ಸಿಪಿಇಸಿ ವಿವಾದ: ಭಾರತದ ಜೊತೆ ಮಾತುಕತೆಗೆ ಸಿದ್ಧ

Update: 2018-01-29 17:39 GMT

ಬೀಜಿಂಗ್, ಜ. 29: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೂಲಕ ಹಾದು ಹೋಗುವ ವಿವಾದಾಸ್ಪದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ತಾನು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಚೀನಾ ಸೋಮವಾರ ಹೇಳಿದೆ.

ಸಿಪಿಇಸಿ ಕುರಿತ ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸುವಂತಿಲ್ಲ ಎಂಬುದಾಗಿ ಚೀನಾಕ್ಕೆ ಭಾರತದ ರಾಯಭಾರಿ ಗೌತಮ್ ಬಂಬವಾಲೆ ಚೀನಾದ ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್, ಈ ಸಂಬಂಧ ಭಾರತದೊಂದಿಗೆ ಮಾತುಕತೆ ನಡೆಸಲು ಚೀನಾ ಸಿದ್ಧವಿದೆ ಎಂದರು.

‘‘ಈ ಸಂದರ್ಶನವನ್ನು ನಾನು ಗಮನಿಸಿದ್ದೇನೆ. ಸಿಪಿಇಸಿ ಬಗ್ಗೆ ಹೇಳುವುದಾದರೆ, ಚೀನಾ ಪದೇ ಪದೇ ತನ್ನ ನಿಲುವನ್ನು ಹೇಳುತ್ತಾ ಬಂದಿದೆ. ಚೀನಾ ಮತ್ತು ಭಾರತದ ನಡುವಿನ ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಹೇಳುವುದಾದರೆ, ನಮ್ಮ ಸಾಮಾನ್ಯ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಭಿನ್ನಾಭಿಪ್ರಾಯಗಳು ಪರಿಣಾಮ ಬೀರಬಾರದು ಎನ್ನುವುದು ನಮ್ಮ ನಿಲುವು. ಹಾಗಾಗಿ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಚೀನಾ ಸಿದ್ಧವಾಗಿದೆ. ಇದು ಎರಡೂ ದೇಶಗಳ ಹಿತಾಸಕ್ತಿಗಳಿಗೆ ಪೂರಕವಾಗಿದೆ’’ ಎಂದು ಅವರು ಹೇಳಿದರು.

ಉಭಯ ದೇಶಗಳ ನಡುವೆ ಕಾಣಿಸಿಕೊಳ್ಳಬಹುದಾದ ಯಾವುದೇ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

‘‘ಈ ಸಮಸ್ಯೆಯನ್ನು ಬಗೆಹರಿಸುವಂತೆ ನಾವು ಒಂದೇ ಪಕ್ಷವನ್ನು ಕೇಳುವಂತಿಲ್ಲ. ಉತ್ತಮ ಪರಿಹಾರಕ್ಕಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ನಾವು ತಯಾರಾಗಿದ್ದೇವೆ’’ ಎಂದು ಚುನ್‌ಯಿಂಗ್ ನುಡಿದರು.

ಮೂಲಸೌಕರ್ಯ ಯೋಜನೆಗಳ ಬೃಹತ್ ಜಾಲ

ಸಿಪಿಇಸಿ ಎನ್ನುವುದು ಪಾಕಿಸ್ತಾನದಾದ್ಯಂತ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳ ಬೃಹತ್ ಜಾಲವಾಗಿದೆ. ಈ ಜಾಲವು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತವನ್ನು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿರುವ ಗ್ವಾಡರ್ ಬಂದರಿಗೆ ಸಂಪರ್ಕಿಸುತ್ತದೆ.

ಈ 50 ಬಿಲಿಯ ಡಾಲರ್ (ಸುಮಾರು 3.17 ಲಕ್ಷ ಕೋಟಿ ರೂಪಾಯಿ) ವೆಚ್ಚದ ಬೃಹತ್ ಯೋಜನೆಯು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News