ಈ ಅತ್ಯಂತ ಕೆಟ್ಟ ಅಭ್ಯಾಸಗಳು ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತವೆ...

Update: 2018-02-02 09:15 GMT

ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಬ್ಬು ಅಧಿಕ ಪ್ರಮಾಣದಲ್ಲಿ ನಮ್ಮ ಶರೀರದಲ್ಲಿ ಸಂಗ್ರಹಗೊಂಡರೆ ಅದು ಅಪಾಯಕಾರಿ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಈಗ ಗೊತ್ತಿದೆ. ಅದನ್ನು ನಿಯಂತ್ರಿಸದಿದ್ದರೆ ಹೃದ್ರೋಗ ಇತ್ಯಾದಿ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇಂದಿನ ಜೀವನಶೈಲಿ ನಮ್ಮ ಶರೀರದಲ್ಲಿ ಅಧಿಕ ಕೊಲೆಸ್ಟ್ರಾಲ್ ಸೇರಿಕೊಳ್ಳಲು ಮುಖ್ಯ ಕಾರಣವಾಗಿದೆ.

ನಮ್ಮ ರಕ್ತದಲ್ಲಿ ಅನಾರೋಗ್ಯಕರ ಕೊಬ್ಬಿನ ಮಟ್ಟ ಹೆಚ್ಚಾದಾಗ ಅದನ್ನು ವೈದ್ಯರು ‘ಹೈ ಕೊಲೆಸ್ಟ್ರಾಲ್’ ಎಂದು ಬಣ್ಣಿಸುತ್ತಾರೆ. ಇದು ಬೊಜ್ಜು, ಮಾರಣಾಂತಿಕ ಹೃದಯ ಕಾಯಿಲೆ ಮತ್ತು ಇತರ ರೋಗಗಳನ್ನು ತರುತ್ತದೆ. ಆರೋಗ್ಯಕರವಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ನಿರ್ದಿಷ್ಟ ಔಷಧಿಗಳ ಮೂಲಕ ಈ ಹೈ ಕೊಲೆಸ್ಟ್ರಾಲ್‌ನ್ನು ನಿಯಂತ್ರಣದಲ್ಲಿಡಬಹುದು. ನಿಮ್ಮ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಇದ್ದರೆ ನೀವು ತ್ಯಜಿಸಲೇಬೇಕಾದ ಕೆಲವು ಕೆಟ್ಟ ಅಭ್ಯಾಸಗಳ ಮಾಹಿತಿ ಇಲ್ಲಿದೆ.

► ಪೌಷ್ಟಿಕ ಆಹಾರದ ಕಡೆಗಣನೆ

ಎಲ್ಲ ಕೊಬ್ಬುಗಳೂ ಅನಾರೋಗ್ಯಕಾರಿಯಾಗಿವೆ ಮತ್ತು ನಮ್ಮ ದೇಹತೂಕವನ್ನು ಹೆಚ್ಚಿಸುವ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ ಎಂಬ ತಪ್ಪುಗ್ರಹಿಕೆ ಹೆಚ್ಚಿನವರಲ್ಲಿ ಮನೆಮಾಡಿದೆ. ಆದರೆ ನಮ್ಮ ಶರೀರವು ಸರಿಯಾಗಿ ಕಾರ್ಯ ನಿರ್ವಹಿಸಲು ಮತ್ತು ಅರೋಗ್ಯಕರವಾಗಿರಲು ಆರೋಗ್ಯಕರ ಕೊಬ್ಬುಗಳು ಅಗತ್ಯವಾಗಿವೆ ಎನ್ನುವುದನ್ನು ನಾವು ತಿಳಿದುಕೊಂಡಿಲ್ಲ. ಎಲ್ಲ ಕೊಬ್ಬುಗಳು ಕೆಟ್ಟದ್ದಲ್ಲ. ಉದಾಹರಣೆಗೆ ಪಿಝ್ಝಿ ಮತ್ತು ಬರ್ಗರ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಅವೊಕಾಡೊ, ತುಪ್ಪ ಮತ್ತು ತೆಂಗಿನಕಾಯಿಗಳಲ್ಲಿರುವ ಕೊಬ್ಬು ಆರೊಗ್ಯಕರವಾಗಿದೆ. ಹೀಗಾಗಿ ನಮ್ಮ ಆಹಾರದಲ್ಲಿ ಒಳ್ಳೆಯ ಕೊಬ್ಬುಗಳಿದ್ದರೆ ಸಹಜವಾಗಿಯೇ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟ ಇಳಿಯುತ್ತದೆ.

► ಕೆಂಪುಮಾಂಸದ ಅಧಿಕ ಸೇವನೆ

ನೀವು ಮಾಂಸಾಹಾರಿಗಳಾಗಿದ್ದರೆ, ಪ್ರತಿದಿನವೂ ಮಾಂಸವನ್ನು ತಿನ್ನುತ್ತಿದ್ದರೆ ಮತ್ತು ನಿಮ್ಮ ದೇಹದಲ್ಲಿ ಹೈ ಕೊಲೆಸ್ಟ್ರಾಲ್ ಇದ್ದರೆ ನೀವು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಮಟನ್‌ನಂತಹ ಕೆಂಪು ಮಾಂಸದ ಅತಿಯಾದ ಸೇವನೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದಲಾಗಿ ಆರೋಗ್ಯಕರವಾದ ಚಿಕನ್‌ನಂತಹ ಬಿಳಿಮಾಂಸ ಮತ್ತು ಸಮುದ್ರ ಉತ್ಪನ್ನಗಳನ್ನು ಸೇವಿಸಿ.

► ಕಡಿಮೆ ಸೋಡಿಯಂ ಸೇವನೆ

ಕ್ಯಾಲ್ಸಿಯಂ ನಮ್ಮ ದೇಹವು ಆರೋಗ್ಯಯುತವಾಗರಲು, ವಿಶೇಷವಾಗಿ ಮೂಳೆಗಳು ಗಟ್ಟಿಗೊಳ್ಳಲು ಮತ್ತು ಮಿದುಳಿನ ಜೀವಕೋಶಗಳ ಬೆಳವಣಿಗೆಯಲ್ಲಿ ಅತ್ಯಂತ ಅಗತ್ಯ ಖನಿಜವಾಗಿದೆ. ಜೊತೆಗೆ ಅದು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲೂ ನೆರವಾಗುತ್ತದೆ ಎನ್ನುವುದನ್ನು ಹಲವಾರು ಸಂಶೋಧನಾ ಅಧ್ಯಯನಗಳು ಸಾಬೀತುಗೊಳಿಸಿವೆ. ಹೀಗಾಗಿ ಡೇರಿ ಉತ್ಪನ್ನಗಳು, ಪಾಲಕ್, ಮೊಟ್ಟೆ ಇತ್ಯಾದಿಗಳಂತಹ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ಸೇವಿಸದಿದ್ದರೆ ನಮ್ಮ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.

► ಬೇಕರಿ ಖಾದ್ಯಗಳ ಸೇವನೆ

ನಮ್ಮಲ್ಲಿ ಹೆಚ್ಚಿನವರು ಕೇಕ್, ಕುಕೀಸ್, ಬಿಳಿಯ ಬ್ರೆಡ್‌ನಂತಹ ಆಹಾರಗಳನ್ನು ಹೆಚ್ಚು ಇಷ್ಟಪಡುತ್ತೇವೆ. ಇವೆಲ್ಲವೂ ಅಧಿಕ ಪ್ರಮಾಣದಲ್ಲಿ ಯೀಸ್ಟ್, ಸಕ್ಕರೆ ಮತ್ತು ಇತರ ಸಂಸ್ಕರಿತ ಪದಾರ್ಥಗಳನ್ನು ಬಳಸಿ ಸಿದ್ಧಗೊಳಿಸಲಾದ ಜನಪ್ರಿಯ ಬೇಕರಿ ಆಹಾರಗಳಾಗಿವೆ. ಇವು ನಮ್ಮ ಆರೋಗ್ಯಕ್ಕೆ, ವಿಶೇಷವಾಗಿ ನಾವು ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದರೆ ಅತ್ಯಂತ ಅಪಾಯಕಾರಿಯಾಗಿವೆ. ಬೇಕರಿ ಉತ್ಪನ್ನಗಳು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

► ಕಡಿಮೆ ನಾರು ಇರುವ ಆಹಾರ ಸೇವನೆ

ಪ್ರೋಟಿನ್, ಆರೋಗ್ಯಕರ ಕೊಬ್ಬು, ಖನಿಜ ಇತ್ಯಾದಿಗಳಂತಹ ಅಗತ್ಯ ಪೋಷಕಾಂಶ ಗಳ ಜೊತೆಗೆ ನಾರು ಕೂಡ ನಾವು ಸೇವಿಸುವ ಆಹಾರ ಆರೋಗ್ಯಕರವಾಗಿರಲು ಅಗತ್ಯವಾಗಿದೆ. ನಾರು ಅಧಿಕ ಕೊಲೆಸ್ಟ್ರಾಲ್‌ನಿಂದ ಅಪಧಮನಿಗಳಲ್ಲಿ ಪಾಚಿ ಸಂಗ್ರಹವನ್ನುನಿವಾರಿಸುವುದರಿಂದ ಅವು ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ವ್ಯಕ್ತಿಗಳಿಗೆ ವಿಶೇಷ ಉಪಕಾರಿಯಾಗಿವೆ. ಹೀಗಾಗಿ ಮೊಳಕೆ ಕಾಳು,ಹಣ್ಣು ಮತ್ತು ಹಸಿರು ಎಲೆಗಳ ತರಕಾರಿಗಳಂತಹ ಸಮೃದ್ಧ ನಾರು ಹೊಂದಿರುವ ಆಹಾರ ಸೇವನೆ ಮುಖ್ಯವಾಗುತ್ತದೆ.

► ಅತಿಯಾದ ಮದ್ಯಪಾನ

ನಿಯಮಿತವಾಗಿ ಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಅತ್ಯಂತ ಕೆಟ್ಟದ್ದು ಎನ್ನುವದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಈ ದುಶ್ಚಟವು ಮಾನಸಿಕ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಮದ್ಯವು ಕೆಟ್ಟ ಕೊಬ್ಬುಗಳನ್ನು ಒಳಗೊಂಡಿರುವುದರಿಂದ ಕೆಲವು ದಿನಗಳಿಗೊಮ್ಮೆ ಸೇವಿಸಿದರೂ ಅದು ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ.

► ವ್ಯಾಯಾಮ ಮಾಡದಿರುವುದು

ಅಧಿಕ ಕೊಲೆಸ್ಟ್ರಾಲ್ ಮತ್ತು ಬೊಜ್ಜುದೇಹ ಜೊತೆಜೊತೆಯಾಗಿಯೇ ಸಾಗುವ ಜೀವನಶೈಲಿ ಕಾಯಿಲೆಗಳಾಗಿವೆ. ಅಧಿಕ ಕೊಲೆಸ್ಟ್ರಾಲ್ ತೂಕ ಹೆಚ್ಚಳಕ್ಕೆ ಮತ್ತು ತೂಕ ಹೆಚ್ಚಳ ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತವೆ. ಹೀಗಾಗಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಬೇಕೆಂದರೆ ದೇಹದ ತೂಕ ಮತ್ತು ಕೊಬ್ಬನ್ನು ಕರಗಿಸಲು ವೈದ್ಯರ ಸಲಹೆ ಪಡೆದುಕೊಂಡು ಕಠಿಣ ಪಥ್ಯದೊಂದಿಗೆ ವ್ಯಾಯಾಮವನ್ನು ಮಾಡಲೇಬೇಕು.

► ಬಾದಾಮಿಯಂತಹ ಬೀಜಗಳನ್ನು ತಿನ್ನದಿರುವುದು

 ನಿಮಗೆ ಅಧಿಕ ಕೊಲೆಸ್ಟ್ರಾಲ್ ಇರಲಿ, ಇಲ್ಲದಿರಲಿ. ಬಾದಾಮಿ, ಅಕ್ರೋಟ್‌ಗಳಂತಹ ಪದಾರ್ಥಗಳನ್ನು ನಿಯಮಿತವಾಗಿ ತಿನ್ನುವುದರಿಂದ ಒಟ್ಟು ದೇಹಾರೋಗ್ಯವನ್ನು ಸಾಕಷ್ಟು ಸುಧಾರಿಸಿಕೊಳ್ಳಬಹುದು. ಇವು ಸ್ಟೆರಾಲ್‌ಗಳನ್ನು ಒಳಗೊಂಡಿವೆ ಮತ್ತು ಈ ಸ್ಟೆರಾಲ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ತಗ್ಗಿಸುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ. ಹೀಗಾಗಿ ಪ್ರತಿದಿನವೂ ಸಾಕಷ್ಟು ಬಾದಾಮಿ, ಅಕ್ರೋಟ್ ಇತ್ಯಾದಿಗಳನ್ನು ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

► ಒತ್ತಡದ ಬದುಕು

ಒತ್ತಡವು ಹಲವಾರು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದು ತಲೆನೋವಿನಿಂದ ಹಿಡಿದು ಕ್ಯಾನ್ಸರ್‌ನಂತಹ ಹಲವಾರು ರೋಗಗಳನ್ನುಂಟು ಮಾಡುತ್ತದೆ. ಒತ್ತಡದಿಂದಾಗಿ ದೇಹದಲ್ಲಿಯ ಕಾರ್ಟಿಸಾಲ್ ಮಟ್ಟವು ಹೆಚ್ಚುತ್ತದೆ ಮತ್ತು ಇದರಿಂದ ಕೊಲೆಸ್ಟ್ರಾಲ್ ಮಟ್ಟ ಇನ್ನಷ್ಟು ಏರುತ್ತದೆ. ಹೀಗಾಗಿ ಒತ್ತಡವನ್ನು ನಿವಾರಿಸುವುದನ್ನು ಕಲಿತರೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News