×
Ad

ಠಾಣೆಗೆ ಬರಲು ಹೇಳಿ ಬಾಲಕಿಯನ್ನು ಅಪಹರಿಸಿದ ‘ಪೊಲೀಸರು’!

Update: 2018-01-29 20:50 IST

ಪನ್ನಾ(ಮ.ಪ್ರ),ಜ.29: ಐವರು ದುಷ್ಕರ್ಮಿಗಳು ಪೊಲೀಸ್ ವ್ಯಾನೊಂದನ್ನು ಹೈಜಾಕ್ ಮಾಡಿ, ಪೊಲೀಸರ ಸಮವಸ್ತ್ರ ಧರಿಸಿಕೊಂಡು ಬಾಲಕಿಯೋರ್ವಳನ್ನು ಅಪಹರಿಸಿರುವ ಸಿನಿಮೀಯ ರೀತಿಯ ಘಟನೆ ಪನ್ನಾ ಜಿಲ್ಲೆಯ ಅಮನಗಂಗ್ ತಾಲೂಕಿನ ಕುಗ್ರಾಮ ಬಮುರಹಾದಲ್ಲಿ ರವಿವಾರ ನಡೆದಿದೆ.

ಪಾನಮತ್ತ ವ್ಯಕ್ತಿಯೋರ್ವ ಬಮುರಹಾ ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂದು ದುಷ್ಕರ್ಮಿಗಳ ತಂಡವು ‘ಡಯಲ್ 100’ ಪೊಲೀಸ್ ವ್ಯಾನ್‌ಗೆ ಕರೆ ಮಾಡಿತ್ತು. ಇಬ್ಬರು ಪೊಲೀಸರು ವಾಹನದಲ್ಲಿ ಸ್ಥಳಕ್ಕೆ ತಲುಪಿದಾಗ ವ್ಯಕ್ತಿಯೋರ್ವ ರಸ್ತೆಯಲ್ಲಿ ಬೋರಲು ಬಿದ್ದುಕೊಂಡಿದ್ದ. ಪೊಲೀಸರು ಸಮೀಪಕ್ಕೆ ತೆರಳಿದಾಗ ಆ ವ್ಯಕ್ತಿ ಏಕಾಏಕಿ ಎದ್ದು ಅವರಿಗೆ ಪಿಸ್ತೂಲು ತೋರಿಸಿದ್ದ. ತಕ್ಷಣವೇ ಇನ್ನೂ ನಾಲ್ವರು ದುಷ್ಕರ್ಮಿಗಳು ಆತನೊಂದಿಗೆ ಸೇರಿಕೊಂಡಿದ್ದರು.

 ಗುಂಪು ಪೊಲೀಸರು ಮತ್ತು ವ್ಯಾನ್ ಚಾಲಕನ ಸಮವಸ್ತ್ರಗಳನ್ನು ಕಳಚಿ ಅವರ ಕೈಕಾಲುಗಳನ್ನು ಕಟ್ಟಿ ಪಕ್ಕದಲ್ಲಿಯೇ ಇದ್ದ ಕಾರೊಂದರಲ್ಲಿ ಕೂಡಿ ಹಾಕಿತ್ತು. ಬಳಿಕ ಅವರ ಪೈಕಿ ಕೆಲವರು ಪೊಲೀಸ್ ಸಮವಸ್ತ್ರಗಳನ್ನು ಧರಿಸಿಕೊಂಡು ‘ಡಯಲ್ 100’ ವ್ಯಾನ್‌ನಲ್ಲಿ ಗ್ರಾಮದಲ್ಲಿಯ ಬಾಲಕಿಯ ಮನೆಗೆ ತಳಿತ್ತು. ಬಾಲಕಿ ನೀಡಿರುವ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ಮಗಳೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ದಾಖಲಿಸು ವಂತೆ ದುಷ್ಕರ್ಮಿಗಳು ತಂದೆಗೆ ಸೂಚಿಸಿದ್ದರು. ಬಲವಂತದಿಂದ ಬಾಲಕಿ, ಆಕೆಯ ತಂದೆ ಮತ್ತು ಚಿಕ್ಕಪ್ಪನನ್ನು ವ್ಯಾನಿನೊಳಗ ಕುಳ್ಳಿರಿಸಿದ ಅವರು ಬಳಿಕ ತಂದೆ ಮತ್ತು ಚಿಕ್ಕಪ್ಪನನ್ನು ಪಿಸೂಲು ತೋರಿಸಿ ಬೆದರಿಸಿ ಕೆಳಕ್ಕೆ ಇಳಿಸಿದ್ದರು. ಬಳಿಕ ತಾವು ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಮರಳಿ ಪೊಲೀಸರನ್ನು ಬಿಡುಗಡೆಗೊಳಿಸಿ ಸಮವಸ್ತ್ರಗಳು ಮತ್ತು ವ್ಯಾನ್ ವಾಪಸ್ ಮಾಡಿ ಬಾಲಕಿಯೊಂದಿಗೆ ಪರಾರಿಯಾಗಿದ್ದಾರೆ.

ಮುಖ್ಯ ಆರೋಪಿ,ಹಿನೌತಾ ಗ್ರಾಮದ ನಿವಾಸಿ ದೇವರಾಜ್ ಸಿಂಗ್ ಮತ್ತು ಬಾಲಕಿಯ ನಡುವೆ ಪ್ರೇಮ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಸೇರಿದಂತೆ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವ ಸಿಂಗ್‌ನನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿತ್ತು.

ಬಾಲಕಿ ಸಾಗರ ಪಟ್ಟಣದಲ್ಲಿ ಕಾಲೇಜು ಕಲಿಯುತ್ತಿದ್ದು, ಆಕೆ ಸಿಂಗ್‌ನನ್ನು ಆಗಾಗ್ಗೆ ಭೇಟಿಯಾಗುತ್ತಿದ್ದುದನ್ನು ಆಕೆಯ ಚಿಕ್ಕಪ್ಪ ಆಕ್ಷೇಪಿಸಿದ್ದ. ಆಕೆ ತನ್ನ ಚಿಕ್ಕಪ್ಪನ ವಿರುದ್ಧವೇ ಲೈಂಗಿಕ ಕಿರುಕುಳದ ದೂರನ್ನು ದಾಖಲಿಸಿದ್ದಳು. ಇಷ್ಟಾದ ಬಳಿಕ ತಂದೆ ಆಕೆಯನ್ನು ಕಾಲೇಜು ಬಿಡಿಸಿ ಗ್ರಾಮಕ್ಕೆ ವಾಪಸ್ ಕರೆತಂದಿದ್ದ.

ಸಿಂಗ್ ಸೂಚನೆಯಂತೆ ಬಾಲಕಿ ದೂರನ್ನು ದಾಖಲಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News