ ತೊಂದರೆ ಕೊಡುವುದರಿಂದ ಅವು ನಿಲ್ಲಲಾರವು. ಎಂದೋ ಒಮ್ಮೆ ಆಗುವ ವಿವಾಹಗಳಿಂದ ಕಡಿಮೆಯಾಗುತ್ತಿರುವ ಸಂಖ್ಯಾಬಲಕ್ಕಿಂತ ಇತರ ಕಾರಣಗಳಿಂದ ಕಡಿಮೆಯಾಗುತ್ತಿರುವ ಸಂಖ್ಯಾಬಲ ಎಷ್ಟೋ ದೊಡ್ಡದಾಗಿದೆ. ಆದರೆ ಅದೆಲ್ಲದರ ಕಡೆ ಗಮನಹರಿಸದೆ ಅಪವಾದಾತ್ಮಕ ಉದಾಹರಣೆಗಳನ್ನೇ ದೊಡ್ಡದು ಮಾಡಲಾಗುತ್ತಿದೆ.

ಮಹಾರಾಷ್ಟ್ರದ ಅನೇಕ ವೃತ್ತ ಪತ್ರಿಕೆಗಳು ಅಜ್ಞಾನಿಗಳನ್ನು ಮೂರ್ಖರನ್ನಾಗಿ ಮಾಡುವ ಸಾಧನ  ಗಳಾಗಿವೆ. ಯಾವ ವಿಷಯಕ್ಕೆ ಜನರನ್ನು ಮರುಳು ಮಾಡಿ ತಮ್ಮ ಪತ್ರಿಕೆಯ ಮಾರಾಟ ಹೆಚ್ಚಿಸಬಹುದು ಅನ್ನುವ ಬಗ್ಗೆ ಈ ಚಾಲಾಕು ಪತ್ರಕಾರರು ಒಂದು ಶಾಸ್ತ್ರವನ್ನೇ ತಯಾರಿಸಿದ್ದಾರೆ ಹಾಗೂ ತಮ್ಮ ಬರವಣಿಗೆಯ ಕಲೆಯನ್ನು ಇದೇ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಲೇಖಕರು ಧಾರ್ಮಿಕ ವೃತ್ತಿಯವರೋ ಅಥವಾ ಪ್ರಾಮಾಣಿಕ ಹಳೆಯ ವಿಚಾರಧಾರೆಯವರಾಗಲಿ ಅಲ್ಲ. ಹಿಂದೂ ಗಂಡಸರು ಯುರೋಪಿಯನ್ ಹೆಣ್ಣಿನೊಡನೆ ಮದುವೆಯಾದರೆ ಅವರ ಮನಸ್ಸಿಗೆ ಅಘಾತವಾಗುವುದಿಲ್ಲ, ಮದ್ಯಮಾಂಸಗಳನ್ನು ಪುರಸ್ಕರಿಸುವವರನ್ನವರು ಸಾತ್ಪಾತ್ರ ಬ್ರಾಹ್ಮಣರು ಹಾಗೂ ಸಮಾಜದ ಪುಢಾರಿಗಳೆನ್ನುತ್ತಾರೆ. ಧರ್ಮದ ಹೆಸರಿನಲ್ಲಾಗುವ ಅನಾಚಾರ ಹಾಗೂ ಅತ್ಯಾಚಾರ ಅವರಿಗೆ ನಡೆಯುತ್ತದೆ. ‘ನ ಲೋಕಃ ನ ಪಾರಮಾರ್ಥಿಕಃ’ ಅಂದರೆ ಸಾಮಾನ್ಯ ಜನ ಸ್ವಂತ ಬುದ್ಧಿ ಹಾಗೂ ಸೂಕ್ಷ್ಮವಾಗಿ ಯೋಚಿಸುತ್ತಾರೆ ಅನ್ನುವುದವರಿಗೆ ಗೊತ್ತಿರುತ್ತದೆ, ಆದ್ದರಿಂದ ಧರ್ಮಭಿಮಾನದ ಕಪಟತನದಡಿ ಅವರು ತಮ್ಮ ಸ್ವಾರ್ಥವನ್ನು ಪೂರೈಸಿಕೊಳ್ಳಬಲ್ಲವರಾಗಿರುತ್ತಾರೆ. ಸರಕಾರದ ವಿರುದ್ಧ ಬರೆದರೆ ಪೀನಲ್ ಕೋಡ್ 124(ಅ) ಕಲಮು ಹಾಗೂ ಮುಸಲ್ಮಾನರ ವಿರುದ್ಧ ಬರೆದರೆ 153(ಅ) ಕಲಮು ತಮ್ಮ ವಿರುದ್ಧ ಜಾರಿಗೆ ಬರಬಹುದು. ಆದ್ದರಿಂದ ಸರಕಾರ ಅಥವಾ ಮುಸಲ್ಮಾನರ ದಾರಿಗೆ ಹೋಗದೆ ಜನರನ್ನು ಮರುಳು ಮಾಡುವ ಸುಲಭವಾದ ಉಪಾಯವನ್ನಿವರು ಹುಡುಕುತ್ತಾರೆ. ವಿಘಾತಕ ಕೃತ್ಯಗಳನ್ನು ಮಾಡುವುದರಿಂದಲೇ ಇವರ ವ್ಯವಸಾಯ ಹಾಗೂ ಉದರ ನಿರ್ವಹಣೆ ನಡೆಯುತ್ತದೆ.

ಸಂಸ್ಥೆಯೊಂದು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದರೆ ಇವರಿಗೆ ಹೊಟ್ಟೆ ಉರಿಯುತ್ತದೆ. ಆ ಸಂಸ್ಥೆಯ ಬಗ್ಗೆ ಅರಿಯದವರ ಮನಸ್ಸಿನಲ್ಲಿ ತಪ್ಪುತಿಳುವಳಿಕೆಗಳನ್ನು ಹರಡುವುದೇ ಇವರ ಕೆಲಸ! ಹಿಂದೂ ಸಂಘಟಕರು ಹಾಗೂ ಶುದ್ಧಿ ಈ ವಿಷಯಗಳ ಬಗ್ಗೆ ನಿಜವಾಗಿಯೂ ಅವರ ಮನಸ್ಸಿನಲ್ಲಿ ಸಹಾನೂಭೂತಿಯಿದ್ದರೆ ಹಿಂದೂ ಸಮಾಜದ ಗೋಡೆಗೆ ಬಿದ್ದಿರುವ ದೊಡ್ಡ ತೂತುಗಳನ್ನು ಮುಚ್ಚುವ ಕಡೆ ಅವರು ಗಮನ ಹರಿಸುತ್ತಿದ್ದರು. ಮೊನ್ನೆ ನಾಗಪುರದಲ್ಲಿ ಹಿಂದೂ ಮಹಾಸಭೆಯ ಅಧಿವೇಶನದ ಅಧ್ಯಕ್ಷರಾಗಿ ಸರ್ ಶಂಕರನ್ ನಾಯರ್ ಅವರು ಮಾಡಿದ ಉಪದೇಶವನ್ನು ಹಿಂದೂ ಸಮಾಜ ನೆನಪಿಟ್ಟರೆ ನಿಜವಾದ ಹಿಂದೂ ಸಂಘಟನೆ ಅಸ್ತಿತ್ವಕ್ಕೆ ಬಂದೀತು. ಜಾತಿಭೇದ ನಿವಾರಣೆ ಹಾಗೂ ಅಸ್ಪಶ್ಯತೆ ನಿವಾರಣೆ ಎಲ್ಲಿಯವರೆಗೆ ಆಗುವುದಿಲ್ಲವೋ ಅಲ್ಲಿಯವರೆಗೆ ಸಂಘಟನೆ ಹಾಗೂ ಶುದ್ಧಿಯ ಮಾತುಗಳು ವ್ಯರ್ಥ. ಆದರೆ ಖಾನ್-ಮಾಲಿನಿ ವಿವಾಹದ ಬಗ್ಗೆ ಬಾಯಿ ಮಾಡುವ ಈ ಜನ ಇಂತಹ ಮುಖ್ಯವಾದ ಪ್ರಶ್ನೆಯನ್ನು ಎಂದಾದರೂ ಸಹಾನುಭೂತಿಯಿಂದ ಬರೆದರೆ ಆಣೆ! ಏಕೆಂದರೆ ಅವರಿಗೆ ಗೊತ್ತು, ಇಂತಹ ವಿಷಯಗಳ ಬಗ್ಗೆ ಬರೆದರೆ ಅರಿಯದ ಜನರಿಗೆ ಅದು ಇಷ್ಟಾವಾಗಲಾರದೆಂದು ಹಾಗೂ ತಮ್ಮ ಪತ್ರಿಕೆಗಳೂ ಹೆಚ್ಚು ಮಾರಾಟವಾಗಲಾರವೆಂದು, ಜೊತೆಗೆ ಈಗಿರುವುದಕ್ಕಿಂತ ಮಾರಾಟ ಕಡಿಮೆಯಾಗುವ ಭಯ ಅವರಿಗೆ ಕಾಡುತ್ತದೆ!

ಜನರನ್ನು ಮರುಳು ಮಾಡುವುದು ಸುಲಭ. ಆದರೆ ಅವರಿಗೆ ಜಾಣತನ ಕಲಿಸುವುದು ಸುಲಭವಲ್ಲ. ಈ ಲೇಖಕರಿಗೇನಾದರೂ ತಮ್ಮ ಲೇಖನದ ಬಗ್ಗೆ ಅಹಂಕಾರವಿದ್ದರೆ ಅವರು ಇಂತಹ (ಸಂಘಟನೆ, ಅಸ್ಪಶ್ಯತೆ, ಜಾತಿಭೇದ ನಿವಾರಣೆ) ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು ತಮ್ಮ ಪತ್ರಿಕೆಯ ಜನಪ್ರಿಯತೆಯನ್ನು ಸ್ವಲ್ಪವಾದರೂ ಹೆಚ್ಚಿಸಲಿ. ಸ್ವಲ್ಪದರಲ್ಲಿ ಹೇಳುವುದಾದರೆ ಒಂದು ಕಡೆ ಕಪಟತನ ಮತ್ತೊಂದು ಕಡೆ ವಿಚಾರಶೂನ್ಯತೆ ಇವುಗಳಿಂದ ಮೂರ್ಖತನಕ್ಕೆ ಹಾಗೂ ನಿಷ್ಕಾರಣ ಹುಚ್ಚುತನಕ್ಕೆ ಉತ್ತೇಜನ ಸಿಗುತ್ತದೆ. ಇಂತಹ ಮೂರ್ಖತನದಿಂದ ಹಿಂದೂ ಸಮಾಜಕ್ಕೆ ಲಾಭವಲ್ಲ ನಷ್ಟವಿದೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News