ಅಮಾಯಕರ ಮೇಲಿನ ಮೊಕದ್ದಮೆ ವಾಪಸ್: ಬಿಜೆಪಿಯ ಸಮಯ ಸಾಧಕತನದ ಪರಮಾವಧಿ

Update: 2018-01-30 04:28 GMT

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಈಗಾಗಲೇ ಭರ್ಜರಿ ಸಮಾವೇಶಗಳನ್ನು ಹಮ್ಮಿಕೊಂಡು ಮನೆಮನೆಯನ್ನು ತಲುಪುವ ಕನಸು ಕಾಣುತ್ತಿದೆ. ತನ್ನ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯೂ ಪರಿವರ್ತನಾ ರ್ಯಾಲಿಯನ್ನು ಹಮ್ಮಿಕೊಂಡಿದೆಯಾದರೂ, ಅದು ಬಿಜೆಪಿಯೊಳಗಿನ ಗೊಂದಲಗಳನ್ನು ಬಹಿರಂಗಪಡಿಸುವಷ್ಟಕ್ಕೇ ಯಶಸ್ವಿಯಾಗಿದೆ.

ನಾಯಕರ ನಡುವೆ ಹೊಂದಾಣಿಕೆಗಳ ಕೊರತೆ ಎದ್ದು ಕಾಣುತ್ತಿದೆ. ಜನರ ಮುಂದೆ ಯಾವ ವಿಷಯವನ್ನು ಇಟ್ಟುಕೊಂಡು ಹೋಗಬೇಕು ಎನ್ನುವುದರ ಕುರಿತಂತೆ ಬಿಜೆಪಿಯ ನಾಯಕರಲ್ಲಿ ಗೊಂದಲಗಳಿವೆ. ಸಚಿವ ಅನಂತಕುಮಾರ್ ಹೆಗಡೆ ನಡುಬೀದಿಯಲ್ಲಿ, ದಲಿತರ ವಿರುದ್ಧ, ಸಂವಿಧಾನದ ವಿರುದ್ಧ ಅರಚಾಡುತ್ತಿದ್ದರೆ, ಶೋಭಾ ಕರಂದ್ಲಾಜೆ ಮಾತು ಮಾತಿಗೆ ಬೆಂಕಿ ಹಚ್ಚುತ್ತೇವೆ, ಗಲಾಟೆ ಮಾಡುತ್ತೇವೆ ಎಂದು ಪಕ್ಷದ ಪ್ರಣಾಳಿಕೆಗಳನ್ನು ಘೋಷಿಸುತ್ತಿದ್ದಾರೆ. ಸ್ವತಃ ಜೈಲಿನಲ್ಲಿ ಕಳೆದು ಬಂದಿರುವ ಯಡಿಯೂರಪ್ಪ , ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುವ ಮಾತನ್ನಾಡುತ್ತಿದ್ದಾರೆ. ಇವರಾರೂ ಜನರ ನೋವು ದುಮ್ಮಾನಗಳ ಬಗ್ಗೆ ಮಾತನಾಡುತ್ತಿಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದೊಂದೇ ಅಧಿಕಾರದೆಡೆಗೆ ನಮಗಿರುವ ದಾರಿ ಎಂದು ಇವರೆಲ್ಲ ಭಾವಿಸಿದಂತಿದೆ.

ಆದರೆ ಜನರು ಈಗಾಗಲೇ ಕೇಂದ್ರ ಸರಕಾರದ ಆರ್ಥಿಕ ಆಘಾತಗಳಿಂದ ತತ್ತರಿಸಿದ್ದಾರೆ. ಕೋಮುಗಲಭೆಗಳನ್ನು ನಡೆಸಿ ಇನ್ನಷ್ಟು ನಾಶ, ನಷ್ಟಗಳನ್ನು ಮೈಮೇಲೆ ಎಳೆದುಕೊಳ್ಳಲು ಅವರು ಸಿದ್ಧರಿದ್ದಂತಿಲ್ಲ. ಸರ್ವ ತಾಳ್ಮೆ ವಿವೇಕಗಳನ್ನು ಪ್ರದರ್ಶಿಸಿ ಬಿಜೆಪಿ ಮತ್ತು ಸಂಘಪರಿವಾರದ ಬೆಂಕಿ ಹಚ್ಚುವ ಯತ್ನಗಳನ್ನು ವಿಫಲಗೊಳಿಸುತ್ತಿದ್ದಾರೆ. ಅಮಿತ್ ಶಾ ಅವರ ರಾಜ್ಯ ಪ್ರವಾಸ ಕೂಡ ಫಲಕೊಡಲಿಲ್ಲ. ಮಹಾದಾಯಿ ಯೋಜನೆಯಿಂದಲೂ ಬಿಜೆಪಿ ತೀವ್ರ ಮುಜುಗರಕ್ಕೊಳಗಾಗಿದೆ. ಕನ್ನಡಿಗರ ಕುರಿತಂತೆ ಗೋವಾದ ಬಿಜೆಪಿ ನಾಯಕರು ಹೀನಾಯವಾಗಿ ಮಾತನಾಡುತ್ತಿದ್ದರೆ, ಬಿಜೆಪಿ ಕೈ ಕೈ ಹಿಸುಕಿಕೊಳ್ಳುತ್ತಿದೆಯೇ ಹೊರತು ಕನ್ನಡಿಗರ ಪರವಾಗಿ ನಿಂತು ಮಾತನಾಡುವ ಧೈರ್ಯವನ್ನು ತೋರಿಸಿಲ್ಲ. ಇವೆಲ್ಲವೂ ಕನ್ನಡಿಗರನ್ನು ಕೆರಳಿಸಿವೆ. ಹತಾಶೆಗೊಂಡಿರುವ ಬಿಜೆಪಿ ಇದೀಗ ‘ಅಮಾಯಕ ಅಲ್ಪಸಂಖ್ಯಾತರನ್ನು ಬಿಡುಗಡೆ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಸರಕಾರ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದೆ. ‘ಸಿದ್ದರಾಮಯ್ಯ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಮುಸ್ಲಿಮರಿಗೆ ಕ್ಲೀನ್‌ಚಿಟ್ ಕೊಡಲು ಹೊರಟಿದ್ದಾರೆ’ ಎಂದು ಅದು ಆರೋಪಿಸುತ್ತಿದೆ. ಶೋಭಾಕರಂದ್ಲಾಜೆ ಈ ವಿಷಯವನ್ನು ಇಟ್ಟುಕೊಂಡು ಮತ್ತೆ ‘ಬೆಂಕಿ ಹಚ್ಚುವುದಕ್ಕೆ’ ಸಿದ್ಧತೆ ನಡೆಸುತ್ತಿದ್ದಾರೆ.

 ಗುಂಪು ಗಲಭೆಗಳು ಸಂಭವಿಸಿದಾಗ ಕೆಲವೊಮ್ಮೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ರಿಮಿನಲ್‌ಗಳ ಜೊತೆಗೆ ಅಮಾಯಕರ ಮೇಲೂ ಪ್ರಕರಣಗಳು ದಾಖಲಾಗಿ ಬಿಡುತ್ತವೆ. ಕೆಲವೊಮ್ಮೆ ಅಪರಾಧಿಗಳು ಸಿಗದೇ ಇದ್ದಾಗ ಪೊಲೀಸರೇ ಯಾರದೋ ಒತ್ತಡದಿಂದ ಅಮಾಯಕರ ಮೇಲೆ ಕೇಸು ದಾಖಲಿಸುವುದಿದೆ. ಮೇಲ್ನೋಟಕ್ಕೆ ನಿರಪರಾಧಿಗಳೆನ್ನುವುದು ಗೊತ್ತಾಗಿ ಬಿಡುತ್ತದೆಯಾದರೂ, ಅದನ್ನು ಸಾಬೀತುಪಡಿಸಲು ಯುವಕರು ಜೀವನ ಪರ್ಯಂತ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದು ಕಾನೂನು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಈವರೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಳ್ಳದ, ಸಜ್ಜನಿಕೆಯ ಹಿನ್ನೆಲೆಯುಳ್ಳ ಅಮಾಯಕ ಯುವಕರು ಪ್ರಕರಣದಲ್ಲಿ ಸಿಲುಕಿಕೊಂಡಾಗ ಸರಕಾರವೇ ಮುತುವರ್ಜಿ ವಹಿಸಿ ಅವರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯುತ್ತಾ ಬಂದಿರುವುದು ಇಂದು ನಿನ್ನೆಯಲ್ಲ. ಕಾಂಗ್ರೆಸ್ ಸರಕಾರ ಇದೀಗ ಕೆಲವು ಮುಸ್ಲಿಮರ ಮೇಲಿನ ಪ್ರಕರಣಗಳನ್ನು ಹಿಂದೆಗೆಯುತ್ತಿದೆ ಎಂದು ಬಿಜೆಪಿ ಅರಚಾಡುತ್ತಿದೆ.

ಕಾಂಗ್ರೆಸ್ ಸರಕಾರ ಅಮಾಯಕರು ಎಂದು ಕಂಡ ಯುವಕರ ಮೇಲಿನ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಅಮಾಯಕರ ಮೇಲಿನ ಕೇಸುಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ. ಆಗ ಇದೇ ಬಿಜೆಪಿ ಯಾಕೆ ಚೀರಾಡಲಿಲ್ಲ? ಯಾಕೆಂದರೆ ಮೊಕದ್ದಮೆ ಹಿಂದೆಗೆದ ಆರೋಪಿಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರಿದ್ದರು. ಸರಕಾರ ನೀಡಿದ ಅಂಕಿಅಂಶದಂತೆ, ಕಳೆದ ನಾಲ್ಕುವರ್ಷಗಳಲ್ಲಿ 2,806 ಅಮಾಯಕ ಹಿಂದೂಗಳ ಮೇಲಿನ ಪ್ರಕರಣವನ್ನು ಹಿಂದೆಗೆಯಲಾಗಿದ್ದರೆ, 341 ಅಮಾಯಕ ಮುಸ್ಲಿಮರ ಮೇಲಿನ ಪ್ರಕರಣಗಳನ್ನು ಹಿಂದೆಗೆಯಲಾಗಿದೆ.

ಇಲ್ಲಿ ಅಮಾಯಕರನ್ನು ಹಿಂದೂ-ಮುಸ್ಲಿಮ್ ಎಂದು ವರ್ಗಾಯಿಸುವುದೇ ತಪ್ಪು. ಅಮಾಯಕರಾಗಿರುವ ಯುವಕರು ಯಾವ ಸಮುದಾಯಕ್ಕೇ ಸೇರಿರಲಿ ಅವರಿಗೆ ಶಿಕ್ಷೆಯಾಗುವುದೆಂದರೆ ಅದು ಸಮಾಜಕ್ಕೆ ವಿಧಿಸುವ ಶಿಕ್ಷೆಯಾಗಿದೆ. ಅದರಿಂದ ಅವರ ಭವಿಷ್ಯದ ಜೊತೆಗೆ ಸಮಾಜದ ಭವಿಷ್ಯವೂ ಕೆಡುತ್ತದೆ. ಆದರೆ ಅವರು ಅಮಾಯಕರೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲು ಒಂದು ಸ್ಪಷ್ಟ ಮಾನದಂಡ ಇರ ಬೇಕಾಗಿದೆ. ಪೊಲೀಸ್ ಇಲಾಖೆಯಿಂದ ಆ ಬಗ್ಗೆ ಮಾಹಿತಿಗಳನ್ನು ತರಿಸಿಕೊಂಡು, ಸಂವಿಧಾನತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಒಂದು ತೀರ್ಮಾನವನ್ನು ತೆಗೆದುಕೊಳ್ಳಬೇಕು. ಇಂದು ಬಿಜೆಪಿ ‘ಮುಸ್ಲಿಮರ ಓಲೈಕೆ ನಡೆಯುತ್ತಿದೆ’ ಎಂದು ಕೂಗೆಬ್ಬಿಸುತ್ತಿದೆ. ಆದರೆ ‘ಈ ಹಿಂದೆ ಎಷ್ಟೆಲ್ಲ ಆರೋಪಿಗಳನ್ನು ಅಮಾಯಕರು ಎಂದು ಗುರುತಿಸಿ ಅವರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯಲಾಗಿದೆಯೋ ಅವರೆಲ್ಲರ ಮೇಲೆ ಮತ್ತೆ ಮೊಕದ್ದಮೆ ಹೇರುವುದಕ್ಕೆ ಬಿಜೆಪಿ ಒಪ್ಪುತ್ತದೆಯೇ ಎಂಬ ಒಂದು ಪ್ರಶ್ನೆ ಕೇಳಿದರೆ ಸಾಕು, ಬಿಜೆಪಿ ನಾಯಕರ ಬಾಯಿಗೆ ಬೀಗಬೀಳುತ್ತದೆ.

 ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಹಿಂದೆಗೆದುಕೊಂಡ ಪ್ರಕರಣಗಳ ಪಟ್ಟಿಯನ್ನು ಬಿಡಿಸಿದರೆ, ಅದರ ಸಮಯಸಾಧಕ ಬಣ್ಣ ಬಯಲಾಗುತ್ತದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಸುಮಾರು ನೂರಕ್ಕೂ ಅಧಿಕ ಸಂಘಪರಿವಾರ ಕಾರ್ಯಕರ್ತರ ಪ್ರಕರಣಗಳನ್ನು ಹಿಂದೆಗೆಯಲಾಗಿದೆ. ದತ್ತಪೀಠದಲ್ಲಿ ದಾಂಧಲೆ ಮಾಡಿದ 11ಪ್ರಕರಣಗಳನ್ನು ಸಾರಾಸಗಟಾಗಿ 2010ರಲ್ಲಿ ಬಿಜೆಪಿ ಸರಕಾರ ಹಿಂದೆಗೆಯಿತು. 2009ರಲ್ಲಿ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮೇಲಿದ್ದ 54 ಅಪರಾಧ ಪ್ರಕರಣಗಳನ್ನು ವಾಪಸ್ ಪಡೆಯಿತು. ಪ್ರಮೋದ್ ಮುತಾಲಿಕ್ ಏನೂ ಅಮಾಯಕನಾಗಿರಲಿಲ್ಲ. ಯಾವುದೋ ರಸ್ತೆ ಬದಿಯಲ್ಲಿ ಮನೆಗೆ ದಿನಸಿ ಕೊಳ್ಳುತ್ತಿದ್ದಾಗ ಆತನನ್ನು ಪೊಲೀಸರು ಎಳೆದೊಯ್ದು ಮೊಕದ್ದಮೆ ದಾಖಲಿಸಿರಲಿಲ್ಲ.

ಸಮಾಜಕ್ಕೆ ಬೆಂಕಿ ಹಚ್ಚಲು ಸಂಚು ರೂಪಿಸಿದ್ದ ಪ್ರಕರಣಗಳು ಆತನ ಮೇಲಿದ್ದವು. ಇಷ್ಟೇ ಏಕೆ, ಮಂಗಳೂರಿನ ತೊಕ್ಕೊಟ್ಟಿನಲ್ಲಿ ಅತ್ಯಂತ ಉದ್ವಿಗ್ನಕಾರಿ ಭಾಷಣ ಮಾಡಿ ಮಂಗಳೂರಿಗೆ ಬೆಂಕಿ ಹಚ್ಚಿದ್ದ ಆರೋಪದಿಂದ ಬಿಜೆಪಿಯ ಮಾಜಿ ಶಾಸಕರೊಬ್ಬರನ್ನು ಇದೇ ಬಿಜೆಪಿ ಸರಕಾರ ಆರೋಪ ಮುಕ್ತಗೊಳಿಸಿತ್ತು. ಸ್ವತಃ ಪೊಲೀಸ್ ಇಲಾಖೆ ಈತನ ವಿರುದ್ಧದ ಮೊಕದ್ದಮೆಗಳನ್ನು ಯಾವ ಕಾರಣಕ್ಕೂ ಹಿಂದೆಗೆಯಬಾರದು. ಇದರಿಂದ ಸಮಾಜದಲ್ಲಿ ಮತ್ತೆ ಕೋಮುಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿತ್ತು. ಇದನ್ನು ಉಪೇಕ್ಷಿಸಿ ಬಿಜೆಪಿ ಸರಕಾರ ಅವರ ಮೇಲಿರುವ ಪ್ರಕರಣಗಳನ್ನು ವಾಪಸ್ ಪಡೆಯಿತು.

ಇಂತಹ ಬಿಜೆಪಿ, ಸಿದ್ಧರಾಮಯ್ಯ ಸರಕಾರ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಬೀದಿಗಳಲ್ಲಿ ಬೊಬ್ಬಿರಿಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಗೃಹಸಚಿವರು, ಬರೇ ಮುಸ್ಲಿಮರ ಪ್ರಕರಣ ಮಾತ್ರವಲ್ಲ, ಎಲ್ಲ ಸಮುದಾಯಕ್ಕೆ ಸೇರಿರುವ ಅಮಾಯಕರ ಮೇಲಿರುವ ಪ್ರಕರಣಗಳನ್ನು ಹಿಂದೆಗೆಯಲಾಗುತ್ತಿದೆ ಎಂದು ಸ್ಪಷ್ಟೀಕರಣ ನೀಡಿದರೂ, ಬಿಜೆಪಿ ನಾಯಕರು ಕಿವುಡರಂತೆ ವರ್ತಿಸುತ್ತಿದ್ದಾರೆ. ಸರಿ. ಅಮಾಯಕ ಮುಸ್ಲಿಮರ ಮೇಲಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಬೇಡ. ಅಂತೆಯೇ ಕೋಮು ಪ್ರಚೋದನೆಗೆ ಸಂಬಂಧಿಸಿ ಕಳೆದ ಒಂದು ದಶಕದಲ್ಲಿ ಯಾರೆಲ್ಲ ನಾಯಕರು ಮತ್ತು ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಬೇರೆ ಬೇರೆ ಸರಕಾರ ಹಿಂದೆಗೆೆದಿದೆಯೋ, ಅವರನ್ನೆಲ್ಲ ಮತ್ತೆ ಆರೋಪಿ ಸ್ಥಾನದಲ್ಲಿ ನಿಲ್ಲಿಸೋಣ. ಇದಕ್ಕೆ ಬಿಜೆಪಿ ನಾಯಕರು ಸಿದ್ಧರಿದ್ದಾರೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News