ರಾಜಕಾರಣಿಗಳ ದೇಗುಲ ರಾಜಕೀಯ

Update: 2018-01-28 18:43 GMT

ಆರಾಧನಾ ಸ್ಥಳಗಳಿಗೆ ಭೇಟಿ ನೀಡುವ ನಾಯಕರ ನಡವಳಿಕೆ ಹೇಗಿರಬೇಕಾಗುತ್ತದೆ?. ಸಮಾಜದ ಮೇಲೆ ಧರ್ಮದ ಹಿಡಿತವು ಪ್ರಬಲವಾಗಿರುವ ಹಾಗೂ ಈಗೀಗ ಅದು ಇನ್ನಷ್ಟು ಹೆಚ್ಚು ಬಲಿಷ್ಠವಾಗುತ್ತಿರುವ ಭಾರತದಂತಹ ದೇಶದಲ್ಲಿ ಇದೊಂದು ಅತ್ಯಂತ ಸಂಕೀರ್ಣ ವಿಷಯವಾಗಿದೆ. ಕ್ರೈಸ್ತ ಧರ್ಮೀಯರು ಬಹುಸಂಖ್ಯಾತ ರಾಗಿರುವ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ, ಚರ್ಚ್‌ಗಳನ್ನು ಸಂದರ್ಶಿಸುವ ಜನರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಆದರೆ ಆ ದೇಶಗಳಲ್ಲಿ ಯಾರೂ ಕೂಡಾ ಅದನ್ನೊಂದು ಗಂಭೀರ ರಾಜಕೀಯ ವಿಷಯವೆಂಬುದಾಗಿ ಪರಿಗಣಿಸಿಲ್ಲ. ಗುಜರಾತ್ ಆಗಿರಲಿ, ಈಗ ಉತ್ತರಪ್ರದೇಶವಾಗಿರಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಆಗಿಂದಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆಯಲು ವಿಫಲವಾದರೂ, ಅದು ಪುನಶ್ಚೇತನಗೊಂಡಿರುವುದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ. ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಹಾಗೂ ಜಿಗ್ನೇಶ್ ಮೇವಾನಿಯಂತಹ ನಾಯಕರ ಜೊತೆ ಕೈಜೋಡಿಸುವ ಮೂಲಕ ಆರ್ಥಿಕವಾಗಿ ಹಾಗೂ ಜಾತಿ ಆಧಾರದಲ್ಲಿ ನಿರ್ಲಕ್ಷಿಸಲ್ಪಟ್ಟ ಸಮುದಾಯಗಳನ್ನು ಒಳಪಡಿಸಿಕೊಳ್ಳುವ ತನ್ನ ನಿಲುವನ್ನು ಕಾಂಗ್ರೆಸ್ ಪಕ್ಷವು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಪ್ರದರ್ಶಿಸಿತು. ಇದರ ಜೊತೆ ರಾಹುಲ್ ದೇವಾಲಯಗಳಿಗೂ ವ್ಯಾಪಕವಾಗಿ ಭೇಟಿ ನೀಡಿದರು. ಆದಾಗ್ಯೂ ಆಗ ಜಾತ್ಯತೀತ ಬರಹಗಾರರು ಹಾಗೂ ಬುದ್ಧಿಜೀವಿಗಳು ರಾಹುಲ್‌ರ ದೇವಾಲಯ ಸಂದರ್ಶನಗಳ ಬಗ್ಗೆ ಹೆಚ್ಚು ಕಳವಳಗೊಂಡಿರಲಿಲ್ಲ. ಆದರೆ ಸಂಘಪರಿವಾರದ ವ್ಯಕ್ತಿಗಳು ರಾಹುಲ್‌ರ ದೇವಾಲಯ ಭೇಟಿಗಳಿಂದ ಆತಂಕಗೊಂಡಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ರಂತಹವರು, ಅದನ್ನು ಹಿಪಾಕ್ರಸಿ ಹಾಗೂ ಸೋಗಲಾಡಿತನ ಎಂದು ಟೀಕಿಸಿದ್ದರು.

ರಾಹುಲ್‌ರ ಸೋಮನಾಥ ದೇವಾಲಯ ಭೇಟಿಗೆ ಸಂಬಂಧಿಸಿ ಒಂದೆರಡು ವಿವಾದಗಳು ಹುಟ್ಟಿಕೊಂಡಿದ್ದವು. ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ಗಾಂಧಿಯವರು ಹಿಂದೂ ಯೇತರರಿಗಾಗಿನ ಸಂದರ್ಶಕರ ಪಟ್ಟಿಯಲ್ಲಿ ಸಹಿಹಾಕಿದ್ದರೆಂದು ಯಾರೋ ಒಬ್ಬರು ಫೋಟೋಶಾಪ್ ಮಾಡಿದ ಚಿತ್ರವೊಂದನ್ನು ಪ್ರಕಟಿಸಿ ಪ್ರಚಾರ ಮಾಡಿದ್ದರು. ಆನಂತರ ರಾಹುಲ್‌ಗಾಂಧಿಯವರು ಕ್ಷೇತ್ರ ಸಂದರ್ಶಕರ ದಾಖಲಾತಿ ಪುಸ್ತಕದಲ್ಲಿ ಸಹಿಹಾಕಿದ್ದರೆಂಬುದು ತಿಳಿದುಬಂತು. ರಾಹುಲ್‌ಗಾಂಧಿ ಶಿವಭಕ್ತರಾಗಿದ್ದು, ಅವರೊಬ್ಬ ಜನಿವಾರಧಾರಿ ಹಿಂದೂಯೆಂಬುದಾಗಿ, ಕಾಂಗ್ರೆಸ್ ಪಕ್ಷದ ವಕ್ತಾರ ಸ್ಪಷ್ಟಪಡಿಸಿದರು. ರಾಹುಲ್‌ರ ಸೋಮನಾಥ ದೇಗುಲ ಸಂದರ್ಶನದಿಂದ ಕಸಿವಿಸಿಗೊಂಡ ನಮ್ಮ ಪ್ರಧಾನಿ ಅಪ್ಪಟ ಸುಳ್ಳೊಂದನ್ನು ಹೇಳಿದ್ದರು.

‘‘ಇಂದು ಕೆಲವರು ಸೋಮನಾಥ ದೇವಾಲಯವನ್ನು ನೆನಪಿಸಿ ಕೊಳ್ಳುತ್ತಿದ್ದಾರೆ. ನಾನು ಅವರಲ್ಲಿ ಕೇಳುವುದೇನೆಂದರೆ, ನಿಮ್ಮ ಇತಿಹಾಸವನ್ನು ನೀವು ಮರೆತಿದ್ದೀರಾ?. ನಿಮ್ಮ ಕುಟುಂಬದ ಸದಸ್ಯರೂ ಆದ ನಮ್ಮ ದೇಶದ ಪ್ರಥಮ ಪ್ರಧಾನಿಯವರು, ಅಲ್ಲಿ (ಸೋಮನಾಥ) ದೇವಾಲಯ ನಿರ್ಮಿಸುವುದನ್ನು, ನಿರ್ಮಿಸುವ ಯೋಚನೆಯನ್ನು ಇಷ್ಟ ಪಟ್ಟಿರಲಿಲ್ಲ’’ ಎಂದು ಮೋದಿ ರ್ಯಾಲಿಯೊಂದರಲ್ಲಿ ರಾಹುಲ್ ರನ್ನುದ್ದೇಶಿಸಿ ಹೇಳಿದ್ದರು. ವಾಸ್ತವಿಕವಾಗಿ ಮಹಾತ್ಮಾಗಾಂಧಿ ಹಾಗೂ ನೆಹರೂ ಇಬ್ಬರೂ ದೇವಾಲಯದ ಜೀರ್ಣೋದ್ಧಾರವನ್ನು ವಿರೋಧಿ ಸಿರಲಿಲ್ಲ. ಆದರೆ ದೇವಾಲಯದ ಜೀರ್ಣೋದ್ಧಾರಕ್ಕೆ ಸರಕಾರಿ ಹಣವನ್ನು ಖರ್ಚು ಮಾಡುವುದಕ್ಕೆ ಮಾತ್ರ ಅವರು ವಿರೋಧ ವ್ಯಕ್ತಪಡಿಸಿದ್ದರು. ಪುಣ್ಯಕ್ಷೇತ್ರಗಳಿಗೆ ತಮ್ಮ ಭೇಟಿಯ ಬಗ್ಗೆ ಬಹುತೇಕ ಬಿಜೆಪಿ ನಾಯಕರು ವ್ಯಾಪಕವಾದ ಪ್ರಚಾರ ನೀಡುತ್ತಾರಾದರೂ, ರಾಹುಲ್‌ರ ದೇಗುಲ ಸಂದರ್ಶನದ ಬಗ್ಗೆ ಅವರು ಗದ್ದಲ ಸೃಷ್ಟಿಸಿದ್ದರು.

ನೆಹರೂ ನಾಸ್ತಿಕವಾದಿಯಾಗಿದ್ದರು ಹಾಗೂ ಅಂಧಶ್ರದ್ಧೆಯನ್ನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದರು. ಅವರು ನಮ್ಮ ಸಂವಿಧಾನದಲ್ಲಿ ಸ್ಥಾನ ಪಡೆದುಕೊಂಡಿರುವಂತಹ ವೈಜ್ಞಾನಿಕ ಮನೋಭಾವದ ಪ್ರಬಲ ಪ್ರತಿಪಾದಕರಾಗಿದ್ದರು. ಉನ್ನತ ನಾಯಕರಿಂದ ದೇಗುಲ ಸಂದರ್ಶನದ ಪರಿಪಾಟವು 70ರ ದಶಕದ ಅಂತ್ಯದ ವೇಳೆಗೆ ಇಂದಿರಾ ಗಾಂಧಿಯವರ ಮೂಲಕ ಆರಂಭಗೊಂಡಿತು. ಇರಾನ್‌ನಲ್ಲಿ ಧಾರ್ಮಿಕ ವಿದ್ವಾಂಸರಾದ ಅಯಾತುಲ್ಲಾ ಖೊಮೆನಿ ಅವರ ಅಧಿಕಾರಾರೋಹಣ ಹಾಗೂ ಭಾರತದಲ್ಲಿ ಆರೆಸ್ಸೆಸ್‌ನ ಬೆಳವಣಿಗೆಯಂತಹ ವಿದ್ಯಮಾನಗಳಿಂದ ಪ್ರಾಯಶಃ ಆಕೆ ಆತಂಕಗೊಂಡಿರಬಹುದು. ಸಾಮಾಜಿಕ ಬದುಕಿನ ಮೇಲೆ ಧರ್ಮವು ಪ್ರಭಾವ ಹೆಚ್ಚುತ್ತಿರುವುದು ಅವರಿಗೆ ಕಂಡು ಬಂದಿರಬಹುದು. ಹೀಗಾಗಿ ಆಕೆ ದೇವಾಲಯ ಭೇಟಿಗಳಿಗೆ ಮೊರೆ ಹೋಗಿರಬಹುದು. 80ರ ದಶಕದ ವೇಳೆಗೆ ನಮ್ಮ ಸಂವಿಧಾನ ಹಾಗೂ ಗಾಂಧಿ ಹಾಗೂ ನೆಹರೂರಂತಹ ಮಹಾನ್ ವ್ಯಕ್ತಿಗಳು ಪ್ರತಿಪಾದಿಸಿರುವ ಹಾಗೆ ಧರ್ಮವು ಒಂದು ಖಾಸಗಿ ವಿಷಯವಾಗಿ ಉಳಿಯಲಿಲ್ಲ.

 ಬಿಜೆಪಿಯು ತನ್ನ ಮೂಲ ಗಾಂಧಿ ಸಮಾಜವಾದ ಸಿದ್ಧಾಂತವನ್ನು ಕೈಬಿಟ್ಟು,ಅಯೋಧ್ಯೆ ವಿವಾದವನ್ನು ತನ್ನ ಮುಖ್ಯ ಕಾರ್ಯಸೂಚಿಯಾಗಿ ಆಯ್ದುಕೊಳ್ಳುವುದರೊಂದಿಗೆ ದೇಶದ ರಾಜಕಾರಣದಲ್ಲಿ ಧರ್ಮದ ವ್ಯಾಪಕ ಬಳಕೆ ಆರಂಭಗೊಂಡಿತು. ನಮ್ಮ ರಾಜಕೀಯ ರಂಗದಲ್ಲಿ ಆರಾಧನಾ ಸ್ಥಳಗಳ ಪ್ರಾಮುಖ್ಯತೆಯು ತೀವ್ರಗೊಂಡಿದೆ. ಬಿಜೆಪಿ-ಆರೆಸ್ಸೆಸ್ ಮೂಲಕ ಭಾರತೀಯ ರಾಜಕಾರಣವು ಬಲಪಂಥೀಯತೆಯೆಡೆಗೆ ತಿರುಗುತ್ತಿದೆ ಹಾಗೂ ಧಾರ್ಮಿಕ ಹಕ್ಕಿನ ಪ್ರಶ್ನೆಗಳು ಮಹತ್ವ ಪಡೆದುಕೊಳ್ಳುತ್ತಿವೆ. ಧರ್ಮಕ್ಕೆ ವಿವಿಧ ರಾಜಕೀಯ ಸಂರಚನೆಗಳು ವೈವಿಧ್ಯಮಯವಾದ ಧಾರ್ಮಿಕ ನಡವಳಿಕೆಯನ್ನು ತೋರ್ಪಡಿಸಿಕೊಳ್ಳುತ್ತಿವೆ. ದೇಗುಲ ಸಂದರ್ಶನಗಳಲ್ಲದೆ, ರಮಝಾನ್ ಹಬ್ಬದ ಸಂದರ್ಭದಲ್ಲಿ ಹಲವಾರು ರಾಜಕಾರಣಿಗಳು ಇಫ್ತಾರ್‌ಕೂಟಗಳನ್ನು ಆಯೋಜಿಸುತ್ತಿರುತ್ತಾರೆ. ಧರ್ಮವನ್ನೇ ಹೆಗಲಮೇಲೆ ಹೊತ್ತುಕೊಂಡಂತೆ ವರ್ತಿಸುತ್ತಿರುವ ಬಿಜೆಪಿ ನಾಯಕರ ನೇತೃತ್ವದೊಂದಿಗೆ ದೇಶದಲ್ಲಿ ರಾಜಕೀಯ ಪಕ್ಷಗಳು ಧಾರ್ಮಿಕತೆಯ ವಿಚಾರದಲ್ಲಿ ಸ್ಪರ್ಧೆಗಿಳಿದಿವೆ. ಸುಶ್ಮಾ ಸ್ವರಾಜ್ ಅವರಂತಹವರು ಕರ್ವಚೌತ್‌ನಂತಹ ಧಾರ್ಮಿಕ-ಸಾಮಾಜಿಕ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದ್ದರೆ, ಲಾಲುಯಾದವ್ ಚಟ್ ಪೂಜೆಯನ್ನು ಆಚರಿಸುತ್ತಾರೆ. ಧರ್ಮವನ್ನು ರಾಜಕೀಯ ಕಾರ್ಯ ಸೂಚಿಯಾಗಿ ಅತಿಯಾಗಿ ಬಳಸಲಾಗುತ್ತಿರುವ ಈ ಕಾಲದಲ್ಲಿ ದೇಗುಲ ಸಂದರ್ಶನವು ಇಂತಹ ಕ್ರಿಯೆಗಳ ಒಂದು ಉಪ ಭಾಗವಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸುವುದರಲ್ಲಿ ತೊಡಗದವರೂ ಕೂಡಾ ಈಗೀಗ ಇದಕ್ಕೆ ಮೊರೆಹೋಗುತ್ತಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದೇವಾಲಯಗಳಿಗೆ ಅಪಾರವಾದ ದೇಣಿಗೆಯನ್ನು ನೀಡಿದ್ದ ಯಡಿಯೂರಪ್ಪನವರ ಹಾದಿಯಲ್ಲೇ ಈಗಿನ ಬಿಜೆಪಿ ಆಡಳಿತದ ರಾಜ್ಯಗಳು ಸಾಗುತ್ತಿವೆ. ಮಧ್ಯಪ್ರದೇಶ ಸರಕಾರವು ತನ್ನ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮೂಲಕ ಹನುಮಾನ್ ಚಾಲೀಸಾವನ್ನು ಮುದ್ರಿಸಿ, ಪ್ರಕಟಿಸುತ್ತಿದೆ.

 ಸಾಮಾಜಿಕವಾಗಿ ಧರ್ಮದ ಮಹತ್ವ ಹಾಗೂ ಧರ್ಮದ ಸೋಗಿನಲ್ಲಿ ರಾಜಕೀಯ ಕಾರ್ಯಸೂಚಿಯನ್ನು ಹೊಂದಿರುವುದು ಇವೆರಡರ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಜಾತ್ಯತೀತತೆಯೆಂಬುದು ಅತಿ ದೊಡ್ಡ ಸುಳ್ಳು ಎಂಬುದಾಗಿ ಯೋಗಿ ಆದಿತ್ಯನಾಥ್ ಅವರಂತಹ ಬಿಜೆಪಿ ನಾಯಕರು ಹೇಳುತ್ತಿರುವಂತಹ ಕಾಲಕ್ಕೆ ನಾವೀಗ ಬಂದು ತಲುಪಿದ್ದೇವೆ. ಕರ್ನಾಟಕದಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಪ್ರಚಾರ ಸಭೆಗಳಲ್ಲಿ ಬಿಜೆಪಿ ನಾಯಕತ್ವವು ಕಾಂಗ್ರೆಸ್ ಪಕ್ಷವನ್ನು ಹಿಂದೂವಿರೋಧಿ ಪಕ್ಷವೆಂಬಂತೆ ಬಿಂಬಿಸುತ್ತಿದೆ. ಗುಜರಾತ್‌ನಲ್ಲಿ ಕಂಡುಬಂದಂತೆ ಬಹುತೇಕ ಚುನಾವಣಾ ಪ್ರಚಾರಗಳನ್ನು ಈಗ ಧರ್ಮದ ತಳಹದಿಯಲ್ಲಿ ನಡೆಸಲಾಗುತ್ತಿದೆ. ಭಾರೀ ಪ್ರಚಾರ ಪಡೆದಿದ್ದ ವಿಕಾಸದ ಘೋಷಣೆಯು, ಈಗ ಮೊಗಲಿಯಾ ಸುಲ್ತಾನ್, ಅಲ್ಲಾವುದ್ದೀನ್ ಖಿಲ್ಜಿಯಂತಹ ವಿಷಯಗಳಿಗೆ ದಾರಿಬಿಟ್ಟುಕೊಟ್ಟಿದೆ. ಜನರ ಊಟ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಿಗೆ ಈ ಮೊದಲು ಬಾಯ್ಮೆತಿನ ಉಪಚಾರವನ್ನಾದರೂ ನೀಡಲಾಗುತ್ತಿತ್ತು. ಈಗ ಅದರ ಜಾಗದಲ್ಲಿ ಧರ್ಮಕ್ಕೆ ಸಂಬಂಧಿಸಿದ ಭಾವನಾತ್ಮಕ ವಿಷಯಗಳನ್ನು ಆಕ್ರಮಣಕಾರಿಯಾದ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ.

ರಾಜಕೀಯ ರಂಗವು ಧರ್ಮದೊಂದಿಗೆ ಕಲಬೆರಕೆಗೊಂಡಿರುವ ಈ ಕಾಲವು, ಒಂದು ದುರಂತದ ಸಂಕೇತವಾಗಿದೆ. ಹಿಂದೂ ವಿರೋಧಿಯೆಂಬ ತಮ್ಮ ಹಣೆಪಟ್ಟಿಯನ್ನು ತೆಗೆದುಹಾಕಲು ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷವು ದೇವಾಲಯಗಳಿಗೆ ಭೇಟಿ ನೀಡಬೇಕಾಗಿದೆ. ರಾಜಕಾರಣಿಗಳ ದೇವಾಲಯ ಪ್ರವೇಶವೀಗ ಮೃದು ಹಿಂದುತ್ವ ನೀತಿಯಾಗಿ ಉಳಿದುಕೊಂಡಿಲ್ಲ. ಹಿಂದುತ್ವ ಪದವನ್ನು ಜನಪ್ರಿಯಗೊಳಿಸಿದಂತಹ ಸಾವರ್ಕರ್ ಅವರು ಸ್ವತಃ ನಾಸ್ತಿಕವಾದಿಯಾಗಿದ್ದರು. ಅವರು ಧಾರ್ಮಿಕತೆಯ ಬದಲಿಗೆ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ನಡೆಸುವ ಬಗ್ಗೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಧಾರ್ಮಿಕತೆಯ ಹಿಡಿತದಲ್ಲಿರುವ ಸಮಾಜದಲ್ಲಿ ಜಾತ್ಯತೀತ ಸಂವಿಧಾನವನ್ನು ಎತ್ತಿಹಿಡಿಯುವುದು ತನ್ನ ಮುಂದಿರುವ ಅತೀ ದೊಡ್ಡ ಸವಾಲಾಗಿದೆಯೆಂದು ನೆಹರೂ ಹೇಳಿದ್ದರು. ಒಂದು ವೇಳೆ ಅವರು ಈಗಿರುತ್ತಿದ್ದರೆ, ಸಾಮಾಜಿಕ ರಂಗದಲ್ಲಿ ಧಾರ್ಮಿಕತೆಯು ಪ್ರಾಬಲ್ಯವನ್ನು ಸಾಧಿಸುತ್ತಿರುವ ಇಂದಿನ ದಿನಗಳ ಬಗ್ಗೆ ಅವರೇನು ಹೇಳುತ್ತಿದ್ದರು?.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ