ವಕ್ರದಂತ ರೋಗಿಗಳಿಗೆ ಶುಕ್ರದೆಸೆ ತಂದ ದಂತ ಕ್ಲಿಯರ್ ಅಲೆನರ್

Update: 2018-01-28 18:51 GMT

ಹಲ್ಲುಗಳು ಎಲ್ಲೆಂದರಲ್ಲಿ ಮೊಳೆತು, ಎರಾಬಿರ್ರಿ ಯಾಗಿ ವಸಡಿನಲ್ಲಿ ಬೆಳೆದಲ್ಲಿ ಉಂಟಾಗುವ ವಕ್ರದಂತ ಸಮಸ್ಯೆ ಬರೀ ಮುಖದ ಸೌಂದರ್ಯವನ್ನು ಹಾಳುಗೆಡಹುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಕೊಡಲಿಯೇಟು ನೀಡುತ್ತದೆ. ಇಂತಹ ವಕ್ರದಂತ ಸಮಸ್ಯೆಯನ್ನು ಸಾಮಾನ್ಯವಾಗಿ ವಕ್ರದಂತ ಚಿಕಿತ್ಸೆ (Orthodontic Treatment)) ಯ ಮುಖಾಂತರ ಹಲ್ಲುಗಳಿಗೆ ಲೋಹದ ಅಥವಾ ಸೆರಾಮಿಕ್ ಬ್ರಾಕೆಟ್, ಬ್ಯಾಂಡ್ ಮತ್ತು ರಬ್ಬರ್ ಇಲಾಸ್ಟಿಕ್ ಬಳಸಿ ಸರಿಪಡಿಸುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಈ ರೀತಿಯ ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಹಲವಾರು ನ್ಯೂನತೆಗಳು ಇದ್ದು ಹೆಚ್ಚಿನ ರೋಗಿಗಳಿಗೆ ಇದು ಪಥ್ಯವಾಗುವುದಿಲ್ಲ. ಈ ವಕ್ರದಂತ ಚಿಕಿತ್ಸೆ ಅವರಿಗೆ ಬಹಳ ಯಾತನಾಮಯ ಮತ್ತು ಮಾನಸಿಕವಾಗಿ ಹೆಚ್ಚಿನ ಕಿರಿಕಿರಿ ಉಂಟು ಮಾಡುತ್ತದೆ. ಇಂತಹ ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ ಡೆಂಟರ್ ಕ್ಲಿಯರ್ ಅಲೈನರ್ ಶುಕ್ರದೆಸೆ ತಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಏನಿದು ದಂತ ಕ್ಲಿಯರ್ ಅಲೈನರ್?

ಕ್ಲಿಯರ್ ಅಲೈನರ್ ಎಂಬುದು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟ ಬಹಳ ತೆಳುವಾದ ಟ್ರಾನ್ಸ್‌ಫರೆಂಟ್ ಅಂದರೆ ಪಾರದರ್ಶಕವಾದ ರೋಗಿಯೇ ತೆಗೆದು ಹಾಕಬಹುದಾದ ಒಂದು ದಂತ ಸಾಧನ ಆಗಿರುತ್ತದೆ. ಇದೊಂದು ಬಹಳ ಶುದ್ಧೀಕರಿಸಿದ ಪ್ಲಾಸ್ಟಿಕ್ ಆಗಿದ್ದು, ಬಾಯಿಯೊಳಗಿನ ಚರ್ಮಕ್ಕಾಗಲಿ ಅಥವಾ ಇನ್ನಾವುದೇ ಅಂಗಾಂಗಳಿಗೆ ಅಲರ್ಜಿ ಉಂಟು ಮಾಡುವುದಿಲ್ಲ. ಮೊದಲು ದಂತ ವಕ್ರತೆ ಇರುವ ರೋಗಿಯ ಹಲ್ಲುಗಳ ಅಚ್ಚನ್ನು ತೆಗೆಯಲಾಗುತ್ತದೆ ಮತ್ತು ಈ ಅಚ್ಚನ್ನು ವಿಶೇಷ ಕಂಪ್ಯೂಟರ್ ತಂತ್ರಜ್ಞಾನವಿರುವ ಗಣಕಯಂತ್ರಕ್ಕೆ (CAD-CAM ತಂತ್ರಜ್ಞಾನ) ಸೇರಿಸಲಾಗುತ್ತದೆ ರೋಗಿಯ ವಯಸ್ಸು, ದಂತ ವಕ್ರತೆ, ಲಭಿಸುವ ಜಾಗವನ್ನು ಕಂಪ್ಯೂಟರ್ ಅಂದಾಜಿಸಿ ಬೇರೆ ಬೇರೆ ಹಂತದ ಚಿಕಿತ್ಸೆಗೆ ಅನುಗುಣವಾಗುವಂತೆ ದಂತ ಸಾಧನ (Dental Splints)ವನ್ನು ತಯಾರಿಸುತ್ತದೆ. ಪಾರದರ್ಶಕ ಎಕ್ರಲಿಕ್ ಎಂಬ ವಸ್ತುವಿನಿಂದ ಈ ಅಲೈನರ್‌ನ್ನು ತಯಾರು ಮಾಡಲಾಗುತ್ತದೆ. ಚಿಕಿತ್ಸೆಯ ಬೇರೆ ಬೇರೆ ಹಂತಗಳಲ್ಲಿ ಹಲ್ಲುಗಳ ಚಲನೆಗೆ ಪೂರಕವಾಗಿ ಈ ದಂತ ಸಾಧನವನ್ನು ಬದಲಾಯಿಸಲಾಗುತ್ತದೆ. ಬಹಳ ಸುಲಭವಾಗಿ ರೋಗಿಯೇ ಈ ಸಾಧನವನ್ನು ತೆಗೆಯಬಹುದಾಗಿದೆ. ಮೊದಲು ಹಿಂಭಾಗದಲ್ಲಿ ತೆಗೆದು ಬಳಿಕ ಮುಂಭಾಗದಲ್ಲಿ ತೆಗೆಯಲಾಗುತ್ತದೆ. ಊಟದ ಸಮಯದಲ್ಲಿ ಈ ಅಲೈನರ್‌ನ್ನು ತೆಗೆಯಬಹುದು ಮತ್ತು ಬಹಳ ಸುಲಭವಾಗಿ ಬ್ರಶ್‌ನ ಮುಖಾಂತರ ಶುಚಿಗೊಳಿಸಬಹುದು. ಯಾವುದೇ ಕಾರಣಕ್ಕೂ ಬಿಸಿ ನೀರಿನಲ್ಲಿ ತೊಳೆಯಬಾರದು. ಬಾಯಿಯಿಂದ ಹೊರತೆಗೆದಾಗ ಅದಕ್ಕೆಂದೇ ಕೊಟ್ಟ ಪೆಟ್ಟಿಗೆಯಲ್ಲಿ ಮುಚ್ಚಿ ಇಡತಕ್ಕದ್ದು. ಬಿಸಿ ಆಹಾರ ತಾಗಿಸಲೇ ಬಾರದು. ಬಿಸಿಯಾದ ವಸ್ತು ತಾಗಿದಲ್ಲಿ ಅದು ತನ್ನ ರಚನೆಯನ್ನು ಬದಲಿಸಬಹುದು. ಅತಿಯಾದ ಶಕ್ತಿ ಹಾಕಿ ಉಜ್ಜಿದಲ್ಲಿ ತೆಳುವಾದ ಅಲೈನರ್ ತುಂಡಾಗಬಹುದು. ಯಾವುದೇ ಕಾರಣಕ್ಕೂ ವೌತ್‌ವಾಶ್‌ಗಳಲ್ಲಿ ಅಥವಾ ಇನ್ನಾವುದೇ ರಾಸಾಯನಿಕಗಳಲ್ಲಿ ಮುಳುಗಿಸಿ ಇಡಬೇಡಿ. ಶುಭ್ರವಾದ ನೀರಿನಿಂದ ತೊಳೆಯತಕ್ಕದ್ದು. ಅತೀ ಅಗತ್ಯವಿದ್ದಾಗ ಮಾತ್ರ ಬಾಯಿಂದ ತೆಗೆಯತಕ್ಕದ್ದು.

ಕ್ಲಿಯರ್ ಅಲೈನರ್ ಹೇಗೆ ಕೆಲಸ ಮಾಡುತ್ತದೆ ?

ವಕ್ರದಂತ ಸಮಸ್ಯೆ ಇರುವ ರೋಗಿಗಳ ಹಲ್ಲಿನ ಅಳತೆಯನ್ನು ತೆಗೆದು ಹಲ್ಲಿನ ಪಡಿಯಚ್ಚು ತಯಾರಿಸಲಾಗುತ್ತದೆ. ಈ ಪಡಿಯಚ್ಚನ್ನು ವಿಶೇಷವಾದ 3ಡಿ ಡಿಜಿಟಲ್ ಸ್ಕ್ಯಾನರ್‌ನ ಮುಖಾಂತರ ಗಣಕಯಂತ್ರಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಕಂಪ್ಯೂಟರ್ ತಂತ್ರಜ್ಞಾನದ ಮುಖಾಂತರ ಯಾವ ರೀತಿಯ ಚಿಕಿತ್ಸೆ, ಎಷ್ಟು ವರ್ಷಗಳ ಚಿಕಿತ್ಸೆ ಮತ್ತು ಎಷ್ಟು ಬಗೆಯ ಕ್ಲಿಯರ್ ಅಲೈನರ್ ಬೇಕಾಗುತ್ತದೆ ಎಂಬುದನ್ನು ಕಂಪ್ಯೂಟರ್ ನಿರ್ಧರಿಸುತ್ತದೆ. ಯಾವ ರೀತಿಯ ಫಲಿತಾಂಶ ಬೇಕೆಂಬುದನ್ನು ಮೊದಲೇ ನಿರ್ಧರಿಸಿ ಕಂಪ್ಯೂಟರ್‌ನಲ್ಲಿ ರೋಗಿಗೆ ಮನವರಿಕೆ ಮಾಡಲಾಗುತ್ತದೆ. ಹೀಗೆ ಕಂಪ್ಯೂಟರ್‌ನ ಸಹಾಯದಿಂದ CAD-CAM ತಂತ್ರಜ್ಞಾನದಿಂದ ತಯಾರಿಸಲಾದ ಕ್ಲಿಯರ್-ಅಲೈನ್‌ರನ್ನು ರೋಗಿಗೆ ಬಳಸಲು ಸೂಚಿಸಲಾಗುತ್ತದೆ. ಪ್ರತೀ ಎರಡು ವಾರಕ್ಕೊಮ್ಮೆ ಈ ಅಲೈನರ್ ಸಾಧನವನ್ನು ಬದಲಾಯಿಸಲಾಗುತ್ತದೆ. ಹಲ್ಲಿನ ಚಲನೆಗೆ ಅನುಗುಣವಾಗಿ ಆರಂಭದಲ್ಲಿ ಬಿಗಿಯಾಗಿದ್ದ ಅಲೈನರ್ ನಂತರ ಸಡಿಲವಾಗುತ್ತದೆ. ಅಲೈನರ್ ಸಡಿಲವಾಗಿದೆಯೆಂದು ನಂತರದ ಹಂತದ ಅಲೈನರ್ ಬಳಸುವಂತಿಲ್ಲ. ಕನಿಷ್ಠ ಎರಡು ವಾರಗಳ ಕಾಲ ದಿನಕ್ಕೆ ಕಡಿಮೆ ಎಂದರೆ 20 ಗಂಟೆಗಳ ಕಾಲ ಬಳಸತಕ್ಕದ್ದು. ಹೀಗೆ ಮಾಡಿದಾಗ ಮೊದಲೇ ನಿರ್ಧರಿಸಿದ ಜಾಗಕ್ಕೆ ಹಲ್ಲಿನ ಚಲನೆ ಆಗುತ್ತದೆ. ಒಬ್ಬರಿಗೆ ಬಳಸಿದ ಅಲೈನರ್ ಇನ್ನೊಬ್ಬರಿಗೆ ಬಳಸುವಂತಿಲ್ಲ. ಹೀಗೆ 2 ವಾರಕ್ಕೊಮ್ಮೆ ಅಥವಾ 3 ವಾರ ಕ್ಕೊಮ್ಮೆ ಅಲೈನರ್‌ಗಳನ್ನು ಬದಲಾಯಿಸಿ ಮೊದಲೇ ನಿರ್ಧರಿಸಿದ ಜಾಗಕ್ಕೆ ಹಲ್ಲು ಚಲಿಸುವಂತೆ ಮಾಡಿ ವಕ್ರದಂತ ಹಲ್ಲುಗಳನ್ನು ಮರು ಜೋಡಣೆ ಮಾಡಿ ಸುಂದರವಾದ ದಂತ ಪಂಕ್ತಿ ಉಂಟಾಗುವಂತೆ ಮಾಡಲಾಗುತ್ತದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News