ನ್ಯೂಕ್ಲಿಯರ್ ವಿಂಟರ್ ಎಂದರೇನು?

Update: 2018-02-02 06:13 GMT

ಪರಮಾಣು ಬಾಂಬ್ ಸ್ಫೋಟಗಳು ಭಯಾನಕ ಸರಣಿ ಪ್ರತಿಕ್ರಿಯೆಗಳನ್ನು ಉಂಟು ಮಾಡುತ್ತವೆ. ದಿಢೀರ್‌ನೆ ಹೊರಹೊಮ್ಮುವ ಭಾರೀ ಉಷ್ಣತೆ ಮತ್ತು ಸ್ಫೋಟದ ಪರಿಣಾಮದಿಂದಾಗಿ ಸುತ್ತುಮುತ್ತಲಿನ ಎಲ್ಲವೂ ನಾಶಗೊಳ್ಳುತ್ತವೆ. ಸ್ಫೋಟದಿಂದಾಗಿ ಸೃಷ್ಟಿಯಾಗುವ ಬೃಹತ್ ಅಣಬೆಗಳಂತಹ ಮೋಡವು ಭಾರೀ ಪ್ರಮಾಣದಲ್ಲಿ ಕಪ್ಪುಬೂದಿ ಮತ್ತು ವಿಕಿರಣ ಅವಶೇಷಗಳನ್ನು ಹರಡುತ್ತ ವಾಯುಮಂಡಲದ ಎತ್ತರಕ್ಕೆ ಸಾಗುತ್ತದೆ. ಮಳೆಯಾದಾಗ ಈ ಪೈಕಿ ಕೆಲ ಅವಶೇಷಗಳು ಭೂಮಿಗೆ ಬೀಳುತ್ತವೆ. ವಾತಾವರಣದಲ್ಲಿ ಸೇರಿರುವ ಕಪ್ಪುಮಸಿ ಮತ್ತು ಇತರ ಕಣಗಳು ಸೂರ್ಯನ ಬಿಸಿಲಿಗೆ ತಡೆಯನ್ನೊಡ್ಡಿ, ಭೂಮಿಯ ತಾಪಮಾನ ಶೂನ್ಯಕ್ಕಿಂತ ಕೆಳಗೆ ಕುಸಿಯುವಂತೆ ಮಾಡುತ್ತವೆ ಮತ್ತು ಚಳಿಗಾಲದ ವಾತಾವರಣವನ್ನು ಸೃಷ್ಟಿಸುತ್ತವೆ. ಈ ಸರಣಿ ಘಟನೆಗಳನ್ನು ನ್ಯೂಕ್ಲಿಯರ್ ವಿಂಟರ್ ಅಥವಾ ಪರಮಾಣು ಚಳಿಗಾಲ ಎಂದು ಹೆಸರಿಸಲಾಗಿದೆ. ಇದರ ಪರಿಣಾಮವಾಗಿ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ನಿಂತುಹೋಗುತ್ತದೆ ಮತ್ತು ಸಸ್ಯಸಂಕುಲವೇ ನಾಶಗೊಳ್ಳುತ್ತದೆ.

ಇಷ್ಟಾದ ಬಳಿಕ ಭೂಮಿಯಲ್ಲಿ ಆಮ್ಲಜನಕದ ಉತ್ಪತ್ತಿ ನಿಂತುಹೋಗುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಸಂಗ್ರಹಗೊಳ್ಳುತ್ತದೆ. ಭೂಮಿಯ ವಿಕಿರಣ ಸಮತೋಲನ ಮತ್ತು ತಾಪಮಾನದ ಲೆಕ್ಕಾಚಾರದಲ್ಲಿ ಏರುಪೇರಾಗುವುದರಿಂದ ಭೂ ವಿದ್ಯಮಾನಗಳಲ್ಲಿ ತೀವ್ರ ಬದಲಾವಣೆಗಳಾಗುತ್ತವೆ. ಸಕಾಲದಲ್ಲಿ ಬೀಳಬೇಕಾದ ಮಳೆ ಮಾಯವಾಗ ಬಹುದು. ಪರಮಾಣು ಚಳಿಗಾಲದ ಅವಧಿಯು ಸ್ಫೋಟ ಸಂಭವಿಸಿದ ಸ್ಥಳ, ಋತುಮಾನ ಮತ್ತು ಸ್ಫೋಟದ ತೀವ್ರತೆಯನ್ನು ಅವಲಂಬಿಸಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News