ನಿಮಗಿದು ತಿಳಿದಿರಲಿ... ನಿಮ್ಮ ಮನೆಯಲ್ಲಿನ ಈ ಸ್ಥಳ/ವಸ್ತುಗಳು ರೋಗಾಣುಗಳ ತಾಣ!

Update: 2018-01-30 11:00 GMT

ನಮ್ಮ ಕುಟುಂಬದ ಆರೋಗ್ಯಕ್ಕೆ ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ ಮತ್ತು ಅವರು ಅನಾರೋಗ್ಯಕ್ಕೆ ಗುರಿಯಾಗದಂತೆ ಕಾಳಜಿ ವಹಿಸುತ್ತೇವೆ. ಆದರೂ ಅವರು ರೋಗಾಣುಗಳಿಗೆ ಒಡ್ಡಿಕೊಂಡು ರೋಗಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ರೋಗಾಣುಗಳು ಮನೆಯ ಹೊರಗಿನಿಂದ ಬಂದು ಅವರ ಮೇಲೆ ದಾಳಿಯಿಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ತ ಸಮಯಕ್ಕಾಗಿ ಹೊಂಚು ಹಾಕುತ್ತ ಮನೆಯೊಳಗೇ ಹಾಯಾಗಿ ಬೆಳೆಯುತ್ತಿರುವ ಬ್ಯಾಕ್ಟೀರಿಯಾಗಳು ಇಂತಹ ಅನಾರೋಗ್ಯಕ್ಕೆ ಕಾರಣ ವಾಗುತ್ತವೆ. ನಾವು ಸಾಮಾನ್ಯವಾಗಿ ಕಡೆಗಣಿಸುವ, ರೋಗಾಣುಗಳಿಗೆ ಸುರಕ್ಷಿತ ಆಶ್ರಯವಾಗಿರುವ ಮನೆಯೊಳಗಿನ ಕೆಲವು ಸ್ಥಳಗಳು/ವಸ್ತುಗಳ ಮಾಹಿತಿ ಇಲ್ಲಿದೆ.

ನೆಲವೊರೆಸುವ ಮಾಪ್

ಮನೆಯ ನೆಲವನ್ನು ಸ್ವಚ್ಛಗೊಳಿಸಲು ಬಳಸುವ ಮಾಪ್ ಅಥವಾ ಧೂಳೊರಸು ಅಪಾಯಕಾರಿ ರೋಗಾಣುಗಳು ಬೆಳೆಯಲು ಪ್ರಶಸ್ತವಾಗಿದೆ ಎನ್ನುವುದನ್ನು ನಂಬಲು ನಿಮಗೆ ಕಷ್ಟವಾಗಬಹದು. ಹೀಗಾಗಿಯೇ ಹೆಚ್ಚಿನವರು ನೆಲವನ್ನು ಒರೆಸಿದ ಬಳಿಕ ಅದನ್ನು ಸ್ವಚ್ಛವಾಗಿ ತೊಳೆದು ಒಣಗಿಸುವ ಗೋಜಿಗೆ ಹೋಗುವುದಿಲ್ಲ. ಅದರಲ್ಲಿರುವ ಧೂಳು, ಕೂದಲು, ಆಹಾರ ಕಣಗಳು ಮತ್ತು ಇತರ ತ್ಯಾಜ್ಯಗಳು ಬ್ಯಾಕ್ಟೀರಿಯಾಗಳು ವೃದ್ಧಿಸಲು ಅತ್ಯಂತ ಪ್ರಶಸ್ತ ವಾತಾವರಣವನ್ನು ಕಲ್ಪಿಸುತ್ತವೆ. ಇದನ್ನು ತಪ್ಪಿಸಲು ನೆಲ ಒರೆಸಿದ ಬಳಿಕ ಮಾಪ್‌ನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಅದನ್ನು ರೋಗಾಣುಗಳಿಂದ ಮುಕ್ತವಾಗಿರಿಸಲು ಆಗಾಗ್ಗೆ ಬದಲಿಸುತ್ತಿರಿ.

ಅಡುಗೆಕೋಣೆ ಮತ್ತು ಕೈವಸ್ತ್ರಗಳು

ಬೆಚ್ಚನೆಯ ಮತ್ತು ತೇವಾಂಶದಿಂದ ಕೂಡಿರುವ ವಾತಾವರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅತ್ಯಂತ ಪ್ರಶಸ್ತವಾಗಿದೆ. ಅಡುಗೆಕೋಣೆಯಲ್ಲಿ ಕೈವಸ್ತ್ರಗಳನ್ನು ಕೈಗಳನ್ನು ಒರೆಸಿಕೊಳ್ಳಲು ಬಳಸಿದ ಬಳಿಕ ಹಾಗೆಯೇ ನೇತು ಹಾಕುವುದೇ ಹೆಚ್ಚು. ಶೇ.90ರಷ್ಟು ಇಂತಹ ಕೈವಸ್ತ್ರಗಳು ರೋಗಾಣುಗಳು ಮಾತ್ರವಲ್ಲ, ಅತ್ಯಂತ ಅಪಾಯಕಾರಿಯಾದ ಇ-ಕೋಲಿ ಬ್ಯಾಕ್ಟೀರಿಯಾಗಳನ್ನೂ ಒಳಗೊಂಡಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಇದನ್ನು ತಪ್ಪಿಸಲು ಪ್ರತಿ ಎರಡು ದಿನಗಳಿಗೊಮ್ಮೆ ಕೈವಸ್ತ್ರಗಳನ್ನು ಬಿಸಿನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒದ್ದೆ ಕೈಗಳನ್ನು ಈ ಟವೆಲ್‌ಗಳಿಂದ ಒರೆಸಿಕೊಳ್ಳುವುದನ್ನು ಆದಷ್ಟು ತಪ್ಪಿಸಿ.

ಕಾರ್ಪೆಟ್ ಮತ್ತು ಸೋಫಾ ಹೊದಿಕೆಗಳು

ನಾವು ನೆಲಕ್ಕೆ ಹಾಸುವ ಕಾರ್ಪೆಟ್ ಮತ್ತು ಸೋಫಾದ ಹೊದಿಕೆಗಳನ್ನು ಆಗಾಗ್ಗೆ ತೊಳೆಯಲು ಸಾಧ್ಯವಿಲ್ಲ. ಆದರೆ ಅದರಲ್ಲಿ ಮನೆ ಮಾಡಿರುವ ರೋಗಾಣುಗಳನ್ನು ನಿವಾರಿಸಲು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ವ್ಯಾಕ್ಯೂಮ್ ಕ್ಲೀನರ್ ಬಳಸಬಹುದಾಗಿದೆ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ವಿಶೇಷ ಎಚ್ಚರಿಕೆಯನ್ನು ವಹಿಸಿ ಹಾಗು ಕಾರ್ಪೆಟ್ ಮತ್ತು ಸೋಫಾದ ಹೊದಿಕೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ.

ಹಾಸಿಗೆ ಮತ್ತು ದಿಂಬುಗಳ ಹೊದಿಕೆಗಳು

ನಮ್ಮ ಶರೀರದ ಮೃತ ಜೀವಕೋಶಗಳು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ನೆಚ್ಚಿನ ಆಹಾರವಾಗಿವೆ. ಇವು ನಾವು ಮಲಗಿಕೊಳ್ಳುವ ಹಾಸಿಗೆಯಲ್ಲದೆ ಇನ್ನೆಲ್ಲಿ ಯಥೇಚ್ಛವಾಗಿ ಸಿಗಲು ಸಾಧ್ಯ? ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಬೆಡ್‌ಶೀಟ್‌ಗಳು, ಹೊದಿಕೆಗಳು ಮತ್ತು ದಿಂಬುಗಳ ಹೊದಿಕೆಗಳನ್ನು ಬದಲಿಸಿ ಹಾಗೂ ಮೃತ ಜೀವಕೋಶಗಳಿಂದ ಅವುಗಳನ್ನು ಮುಕ್ತವಾಗಿಸಲು ಬಿಸಿನೀರಿನಲ್ಲಿ ತೊಳೆಯಿರಿ. ಅವುಗಳನ್ನು ಆಗಾಗ್ಗೆ ಬಿಸಿಲಿನಲ್ಲಿ ಇರಿಸಿ.

ಶೂ ಸ್ಟಾಂಡ್

ನೀವು ಚಪ್ಪಲಿ, ಶೂಗಳನ್ನು ಕಳಚಿಡುವ ಸ್ಟಾಂಡ್ ಬ್ಯಾಕ್ಟೀರಿಯಾಗಳಿಗೂ ಆವಾಸ ಸ್ಥಾನವಾಗಿದೆ. ನಾವು ನಮ್ಮ ಶೂಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಇಟ್ಟುಕೊಂಡೇ ತಿರುಗಾಡುತ್ತಿರುತ್ತೇವೆ ಮತ್ತು ಅವುಗಳನ್ನು ನಮ್ಮ ಮನೆಯ ಸುತ್ತ ಹರಡುತ್ತಿರುತ್ತೇವೆ. ಚಪ್ಪಲಿ ಮತ್ತು ಶೂಗಳನ್ನು ಮನೆಯ ಬಾಗಿಲ ಬಳಿಯೇ ಕಳಚುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಅವುಗಳನ್ನು ಧರಿಸಿಯೇ ಮನೆಯೊಳಗೆ ಪ್ರವೇಶಿಸಬೇಡಿ.

ನೀರಿನ ನಲ್ಲಿಗಳು ಮತ್ತು ಸ್ಯಾನಿಟರಿ ಫಿಟಿಂಗ್ಸ್

ಮನೆಯ ಬಾತ್‌ರೂಮ್‌ಗಳು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳ ಸಂತಾನ ವೃದ್ಧಿಗೆ ಅತ್ಯಂತ ಪ್ರಶಸ್ತ ಸ್ಥಳಗಳಾಗಿವೆ. ಟಾಯ್ಲೆಟ್ ಸೀಟ್‌ಗಳ ಮೆಲೆ 30,000ಕ್ಕೂ ಅಧಿಕ ಬ್ಯಾಕ್ಟೀರಿಯಾಗಳು ಮನೆ ಮಾಡಿಕೊಂಡಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅಲ್ಲದೆ ನಾವು ಟಾಯ್ಲೆಟ್‌ನ್ನು ಫ್ಲಷ್ ಮಾಡಿದಾಗ ರೋಗಾಣುಗಳು ಹರಡಿ ಬಾತ್‌ರೂಮ್ ಫಿಟಿಂಗ್‌ಗಳು ಮತ್ತು ನೀರಿನ ನಲ್ಲಿಗಳ ಮೇಲೆ ಕುಳಿತುಕೊಳ್ಳುತ್ತವೆ. ಕೈಗಳನ್ನು ತೊಳೆಯಲು ನಲ್ಲಿಗಳನ್ನು ಮುಟ್ಟುವ ನಾವು ಅದನ್ನು ಬಂದ್ ಮಾಡಿದಾಗ ರೋಗಾಣುಗಳು ಮತ್ತೆ ನಮ್ಮ ಕೈಗಳಿಗೆ ವರ್ಗಾವಣೆಗೊಳ್ಳುತ್ತವೆ. ಟಾಯ್ಲೆಟ್‌ನ್ನು ಫ್ಲಷ್ ಮಾಡುವಾಗ ಅದರ ಮುಚ್ಚಳವನ್ನು ಮುಚ್ಚುವ ಮತ್ತು ನಲ್ಲಿಯನ್ನು ಮುಟ್ಟುವ ಮುನ್ನ ಟಾಯ್ಲೆಟ್ ಪೇಪರ್‌ನಿಂದ ಅದನ್ನು ಒರೆಸುವ ಮೂಲಕ ನಾವು ಈ ಅಪಾಯವನ್ನು ದೂರ ಮಾಡಬಹುದಾಗಿದೆ.

ಆಟಿಕೆಗಳು ಮತ್ತು ಸ್ಟಫ್ಡ್ ಬೊಂಬೆಗಳು

ಬಾರ್ಬಿಯಂತಹ ನಿಮ್ಮ ಮುದ್ದಿನ ಮಕ್ಕಳ ನೆಚ್ಚಿನ ಸ್ಟಪ್ಡ್ ಬೊಂಬೆಗಳನ್ನು ನೀವೆಷ್ಟು ಬಾರಿ ತೊಳೆಯುತ್ತೀರಿ? ಆಟಿಕೆಗಳು ಮತ್ತು ವಿಶೇಷವಾಗಿ ಸ್ಟಫ್ಡ್ ಬೊಂಬೆಗಳು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳ ಆಟದ ಮೈದಾನಗಳಾಗಿವೆ. ನಿಮ್ಮ ಮಕ್ಕಳು ಸದಾ ಅವುಗಳೊಂದಿಗೆ ಇರುವುದರಿಂದ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಆಟಿಕೆಗಳನ್ನು ಆಗಾಗ್ಗೆ ತೊಳೆಯುತ್ತಿರಿ ಅಥವಾ ಅವುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿರಿಸಿ ಎರಡು ದಿನಗಳ ಕಾಲ ಫ್ರೀಝರ್‌ನಲ್ಲಿರಿಸಿ. ಈ ತಂಪು ಹೆಚ್ಚಿನ ರೋಗಾಣುಗಳನ್ನು ಕೊಲ್ಲುತ್ತದೆ.

ಟೂಥ್‌ಬ್ರಷ್

ನಾವು ಹಲ್ಲುಜ್ಜಿಕೊಳ್ಳುವ ಬ್ರಷ್‌ಗಳು ಬ್ಯಾಕ್ಟೀರಿಯಾಗಳು ಮತ್ತು ರೋಗಾಣುಗಳಿಂದ ತುಂಬಿರುತ್ತವೆ ಎನ್ನುವುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಅಲ್ಲದೆ ಅವುಗಳ ಮೇಲೆ ಜಿರಲೆಗಳಂತಹ ಕ್ರಿಮಿಕೀಟಗಳೂ ಓಡಾಡುತ್ತಿರುತ್ತವೆ, ಆದರೆ ಅದನ್ನು ನಾವು ನೊಡಿರುವುದಿಲ್ಲ ಅಷ್ಟೇ. ಬ್ರಷ್‌ನ ಮೂಲಕ ನಮ್ಮ ಬಾಯಿಯನ್ನು ಪ್ರವೇಶಿಸುವ ರೋಗಾಣುಗಳು ಬಳಿಕ ನಮ್ಮ ಕರುಳನ್ನು ತಲುಪಿ ನಮ್ಮನ್ನು ಅನಾರೋಗ್ಯಕ್ಕೆ ಗುರಿ ಮಾಡುತ್ತವೆ. ಪ್ರತಿ ಬಾರಿ ಬಳಕೆಗೆ ಮುನ್ನ ಟೂಥ್‌ಬ್ರಷ್‌ನ್ನು ಚೆನ್ನಾಗಿ ತೊಳೆದುಕೊಳ್ಳಿ. ಅದನ್ನು ಕವರ್‌ನಲ್ಲಿ ಹಾಕಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News