ದೇಶದ ಆತ್ಮಕ್ಕೇ ಧಕ್ಕೆಯಾದರೆ?

Update: 2018-02-01 05:08 GMT

ಇತ್ತೀಚಿನ ದಿನಗಳಲ್ಲಿ ಭಾರತ ಜಾಗತಿಕವಾಗಿ ಕುಸಿಯುವುದರ ಮೂಲಕ ಸುದ್ದಿಯಲ್ಲಿದೆ. ಈ ಕುಸಿಯುವಿಕೆಯನ್ನೇ ಮೋದಿ ನೇತೃತ್ವದ ಸರಕಾರದ ಸಾಧನೆಯೆಂಬಂತೆ ಬಿಂಬಿಸುವ ಹತಾಶೆಯ ಪ್ರಯತ್ನವೂ ಜೊತೆ ಜೊತೆಯಾಗಿ ನಡೆಯುತ್ತಿದೆ. ನೋಟು ನಿಷೇಧವಾದ ಬೆನ್ನಿಗೇ, ಶೀಘ್ರದಲ್ಲೇ ದೇಶದ ರೂಪಾಯಿಯ ಮೌಲ್ಯ ಡಾಲರ್‌ನ್ನು ಮೀರುತ್ತದೆ ಎಂದು ಬಿಜೆಪಿ ನಾಯಕರು ಸಾರ್ವಜನಿಕರ ಮೂಗಿಗೆ ಬೆಣ್ಣೆ ಸವರಿದರು. ‘ನಾಳೆ ಒಳ್ಳೆಯದಾಗುತ್ತದೆ’ ಎನ್ನುವ ಭರವಸೆಯಲ್ಲಿ ನೋಟು ನಿಷೇಧದಿಂದಾದ ಎಲ್ಲ ಅನಾಹುತಗಳನ್ನು ಜನರು ಸಹಿಸಿದರು. ವರ್ಷ ಉರುಳಿತಾದರೂ ಯಾವ ಒಳಿತೂ ಜನರನ್ನು ಹುಡುಕಿಕೊಂಡು ಬರಲಿಲ್ಲ. ಬದಲಿಗೆ ದೇಶ ಮೂರು ವರ್ಷ ಹಿಂದಕ್ಕೆ ಚಲಿಸಿತು. ಜಿಡಿಪಿ ಕುಸಿಯಿತು. ಇದಕ್ಕೆ ಸ್ಪಷ್ಟೀಕರಣ ನೀಡಬೇಕಾದ ಅರ್ಥ ಸಚಿವರು, ‘ಈ ಹಿಂದೆಯೂ ಜಿಡಿಪಿ ಕುಸಿದಿತ್ತು’ ಎಂದು ಹೇಳಿದರು. ಜಿಎಸ್‌ಟಿಯಿಂದ ಬೆಲೆ ಇಳಿಕೆಯಾಗುತ್ತದೆ ಎಂಬ ಭರವಸೆಯೂ ಹುಸಿಯಾಯಿತು. ಜಿಎಸ್‌ಟಿಯ ಹೆಸರಿನಲ್ಲಿ ಬೆಲೆಯೇರಿಕೆಯಾಯಿತೇ ವಿನಃ ಎಲ್ಲೂ ಇಳಿಕೆಯಾದ ಸುದ್ದಿ ವರದಿಯಾಗಲಿಲ್ಲ. ಇದೇ ಸಂದರ್ಭದಲ್ಲಿ ತೈಲ ಬೆಲೆಯೂ ತನ್ನ ಗರಿಷ್ಠ ಏರಿಕೆಯನ್ನು ಘೋಷಿಸಿಕೊಂಡಿದೆ. ಇತ್ತೀಚೆಗೆ ಸಮಗ್ರ ಅಭಿವೃದ್ಧಿ ಸೂಚ್ಯಂಕದ ಪಟ್ಟಿ ಹೊರ ಬಿತ್ತು. ಇದರಲ್ಲಿ ಭಾರತ 62ನೇ ಸ್ಥಾನವನ್ನು ಪಡೆಯಿತು. ವಿಷಾದನೀಯ ಸಂಗತಿಯೆಂದರೆ, ಭಾರತದ ಹೆಸರು ಪಾಕಿಸ್ತಾನಕ್ಕಿಂತಲೂ ಕೆಳಗಿತ್ತು. ಇದೇ ಸಂದರ್ಭದಲ್ಲಿ ಭಾರತದ ಶೇ. 73ರಷ್ಟು ಸಂಪತ್ತು ಶೇ. 1ರಷ್ಟು ಶ್ರೀಮಂತರ ಕೈಯಲ್ಲಿದೆ ಎನ್ನುವುದೂ ಸಮೀಕ್ಷೆಯಲ್ಲಿ ಹೊರಬಿತ್ತು. ಜನ ಸಾಮಾನ್ಯರ ಅಭಿವೃದ್ಧಿ ಯಾಕೆ ಇಳಿಮುಖವಾಗಿದೆ ಎನ್ನುವುದರ ಉತ್ತರ ಇದರಲ್ಲಿದೆ. ಸರಕಾರ ಜನಸಾಮಾನ್ಯರಿಂದ ಸಂಪತ್ತನ್ನು ಕಿತ್ತು ಶ್ರೀಮಂತರ ಕೈಗೆ ಒಪ್ಪಿಸುವಲ್ಲಿ ನಿರತವಾಗಿದೆ. ಆದುದರಿಂದಲೇ, ಶೇ. 1ರಷ್ಟಿರುವ ಶ್ರೀಮಂತರು ಇನ್ನಷ್ಟು ಸಂಪತನ್ನು ಗಳಿಸಿದ್ದರೆ, ಉಳಿದ ಭಾರತೀಯರ ಜೀವನ ಮಟ್ಟ ಕೆಳಗಿಳಿದಿದೆ. ಇವೆಲ್ಲದರ ಜೊತೆಗೆ ಹಸಿರು ರ್ಯಾಂಕಿಂಗ್‌ನಲ್ಲೂ ಭಾರತ ಜಾಗತಿಕವಾಗಿ ಕುಸಿದಿದೆ. ಎರಡು ವರ್ಷಗಳ ಹಿಂದೆ 141ನೇ ಸ್ಥಾನದಲ್ಲಿದ್ದ ಭಾರತ ಇದೀಗ 177ನೇ ಸ್ಥಾನಕ್ಕಿಳಿದಿದೆ. 180 ರಾಷ್ಟ್ರಗಳಲ್ಲಿ ಭಾರತ 177ನೇ ಸ್ಥಾನಕ್ಕೆ ಜಾರಿದೆ ಎನ್ನುವುದನ್ನು ನಾವು ಗಮನಿಸಬೇಕು.

    ಈ ಎಲ್ಲ ಕುಸಿತಕ್ಕಿಂತಲೂ ಅಪಾಯಕಾರಿಯಾದ ಜಾರುವಿಕೆಯೊಂದನ್ನು ಜಾಗತಿಕ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ವಿಶ್ವ ಪ್ರಜಾಪ್ರಭುತ್ವ ಸೂಚಿಯಲ್ಲಿ ಭಾರತದ ದೇಶ 32ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಇಳಿದಿದೆ. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ, ನಾಗರಿಕ ಸ್ವಾತಂತ್ರ ಸರಕಾರದ ಕಾರ್ಯವೈಖರಿ, ರಾಜಕೀಯ ಸಹಭಾಗಿತ್ವ, ರಾಜಕೀಯ ಸಂಸ್ಕೃತಿ ಇವೆಲ್ಲವುಗಳನ್ನು ಮಾನದಂಡವಾಗಿಟ್ಟುಕೊಂಡು ವಿಶ್ವ ಪ್ರಜಾಪ್ರಭುತ್ವದ ರ್ಯಾಂಕಿಂಗ್ ಸಿದ್ಧಗೊಳ್ಳುತ್ತದೆ. ಪ್ರಜಾಪ್ರಭುತ್ವದ ಹಿರಿಮೆಯಿಂದಲೇ ಒಂದು ಕಾಲದಲ್ಲಿ ಭಾರತ ವಿಶ್ವದ ಮುಂದೆ ಗುರುತಿಸಿಕೊಂಡಿತ್ತು. ಅಮೆರಿಕ ಮತ್ತು ಸೋವಿಯತ್ ರಶ್ಯಾ ಎನ್ನುವ ಎರಡು ಶಕ್ತಿಗಳ ನಡುವೆ ಅಲಿಪ್ರ ನೀತಿಗಳನ್ನು ಪಾಲಿಸುತ್ತಾ ತೃತೀಯ ಶಕ್ತಿಯೊಂದರ ನೇತೃತ್ವ ವಹಿಸುವ ಎಲ್ಲ ಅರ್ಹತೆಯನ್ನು ಭಾರತ ಹೊಂದಿತ್ತು. ಆದರೆ ನಿಧಾನಕ್ಕೆ ಭಾರತದ ವಿದೇಶಾಂಗ ನೀತಿ ದುರ್ಬಲಗೊಳ್ಳುತ್ತಾ ಹೋಯಿತು. ಸೋವಿಯತ್ ರಶ್ಯಾ ಕುಸಿದ ಬಳಿಕ, ಭಾರತ ಒಳಗೊಳಗೆ ಅಮೆರಿಕದ ಸ್ನೇಹಕ್ಕೆ ಅಂಗಲಾಚತೊಡಗಿತು. ದೇಶದಲ್ಲಿ ಬಲಪಂಥೀಯ ರಾಜಕೀಯ ಶಕ್ತಿ ಪ್ರಬಲವಾಗುತ್ತಾ ಹೋದಂತೆಯೇ ಭಾರತ ಅಮೆರಿಕದ ಕಡೆಗೆ ಜಾರತೊಡಗಿತು. ಇದೀಗ ಭಾರತ ಮೋದಿ ನೇತೃತ್ವದಲ್ಲಿ ಇಡೀ ದೇಶವನ್ನೇ ಬಿಕರಿಗಿಟ್ಟಿದೆ. ಮತ್ತು ಇದಕ್ಕೆ ಪೂರಕವಾಗಿ ಪ್ರಜಾಸತ್ತೆಯ ಧ್ವನಿ ಉಡುಗುತ್ತಿದೆ. ಈ ದೇಶದ ಸರ್ವೋಚ್ಚ ನ್ಯಾಯಾಧೀಶರೇ ಬೀದಿಗಿಳಿದು ನ್ಯಾಯ ಕೇಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಭಾರತದ ಪ್ರಜಾಸತ್ತೆಯ ಅಡಿಗಲ್ಲು ಗಟ್ಟಿಯಾಗಿರುವ ಕಾರಣದಿಂದಾಗಿ ಅದರ ಮೇಲ್ಮೈಗೆ ಕೆಲವೊಮ್ಮೆ ಧಕ್ಕೆಯಾಗಿದೆಯಾದರೂ, ಬುಡಕ್ಕೆ ಹಾನಿಯಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಸ್ಥಿತಿ ಭಿನ್ನವಾಗಿದೆ. ಪ್ರಜಾಸತ್ತೆ ಋಣಾತ್ಮಕ ಕಾರಣಗಳಿಗಾಗಿ ವಿಶ್ವದ ಮುಂದೆ ಚರ್ಚೆಗೀಡಾಗುತ್ತಿದೆ. ಈ ಬಗ್ಗೆ ಸ್ವತಃ ಬಿಜೆಪಿಯ ಹಿರಿಯ ನಾಯಕರಾಗಿದ್ದ ಎಲ್. ಕೆ. ಅಡ್ವಾಣಿಯವರೇ ಈ ಹಿಂದೆ ಎಚ್ಚರಿಸಿದ್ದರು. ‘‘ಭಾರತ ಮುಂದೆ ತುರ್ತುಪರಿಸ್ಥಿತಿಯನ್ನು ಎದುರಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ’’ ಎಂಬ ಅವರ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿತ್ತು. ಇಂದು ಭಾರತ ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಬೇರೆ ಬೇರೆ ನೆಲೆಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೋಟು ನಿಷೇಧ ಜನರ ಪಾಲಿಗೆ ಸರಕಾರ ಘೋಷಿಸಿದ ಆರ್ಥಿಕ ತುರ್ತು ಪರಿಸ್ಥಿತಿಯಾಗಿತ್ತು. ಸಣ್ಣ ಪುಟ್ಟ ಉದ್ದಿಮೆಗಳೆಲ್ಲ ಬೀದಿ ಪಾಲಾದವು. ಬ್ಯಾಂಕುಗಳು ಜನರ ಕೈಯಲ್ಲಿದ್ದ ಹಣದ ಮೇಲೆ ನಿಯಂತ್ರಣ ಸಾಧಿಸಲು ಯಶಸ್ವಿಯಾದವು. ಬೀದಿಗಳಲ್ಲಿ ಅನೈತಿಕ ಪೊಲೀಸ್ ಸಂಸ್ಥೆಗಳ ಸಂಖ್ಯೆಗಳು ಹೆಚ್ಚಾಗಿವೆ. ಸಂವಿಧಾನಕ್ಕೆ ಪರ್ಯಾಯವಾಗಿ ಇವುಗಳು ಕಾಯಾರ್ಚರಣೆ ಮಾಡುತ್ತಿವೆ. ಹೈನುಗಾರಿಕೆ ನಡೆಸುತ್ತಿರುವ ರೈತರು ತಮ್ಮ ಹಸುವನ್ನು ಯಾರಿಗೆ ಮಾರಬೇಕು, ಯಾರಿಗೆ ಮಾರಬಾರದು ಎನ್ನುವುದನ್ನು ಈ ಅನೈತಿಕ ಪೊಲೀಸರು ತೀರ್ಮಾನಿಸುತ್ತಾರೆ ಎಂದಾದ ಮೇಲೆ ಪ್ರಜಾಸತ್ತೆಗೆ ಏನು ಅರ್ಥ ಉಳಿಯಿತು? ಒಂದು ಸಿನೆಮಾ ಬಿಡುಗಡೆಯಾಗಬೇಕಾದರೆ ಈ ಬೀದಿ ಪೊಲೀಸರ ಅನುಮತಿ ಬೇಕು. ಸೆನ್ಸಾರ್ ಬೋರ್ಡ್, ನ್ಯಾಯಾಲಯ ಹೀಗೆ ಸಂವಿಧಾನಬದ್ಧವಾದ ಎಲ್ಲ ಸಂಸ್ಥೆಗಳಿಗೆ ಅನುಮತಿ ಪಡೆದ ಬಳಿಕವೂ, ಈ ಸಂಸ್ಥೆಗಳು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಈ ಅನೈತಿಕ ಪೊಲೀಸರನ್ನು ಗೌರವಿಸಿ ಕೆಲವು ರಾಜ್ಯ ಸರಕಾರಗಳೇ ಸಿನೆಮಾಗಳಿಗೆ ನಿಷೇಧ ಹೇರುತ್ತವೆ ಎಂದಾದ ಮೇಲೆ ಭಾರತ ನಿಧಾನಕ್ಕೆ ಪಾಕಿಸ್ತಾನವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದರ್ಥವಲ್ಲವೇ? ದಲಿತರು ಯಾವ ದಿನವನ್ನು ಆಚರಿಸಬೇಕು ಎನ್ನುವುದನ್ನು ಸಂಘಪರಿವಾರ ನಿರ್ಧರಿಸಬೇಕು ಎಂದಾದರೆ ಇಲ್ಲಿ ನ್ಯಾಯಾಲಯ, ಪೊಲೀಸ್ ವ್ಯವಸ್ಥೆಗಳು ಇದ್ದು ಪ್ರಯೋಜನವಾದರೂ ಏನು? ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಹರಿಯಬೇಕಾದ ಅನುದಾನಗಳು ಕಪಟ ಬಾಬಾಗಳ ಜೋಳಿಗೆಗಳನ್ನು ತುಂಬುತ್ತಿವೆ. ವೈಜ್ಞಾನಿಕ ಸಂಶೋಧನೆಗಳ ಕಡೆಗೆ ಆದ್ಯತೆ ನೀಡುವ ಬದಲು ಗೋಮೂತ್ರದಲ್ಲಿ, ಸೆಗಣಿಯಲ್ಲಿ ಯಾವಯಾವ ಅಂಶಗಳಿವೆ ಎನ್ನುವುದರ ಕುರಿತಂತೆ ಸಂಶೋಧನೆ ನಡೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ರಾಜಕಾರಣಿಗಳು ಬಹಿರಂಗವಾಗಿಯೇ ವಿಜ್ಞಾನವನ್ನು ನಿರಾಕರಿಸುತ್ತಿದ್ದಾರೆ ಮಾತ್ರವಲ್ಲ, ಜನರ ಮೇಲೆ ಪುರಾಣದ ಟೊಳ್ಳುಕತೆಗಳನ್ನೇ ವಿಜ್ಞಾನವಾಗಿ ಹೇರುತ್ತಿದ್ದಾರೆ. ಸರಕಾರವನ್ನು ಆರೆಸ್ಸೆಸ್ ಮತ್ತು ಕಾರ್ಪೊರೇಟ್ ವಲಯ ನೇರವಾಗಿ ನಿಯಂತ್ರಿಸುತ್ತಿದೆ. ಇದೇ ಸಂದರ್ಭದಲ್ಲಿ ಇವಿಎಂ ಮತಯಂತ್ರದ ಕುರಿತಂತೆ ಎದ್ದಿರುವ ಅನುಮಾನಗಳು, ಪ್ರಾಮಾಣಿಕ ಚುನಾವಣೆಯ ಕುರಿತಂತೆ ಜನರು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಮೇಲಿನೆಲ್ಲ ಕಾರಣಗಳಿಂದ ಭಾರತ ವಿಶ್ವ ಪ್ರಜಾಪ್ರಭುತ್ವ ಸೂಚಿಯಲ್ಲಿ ಕುಸಿತ ಕಂಡಿದೆ.

 ಬೇರೆಲ್ಲ ಕುಸಿತಕ್ಕೆ ಹೋಲಿಸಿದರೆ, ಪ್ರಜಾಪ್ರಭುತ್ವದ ಕುಸಿತವೇ ಹೆಚ್ಚು ಅಪಾಯಕಾರಿ. ಅಭಿವೃದ್ಧಿ, ಪರಿಸರ, ಶಿಕ್ಷಣ ಇವೆಲ್ಲವೂ ಒಂದು ದೇಶದ ಹೊರ ಮೈ. ಆದರೆ ಪ್ರಜಾಸತ್ತೆ ದೇಶದ ಪ್ರಾಣ. ಅದಕ್ಕೇ ಧಕ್ಕೆ ಬಂದರೆ ಉಳಿದ ಯಾವುದೂ ಆರೋಗ್ಯದಿಂದಿರಲು ಸಾಧ್ಯವಿಲ್ಲ. ಇಂದು ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಭೂತಾನ್ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ದೇಶವಾಗಿ ಗುರುತಿಸಿಕೊಳ್ಳುತ್ತಿಲ್ಲ. ಭಾರತವನ್ನು ಆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ಬಲಪಂಥೀಯ ಶಕ್ತಿಗಳು ಯಶಸ್ವಿಯಾಗುತ್ತಿರುವುದನ್ನು ಈ ಸಮೀಕ್ಷೆ ಹೇಳುತ್ತಿದೆ. ಇದರ ವಿರುದ್ಧ ದೇಶ ಒಂದಾಗಿ ಎದ್ದು ನಿಲ್ಲದೇ ಇದ್ದರೆ, ಮುಂದೊಂದು ದಿನ ಭಾರತ ಕೇಸರಿ ಶಾಲು ಹೊದ್ದ ಪುಂಡು ಪೋಕರಿಗಳ ಕೈವಶವಾಗಲಿದೆ. ಪ್ರಜಾಪ್ರಭುತ್ವವೆನ್ನುವ ಆತ್ಮವನ್ನು ಕಳೆದುಕೊಂಡ ದಿನ ಈ ದೇಶ ಕೊಳೆಯಲು ಆರಂಭಿಸುತ್ತದೆ ಎಂಬ ಎಚ್ಚರಿಕೆ ಈ ದೇಶದ ಪ್ರತಿಯೊಬ್ಬ ಪ್ರಜೆಯೊಳಗೂ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News