ಹೊಸ ನೆಲೆಯ ಅನ್ವೇಷಣೆಯ ಪ್ರತೀಕ ಮಹಾತ್ಮಾ ಗಾಂಧಿ

Update: 2018-01-31 18:39 GMT

ಗಾಂಧಿ ಕೋಮು ಭಾವನೆಯನ್ನು ಸಂಪೂರ್ಣ ನಿರ್ಮೂಲ ಮಾಡುವ ದಿಕ್ಕಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಆದರೆ ಈಗಲೂ ಕೋಮು ಭಾವನೆ ಜನರಿಂದ ನಿರ್ಮೂಲವಾಗಲೇ ಇಲ್ಲ. ಗಾಂಧೀಜಿಯವರು ಹಿಂದೂ ಮುಸ್ಲಿಂ ಏಕತೆಯನ್ನು ಒತ್ತಿ ಹೇಳಿದರು. ಬಡತನ, ಹಸಿವು ಹಿಂಸೆ ಇತ್ಯಾದಿ ಸ್ವತಂತ್ರ ಭಾರತದಲ್ಲಿ ಇರಲೇ ಬಾರದು ಎಂಬ ಆಶಯ ಅವರದಾಗಿತ್ತು. ಆದರೆ ಇಂದು ಗಾಂಧೀಜಿಯವರ ಸಮಾಧಿಗೆ ಹೂ ಅರ್ಪಿಸುವ ಸಂದರ್ಭಗಳಲ್ಲಿ ಮಾತ್ರ ಗಾಂಧೀಜಿಯವರನ್ನು ನೆನೆಸುವಂತಾಗಿದೆ.

ಲ್ಲ ಕಾಲಕ್ಕೂ ಸಲ್ಲುವ ನಾವು ಕಾಣದ ಅನೇಕ ಸೂಕ್ಷ್ಮಗಳನ್ನು ತೆರೆದಿಡುವ ಕೈ ದೀವಿಗೆಯಾಗಿ ಅತ್ಯುತ್ತಮವಾದುದರ ಕಡೆಗೆ ನಮ್ಮನ್ನು ಸೆಳೆಯುವ ಮಾರ್ಗದರ್ಶಿ ಗಾಂಧೀಜಿ.

ಇದರಿಂದಲೇ ಎಲ್ಲರಿಂದಲೂ ಬಾಪೂ ಎನಿಸಿಕೊಂಡ ಗಾಂಧೀಜಿ ಕೇವಲ ಭಾರತೀಯರಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಬಾಪೂ ಎನಿಸಿಕೊಂಡಿದ್ದಾರೆ. ತಮ್ಮ ಅಹಿಂಸಾತ್ಮಕ ಹೋರಾಟಗಳ ಮೂಲಕ ಸೆಳೆದುಕೊಂಡ ಯಾರನ್ನೇ ಆದರೂ ಗಮನಿಸಿದರೆ ಅಲ್ಲಿ ಗಾಂಧಿ ಪ್ರಭಾವವಿರುವುದು ಕಂಡು ಬರುತ್ತದೆ.

ಜಾರ್ಜ್ ಬರ್ನಾಡ್ ಷಾ ಅವರು ತಮ್ಮ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ-‘‘ಜೀವನ ಎಂದರೆ ಅದು ನಿಮ್ಮನ್ನು ನೀವು ಶೋಧಿಸಿ ಕೊಳ್ಳುವುದು ಅಷ್ಟೇ ಅಲ್ಲ ಅದು ನಿಮ್ಮನ್ನು ನೀವು ಪುನರ್ ನಿರ್ಮಿಸಿಕೊಳ್ಳುವುದು’’ ಎಂದಿರುವುದು ಗಾಂಧೀಜಿಯ ವಿಚಾರದಲ್ಲಿ ನಿಜವೆನಿಸಿದ ಮಾತು, ಗಾಂಧೀಜಿ ಎದುರಿಸಿದ ವಿಭಿನ್ನ ಸಂದರ್ಭಗಳನ್ನು ನಿರ್ವಹಿಸಿದ ಹಿನ್ನೆಲೆ ಪರಿಶೀಲಿಸಿದಾಗ ಅವರು ಹೇಗೆ ತಮ್ಮನ್ನು ತಾವೇ ಪೂರ್ತಿ ಬದಲಾವಣೆಗೆ ಒಡ್ಡಿಕೊಂಡರು ಎನ್ನುವುದು ಅವರ ವೈಯಕ್ತಿಕ ಜೀವನದ ಕಡೆ ದೃಷ್ಟಿಹರಿಸಿದಾಗ ಗೊತ್ತಾಗುತ್ತದೆ.

ಮೋಹನದಾಸ ಕರಮಚಂದ ಗಾಂಧಿ ಲಂಡನಿನಲ್ಲಿ ಲಾ ಕಲಿತು ಬಂದ ಅಟರ್ನಿ, ಮುಂಬೈ, ರಾಜಕೋಟದಲ್ಲಿ ವಕೀಲ ವೃತ್ತಿ ಮಾಡಲು ಪ್ರಯತ್ನಿಸಿ ಸೋತಿದ್ದರು. ಕೊನೆಗೆ ಮನೆಪಾಠ ಹೇಳಲೂ ಪ್ರಾರಂಭಿಸಿದ್ದರು.

ಆ ಕಾಲದಲ್ಲಿ ಬಹಳಷ್ಟು ಭಾರತೀಯರು ಆಫ್ರಿಕಾದಲ್ಲಿ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ ಹೋಗಿ ನೆಲೆಸಿದ್ದರು. ಆಗ ಅಬ್ದುಲ್ ಸೇಠ್ ಎನ್ನುವ ಉದ್ಯೋಗ ಪತಿ ತಮ್ಮ ಕೇಸಿನಲ್ಲಿ ಸಹಾಯ ಮಾಡಲು ಗಾಂಧೀಜಿಯನ್ನು ಕರೆಸಿಕೊಳ್ಳಲು ಪ್ರಥಮದರ್ಜೆ ರೈಲು ಟಿಕೆಟನ್ನೂ ಕೂಡಾ ಖರೀದಿಸಿ ಕೊಟ್ಟಿದ್ದರು.

ಆಫ್ರಿಕಾದಲ್ಲಿ ರೈಲು ಪ್ರಯಾಣದಲ್ಲಿ ನೇಟಾಲಿನ ರಾಜಧಾನಿ ಮೆರಿತ್ಯಾಬರ್ಗ್‌ನಲ್ಲಿ ರಾತ್ರಿ 9 ಗಂಟೆಗೆ ತಲುಪಿದಾಗ ರೈಲ್ವೇ ನೌಕರರು ಗಾಂಧೀಜಿ ಹತ್ತಿರ ಹಾಸಿಗೆ ಬೇಕೇ ಎಂದು ಕೇಳಿದರು. ತಮ್ಮ ಜೊತೆಗೆ ಗಾಂಧಿ ಹಾಸಿಗೆ ಕೊಂಡೊಯ್ದುದರಿಂದ ಬೇಡ ಎಂದು ಹೇಳಿದರು. ನಂತರ ಬಿಳಿಯ ಒಬ್ಬ ಪ್ರಯಾಣಿಕ ಬಂದು ಗಾಂಧೀಜಿಯನ್ನು ನೋಡಿ ನೀವು ಕೆಳದರ್ಜೆ ಬೋಗಿಗೆ ಹೋಗಿ ಎಂದು ಆಜ್ಞಾಪಿಸಿದ. ಗಾಂಧಿ ತನ್ನ ಹತ್ತಿರ ಪ್ರಥಮ ದರ್ಜೆ ಟಿಕೆಟ್ ಇರುವಾಗ ತಾನೇಕೆ ಕೆಳದರ್ಜೆಗೆ ಹೋಗಬೇಕು ಎಂದು ಪ್ರಶ್ನಿಸಿದರು. ಕೂಡಲೇ ಪ್ರಯಾಣಿಕ ರೈಲ್ವೆ ಅಧಿಕಾರಿಯನ್ನು ಕರೆಸಿ ಪೊಲೀಸರ ಮೂಲಕ ಗಾಂಧಿಯನ್ನು ಅವರ ಸಾಮಾನು ಸಮೇತ ಹೊರಗೆ ದಬ್ಬಿದ. ಗಾಂಧೀಜಿ ಕೆಳಬೋಗಿಗೆ ಹೋಗಲಿಲ್ಲ. ಪ್ರಯಾಣವನ್ನೇ ನಿಲ್ಲಿಸಿ ಈ ಅವಮಾನಕ್ಕೆ ತಾನೇನು ಮಾಡಬಹುದು ಎಂದು ಚಿಂತಿಸಿದರು. ಆಗಲೇ ಅವರ ಮನಸ್ಸು ಭಾರತೀಯರನ್ನೆಲ್ಲಾ ಸಂಘಟಿಸಿ ತಮ್ಮ ಹಕ್ಕುಗಳ ಬಗ್ಗೆ ಅಸಹಕಾರ ಅಹಿಂಸೆ ಚಳವಳಿ ರೂಪಗೊಳ್ಳಲು ಪ್ರಾರಂಭಿಸಿತ್ತು. ಈ ಗುರಿಯನ್ನು ಸಾಧಿಸಲು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರನ್ನು ಜಾಗೃತಿಗೊಳಿಸುವ ಸಲುವಾಗಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆಯನ್ನು ಶುರುಮಾಡಿದರು. ಸಾವಿರಾರು ಭಾರತೀಯರ ಕಷ್ಟ ಕಾರ್ಪಣ್ಯ ಹಾಗೂ ಅವರ ಸಮಸ್ಯೆಗಳನ್ನು ಪ್ರಕಟಿಸಿ ಹೆಚ್ಚಿನ ಜನರಿಗೆ ಅರಿವು ಮೂಡಿಸುವುದು ಪತ್ರಿಕೆಯ ಮೂಲ ಉದ್ದೇಶವಾಗಿತ್ತು. ಹೀಗೆ ಭಾರತೀಯರಲ್ಲಿ ಧೈರ್ಯ ತುಂಬಿ ಆಕ್ರಮಣಕಾರಿ ಬಿಳಿಯರ ವ್ಯವಸ್ಥೆ ವಿರುದ್ಧ ಹೋರಾಡಲು ‘ನೇಟಾಲ್ ಇಂಡಿಯನ್ ಕಾಂಗ್ರೆಸ್’ ಅಸ್ತಿತ್ವಕ್ಕೆ ತಂದರು. ಹೀಗೆ ಅವರು ತಮ್ಮನ್ನೇ ಭಾರತೀಯರ ನಾಗರಿಕ ಹಕ್ಕುಗಳ ರಕ್ಷಣೆಗೆ ಅರ್ಪಿಸಿಕೊಂಡರು. ಅವರ ‘ಇಂಡಿಯನ್ ಒಪೀನಿಯನ್’ ಪತ್ರಿಕೆಗೆ ನೆರವು ನೀಡಲು ಆಲ್ಬರ್ಟ್ ವೆಸ್ಟ್ ಎಂಬ ಬಿಳಿಯ ಮುಂದೆ ಬಂದ. ಅವನು ಅವರ ಪತ್ರಿಕೆ ಮುದ್ರಿಸುವ ಕೆಲಸ ನೋಡಿಕೊಳ್ಳುತ್ತಿದ್ದ. ಅದು ಡರ್ಬಾನಿನಿಂದ ಮುದ್ರಿತವಾಗುತ್ತಿತ್ತು. ಅದರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲವೆಂದು ಅವನಿಂದ ಪತ್ರ ಬಂದ ಕಾರಣ ಆ ಬಗ್ಗೆ ವಿಚಾರಿಸಲು ಗಾಂಧಿ ಡರ್ಬಾನ್‌ಗೆ ಹೋಗಬೇಕಾಯಿತು. ಆ 24 ತಾಸಿನ ರೈಲು ಪ್ರಯಾಣದಲ್ಲಿ ಗಾಂಧಿಯ ಸಾಮಾಜಿಕ ಚಟುವಟಿಕೆಯಲ್ಲಿ ಜತೆಯಲ್ಲಿದ್ದ ಯುವಕ ಹೆನ್ರಿ ಪೋಲಕ್‌ಅವರೊಂದಿಗೆ ಸಹ ಪ್ರಯಾಣಿಕನಾಗಿದ್ದ. ಆಗ ಅವನು ಗಾಂಧಿಗೆ ಇಂಗ್ಲಿಷ್ ಲೇಖಕ, ಚಿಂತಕರಾದ ಜಾನ್ ರಸ್ಕಿನ್ ಅವರ ಪುಸ್ತಕ ‘ಅನ್‌ಟು ದಿ ಲಾಸ್ಟ್’ (ಕಟ್ಟ ಕಡೆಯ ವರೆಗೂ) ಓದಲು ಕೊಟ್ಟ. ಗಾಂಧಿ ಆ ಪುಸ್ತಕ ಮತ್ತೆ ಮತ್ತೆ ಓದಿದರು. ಗಾಂಧಿ ಆ ಪುಸ್ತಕ ಓದಿ ಸಂಪೂರ್ಣ ಬೇರೆಯೇ ಆದ ಮನ ಪರಿವರ್ತಿತ ವ್ಯಕ್ತಿ ಆಗಿ ಬಿಟ್ಟರು. ಮಾನವ ಸಮಾಜ ನಿಜಕ್ಕೂ ಮಾನವೀಯ ಆಗಬೇಕಾದರೆ ಎಲ್ಲಾ ವ್ಯವಸ್ಥೆಯಲ್ಲೂ ನೀತಿ ಇರಬೇಕಾದದ್ದು ಆವಶ್ಯಕ. ಜೀವನವೆನ್ನು ವುದು ಕೇವಲ ಲಾಭದ ಆಟ ಅಲ್ಲ. ಏನೂ ಇಲ್ಲದ ಕಟ್ಟ ಕಡೆಯವನಿಗೂ ನ್ಯಾಯ ಸಿಗಬೇಕು ಎನ್ನುವುದೇ ಆ ಪುಸ್ತಕದಲ್ಲಿ ಪ್ರತಿಪಾದಿತವಾದ ವಿಚಾರಗಳು. ಸಂಪತ್ತು ನೀರಿನ ಹಾಗೆ ಇದ್ದ ಕಡೆಯಿಂದ ಇಲ್ಲದ ಕಡೆ ಹರಿಯಬೇಕು. ಸ್ಪರ್ಧೆಗಿಂತ ಸಹಕಾರ ಮುಖ್ಯ. ಸ್ಪರ್ಧೆ ಈಷೆರ್ಯ್ಗೆ ದಾರಿ. ದುಡ್ಡಿದ್ದವನೇ ಜಯಶಾಲಿ, ಆದರೆ ಬಡವರ ಗತಿಹೀನರ ಗತಿ ಏನು? ಅವರು ಬದುಕಬೇಕು. ಇದು ರಸ್ಕಿನ್ನನ ವಿಚಾರಧಾರೆ. ಇದು ಓದುತ್ತಾ ಗಾಂಧಿಗೆ ತನ್ನ ಬದುಕಿನ ಗುರಿಯ ಬಗ್ಗೆ ಹೊಳೆಯಿತು, ಆಗಲೇ ಗಾಂಧೀಜಿಗೆ ತಾನು ಯಾವ ದಾರಿಯಲ್ಲಿ ಹೋಗಬೇಕು ಎನ್ನುವ ಬೆಳಕು ಹೊಳೆಯಿತು. ವ್ಯಕ್ತಿಯ ಹಿತ ಸರ್ವರ ಹಿತದಲ್ಲಿ ಅಡಗಿದೆ ಇಂತಹ ವಿಚಾರದ ಬೀಜಗಳು ಮನಸ್ಸಿನಲ್ಲಿ ಬಿತ್ತಿ ಅವರಲ್ಲಿ ಅಗಾಧ ಮಾರ್ಪಾಡಾಯಿತು. ಮುಂದೆ ರೂಪಗೊಂಡು ಬೆಳೆದ ಗಾಂಧೀಜಿಯ ಆರ್ಥಿಕ ರಾಜಕೀಯ ಸಾಮಾಜಿಕ ಸಿದ್ಧಾಂತಗಳಿಗೆಲ್ಲಾ ಇದೇ ಬುನಾದಿ. ಗಾಂಧೀಜಿ ಆ ಪುಸ್ತಕವನ್ನು ಅನುವಾದಿಸಿ ಆ ಪುಸ್ತಕಕ್ಕೆ ‘ಸರ್ವೋದಯ’ ಎಂದು ಹೆಸರಿಟ್ಟರು, ನಂತರ ಡರ್ಬಾನ್ 14 ಮೈಲು ದೂರದಲ್ಲಿ ಹೊಸ ಬದುಕಿನ ಪ್ರಯೋಗ ಶಾಲೆ ಫಿನಿಕ್ಸ್ ಆಶ್ರಮದ ಉದಯವಾಯಿತು. ಇಲ್ಲೇ ‘ಇಂಡಿಯನ್ ಒಪೀನಿಯನ್’ ಪತ್ರಿಕೆ ಅಚ್ಚಾಗಿ ಹೊರಬಂತು. ಆನಂತರ ‘ಹಿಂದ್ ಸ್ವರಾಜ್’ ಕೃತಿ. ಇದೆಲ್ಲವೂ ‘ಕಟ್ಟ ಕಡೆಯವನಿಗೂ ನ್ಯಾಯ’ ಎಂದು ರಸ್ಕಿನ್ಸ್ ಪುಸ್ತಕದಲ್ಲಿ ಕಂಡುಕೊಂಡು ಈ ಅರ್ಥಕ್ಕೆ ಗಾಂಧೀಜಿ ಹೊಸತನ್ನೆಲ್ಲಾ ಬೆಳೆಸುತ್ತಾ ಹೋದರು. ಹಾಗೇನೇ ಗುಜರಾತ್ ಪ್ರಸಿದ್ಧ ಕವಿ ನರಸಿಂಹ ಮೆಹತಾರ ಹಾಡು ‘ವೈಷ್ಣವ ಜನತೋ ತೇನೇ ಕಹಿಯೇ’ ಗಾಂಧಿ ಆಶ್ರಮದ ಪ್ರಾರ್ಥನೆ ಆಯಿತು. ವೈಷ್ಣವ ಯಾರು? ಇತರರ ಕಷ್ಟಗಳನ್ನು ಅರಿತು ಕೊಳ್ಳುವನೇ ವೈಷ್ಣವ. ‘ಪರದುಃಖೇ ಉಪಕಾರ ಕರೇ ತೋಯೋ ಮನ ಅಭಿಮಾನಿನ ಆಣೀರೇ’. ಇತರರ ದುಃಖದಲ್ಲಿ ಸಹಾಯ ಮಾಡು ವಾತನು ತಾನು ಮಾಡಿದೆ ಎಂಬ ಗರ್ವ ವಿಲ್ಲದೆ ಸೇವೆ ಸಹಾಯ ಮಾಡುವಾತ ಅವನೇ ವೈಷ್ಣವ. ಬೆಳಗಿನ ಪ್ರಾರ್ಥನೆಯಲ್ಲಿ ತಪ್ಪದೇ ಇರಬೇಕಾದ ಹಾಡು ಮತ್ತು ಶ್ಲೋಕಗಳು ಜನ ಮಾನಸದಲ್ಲಿ ಸದಾ ಉಳಿಯುವಂತೆ ಮಾಡಿದವು.

ನತ್ರಹಂ ಕಾಮಯೇ ರಾಜ್ಯಂ ನಸ್ವರ್ಗಂ

ನೆಪುನರ್ಭವಂ
ಕಾಮಯೇ ದುಃಖ ತಾಪ್ತಾನಾಂ ಪ್ರಾಣಿನಾಂ
ಆರ್ತಿನಾಶಮ

ರಾಜ್ಯ ಬಯೆಸೆನು, ಸ್ವರ್ಗವ ಬಯಸೆನು ಮೋಕ್ಷವನ್ನೇ ಬಯಸೆನು ಬಯಸುವನೆ ದುಃಖತಪ್ತ ಪ್ರಾಣಿಗಳ ದುಃಖದ ನಾಶವನು. ಈ ಪ್ರಾರ್ಥನೆ ಅವರಿಗೆ ಪ್ರಿಯವಾದುದು.
   ಈ ರೀತಿ ರಸ್ಕಿನ್‌ನ ಚಿಂತನೆಗೆ ಗಾಂಧಿ ಹೊಸ ವ್ಯಾಖ್ಯೆ ಕೊಡುತ್ತಾರೆ. ನಿರಂತರ ಕಲಿಯುವಿಕೆ ಮತ್ತು ಪ್ರಯೋಗಶೀಲತೆಗೆ ಬದ್ಧರಾಗಿದ್ದ ಗಾಂಧಿ ತಮ್ಮ ಮನಸ್ಸು, ದೇಹ ಮತ್ತು ವಿಚಾರಗಳನ್ನು ಯಾವಾಗಲೂ ಹೊಸ ಬೆಳಕಿಗೆ, ಹೊಸ ಹೊಸ ವಿಚಾರಗಳಿಗೆ ತೆರೆದಿಡುತ್ತಿದ್ದರು. ಅವರ ಸರ್ವೋದಯ ಚಳವಳಿಯು ಮುಖ್ಯವಾಗಿ ಯಾವುದೇ ವ್ಯಕ್ತಿಗೆ ನ್ಯಾಯಯುತವಾದ ಪಾಲನ್ನು ನೀಡದೇ ಸಮಾಜದ ಹಿತಾಸಕ್ತಿ ಸಾಧಿಸಲು ಆಗುವುದಿಲ್ಲ ಎಂಬ ಅಂಶಕ್ಕೆ ಒತ್ತು ನೀಡುತ್ತದೆ ಹಾಗೂ ಎಲ್ಲರೂ ಸಮಾಜದಲ್ಲಿ ಸಮಾನ ಪ್ರಾಮುಖ್ಯತೆ ಹೊಂದಿರುತ್ತಾರೆ. ಸಾಮಾಜಿಕ ಸಂಬಂಧಗಳ ಸ್ವರೂಪವನ್ನು ಗ್ರಹಿಸುವಾಗಲೂ ವರ್ಣ, ವರ್ಗ, ವಿಂಗಡನೆ, ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಪರಿಕಲ್ಪನೆ ಒಪ್ಪುವುದಿಲ್ಲ. ಪ್ರತೀ ಹಿತಾಸಕ್ತಿಗಳು ಪರಸ್ಪರ ಪೂರಕವಾಗಿರಬೇಕೆಂದು ಸರ್ವೋದಯ ಪ್ರತಿಪಾದಿಸುತ್ತದೆ ಹಾಗೂ ಬಂಡವಾಳ ಶಾಹಿ ಮತ್ತು ಸಮತಾವಾದ ಇವೆರಡನ್ನು ನಿರ್ವಹಿಸಲು ನ್ಯಾಸ ಪದ್ಧತಿಯ ಪರಿಕಲ್ಪನೆ ಮೂಲಕ ಆರ್ಥಿಕ ಸಮಾನತೆ ಹಾಗೂ ಸಂಬಂಧಗಳಲ್ಲಿ ಸೌಹಾರ್ದತೆಯನ್ನು ತರಲು ಅವರು ಬಯಸಿದರು. ನ್ಯಾಸ ಪದ್ಧತಿಯ ಪ್ರಕಾರ ಶ್ರೀಮಂತರು ತಾವು ಗಳಿಸಿದ ಸಂಪತ್ತನ್ನು ತಮ್ಮ ಆವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟು ಸಂಪತ್ತನ್ನು ಮಾತ್ರ ಬಳಸಿಕೊಂಡು ಹೆಚ್ಚುವರಿ ಸಂಪತ್ತಿಗೆ ನ್ಯಾಸದಾರ ಆಗಿದ್ದುಕೊಂಡು ಸಮಾಜದ ಒಳಿತಿಗೆ ಬಳಸಬೇಕು, ಶ್ರೀಮಂತರ ಸಂಪತ್ತು ಕಾನೂನು ಬದ್ಧವಾಗಿ ಅವರಿಗೆ ಸೇರಿದ್ದರೂ ನೈತಿಕವಾಗಿ ಅದು ಇಡೀ ಸಮಾಜಕ್ಕೆ ಸೇರುತ್ತದೆ ಎಂಬ ಉನ್ನತ ಧ್ಯೇಯದಿಂದ ಅಗತ್ಯ ಸೌಲಭ್ಯ ಪಡೆಯುವುದು ಮತ್ತು ವಿಲಾಸೀ ಜೀವನ ನಡೆಸುವುದು ಇವೆರಡರ ನಡುವಣ ವ್ಯತ್ಯಾಸ ಮನವರಿಕೆ ಮಾಡಿಕೊಳ್ಳುವುದರ ಬಗ್ಗೆ ವಿಶೇಷ ಒತ್ತು ನೀಡಿದರು. ಹೀಗೆ ಅವರು ಮಾಡಿದ ಹೊಸ ಹೊಸ ಪ್ರಯೋಗಗಳು ಅಪಾರ ಮಾನವೀಯ ಕಾಳಜಿ ಉಳ್ಳದ್ದಾಗಿದ್ದು ಸಾಮಾನ್ಯ ಮನುಷ್ಯರ ಸಾಧ್ಯತೆಗಳ ಬಗ್ಗೆ ಹೊಸ ಸಮಾಜ ಕಟ್ಟಲು ಮತ್ತು ಜನರಲ್ಲಿ ಸ್ಫೂರ್ತಿ ತುಂಬಲು ತಮ್ಮದೇ ಆದ ನಿಲುವಿಗೆ ಮಾರ್ಪಡುವಂತೆ ಕಾರಣವಾಗಿದೆ. ಹೀಗೆ ಗಾಂಧಿ ತಮ್ಮನ್ನು ತಾವೇ ಬದಲಾಯಿಸಿಕೊಳ್ಳುತ್ತಾ ತಮ್ಮ ಆಲೋಚನಾ ಕ್ರಮ ಪ್ರತಿಯೊಬ್ಬರ ಪ್ರಜ್ಞಾವಲಯ ಮುಟ್ಟಬೇಕು ಅವರು ಹಂಬಲಿಸುತ್ತಿದ್ದರು.
                       
                       ಅವರ ಈ ಅಹಿಂಸಾತ್ಮಕ ಸತ್ಯಾಗ್ರಹ ಚಳವಳಿ ದೇಶ ವಿದೇಶಗಳಲ್ಲೂ ಪ್ರಭಾವ ಬೀರಿತ್ತು ಎನ್ನುವುದಕ್ಕೆ ರೊನಾಲ್ಡ್ ಡಂಕನ್‌ರ ಉದಾಹರಣೆ ಕೊಡಬಹುದು. ರೊನಾಲ್ಡ್ ಡಂಕನ್ ಆಸ್ಟ್ರೋ ಜರ್ಮನ್ ಮೂಲದವರು. ಅವರು ಹುಟ್ಟಿದ್ದು 1914ರಲ್ಲಿ ಮೊದಲು ಯುದ್ಧ ಪ್ರಾರಂಭವಾದಾಗ ಅವರ ಕುಟುಂಬ ಲಂಡನ್‌ಗೆ ವಲಸೆ ಹೋದರು. ಡಂಕನ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪದವೀಧರನಾದ ಮೇಲೆ ಸಮಾಜ ಸುಧಾರಣೆಯಲ್ಲಿ ತೊಡಗಿ ಚೆಸ್ಟರ್ ಫೀಲ್ಡ್ ಬಳಿಯ ಗಣಿಯಲ್ಲಿ ಕಾರ್ಮಿಕರ ಬವಣೆಯನ್ನು ತಿಳಿದುಕೊಳ್ಳಲು ತಾನೇ ಸ್ವತಃ ಕಾರ್ಮಿಕನಾಗಿ ಅವರ ಬವಣೆಯನ್ನು ಅರ್ಥಮಾಡಿಕೊಂಡರು. ಕಾರ್ಮಿಕರು ಮುಷ್ಕರ ಹೂಡಿದಾಗ ಅವರು ಹಿಂಸೆಯನ್ನು ತೊರೆದು ಸಾತ್ವಿಕ ಪ್ರತಿರೋಧ ಮುಂದುವರಿಸಬೇಕೆಂದು ಅಪೇಕ್ಷಿಸಿದರು, ಆದರೆ ಕಮ್ಯುನಿಸ್ಟ್‌ರು ಈ ಪರಿಸ್ಥಿತಿಯನ್ನು ಸ್ವಲಾಭಕ್ಕೆ ಬಳಸಿಕೊಂಡ ಕಾರಣ ಅಲ್ಲಿ ಹಿಂಸಾಚಾರ ಉಂಟಾಗಿ ಕಾರ್ಮಿಕರ ಹಿಂಸಾಚಾರಕ್ಕೆ ಡಂಕನರೇ ಕಾರಣವೆೆಂದು ಅವರ ಬಂಧನವಾಯಿತು. ಆಗ ಡಂಕನ್ ಇಂತಹ ವಿವಾದಗಳಲ್ಲಿ ಶಿಸ್ತು ಎಷ್ಟು ಮುಖ್ಯ ಎಂದು ಮನವರಿಕೆ ಮಾಡಿಕೊಂಡು ‘ದಿ ಕಂಪ್ಲೀಟ್ ಪೆಸಿಫಿಸ್ಟ್’ ಕರಪತ್ರ ಮುದ್ರಿಸಿ ಎಲ್ಲರಿಗೂ ಹಂಚಿ ಗಾಂಧಿಗೂ ಕಳುಹಿಸಿದರು, ಮಹಾತ್ಮಾಗಾಂಧಿ ತಕ್ಷಣ ಪ್ರತಿಕ್ರಿಯಿಸಿ ತನ್ನನ್ನು ಭೇಟಿಯಾಗಲು ತಂತಿ ಕಳುಹಿಸಿದರು. ಮುಂದೆ ಕೆಲವೇ ದಿನಗಳಲ್ಲಿ ಡಂಕನ್ ಲಂಡನ್‌ನಿಂದ ಹಡಗಿನ ಮೂಲಕ ಭಾರತಕ್ಕೆ ಗಾಂಧಿಯನ್ನು ಭೇಟಿಮಾಡಲು ಗಾಂಧಿ ನೆಲೆಸಿದ್ದ ವಾಧಾ ಆಶ್ರಮಕ್ಕೆಂದು ಪ್ರಯಾಣಿಸಿದರು. ಆದರೆ ಗಾಂಧಿ ಆಶ್ರಮಕ್ಕೆ ಹೋಗುವುದಾದರೂ ಹೇಗೆಂದು ತಿಳಿಯಲಿಲ್ಲ. ಹೆಚ್ಚು ಕಡಿಮೆ ಬೆಂಗಾಡು ಅನ್ನುವಂತಹ ಹಳ್ಳಿಯಲ್ಲಿ ಟಾಂಗಾ ಒಂದರಲ್ಲಿ ಹೊರಟಾಗ ಟಾಂಗಾದವನು ದೂರದಿಂದ ನಡೆದು ಬರುತ್ತಿದ್ದ ಗಾಂಧಿಯನ್ನು ತೋರಿಸಿದ. ಮಹಾತ್ಮಾಗಾಂಧಿ ಉರಿಬಿಸಿಲಿನಲ್ಲಿ ಮೂರು ಮೈಲಿ ದೂರವನ್ನು ನಡೆದು ಬರುತ್ತಿದ್ದರು. ಡಂಕನ್ ಟಾಂಗಾದಿಂದ ಇಳಿದ ಕೂಡಲೇ ಅವರು ಒಬ್ಬ ಪರಿಚಿತ ಅನ್ನುವಂತೆ ತಮ್ಮ ಸತ್ಯಾಗೃಹದ ಬಗ್ಗೆ ವಿವರಿಸುತ್ತಾ ಆಶ್ರಮಕ್ಕೆ ಕರೆದುಕೊಂಡು ಹೋದರು. ಗಾಂಧಿಯ ಆ ಆಶ್ರಮ ಎನ್ನುವುದು ಒಂದೇ ಕೊಠಡಿಯ ಮನೆ, ಗಾಂಧೀಜಿ ಅವನನ್ನು ಕರೆದು ಆ ಹಳ್ಳಿ ತೋರಿಸಲು ಹೊರಟರು. ಅಲ್ಲಿರುವ ಚಿಂದಿಯಿಂದ ಮಾಡಿದ ಮನೆಗಳು, ನಿಶ್ಯಕ್ತರಾಗಿದ್ದ ಜನರು, ಎಲ್ಲಿ ನೋಡಿದರೂ ಬಡತನ. ಮತ್ತೊಂದೆಡೆ ಕೆಲವರು ತಮ್ಮ ಗುಡಿಸಿಲಿನ ಮುಂದುಗಡೆಯೇ ದೇಹಬಾಧೆ ತೀರಿಸಲು ಕುಳಿತು ಕೊಂಡಿದ್ದನ್ನು ಡಂಕನ್ ನೋಡಿದರು. ಅವರು ಮಲವಿಸರ್ಜನೆ ಮಾಡಿದ್ದನ್ನು ಗಾಂಧೀಜಿ ಕೈಯಿಂದ ದೂರ ಸರಿಸಿ ಅದರ ಮೇಲೆ ಮರಳು ಹಾಕಿ ಮುಚ್ಚುತ್ತಿದ್ದರು. ನಂತರ ಡಂಕನ್ ಕೂಡಾ ಅವರ ಜೊತೆ ಕೈ ಜೋಡಿಸಿದರು. ಆಗ ಹಳ್ಳಿಗರು ಇದನ್ನು ನೋಡಿ ತಾವೂ ಕೈ ಜೋಡಿಸಿದಾಗ ಯಾವುದನ್ನು ಬೋಧನೆಯಿಂದ ಮಾಡಲಾಗದೋ ಅಂತಹ ಕಾರ್ಯವನ್ನು ಕೇವಲ ಮೌನವಾಗಿ ಗಾಂಧೀಜಿ ಸಾಧಿಸಿ ಬಿಟ್ಟಿದ್ದರು. ಡಂಕನ್ ಈ ಘಟನೆ ಮಾತ್ರ ಅದುವರೆಗೆ ನಡೆಸಿದ ಚರ್ಚೆಗಿಂತ ಹೆಚ್ಚಿನದ್ದನ್ನು ತನಗೆ ಕಲಿಸಿತು ಎಂದು ಹೇಳಿ ಕೊಂಡಿದ್ದಾರೆ. ಹೀಗೆ ಗಾಂಧೀಜಿ ಮಾತಿಲ್ಲದೆ ಜನರಲ್ಲಿ ಬದಲಾವಣೆ ತರುತ್ತಿದ್ದರು. ಗಾಂಧೀಜಿಯ ಹಿಂದ್ ಸ್ವರಾಜ್ ಕೃತಿಯ ಕಲ್ಪನೆ ಕೇವಲ ಆದರ್ಶದ ಕಲ್ಪನೆ ಮಾತ್ರವಾಗಿರಲಿಲ್ಲ. ತನ್ನ ನಾಡಿನ ಬಡಜನತೆಯ ನಿತ್ಯದ ದುಃಖ ದುಮ್ಮಾನಗಳ ಜೊತೆ ಬೆಸೆದುಕೊಂಡಿತ್ತು. ಇಲ್ಲಿಯ ಜನ ಸಮುದಾಯ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿದ್ದ ನೆಮ್ಮದಿ, ಜೀವನ ಪ್ರೀತಿ ಮತ್ತು ಸಮುದಾಯ ಪ್ರಜ್ಞೆ ಹಿಂದೂ ಮುಸ್ಲಿಂ ಐಕ್ಯತೆಯನ್ನು ಉಳಿಸಿಕೊಳ್ಳಬೇಕು ಎಂಬುದಾಗಿತ್ತು. ಈ ಕಾರಣದಿಂದಲೇ 1929ರ ಲಾಹೋರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಜವಾಹರ್‌ಲಾಲ್‌ರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಸೂಚನೆಯನ್ನು ಬದಿಗೆ ತಳ್ಳಿ ಎ.ಎಂ. ಅನ್ಸಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ ಜವಾಹರಲಾಲರನ್ನು ಮಹಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಇದರ ಹಿಂದೆ ದೇಶ ಇಬ್ಬಾಗವಾಗಬಾರದು ಎಂಬ ಒತ್ತಾಸೆ ಇತ್ತು. ದೇಶ ಒಡೆದು ಬೇರೆ ಬೇರೆಯಾದರೆ ಸದಾ ಕಿತ್ತಾಡುವ ಸನ್ನಿವೇಶ ಉಂಟಾಗುವ ಅಪಾಯವನ್ನು ಅವರು ಮನಗಂಡಿದ್ದರು. ಗಾಂಧೀಜಿಯವರ ಧರ್ಮ ದಿನನಿತ್ಯದ ನೆಮ್ಮದಿಗೆ ಬೇಕಾಗುವಂತಹ ಪರಸ್ಪರ ಕೊಡುಕೊಳ್ಳುವಿಕೆ ಆಧಾರವಾಗಿಟ್ಟು ಕೊಂಡಿದ್ದ ಸಂಸ್ಕೃತಿಗಳ ವೈವಿಧ್ಯ ಬಹುಮುಖತೆಯನ್ನು ಗೌರವದಿಂದ ಕಾಣುವಂತಹದಾಗಿತ್ತು. ದೂರಗಾಮಿ ದೃಷ್ಟಿ ಉಳ್ಳದಾಗಿತ್ತು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದು ಸಮುದಾಯದ ಬಗ್ಗೆ ಮಾತ್ರ ಯೋಚಿಸುತ್ತಿರಲಿಲ್ಲ. ಒಟ್ಟು ಸಮಾಜದ ನೆಮ್ಮದಿಯ ಬಗ್ಗೆ ಯೋಚಿಸುತ್ತಿದ್ದರು. ಆದರೆ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತಾಗ ಹಿಂದೂಸ್ಥಾನ ಪಾಕಿಸ್ತಾನವೆಂದು ಕೊನೆಗೂ ಇಬ್ಬಾಗವೂ ಆಯಿತು. ಆಗಲೇ ಕೋಮು ಗಲಭೆ ಹೆಚ್ಚಿ ಎಲ್ಲೆಲ್ಲೂ ಹಿಂಸೆಯ ತಾಂಡವ ಮೇರೆ ಮೀರಿತು. ಗಾಂಧಿ ಮುಸ್ಲಿಂ ಜನಾಂಗದ ಪರ ಇದ್ದಾರೆ ಎಂದು ಗಾಂಧಿಯ ಬಗ್ಗೆ ಅಪಪ್ರಚಾರವಾಯಿತು. ಗಾಂಧಿ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ ಎಂದು ಅವರ ಸತ್ಯಾಗ್ರಹಕ್ಕೆ ಬೆಲೆ ಕೊಡದಂತಾಯಿತು. ಪತ್ರಕರ್ತರೂ ಸಹ ಈ ಬಗ್ಗೆ ಗಾಂಧಿಯನ್ನು ವಿಚಾರಿಸಿದಾಗ ‘‘ಎಲ್ಲರೂ ಅವರವರ ವೈಚಾರಿಕ ಚೌಕಟ್ಟು ಗುರುತಿಸುವಷ್ಟು ಮಾತ್ರ ಮಿತಿ ಹಾಕಿರುತ್ತಾರೆ. ಅದರಾಚೆಯ ವಿಶಾಲ ಸಾಧ್ಯತೆಯ ಬಗ್ಗೆ ಚಿಂತಿಸುವುದಿಲ್ಲ.’’ ಎಂದು ಹೇಳಿದ್ದರು. ಇದೆಲ್ಲವೂ ಗಾಂಧೀಜಿ ಹಿಂದೂ ಪರ ಇಲ್ಲ ಎಂದೇ 1948ರ ಜನವರಿ 30ರಂದು ಮಹಾರಾಷ್ಟ್ರದ ನಾಥೂರಾಮ್ ಗೋಡ್ಸೆ ವಿವೇಕ ಶೂನ್ಯವಾಗಿ ತನ್ನ ನಿತ್ಯದ ಪ್ರಾರ್ಥನಾ ಸಭೆಗೆ ಹೋಗುತ್ತಿದ್ದ ಗಾಂಧೀಜಿಯನ್ನು ಗುಂಡಿಟ್ಟುಕೊಂದ. ಗಾಂಧಿ ಕೋಮು ಭಾವನೆಯನ್ನು ಸಂಪೂರ್ಣ ನಿರ್ಮೂಲ ಮಾಡುವ ದಿಕ್ಕಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಆದರೆ ಈಗಲೂ ಕೋಮು ಭಾವನೆ ಜನರಿಂದ ನಿರ್ಮೂಲವಾಗಲೇ ಇಲ್ಲ. ಗಾಂಧೀಜಿಯವರು ಹಿಂದೂ ಮುಸ್ಲಿಂ ಏಕತೆಯನ್ನು ಒತ್ತಿ ಹೇಳಿದರು. ಬಡತನ, ಹಸಿವು ಹಿಂಸೆ ಇತ್ಯಾದಿ ಸ್ವತಂತ್ರ ಭಾರತದಲ್ಲಿ ಇರಲೇ ಬಾರದು ಎಂಬ ಆಶಯ ಅವರದಾಗಿತ್ತು. ಆದರೆ ಇಂದು ಗಾಂಧೀಜಿಯವರ ಸಮಾಧಿಗೆ ಹೂ ಅರ್ಪಿಸುವ ಸಂದರ್ಭಗಳಲ್ಲಿ ಮಾತ್ರ ಗಾಂಧೀಜಿಯವರನ್ನು ನೆನೆಸುವಂತಾಗಿದೆ.

Writer - ಕೆ. ತಾರಾ ಭಟ್

contributor

Editor - ಕೆ. ತಾರಾ ಭಟ್

contributor

Similar News

ಜಗದಗಲ
ಜಗ ದಗಲ