ವಜಾ ಆದೇಶ ರದ್ದತಿ ಕೋರಿ ಹೈಕೋರ್ಟ್ ಮೊರೆಹೋದ ಯೋಧ ತೇಜ್‌ ಬಹದ್ದೂರ್

Update: 2018-01-31 18:46 GMT

ಚಂಡೀಗಡ, ಜ.31: ಅರೆ ಸೇನಾಪಡೆಯ ಯೋಧರಿಗೆ ಕಳಪೆ ಆಹಾರ ಸರಬರಾಜು ಆಗುತ್ತಿದೆ ಎಂದು ಹೇಳಿಕೆ ನೀಡಿದ್ದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ವಜಾಗೊಂಡಿದ್ದ ಬಿಎಸ್‌ಎಫ್ ಯೋಧ ತೇಜ್‌ಬಹದ್ದೂರ್ ಯಾದವ್ , ಇದೀಗ ತನ್ನನ್ನು ವಜಾಗೊಳಿಸಿದ ಆದೇಶವನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ವೀಡಿಯೊ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಹೋದ್ಯೋಗಿಗಳು ಅಪ್‌ಲೋಡ್ ಮಾಡಿದ್ದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಯಾದವ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಬಿಎಸ್‌ಎಫ್ ಪ್ರಧಾನ ನಿರ್ದೇಶಕ ಕೆ.ಕೆ.ಶರ್ಮ ಹಾಗೂ ಯಾದವ್ ಈ ಹಿಂದೆ ಕರ್ತವ್ಯದಲ್ಲಿದ್ದ ಬಿಎಸ್‌ಎಫ್‌ನ 29 ಬಟಾಲಿಯನ್‌ನ ಕಮಾಂಡರ್‌ಗೆ ಹೈಕೋರ್ಟ್ ನ್ಯಾಯಮೂರ್ತಿ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ ಮೇ 28ರಂದು ಪ್ರಕರಣದ ವಿಚಾರಣೆ ನಿಗದಿಗೊಳಿಸಿದ್ದಾರೆ.

ಸೈನಿಕ ಸಮ್ಮೇಳನ(ಯೋಧರ ಕಾರ್ಯಕ್ರಮ)ವೊಂದರಲ್ಲಿ ಪೂರೈಸಲಾದ ಆಹಾರ ಕಳಪೆಯಾಗಿದ್ದ ಕಾರಣ ತೇಜ್‌ಬಹಾದುರ್ ಯಾದವ್ ತನ್ನ ಮೊಬೈಲ್ ಫೋನ್‌ನಲ್ಲಿ ಇದರ ವೀಡಿಯೊ ಚಿತ್ರೀಕರಿಸಿದ್ದರು. ತನ್ನ ಮೇಲಧಿಕಾರಿಗಳಿಗೆ ಸಾಕ್ಷಿ ಸಮೇತ ದೂರು ಸಲ್ಲಿಸುವುದು ಅವರ ಉದ್ದೇಶವಾಗಿತ್ತು . ಆದರೆ 2017ರ ಜನವರಿ 8ರಂದು ಸಹೋದ್ಯೋಗಿಗಳು ಈ ವೀಡಿಯೊವನ್ನು ಯಾದವ್‌ಗೆ ತಿಳಿಯದಂತೆ ಅವರ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಯಾದವ್ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

 ವೀಡಿಯೊ ವೈರಲ್ ಆದಾಗ ಯಾದವ್ ಮೇಲೆ ಸಿಟ್ಟಾದ ಮೇಲಧಿಕಾರಿಗಳು ವೀಡಿಯೊವನ್ನು ಡಿಲೀಟ್ ಮಾಡಲು ಸೂಚಿಸಿದ್ದಾರೆ. ಆದರೆ ಯಾದವ್‌ಗೆ ಡಿಲೀಟ್ ಮಾಡಲೂ ಗೊತ್ತಿಲ್ಲದ ಕಾರಣ ಮತ್ತೊಬ್ಬ ಅಧಿಕಾರಿ ಡಿಲೀಟ್ ಮಾಡಿದ್ದಾರೆ. ಯಾದವ್ ಯೋಧರಿಗೆ ಪೂರೈಸುವ ಆಹಾರದ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ಸದಾ ಆಕ್ಷೇಪ ಎತ್ತುತ್ತಿದ್ದ ಕಾರಣ ಮೇಲಧಿಕಾರಿಯಾಗಿರುವ ಪ್ರವೀಣ್ ಕುಮಾರ್ ಎಂಬವರಿಗೆ ಯಾದವ್ ಮೇಲೆ ಸಿಟ್ಟಿತ್ತು. ಈ ಕಾರಣದಿಂದಲೇ ಯಾದವ್ ವಿರುದ್ಧ ದೂರು ಸಲ್ಲಿಸಿ ವಜಾಗೊಳಿಸಲಾಗಿದೆ ಎಂದು ಯಾದವ್ ಪರ ವಕೀಲರು ತಿಳಿಸಿದ್ದಾರೆ.

ಯಾದವ್ 2017ರ ಜನವರಿ 31ಕ್ಕೆ ಅನ್ವಯವಾಗುವಂತೆ ಸ್ವಯಂ ನಿವೃತ್ತಿ ಕೋರಿ 2016ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ನಿವೃತ್ತಿಯನ್ನು ರದ್ದುಗೊಳಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News