500 ಅನುಯಾಯಿಗಳ ಪುರುಷತ್ವ ಹರಣ: ಗುರ್ಮೀತ್ ಸಿಂಗ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Update: 2018-02-02 08:07 GMT

ಚಂಡೀಗಢ, ಫೆ.2: ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಹಾಗೂ ಇಬ್ಬರು ವೈದ್ಯರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಡೇರಾದೊಳಗಡೆ ಗುರ್ಮೀತ್ ನ ನೂರಾರು ಅನುಯಾಯಿಗಳ ಪುರುಷತ್ವಹರಣಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿಯನ್ನು ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಹಿಂದೆ ಇದೇ ನ್ಯಾಯಾಲಯ ಗುರ್ಮೀತ್ ನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಿತ್ತು.

ಡಾ.ಪಂಕಜ್ ಗರ್ಗ್ ಹಾಗೂ ಡಾ.ಎಂ.ಪಿ. ಸಿಂಗ್ ಸಾಮೂಹಿಕ ಪುರುಷತ್ವಹರಣ ಪ್ರಕರಣದ ಇತರ ಇಬ್ಬರು ಆರೋಪಿಗಳು. ಡೇರಾ ಮುಖ್ಯಸ್ಥನನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನೆರಡು ಮಹಿಳಾ ಅನುಯಾಯಿಗಳನ್ನು ಅತ್ಯಾಚಾರಗೈದ ಆರೋಪದ ಮೇಲೆ ಬಂಧಿಸಲಾಗಿತ್ತು.  ಗುರ್ಮೀತ್ ನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ ನಂತರ ಪಂಚಕುಲಾದಲ್ಲಿ ಭುಗಿಲೆದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಡಾ.ಎಂ.ಪಿ. ಸಿಂಗ್  ವಿರುದ್ಧ ಆರೋಪಗಳಿವೆ. ಈ ಹಿಂಸೆಯ ಸಂದರ್ಭ ಪೊಲೀಸ್ ಗೋಲಿಬಾರಿನಲ್ಲಿ 36 ಡೇರಾ ಅನುಯಾಯಿಗಳು ಮೃತಪಟ್ಟಿದ್ದರು.

ಡೇರಾದಲ್ಲಿ ಗುರ್ಮೀತ್ ನ 500ಕ್ಕೂ ಹೆಚ್ಚು ಅನುಯಾಯಿಗಳ ಪುರುಷತ್ವಹರಣ ನಡೆಸಿ ಈ ಮೂಲಕ ಅವರು ಗುರ್ಮೀತ್ ನಲ್ಲಿ ದೇವರನ್ನು ಕಾಣುತ್ತಾರೆಂಬ ಪೊಳ್ಳು ಭರವಸೆ ನೀಡಲಾಗಿತ್ತು ಎಂದು ಆರೋಪಿಸಿ 2014ರಲ್ಲಿ ಹಂಸ್ ರಾಜ್ ಚೌಹಾಣ್ ಎಂಬ ವ್ಯಕ್ತಿ ಅಪೀಲು ಸಲ್ಲಿಸಿದ್ದರು. ಇದರನ್ವಯ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಡೇರಾದ ಆಸ್ಪತ್ರೆಯಲ್ಲಿರುವ ವೈದ್ಯರು ಪುರುಷತ್ವಹರಣ ನಡೆಸಿದ್ದರೆಂದು ದೂರುದಾರ ಆರೋಪಿಸಿದ್ದರೆ, ಅನುಯಾಯಿಗಳ ಒಪ್ಪಿಗೆ ಪಡೆದೇ ಈ ಪ್ರಕ್ರಿಯೆ ನಡೆಸಲಾಗಿತ್ತೆಂದು ಡೇರಾ ಪರ ವಕೀಲರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News