ಗುಡಿಬಂಡೆ: ಸರಕಾರಿ ಜೋಳ ಖರೀದಿ ಕೇಂದ್ರವಿಲ್ಲದೆ ರ್ರೆತರ ಪರದಾಟ
ಸಾಂದರ್ಭಿಕ ಚಿತ್ರ : PC | GROK
ಗುಡಿಬಂಡೆ, ಡಿ.15: ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರ ಇಲ್ಲದೇ ರೈತರು ಬೆಳೆದಂತಹ ಜೋಳವನ್ನು ಮಾರಾಟ ಮಾಡಲು ಪರದಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಅಧಿಕಾರಿಗಳು ಜೋಳ ಖರೀದಿ ಕೇಂದ್ರವನ್ನು ತೆರೆಯುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಸರಿಸುಮಾರು ಐದು ಸಾವಿರಕ್ಕೂ ಹೆಚ್ಚು ರೈತರು ಜೋಳ ಬೆಳೆಯುತ್ತಾರೆ.ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯುವ ಪ್ರದೇಶ ತಾಲೂಕಿನಲ್ಲಿದೆ. ಆದರೆ ಇಲ್ಲಿ ಬೆಳೆದಂತಹ ಜೋಳವನ್ನು ಮಾರಾಟ ಮಾಡಲು ಸರಕಾರದಿಂದ ಮಾರಾಟ ಕೇಂದ್ರವನ್ನು ತೆರೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಆದರೆ ರೈತರು ಬೆಳೆದಂತಹ ಆ ಜೋಳವನ್ನು ಮಾರಾಟ ಮಾಡಬೇಕಾದರೆ ಖಾಸಗಿ ಮಾರಾಟಗಾರರ ಬಳಿ ಹೋಗಿ ಮಾರಾಟ ಮಾಡಿಕೊಂಡು ಬರುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಆ ಖಾಸಗಿಯವರು ಯಾವ ದರವನ್ನು ನಿಗದಿ ಮಾಡಿದ್ದರೆ ಅದೇ ದರಕ್ಕೆ ಮಾರಾಟ ಮಾಡಬೇಕಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಯಾಗಿ ಮಾರ್ಪಟ್ಟಿದೆ ಎಂಬುದು ರೈತರ ಅಳಲು.
ಸರಕಾರ ಇತ್ತೀಚಿಗಷ್ಟೇ ಜೋಳದ ಬೆಳೆಗೆ ಬೆಂಬಲ ಬೆಲೆಯಾಗಿ 2,400 ರೂ.ಗಳನ್ನು ನಿಗದಿ ಮಾಡಿದೇ. ಆದರೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ರೈತರ ಅನುಕೂಲಕ್ಕಾಗಿ ಜೋಳ ಖರೀದಿ ಕೇಂದ್ರವನ್ನು ತೆರೆಯುವಲ್ಲಿ ನಿರ್ಲಕ್ಷ್ಯ ಮಾಡಿರುವುದರಿಂದ ಸಾವಿರಾರು ಟನ್‌ಗಳಷ್ಟು ಜೋಳ ಖಾಸಗಿಯವರ ಪಾಲಾಗುತ್ತಿದೆ.
ಇದರಿಂದ ರೈತರಿಗೆ ಸರಿಯಾಗಿ ಲಾಭ ಸಿಗದೇ ಸಂಕಷ್ಟಪಡುವಂತಹ ಪರಿಸ್ಥಿತಿಗಳು ಆಗುತ್ತಿವೆ. ಸರಕಾರದವರೇ ಖರೀದಿ ಕೇಂದ್ರ ತೆರೆದರೆ ಆ ಕೇಂದ್ರಕ್ಕೆ ನಾವು ಬೆಳೆದಂತಹ ಜೋಳವನ್ನು ಹಾಕಿದರೆ ನಮಗೆ ಅದರ ಸಂಪೂರ್ಣ ಹಣ ಪಡೆಯಲು ಸಾಧ್ಯವಾಗುತ್ತೆ ಎಂಬುದು ರೈತರ ಮಾತಾಗಿದೆ.
ಸರಕಾರ ಜೋಳ ಖರೀದಿ ಕೇಂದ್ರ ತೆರೆಯಲು ಎಂದು ಆದೇಶ ಮಾಡಿದರೆ ತಹಶೀಲ್ದಾರ್ ಕಚೇರಿಯಲ್ಲೇ ರೈತರಿಗೆ ನೋಂದಣಿ ಮಾಡಿಕೊಳ್ಳಲು ಸ್ಥಳಾವವಕಾಶವನ್ನು ಮಾಡಿಕೊಡಲಾಗುವುದು.
-ಸಿಗ್ಬತ್ ವುಲ್ಲಾ, ತಹಶೀಲ್ದಾರ್ ಗುಡಿಬಂಡೆ
ರೈತರ ಅನುಕೂಲಕ್ಕಾಗಿ ಸರಕಾರ ಜೋಳಕ್ಕೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ಆದರೆ ಇಲ್ಲಿನ ಅಧಿಕಾರಿಗಳು ಈವರೆಗೂ ಜೋಳ ಖರೀದಿ ಕೇಂದ್ರವನ್ನು ತೆರೆಯದೆ ಬೇಜವಾಬ್ದಾರಿ ತೋರಿದ್ದಾರೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕೂಡಲೇ ರೈತರ ಅನುಕೂಲಕ್ಕಾಗಿ ಜೋಳ ಖರೀದಿ ಕೇಂದ್ರವನ್ನು ತೆರೆದು ರೈತರ ನೋಂದಣಿ ಆರಂಭಿಸಬೇಕು.
-ಜಯರಾಮರೆಡ್ಡಿ, ಬಿಕೆಪಿಆರ್‌ಎಸ್ ಜಿಲ್ಲಾ ಸಂಚಾಲಕ