ಕಾಸ್ಗಂಜ್ ಹಿಂಸಾಚಾರದ ಕುರಿತು ಫರ್ಹಾನ್ ಅಖ್ತರ್ ಹೆಸರಲ್ಲಿ ಹರಡಿತು ಆಘಾತಕಾರಿ ಸುಳ್ಳು

Update: 2018-01-31 15:44 GMT

ಕಾಸ್ಗಂಜ್ ಹಿಂಸಾಚಾರವು ದೇಶಾದ್ಯಂತ ಸುದ್ದಿಯಾದ ನಡುವೆಯೇ ಈ ಘಟನೆಯ ಬಗ್ಗೆ ಬಾಲಿವುಡ್ ನಟ, ನಿರ್ಮಾಪಕ ಫರ್ಹಾನ್ ಅಖ್ತರ್ ಹೆಸರಿನಲ್ಲಿ ಸುಳ್ಳೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು.

“ಜನವರಿ 26ರಂದು ಜುಮ್ಮಾ (ಶುಕ್ರವಾರ) ಆಗಿತ್ತು. ಒಂದು ವೇಳೆ ಹಿಂದೂಗಳು ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಿಗೆ ತ್ರಿವಣ ಧ್ವಜಗಳೊಂದಿಗೆ ತೆರಳದೆ ಇರುತ್ತಿದ್ದರೆ, ವಂದೇ ಮಾತರಂನಂತಹ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗದಿದ್ದರೆ ಕೊಲೆಯಾಗುತ್ತಿರಲಿಲ್ಲ” ಎಂದು ಫರ್ಹಾನ್ ಅಖ್ತರ್ ಹೇಳಿದ್ದಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಫೋಟೊಗಳು ಹರಿದಾಡತೊಡಗಿತ್ತು.

ಫರ್ಹಾನ್ ಹೆಸರಿನಲ್ಲಿ ಹರಿದಾಡಿದ ಹೇಳಿಕೆ ಹಿಂದಿನ ಸತ್ಯಾಸತ್ಯತೆಯ ಬಗ್ಗೆ altnews.in ವರದಿ ಮಾಡಿದೆ.

ಇದರ ಫೋಟೊವನ್ನು ಟ್ವಿಟರ್ ನಲ್ಲಿ ಹಾಕಿದ್ದು ಗೌರವ್ ಪ್ರಧಾನ್ ಎಂಬ ಸುಳ್ಳುಕೋರ.  ಈ ಹಿಂದೆಯೂ ಯಾವುದೇ ನಾಚಿಕೆಯಿಲ್ಲದೆ ಸುಳ್ಳು ಸುದ್ದಿಗಳನ್ನು ಹರಡಿದ ಸಾಧನೆ ಈತನದ್ದು. ವಿಶೇಷ ಹಾಗು ದುರಂತವೆಂದರೆ ಪ್ರಧಾನಿ ಮೋದಿಯವರು ಈತನನ್ನು ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.  ಪೋಸ್ಟ್ ಕಾರ್ಡ್ ನ ಪೋಸ್ಟ್ ಜೊತೆ ಈತ ಈ ಫೋಟೊವನ್ನು ಟ್ವೀಟ್ ಮಾಡಿದ್ದ. ಹೇಳಿಕೇಳಿ ಪೋಸ್ಟ್ ಕಾರ್ಡ್ ನ್ಯೂಸ್ ಸುಳ್ಳು ಸುದ್ದಿ, ಕೋಮುದ್ವೇಷ ಹರಡುವ ಮೂಲಕವೇ ಕುಖ್ಯಾತಿ ಗಳಿಸಿದೆ.

ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಫರ್ಹಾನ್ ಅಖ್ತರ್ ಹೆಸರಲ್ಲಿ ಈ ಹೇಳಿಕೆ ವೈರಲ್ ಆಗತೊಡಗಿತ್ತು. ಹಲವು ಗ್ರೂಪ್ ಗಳು ಹಾಗ ಪೇಜ್ ಗಳು ಈ ಫೋಟೊವನ್ನು ಶೇರ್ ಮಾಡಿದ್ದಲ್ಲದೆ, ಫರ್ಹಾನ್ ಅಖ್ತರ್ ರನ್ನು ‘ಜಿಹಾದಿ’ ಎಂದು ಜರೆದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ವತಃ ಫರ್ಹಾನ್ ಅಖ್ತರ್ ಸ್ಪಷ್ಟನೆಯೊಂದನ್ನು ನೀಡಿದರು. "ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೇಳಿಕೆಯನ್ನು ನಾನು ನೀಡಿಲ್ಲ. ಇದು ಸಂಪೂರ್ಣ ಸುಳ್ಳು. ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳನ್ನು ನಂಬುವುದರ ಬಗ್ಗೆ ನನ್ನ ಫಾಲೋವರ್ ಗಳು ಹಾಗು ಇತರರು ಎಚ್ಚರ ವಹಿಸಿ. ದ್ವೇಷವನ್ನು ಹರಡಲು ದುಷ್ಟಶಕ್ತಿಗಳು ಕೆಲಸ ಮಾಡುತ್ತಿವೆ. ಈ ಬಗ್ಗೆ ಎಚ್ಚರ ವಹಿಸಿ" ಎಂದು ಫರ್ಹಾನ್ ಟ್ವೀಟ್ ಮಾಡಿದರು.

ತನ್ನ ಬಣ್ಣ ಬಯಲಾಗುತ್ತಲೇ ಗೌರವ್ ಪ್ರಧಾನ್ ಟ್ವೀಟನ್ನು ಅಳಿಸಿ ಹಾಕಿದೆ. ಆದರೆ ಕ್ಷಮೆ ಕೇಳುವ ಬದಲು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News