ಕೌಟುಂಬಿಕ ಪಿಂಚಣಿ ಕಡಿತ: ಭಾರತೀಯ ರೈಲ್ವೆಯ ವಿರುದ್ಧ ಹೋರಾಡಿದ ಪುತ್ತೂರಿನ ಗೀತಾ ಭಟ್
ಹೊಸ ಭಾರತದಲ್ಲಿ ಸಾಮಾನ್ಯ ಪ್ರಜೆಗಳು, ಸಂವೇದನಾಶೀಲತೆಯು ಬತ್ತಿಹೋದ ಆಡಳಿತಯಂತ್ರಕ್ಕೆ ಸಿಲುಕಿ ಬಸವಳಿಯುತ್ತಲೇ ಇದ್ದಾರೆ. ನಾಗರಿಕರು ಪಾಲಿಗೆ ಬಂದುದು ಪಂಚಾಮೃತವೆಂದು ಬವಣೆಯನ್ನು ಅನುಭವಿಸುತ್ತಲೇ ಜೀವನ ಕಳೆಯುತ್ತಾರೆ. ಅಪರೂಪಕ್ಕೆ ಒಬ್ಬರು ಹಠಬಿಡದ ತ್ರಿವಿಕ್ರಮನಂತೆ ದೃಢಮನಸ್ಸಿನಿಂದ ಜಾಡ್ಯಹಿಡಿದ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾರೆ. ಅದು ಬಹಳ ಕಷ್ಟದ ಸವಾಲು. ಆಡಳಿತವು ಅತ್ಯಂತ ಬಲಶಾಲಿ, ಅದರ ವಿರುದ್ಧ ಧ್ವನಿ ಏರಿಸುವುದು ಸುಲಭಸಾಧ್ಯವಲ್ಲ. ಇತ್ತೀಚೆಗೆ ಪುತ್ತೂರಿನ ಒಬ್ಬಾಕೆ 85 ವರ್ಷ ದಾಟಿದ ಮಹಿಳೆಯು ಪಟ್ಟ ಬವಣೆ ಮತ್ತು ಆಕೆಯ ಹೋರಾಟವು ಉಲ್ಲೇಖನೀಯ.
ಸರಕಾರಿ ನೌಕರರ ಸುದೀರ್ಘಕಾಲದ ಸೇವೆಯನ್ನು ಪರಿಗಣಿಸಿ ಅವರಿಗೆ ನಿವೃತ್ತಿವೇತನವನ್ನು ಕಾನೂನಿನ ಪ್ರಕಾರವಾಗಿಯೇ ಜೀವಮಾನಪರ್ಯಂತ ನೀಡಲಾಗುತ್ತದೆ. ನಿವೃತ್ತ ನೌಕರರು ನಿಧನರಾದರೆ ಅವರ ಜೀವನ ಸಂಗಾತಿಗೆ ಕೌಟುಂಬಿಕ ನಿವೃತ್ತಿವೇತನವನ್ನು ಕೊಡಲಾಗುತ್ತದೆ. ನೌಕರರು ಸೇವೆಯಲ್ಲಿದ್ದಾಗಲೇ ಮೃತರಾದ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವಾವಧಿಯನ್ನು ಹೊಂದಿಕೊಂಡು ಅವರ ಸಂಗಾತಿಗೆ ನಿವೃತ್ತಿವೇತನವನ್ನು ಕೊಡುವ ಪದ್ಧತಿ ಸರಕಾರಿ ಸೇವೆಯಲ್ಲಿದೆ.
ಗೀತಾ ಭಟ್ಟರಿಗೆ 40 ವರ್ಷಗಳಿಂದ ಸಿಗುತ್ತಿದ್ದ ಪೆನ್ಶನ್:
ಗೀತಾ ಭಟ್ ಅವರ ಪತಿ ಕೋಲ್ಕತಾದ ದಕ್ಷಿಣ ಪೂರ್ವ ರೈಲ್ವೆ (ಎಸ್‌ಇಆರ್)ಯಲ್ಲಿ ದುಡಿಯುತ್ತಿದ್ದ ವೇಳೆ ಜೂನ್ 1974ಕ್ಕೆ ನಿಧನರಾದರು. ಜುಲೈ 1974ರಿಂದ ಅವರಿಗೆ ರೈಲ್ವೆಯು ಕೌಟುಂಬಿಕ ನಿವೃತ್ತಿವೇತನವನ್ನು ಕೊಡಲು ಆರಂಭಿಸಿತು. 1975ರಲ್ಲಿ ಅನುಕಂಪದ ಆಧಾರದಲ್ಲಿ ಗುಮಾಸ್ತೆಯಾಗಿ ಅಲ್ಲಿಯೇ ಅವರ ನೇಮಕವಾಯಿತು. ಮಕ್ಕಳ ಭವಿಷ್ಯಕ್ಕೆ ಆಸರೆಯಾಗುವ ಉದ್ದೇಶದಿಂದ ಅವರು ಹುಟ್ಟೂರು ಬಿಟ್ಟು ಕೋಲ್ಕತಾದಲ್ಲಿ ಕೆಲಸಕ್ಕೆ ಸೇರಿ ಅಲ್ಲಿಯೇ ಅನೇಕ ವರ್ಷ ದುಡಿದು 1997ರಲ್ಲಿ ಸೇವಾ ನಿವೃತ್ತಿ ಪಡೆದರು. ಕಾನೂನು ರೀತ್ಯಾ ತಮ್ಮ ಸೇವೆಗೂ ನಿವೃತ್ತಿವೇತನಕ್ಕೆ ಅರ್ಹರಾಗಿ ಅದನ್ನೂ ಪಡೆಯಲಾರಂಭಿಸಿದರು. ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಬೇರೆ ಕಡೆ ಇದ್ದರೆ, ಗೀತಾ ಅವರು ಪುತ್ತೂರಿಗೆ ಮರಳಿ ಅಲ್ಲಿ ಕಟ್ಟಿಸಿದ ತಮ್ಮದೇ ಮನೆಯಲ್ಲಿ ಸಂತೃಪ್ತ ಜೀವನ ನಡೆಸಲು ಆರಂಭಿಸಿದರು.
ಗೀತಾ ಅವರ ನಿವೃತ್ತಿವೇತನವು ಸರಕಾರದ ನಿಯಮಾವಳಿಯಂತೆ ಕಾಲಕಾಲಕ್ಕೆ ಕೇಂದ್ರೀಯ ವೇತನ ಆಯೋಗದ (ಸಿಪಿಸಿ) ಶಿಫಾರಸಿಗೆ ಅನುಗುಣವಾಗಿ ಪರಿಷ್ಕೃತವಾಗುತ್ತಾ ಬಂದು, 7ನೇ ಸಿಪಿಸಿ ಶಿಫಾರಸಿನ ಪ್ರಕಾರ ಜನವರಿ 2016ರಿಂದ, ನಿವೃತ್ತಿವೇತನವು 4,050ರಿಂದ 10,409 ರೂ.ಗಳಿಗೆ ಏರಿತ್ತು. ಪಿಂಚಣಿಯನ್ನು ಅವರ ಪುತ್ತೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆಗಲೇ 75 ವರ್ಷ ದಾಟಿದ ಜೀವಕ್ಕೆ ಸ್ವಂತ ನೆಲೆಯ ಜೊತೆಗೆ ಪತಿಯ ಲೆಕ್ಕದ ಕೌಟುಂಬಿಕ ನಿವೃತ್ತಿವೇತನ ಬಹು ದೊಡ್ಡ ಆಸರೆಯಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆಗಳನ್ನು ಎದುರಿಸಲು ಅದು ಸಹಕಾರಿಯಾಗುತ್ತಿತ್ತು.
ಭಾರತೀಯ ರೈಲ್ವೆಯ ಕಿರುಕುಳ
2021ರ ಮಾರ್ಚ್ ತಿಂಗಳು ಎಸ್‌ಇಆರ್ ಗೀತಾ ಅವರಿಗೆ ಮರ್ಮಾಘಾತವನ್ನು ನೀಡಿತು. ಅವರ ಕೌಟುಂಬಿಕ ನಿವೃತ್ತಿವೇತನವನ್ನು 10,409 ರೂ.ಗಳಿಂದ 9,300ಕ್ಕೆ ಜನವರಿ 2016ರಿಂದ ಪೂರ್ವಾನ್ವಯವಾಗಿ ಇಳಿಸಿದ್ದೂ ಅಲ್ಲದೆ, ಕೊಟ್ಟದ್ದು ಹೆಚ್ಚಾಗಿದೆ ಎಂದು ಹೇಳಿ ಪೂರ್ವಸೂಚನೆಯಿಲ್ಲದೆ ಅವರ ಬ್ಯಾಂಕು ಖಾತೆಯಿಂದ 86,280 ರೂ.ಗಳನ್ನು ವಸೂಲಿ ಮಾಡಿತು.
ಗೀತಾ, ಆಂತರಿಕ ಸೇವಾ ನಿಯಮಗಳಂತೆ, ಕೋಲ್ಕತಾದಲ್ಲಿರುವ ಎಸ್ ಇಆರ್‌ನ ಪೆನ್ಶನ್ ಅದಾಲತ್‌ಗೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದರು. ಡಿಸೆಂಬರ್ 2021ಕ್ಕೆ ಅದಾಲತ್ ಯಾಂತ್ರಿಕವಾಗಿ ಅವರ ಅರ್ಜಿಯನ್ನು ತಳ್ಳಿ ಹಾಕಿ ರೈಲ್ವೆಯ ಕ್ರಮವನ್ನು ಪುರಸ್ಕರಿಸಿತು.
ಕೆಲವು ಹಿತೈಷಿಗಳ ಸಲಹೆಯ ಮೇರೆಗೆ ರೈಲ್ವೆ ಮಂತ್ರಿ ಅಶ್ವನಿ ವೈಷ್ಣವ್‌ರವರಿಗೆ ಮತ್ತು ಪ್ರಧಾನ ಮಂತ್ರಿಯವರ ಕಚೇರಿಗೆ ಎಪ್ರಿಲ್ 2023ಕ್ಕೆ ವಿಸ್ತೃತವಾದ ಮನವಿ ಸಲ್ಲಿಸಿ ಅವರ ಹಸ್ತಕ್ಷೇಪಕ್ಕೆ ವಿನಂತಿಸಿದರು. ಅದಕ್ಕೆ ಪ್ರತ್ಯುತ್ತರ ನಿರೀಕ್ಷೆಯಲ್ಲಿಯೇ ಮತ್ತಷ್ಟು ಕಾಲಹರಣವಾಯಿತು.
‘ಸಿಎಟಿ’ಗೆ ಮೊರೆ ಮತ್ತು ಜಯ
ಬೇರೆ ದಾರಿ ಕಾಣದ ಗೀತಾ ತಮ್ಮ ಪರಿಚಯದವರ ಮೂಲಕ ಬೆಂಗಳೂರಿನ ನುರಿತ ಕಾನೂನು ತಜ್ಞರ ಸಲಹೆ ಮತ್ತು ಸಹಾಯದಿಂದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರೈಬ್ಯೂನಲ್ -ಸಿಎಟಿ) ಬೆಂಗಳೂರು ಪೀಠಕ್ಕೆ ರೈಲ್ವೆ ಮಂತ್ರಾಲಯ, ಎಸ್ ಇಆರ್ ಮತ್ತು ಯೂನಿಯನ್ ಬ್ಯಾಂಕುಗಳ ವಿರುದ್ಧ ಮನವಿಯನ್ನು ಜೂನ್ 2024ರಲ್ಲಿ ಸಲ್ಲಿಸಿ ನ್ಯಾಯವನ್ನು ಕೋರಿದರು. ಸ್ವಾಭಾವಿಕವಾಗಿ ಸರಕಾರಿ ಯಂತ್ರಗಳು ಕಾಲಹರಣಮಾಡಿ ಕೇಸನ್ನು ಮುಂದೂಡುತ್ತಾ ಬಂದವು.
ಇತ್ತ ಅವರ ಆರೋಗ್ಯವೂ ಏರುಪೇರಾಗುತ್ತಿತ್ತು. ಮನೆಯಲ್ಲಿ ಬಿದ್ದು ಮೂಳೆಗೆ ಏಟು, ಆಸ್ಪತ್ರೆಗೆ ಸೇರ್ಪಡೆ, ಮರಳಿ ಮನೆಗೆ, ಆಗಾಗ ಆಸ್ಪತ್ರೆಗೆ ಭೇಟಿ, ಸಹಾಯಕರ ಮೇಲೆ ಅವಲಂಬನೆ- ಮುಂತಾದ ಕಷ್ಟಗಳ ಎದುರೂ ತಮ್ಮ ಸ್ಥೈರ್ಯವನ್ನು ಉಳಿಸಿಕೊಂಡರು 85 ವರ್ಷದ ಗೀತಾ.
ಕೊನೆಗೆ 2025 ಸೆಪ್ಟಂಬರ್ 1ರಂದು ಎರಡು ಸದಸ್ಯರ ಸಿಎಟಿ ಪೀಠವು ರೈಲ್ವೆಯ ನಿರ್ಧಾರವು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಅವರ ಪಿಂಚಣಿಯನ್ನು ಮತ್ತೆ 10,409 ರೂ.ಗೆ ಏರಿಸಿ ಆ ಪ್ರಕಾರವೇ ನೀಡಲು ನಿರ್ದೇಶ ನೀಡಿತು. ಮಾತ್ರವಲ್ಲ, ಕಾನೂನುರಹಿತವಾಗಿ ವಸೂಲಿಮಾಡಿದ 86,280ರೂ. ಗಳನ್ನು ಸರಕಾರಿ ಭವಿಷ್ಯನಿಧಿಗೆ ಅನ್ವಯಿಸುವ ಬಡ್ಡಿದರದೊಂದಿಗೆ ವಾಪಸ್ ಮಾಡಲು ನಿರ್ದೇಶಿಸಿತು. 12 ವಾರಗಳೊಳಗೆ ತನ್ನ ನಿರ್ಣಯವನ್ನು ಕಾರ್ಯರೂಪಕ್ಕೆ ತರಬೇಕೆಂದೂ ಆಜ್ಞೆ ನೀಡಿತು.
ಗೀತಾ ಅವರು ಸಿಎಟಿಯ ತೀರ್ಪಿನ ಪ್ರತಿಯನ್ನು ಕೋಲ್ಕತಾ ರೈಲು ವಿಭಾಗದ ಕಚೇರಿಗೆ ರವಾನಿಸಿ ನ್ಯಾಯಮಂಡಳಿಯ ಆದೇಶದಂತೆ ತನಗೆ ನ್ಯಾಯವಾಗಿ ಸಲ್ಲಬೇಕಾದ್ದ ಪಿಂಚಣಿಯನ್ನು ಕೊಡಲು ಮತ್ತು ವಸೂಲಿಮಾಡಿದ ಮೊಬಲಗನ್ನು ಮರುಪಾವತಿ ಮಾಡಲು ವಿನಂತಿಸಿದರು. ನವೆಂಬರ ತಿಂಗಳ ಮೊದಲನೆಯ ವಾರದಲ್ಲಿ ಸಿಎಟಿ ಆದೇಶವನ್ನು ಅನುಸರಿಸುತ್ತೇವೆ ಎಂದು ಎಸ್‌ಇಆರ್ ಗೀತಾ ಅವರಿಗೆ ತಿಳಿಸಿದೆ.
ಸಿಎಟಿ ನೀಡಿದ ಕಾರಣಗಳು
ಸಿಎಟಿಯ ನಿರ್ಣಯದಲ್ಲಿ ಒಳಗೊಂಡಿರುವ ಕಾರಣಗಳು ಉಲ್ಲೇಖನೀಯ. ಅವುಗಳು ಹೀಗಿವೆ:
1. ಪಿಂಚಣಿದಾರರಿಗೆ ಯಾವುದೇ ಪೂರ್ವ ನೊಟೀಸನ್ನು ಕೊಡದೆ ಮತ್ತು ಅವರಿಗೆ ತಮ್ಮ ಆಕ್ಷೇಪಗಳನ್ನು ತಿಳಿಸಲು ಅವಕಾಶವನ್ನು ನೀಡದೆ ಪಿಂಚಣಿಯನ್ನು ಕಡಿತಗೊಳಿಸಿದ್ದು ಮತ್ತು ಬೃಹತ್ ಮೊತ್ತದ ಹಣವನ್ನು ಅವರಿಂದ ವಸೂಲಿಮಾಡಿದ್ದು ಕಾನೂನಿಗೆ ವಿರುದ್ಧ.
2. ರೈಲ್ವೆ ಬೋರ್ಡಿನ ಪೂರ್ವಾನುಮತಿ ಇಲ್ಲದೆ ಕ್ರಮ ಕೈಗೊಂಡಿದ್ದುದು ನಿಯಮಾವಳಿಗಳ ವಿರುದ್ಧ.
3. ಎಸ್ ಇಆರ್‌ನ ವರ್ತನೆಯು ರೈಲ್ವೆ ಸೇವಾ ಪೆನ್ಶನ್ ನಿಯಮಗಳಲ್ಲಿನ 90ನೇ ನಿಯಮಕ್ಕೆ ವಿರುದ್ಧ ಮಾತ್ರವಲ್ಲ ಸಹಜ ನ್ಯಾಯಕ್ಕೆ ತೀವ್ರವಾದ ಧಕ್ಕೆ ನೀಡುತ್ತದೆ.
4. ಕೊಡುತ್ತಿದ್ದ ಪೆನ್ಶನ್‌ನ ಪ್ರಮಾಣದಲ್ಲಿ ತಪ್ಪು ಮಾಡಿ ಅನೇಕ ವರ್ಷಗಳ ನಂತರ ಎಚ್ಚರವಾದಾಗ ಪಿಂಚಣಿದಾರರಿಗೆ ಹಾನಿಕಾರಕವಾಗುವಂತೆ ಅದನ್ನು ಪರಿಷ್ಕರಿಸುವಂತಿಲ್ಲ.
5. ಜೀವನದ ಇಳಿಸಂಜೆಯಲ್ಲಿರುವ ಅರ್ಜಿದಾರರ ಪಿಂಚಣಿಗೆ ಸಂಬಂಧಪಟ್ಟಂತೆ ಎಸ್‌ಇಆರ್‌ನ ಕ್ರಮ ತಪ್ಪು, ಅನಗತ್ಯ ಮತ್ತು ಕಿರುಕುಳ ಒದಗಿಸುವ ಪ್ರವೃತ್ತಿಯದು.
ನ್ಯಾಯಮಂಡಳಿಯು ಕೇಂದ್ರ ಸರಕಾರದ ಮಾರ್ಚ್ 2, 2016ರ ಸುತ್ತೋಲೆ ಮತ್ತು ಸುಪ್ರೀಂ ಕೋರ್ಟಿನ ಸ್ಟೇಟ್ ಆಫ್ ಪಂಜಾಬ್ ಮತ್ತು ಇತರರು ವರ್ಸಸ್ ರಫೀಕ್ ಮಸಿಹ್ ಕೇಸಿನ ತೀರ್ಮಾನವನ್ನು ಉಲ್ಲೇಖಿಸಿತು.(ಅವುಗಳ ಪ್ರಕಾರ ತಳಮಟ್ಟದ ಅಂದರೆ ಕ್ಲಾಸ್ 4 ಮತ್ತು 3ಕ್ಕೆ ಸೇರಿದ ಸರಕಾರಿ ನೌಕರರಿಗೆ ಈಗಾಗಲೇ ಕೊಟ್ಟ ಪಿಂಚಣಿಯನ್ನು (ವಂಚನೆ ಮಾಡಿರದಿದ್ದರೆ) ವಸೂಲಿ ಮಾಡಬಾರದು).
ತನ್ನ ಜನವರಿ 2021ರ ಕಾಗದದಲ್ಲಿ ಯಾವ ತಾರೀಕಿನಿಂದ ಗೀತಾ ಅವರ ಪಿಂಚಣಿಯನ್ನು ತಪ್ಪಾಗಿ ನಿಗದಿಪಡಿಸಲಾಗಿತ್ತು ಎಂದು ರೈಲ್ವೆಯು ತಿಳಿಸದೆ ಇರುವುದು ವಿಚಿತ್ರವಾಗಿದೆ ಎಂದೂ ನ್ಯಾಯ ಮಂಡಳಿಯು ಹೇಳಿತು.
ಬೆಂಗಳೂರಿನ ಅಶ್ವಿನಿ ರಾಜಗೋಪಾಲ ಅಸೋಸಿಯೇಟ್ಸ್ ಪರವಾಗಿ ವಕೀಲರಾದ ಜಯಂತ ದೇವಕುಮಾರರು ಗೀತಾ ಭಟ್ಟರನ್ನು ಪ್ರತಿನಿಧಿಸಿದ್ದರು.
Case details: B K T Geetha Bhat vs. Union of India, Ministry of Personnel, Public Grievances and Pensions/South Eastern Railway and others, Application no. 170/00224/2024 of CAT Bengaluru and order dated September 1, 2025
ಜಡಭರಿತ ಆಡಳಿತಯಂತ್ರ
ಈ ವರದಿ ಬರೆಯುವ ತನಕ ಪೂರ್ಣ ಪಿಂಚಣಿಯನ್ನು ಮತ್ತು ಹಿಡಿದುಕೊಂಡ ಹಣವನ್ನು ರೈಲ್ವೆಯು ಬಿಡುಗಡೆ ಮಾಡಿಲ್ಲ. ಗೀತಾ ಅವರು ನೆನಪಿನೋಲೆಯನ್ನು ಕೋಲ್ಕತಾ ಕಚೇರಿಗೆ ಮತ್ತೆ ಸಲ್ಲಿಸಿದ್ದಾರೆ.
ಯಾರೇ ದೊರೆಯಾದರೂ ಅಡಗೂಲಜ್ಜಿಗೆ ರಾಗಿ ಬೀಸುವುದು ತಪ್ಪಲಿಲ್ಲವೆಂಬ ಗಾದೆ ಹಿರಿಯರಿಗೆಲ್ಲ ತಿಳಿದ ವಿಚಾರ. ಆಡಳಿತಯಂತ್ರದ ಸುಧಾರಣೆಯ ಬಗ್ಗೆ ಘೋಷಣೆಗಳು ಮತ್ತು ವಾಸ್ತವದ ಅಂತರ ಏನೇನೂ ಕಡಿಮೆಯಾಗಿಲ್ಲವೆಂಬುದಕ್ಕೆ ಗೀತಾ ಭಟ್ಟರ ಹೋರಾಟ ಒಂದು ಜ್ವಲಂತ ಉದಾಹರಣೆ ಅಷ್ಟೆ.