ಕಾಸ್ಗಂಜ್ ಕೋಮುಗಲಭೆ: ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಯುವಕನ ಕೊಲೆ ನಡೆಯಿತೇ?

Update: 2018-01-29 10:50 GMT

#ಅಂಗಡಿಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದು ಯಾರು?

#ಧ್ವಜಸ್ಥಂಬವನ್ನು ಕಿತ್ತದ್ದು ಯಾರು?

ಹೊಸದಿಲ್ಲಿ, ಜ.29: ಉತ್ತರ ಪ್ರದೇಶದ ಕಾಸ್ಗಂಜ್ ನ ಕೋಮುಗಲಭೆಗೆ ಸಂಬಂಧಿಸಿ ‘ಆಜ್ ತಕ್’ ಬಿತ್ತರಿಸುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಹಿರಿಯ ಪತ್ರಕರ್ತ ಅಭಿಸಾರ್ ಶರ್ಮಾ ಬೆಳಕು ಚೆಲ್ಲಿದ್ದಾರೆ. ಈ ಬಗ್ಗೆ jantakareporter.com ವರದಿ ಪ್ರಕಟಿಸಿದ್ದು, ಕಾಸ್ಗಂಜ್ ನಲ್ಲಿ ನಡೆದದ್ದೇನು?, ರಾಷ್ಟ್ರೀಯ ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿಗಳೇನು ಹಾಗು ಸತ್ಯಾಂಶವೇನು ಎಂಬುದನ್ನು ವಿವರವಾಗಿ ತಿಳಿಸಿದೆ.

ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ನಡೆದ ಹಿಂಸಾಚಾರದ ಸಂದರ್ಭ ಗುಂಡೇಟು ತಗಲಿ ಓರ್ವ ಯುವಕ ಮೃತಪಟ್ಟಿದ್ದರೆ ಹಲವರು ಗಾಯಗೊಂಡಿದ್ದರು. ಮುಸ್ಲಿಮರು ಗಣರಾಜ್ಯೋತ್ಸವ ಆಚರಿಸುವುದಕ್ಕೆ ಸಂಘಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ ನಂತರ ಈ ಗಲಭೆ ನಡೆದಿತ್ತು ಎನ್ನಲಾಗಿದೆ.

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಮಾಹಿತಿಗಳನ್ನು ನೀಡಿದ್ದಕ್ಕಾಗಿ ಆಜ್ ತಕ್ ಚಾನೆಲ್ ವರದಿಗಾರರ ವಿರುದ್ಧ ಅಭಿಸಾರ್ ಶರ್ಮಾ ಫೇಸ್ ಬುಕ್ ಲೈವ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯ ಹೇಳಲು ಅಳುಕದ ಅಭಿಸಾರ್ ಶರ್ಮಾ ಬಗ್ಗೆ ಪತ್ರಕರ್ತರು, ವಕೀಲರು ಹಾಗು ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಾಗುತ್ತಿದ್ದ ಹಿಂದೂಗಳಿಗೆ ತಮ್ಮ ಪ್ರದೇಶದಿಂದ ಸಾಗಲು ಮುಸ್ಲಿಮರು ಅವಕಾಶ ನೀಡಲಿಲ್ಲ ಎಂದು ಮಾಧ್ಯಮಗಳ ವರದಿಗಳು ಆರಂಭದಲ್ಲಿ ತಿಳಿಸಿತ್ತು. ಈ ವರದಿಗಳಿಂದಲೇ ಕೋಮುಗಲಭೆಯ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಆದರೆ ರವಿವಾರ ವೈರಲ್ ಆದ ವಿಡಿಯೋವೊಂದು ಎಬಿವಿಪಿ ಹಾಗು ವಿಎಚ್ ಪಿಯ ಆರೋಪಗಳು 'ಅಪ್ಪಟ ಸುಳ್ಳು' ಎಂದು ನಿರೂಪಿಸಿತು. ತ್ರಿವರ್ಣ ಧ್ವಜ ಮಾತ್ರವಲ್ಲದೆ ಕೇಸರಿ ಧ್ವಜಗಳನ್ನು ಬೀಸುತ್ತಾ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರ ಪ್ರದೇಶಗಳಿಗೆ ನುಗ್ಗಿದ್ದು ಹಾಗು ಧ್ವಜಸ್ಥಂಬವನ್ನು ಕಿತ್ತದ್ದು ಹೇಗೆ ಎನ್ನುವುದು ಈ ವಿಡಿಯೋ ಮೂಲಕ ಸ್ಪಷ್ಟವಾಗಿತ್ತು.

ಈ ಬಗ್ಗೆ 'ಎಬಿಪಿ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಅಡ್ವಕೇಟ್ ಮುನಾಝಿರ್, ಸಂಘಪರಿವಾರದ ಕಾರ್ಯಕರ್ತರು ಗಣರಾಜ್ಯೋತ್ಸವ ಆಚರಣಕ್ಕೆ ಅಡ್ಡಿಪಡಿಸಿದ ಬಗ್ಗೆ ವಿವರಿಸಿದ್ದಾರೆ.

“ಅವರು ತ್ರಿವರ್ಣ ಧ್ವಜವನ್ನು ಅವಮಾನಿಸಿದರು. ಧ್ವಜಸ್ಥಂಭದ ಮೇಲೆ ಬಿಡಿಸಿದ್ದ ರಂಗೋಲಿ ಹಾಗು ಅಲಂಕಾರಗಳನ್ನು ಅವರು ಹಾಳುಗೆಡವಿದರು. ನಂತರ ಬೈಕ್ ನಲ್ಲಿ ಪರಾರಿಯಾದರು. ನಂತರ ನಮ್ಮ ನೆರೆಹೊರೆಯ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು” ಎಂದು ಮುನಾಝಿರ್ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆಗಳೂ ಮುನಾಝಿರ್ ಹೇಳಿಕೆಯನ್ನು ದೃಢೀಕರಿಸುವಂತಿವೆ. “ಮುಸ್ಲಿಮ್ ಸಮುದಾಯದವರು ಗಣರಾಜ್ಯೋತ್ಸವ ಆಚರಿಸುತ್ತಿದ್ದರು. ಈ ಸಂದರ್ಭ ಗಲಭೆ ನಡೆಯಿತು” ಎಂದು ಲಕ್ನೋದಿಂದ ಕಾಸ್ಗಂಜ್ ಗೆ ಆಗಮಿಸಿರುವ ಐಜಿಪಿ ಧ್ರುವ ಕಾಂತ್ ಹೇಳಿದ್ದಾರೆ.

ಆದರೆ 'ಆಜ್ ತಕ್'ನ ಶ್ವೇತಾ ಸಿಂಗ್ ಹಾಗು ರೋಹಿತ್ ಸರ್ದಾನ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಿದ್ದಲ್ಲದೆ, ಟ್ವಿಟರ್ ನಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ಮುಸ್ಲಿಮರಿಂದಲೇ ತಪ್ಪು ನಡೆದಿದೆ ಎಂದು ಆರೋಪಿಸಿದ್ದರು.

ಇದರಲ್ಲಿ ರೋಹಿತ್ ಸರ್ದಾನ 'ಝೀ ನ್ಯೂಸ್' ತೊರೆದು ಇತ್ತೀಚೆಗೆ 'ಆಜ್ ತಕ್' ಸೇರಿದ್ದರು. ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈಯಲಾಗಿದೆ ಎಂದು ಸರ್ದಾನ ಟ್ವೀಟ್ ಮಾಡಿದ್ದರು. ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ಸಂಘಪರಿವಾರದ ಕಾರ್ಯಕರ್ತರು ಗಲಾಟೆ ನಡೆಸಿ ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ವಿಡಿಯೋ ವೈರಲ್ ಆದ ನಂತರವೂ ಸರ್ದಾನ ತಮ್ಮ ಟ್ವೀಟನ್ನು ಅಳಿಸಲಿಲ್ಲ.

ಶನಿವಾರ ಘಟನೆಗೆ ಸಂಬಂಧಿಸಿ ಆಜ್ ತಕ್ ಮಾಡಿದ್ದ ವರದಿಯೊಂದು ಅಪ್ಪಟ ಸುಳ್ಳಾಗಿತ್ತು. “ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ ಗಲಭೆ” ಎನ್ನುವ ಮೂಲಕವೇ ಈ ಕಾರ್ಯಕ್ರಮ ಆರಂಭಗೊಂಡಿತ್ತು. ಇಷ್ಟೇ ಅಲ್ಲದೆ ಮುಸ್ಲಿಮರು ‘ಪಾಕಿಸ್ತಾನ ಝಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದರು ಎಂದೂ ಹೇಳಲಾಯಿತು. ಆದರೆ ಈ ಹೇಳಿಕೆಯನ್ನು ಸ್ಥಳೀಯ ಪೊಲೀಸರು ಸಹ ನೀಡಿರಲಿಲ್ಲ!.

ಇಷ್ಟೇ ಅಲ್ಲದೆ ಸರ್ದಾನರ ಸಹೋದ್ಯೋಗಿ ಶ್ವೇತಾ ಸಿಂಗ್ ಕೂಡ ಪ್ರಚೋದನಾತ್ಮಕ ಟ್ವೀಟ್ ಮಾಡಿದ್ದರು. "ಗಣರಾಜ್ಯೋತ್ಸವ ಆಚರಿಸಿದ್ದಕ್ಕಾಗಿ ಒಬ್ಬ ಯುವಕ ಸಾಯುವುದಾದರೆ ಕಾಸ್ಗಂಜ್ ಸ್ವತಂತ್ರ ಭಾರತದ ಭಾಗವಾಗಲು ಹೇಗೆ ಸಾಧ್ಯ" ಎನ್ನುವ ‘ಅದ್ಭುತ’ ಮಾತುಗಳ ಮೂಲಕವೇ ಅವರ ಟ್ವೀಟ್ ಆರಂಭವಾಗಿತ್ತು. ಆದರೆ ಇಷ್ಟೆಲ್ಲಾ ‘ಅದ್ಭುತ’ಗಳ ನಡುವೆ ವೀರ್ ಅಬ್ದುಲ್ ಹಮೀದ್ ಕ್ರಾಸಿಂಗ್ ನಲ್ಲಿ ಮುಸ್ಲಿಮರು ಗಣರಾಜ್ಯೋತ್ಸವ ಆಚರಿಸಲು ಒಟ್ಟುಗೂಡಿದ್ದನ್ನೂ ಹಾಗು ಅವರ ತಡೆಯೊಡ್ಡಿದ ದುಷ್ಕರ್ಮಿಗಳ ದುಷ್ಕೃತ್ಯವನ್ನೂ ಅವರು ಮರೆಮಾಚಿದ್ದರು.

ವಿಪರ್ಯಾಸವೆಂದರೆ 'ಆಜ್ ತಕ್'  ವರದಿಗಾರ ಅಶುತೋಷ್ ಮಿಶ್ರಾ ಕಾಸ್ಗಂಜ್ ಗೆ ಭೇಟಿ ನೀಡಿ ಸತ್ಯಾಸತ್ಯತೆ ಏನೆಂದು ಅರಿತಿದ್ದರು ಹಾಗು ಅವರು ನೀಡಿದ ವಿವರಗಳು ಸರ್ದಾನ ಹಾಗು ಶ್ವೇತಾ ಸಿಂಗ್ ರ ಟ್ವೀಟ್ ಗಳು ಅಪ್ಪಟ ಸುಳ್ಳೆಂದು ಸಾಬೀತುಪಡಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ನಂತರ ಸರ್ದಾನ ಹಾಗು ಶ್ವೇತಾ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. 'ಇಂಡಿಯಾ ಟುಡೆ' ಗ್ರೂಪ್ ಚೇರ್ ಮೆನ್ ಅರೂನ್ ಪುರಿಯವರನ್ನು ಟ್ಯಾಗ್ ಮಾಡುವ ಮೂಲಕ ಸರ್ದಾನರನ್ನು ಕೆಲಸದಿಂದ ಕಿತ್ತೊಗಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಗ್ರೂಪ್ ನ ನಾಲ್ಕು ಚಾನೆಲ್ ಗಳನ್ನೂ ಬಹಿಷ್ಕರಿಸುವುದಾಗಿ ಹಲವರು ಬೆದರಿಕೆಯೊಡ್ಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News