ಬೆಂಚು ಹೊತ್ತು ತಂದ ಆಸ್ಕರ್ ಎಂಪಿ ಆದದ್ದು…

Update: 2018-01-29 17:15 GMT

1980ರಲ್ಲಿ ಲೋಕಸಭೆ ಚುನಾವಣೆ ಬಂದಾಗ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಇಂದಿರಾ ಗಾಂಧಿಯವರು ನನ್ನ ಮೇಲೆ ಬಹಳ ವಿಶ್ವಾಸ ಹೊಂದಿದ್ದರು. ಆಗ ಆಸ್ಕರ್ ಫೆರ್ನಾಂಡಿಸ್ ಅವರು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಅಲ್ಲಿಗೆ ನಾನು ಹೋದಾಗ ಸಭೆ ಭರ್ತಿಯಾಗಿತ್ತು. ಸಣ್ಣ ಹಾಲ್. ಹಿರಿಯರೆಲ್ಲ ನಿಂತಿದ್ದರು. ‘ಯಾರಾದರೂ ಹೋಗಿ ಒಂದು ಬೆಂಚು ತನ್ನಿ’ ಎಂದೆ. ನಾನು ಹೇಳಿ ಒಂದು ನಿಮಿಷವೂ ಆಗಿರಲಿಲ್ಲ. ಆಸ್ಕರ್ ಫರ್ನಾಂಡಿಸ್ ಒಂದು ಬೆಂಚನ್ನು ರಸ್ತೆ ದಾಟಿ ಹೊತ್ತು ತರುವುದನ್ನು ನೋಡಿದೆ. ಅವರು ಹೋದದ್ದು ಕೂಡ ಗೊತ್ತಿಲ್ಲ ನನಗೆ. ನನ್ನೊಂದಿಗೆ ಅಲ್ಲೇ ಇದ್ದವರು! ಅವರೇ ನಿಜವಾದ ಫೀಲ್ಡ್ ವರ್ಕರ್ ಎನ್ನುವುದು ಗೊತ್ತಾಯಿತು.

ಟಿ.ಎ. ಪೈ ಅದಾಗಲೇ ಕಾಂಗ್ರೆಸ್ ಬಿಟ್ಟು ಹೋಗಿದ್ದರು. ಅವರು ಅದಕ್ಕೂ ಮೊದಲು ಇಂದಿರಾ ಗಾಂಧಿಯವರ ಕ್ಯಾಬಿನೆಟ್ ನಲ್ಲಿ ರೈಲ್ವೆ ಮಂತ್ರಿಯಾಗಿದ್ದವರು. ಈ ಚುನಾವಣೆಯಲ್ಲಿ ಉಡುಪಿಯಲ್ಲಿ ಅವರ ವಿರುದ್ಧ ಒಬ್ಬರು ಅಭ್ಯರ್ಥಿಯನ್ನು ನಿಲ್ಲಿಸಬೇಕಿತ್ತು. ನಾನು ಇಂದಿರಾ ಗಾಂಧಿಯವರಿಗೆ ಹೇಳಿದೆ. ‘ನಿನಗೆ ಹೇಗಾಗುತ್ತದೆ ನೋಡು’ ಎಂದರು. ನಾನು ಏಳು ದಿನಗಳ ಕಾಲ ಎಲ್ಲ ವರ್ಕಿಂಗ್ ಕಮಿಟಿಯವರನ್ನು, ಪಾರ್ಲಿಮೆಂಟ್ ಕಮಿಟಿ, ಸೆಂಟ್ರಲ್ ಎಲೆಕ್ಷನ್ ಕಮಿಟಿಯವರನ್ನು ಭೇಟಿಯಾಗಿ ಆಸ್ಕರ್ ಫರ್ನಾಂಡಿಸ್ ಅತ್ಯುತ್ತಮ ಅಭ್ಯರ್ಥಿ ಎಂದು ಹೇಳಿಕೊಂಡು ಬಂದೆ. ಅಷ್ಟೂ ದಿನಗಳ ಕಾಲ ಮಲಗಲೇ ಇಲ್ಲ. ಅವರೆಲ್ಲ ಸಿಗುತ್ತಿದ್ದುದೇ ರಾತ್ರಿ ವೇಳೆಯಲ್ಲೇ. ಅವರ ಮನೆ ಬಾಗಿಲನ್ನು ತಟ್ಟಿ, ಎಬ್ಬಿಸಿ ಅವರಿಗೆ ಮನವರಿಕೆ ಮಾಡುತ್ತಿದ್ದೆ. ನನ್ನ ಜೊತೆಗೆ ವೀರಪ್ಪ ಮೊಯಿಲಿಯವರು ಬರುತ್ತಿದ್ದರು.

ಇದೇ ವೇಳೆ ದೆಹಲಿಯಲ್ಲಿ ಪಾರ್ಲಿಮೆಂಟ್ ಬೋರ್ಡ್ ಸಭೆ. ಅಭ್ಯರ್ಥಿಗಳ ಆಯ್ಕೆಗೆ ಸಭೆಗಳು… ಸೆಂಟ್ರಲ್ ಎಲೆಕ್ಷನ್ ಕಮಿಟಿಯಲ್ಲಿ ಆಗ ಇದ್ದವರು ಏಳು ಮಂದಿ ಮಾತ್ರ. ಅದರಲ್ಲಿ ಒಬ್ಬರು ಗುಂಡೂರಾಯರು. ಪ್ರಬಲ ವ್ಯಕ್ತಿ. ರಾಜ್ಯದಿಂದ ಅವರೊಬ್ಬರೇ ಬೋರ್ಡ್ ನಲ್ಲಿ ಇದ್ದದ್ದು, ಇಂದಿರಾ ಗಾಂಧಿಯವರಿಗೆ ಬಹಳ ಆಪ್ತರು. ಚುನಾವಣೆಗೆ ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಲು ನನ್ನ ಹೆಸರು ಅಂತಿಮವಾಯಿತು. ಉಡುಪಿ ಕ್ಷೇತ್ರದ ವಿಚಾರ ಬರುವಾಗ ಯಾರು ಕ್ಯಾಂಡಿಟೇಟ್ ಎಂಬ ಕುರಿತು ಚರ್ಚೆ ನಡೆಯಿತು. ಗುಂಡೂರಾಯರ ಅಭ್ಯರ್ಥಿ ಕೆ.ಜೆ. ಜಾರ್ಜ್. ಆಗ ಜಾರ್ಜ್ ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಗುಂಡೂರಾಯರು ಕೆ.ಜೆ. ಜಾರ್ಜ್ ಹೆಸರು ಪ್ರಸ್ತಾಪಿಸಿದ ಕೂಡಲೇ ಇಂದಿರಾ ಗಾಂಧಿ ಹೇಳಿದರು-‘ಪೂಜಾರಿ ಗೇವ್ ಮಿ ಎನದರ್ ನೇಮ್. ಹಿಸ್ ನೇಮ್ ಈಸ್ ಆಸ್ಕರ್ ಫರ್ನಾಂಡೀಸ್’ (ಪೂಜಾರಿಯವರು ಇನ್ನೊಂದು ಹೆಸರು ಹೇಳಿದ್ದಾರೆ. ಅವರು ಆಸ್ಕರ್ ಫರ್ನಾಂಡೀಸ್). ಇದರಿಂದ ಅಸಮಾಧಾನದಿಂದ ಸಿಡಿಮಿಡಿಗೊಂಡ ಗುಂಡೂರಾಯರು ಸಭೆಯಿಂದ ಎದ್ದು ಹೊರಗೆ ಬಂದರು. ನಾನು ಹೊರಗೆ ಕಾಯುತ್ತಿದ್ದೆ. ಬರುವಾಗ ಕಣ್ಣು ಕೆಂಪು ಕೆಂಪಾಗಿತ್ತು. ‘ಏನ್ರೀ ನೀವು. ಏನಾಗಿದೆ ನಿಮಗೆ? ಆಸ್ಕರ್ ಫರ್ನಾಂಡಿಸ್ ಅವರನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಹೇಳ್ತೀರಲ್ಲ. ಟಿ.ಎ.ಪೈ ಏಜೆಂಟ್ ಅವರು’ ಎಂದರು. ‘ಕೆ.ಜೆ. ಜಾರ್ಜ್ ಬೆಂಗಳೂರಿನವರು. ಅವರನ್ನು ತಂದು ಇಲ್ಲಿ ನಿಲ್ಲಿಸಲು ನೋಡ್ತೀರಲ್ಲ ನೀವು. ಆಸ್ಕರ್ ಈಸ್ ಗ್ರಾಸ್ ರೂಟ್ ವರ್ಕರ್. ಆನೆಸ್ಟ್ ಪರ್ಸನ್.  ಆಸ್ಕರ್ ಈಸ್ ಗೋಯಿಂಗ್ ಟು ವಿನ್. (ಆಸ್ಕರ್ ಬೇರುಮಟ್ಟದ ಕಾರ್ಯಕರ್ತ, ಪ್ರಾಮಾಣಿಕ ವ್ಯಕ್ತಿ, ಅವರು ಗೆಲ್ಲುತ್ತಾರೆ) ಜಾರ್ಜ್ ಅವರನ್ನು ಬೇಕಾದರೆ ಬೆಂಗಳೂರಿನಲ್ಲಿ ನಿಲ್ಲಿಸಿ’ ಎಂದು ಹೇಳಿದೆ. ‘ನೋಡಿ ಪೂಜಾರಿಯವರೇ,  ನೀವು ನನ್ನ ಕ್ಷೇತ್ರದವರು. ನಿಮ್ಮ ಓಟರ್ ನಾನು (ಆಗ ಮಂಗಳೂರು ಕ್ಷೇತ್ರದಲ್ಲಿ ಕೊಡಗು ಸೇರಿತ್ತು). ನಿಮ್ಮನ್ನು ಏನು ಮಾಡ್ತೇನೆ ನೋಡಿ, ರಾಜಕೀಯವಾಗಿ ಮುಗಿಸುತ್ತೇನೆ’ ಎಂದು ಗುಡುಗಿದರು. ‘ಮುಗಿಸಿಬಿಡಿ’ ಎಂದು ಹೇಳಿದೆ.

ಆಸ್ಕರ್ ಕ್ಷೇತ್ರ ಉಡುಪಿಯಲ್ಲಿ ನಾನು ಬಹಳ ಪ್ರಚಾರ ಮಾಡುತ್ತಿದ್ದೆ. ನನಗೆ ಚುನಾವಣಾ ಖರ್ಚಿಗೆ ಬಂದ ಹಣವನ್ನು ಕೂಡ ಅವರಿಗೆ ಕಳುಹಿಸಿದೆ. ನನ್ನ ಕ್ಷೇತ್ರಕ್ಕೆ ಬಹಳ ಕಡಿಮೆ ಭೇಟಿ ನೀಡಿದ್ದು. ಇಂದಿರಾ ಗಾಂಧಿಯವರ ಹೆಸರೇ ನಡೆಯುತ್ತಿತ್ತು ಆಗ. ಆಸ್ಕರ್ ಗೆ ಎದುರಾಳಿಯಾಗಿದ್ದದ್ದು ಟಿ.ಎ. ಪೈ. ಹಿಂದೆ ಟಿ.ಎ. ಪೈ ಕಾಂಗ್ರೆಸ್ ಬಿಟ್ಟು ಇಂದಿರಾ ಗಾಂಧಿ ಬಣ ಸೇರಿದ್ದರಲ್ಲ? ಉಡುಪಿಯ ರಥಬೀದಿಯಲ್ಲಿ ನಡೆದ ಕೊನೆಯ ಚುನಾವಣೆಯ ಭಾಷಣದಲ್ಲಿ ‘ಸತ್ಯ, ಧರ್ಮ ಇದ್ದರೆ ಉಡುಪಿಯಲ್ಲಿ ಕೃಷ್ಣ ಇದ್ದರೆ, ಧರ್ಮ ನ್ಯಾಯ ಇದ್ದರೆ ಚುನಾವಣೆಯಲ್ಲಿ ಆಸ್ಕರ್ ಗೆಲ್ಲಬೇಕು’ ಎಂದೆ. ಚುನಾವಣೆ ನಡೆಯಿತು. ಟಿ.ಎ. ಪೈ ಅವರ ಡೆಪಾಸಿಟ್ ಕೂಡ ಹೋಯಿತು. ಆಸ್ಕರ್ ಫರ್ನಾಂಡಿಸ್ ಗೆದ್ದರು.

ಬಿ.ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ದ ಆಯ್ದ ಭಾಗಗಳು

ಪ್ರಕಾಶಕರು: ಸಂತೋಷ್ ಕುಮಾರ್ ಪೂಜಾರಿ ಮತ್ತು ದೀಪಕ್ ಪೂಜಾರಿ, ಚೆನ್ನಮ್ಮ ಕುಟೀರ, ಬಂಟ್ವಾಳ ಮೂಡ ಗ್ರಾಮ, ಬಿ.ಸಿ.ರೋಡ್ ಅಂಚೆ, ಜೋಡುಮಾರ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಪಿನ್: 574219

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News