ಇವು ಭಾರತ ಕಂಡ ಅತ್ಯಂತ ಕುರೂಪಿ ಕಾರುಗಳು: ಮಾರುತಿ ಮತ್ತು ಮಹೀಂದ್ರ ಕೂಡ ಇದರಲ್ಲಿವೆ!

Update: 2018-02-02 10:28 GMT

ನೀವು ಖರೀದಿಸುವ ಕಾರು ಇತರ ಪ್ರಯೋಜನಗಳ ಜೊತೆಗೆ ಸುಂದರವೂ ಆಗಿರಬೇಕು ಎನ್ನುವುದು ಮುಖ್ಯವಾಗಿದೆ. ನೀವು ಅದರ ಆಕಾರವನ್ನು ಇಷ್ಟಪಡಬಹುದು, ಆದರೆ ನಿಮ್ಮ ಸ್ನೇಹಿತರು ದ್ವೇಷಿಸಬಹುದು. ಆದರೆ ಸುಂದರವಾಗಿದೆ ಎಂದು ಯಾರೊಬ್ಬರೂ ಹೇಳದ ಕಾರುಗಳನ್ನೂ ಈ ದೇಶವು ಕಂಡಿದೆ. ಈ ಕಾರುಗಳ ವಿನ್ಯಾಸ ಅದನ್ನು ರೂಪಿಸಿದವರಿಗೆ ಹೇಗೆ ತೃಪ್ತಿಯನ್ನು ನೀಡಿತ್ತು ಎನ್ನುವುದು ನಿಜಕ್ಕೂ ಅಚ್ಚರಿಯೇ ಆಗಿದೆ.

ಇಲ್ಲಿವೆ ಭಾರತವು ಕಂಡ ಅತ್ಯಂತ ಕುರೂಪಿ ಕಾರುಗಳು....

► ಸಿಪಾನಿ ಡಾಲ್ಫಿನ್

1982-1990ರ ಅವಧಿಯಲ್ಲಿ ಮಾರುಕಟ್ಟೆಯಲ್ಲಿದ್ದ ಈ ಕಾರನ್ನು ಕರ್ನಾಟಕದ ಸಿಪಾನಿ ಕಂಪನಿಯು ತಯಾರಿಸಿತ್ತು. ಅದು ತ್ರಿಚಕ್ರ ವಾಹನ ರಿಲಯಂಟ್ ರಾಬಿನ್‌ನ್ನು ಆಧರಿಸಿ ಬಾದಲ್‌ನಂತಹ ಕಾರನ್ನು ತಯಾರಿಸಿದ್ದು, ನಂತರ ಡಾಲ್ಫಿನ್‌ನ ರೂಪವನ್ನು ಪಡೆದಿತ್ತು. 848 ಸಿಸಿ, ನಾಲ್ಕು ಸಿಲಿಂಡರ್‌ಗಳ ಇಂಜಿನ್ ಇದ್ದ ಈ ಕಾರು ನಾಲ್ಕು ಗೇರ್‌ಗಳನ್ನು ಮತ್ತು ರಿಯರ್ ವ್ಹೀಲ್ ಡ್ರೈವ್ ಹೊಂದಿತ್ತು. ಆದರೆ 1983ರಲ್ಲಿ ಮಾರುತಿ ತನ್ನ 800 ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಟ್ಟಾಗ ಸಿಪಾನಿ ಡಾಲ್ಫಿನ್ ಬದಲಿಗೆ ಮೊಂಟಾನಾ ಕಾರನ್ನು ಬಿಡುಗಡೆಗೊಳಿಸಿತ್ತು. ಅದು ಅಂತಿಮವಾಗಿ ಮಾರುತಿ-800ನ ಎದುರು ಸೋತು 1990ರಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿತ್ತು.

► ಸ್ಯಾನ್ ಸ್ಟಾರ್ಮ್

ಸ್ಯಾನ್ ಸ್ಟಾರ್ಮ್ ಸ್ಟಾಂಡರ್ಡ್ ಹೆರಾಲ್ಡ್‌ನ ಬಳಿಕ ದೇಶೀಯವಾಗಿ ಅಭಿವೃದ್ಧಿಗೊಳಿ ಸಲಾಗಿದ್ದ ಏಕೈಕ ಕನ್ವರ್ಟಿಬಲ್ ಕಾರು ಆಗಿತ್ತು. ಸ್ಪೋರ್ಟ್ಸ್ ಕಾರ್ ಆಗಿದ್ದ ಇದು ಸೀಮಿತ ಲಗೇಜ್ ಸ್ಥಳಾವಕಾಶದೊಂದಿಗೆ 1.2 ಲೀ.ಇಂಜಿನ್ ಹೊಂದಿತ್ತು. ಇದು ಎಂದಿಗೂ ಗ್ರಾಹಕರನ್ನು ಆಕರ್ಷಿಸಿರಲಿಲ್ಲ, ಆದರೆ ಆಸಕ್ತಿ ಇದ್ದವರು ಇಂದಿಗೂ ಈ ಕಾರನ್ನು ಗೋವಾದ ಸ್ಯಾನ್ ಮೋಟರ್ಸ್‌ನಿಂದ ಖರೀದಿಸಬಹುದಾಗಿದೆ.

► ಮಹೀಂದ್ರ ಕ್ವಾಂಟೊ

ಮಹೀಂದ್ರ ತನ್ನ ಕ್ವಾಂಟೊ ಕಾರನ್ನು ಹೊರತರಲು ಚಿಂತನೆ ನಡೆಸಿದ್ದಾಗ ಸಂಕೀರ್ಣ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ)ಗಳು ಆಗ ತಾನೇ ಜನರನ್ನು ಆಕರ್ಷಿಸತೊಡಗಿದ್ದವು. ಆದರೆ ಮಹೀಂದ್ರ ನಿಜಕ್ಕೂ ಜನರ ಈ ಪ್ರವೃತ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತೆರಿಗೆ ಲಾಭವನ್ನು ಪಡೆಯಲು ಝೈಲೊದ ಗಾತ್ರವನ್ನು ನಾಲ್ಕು ಮೀಟರ್‌ಗೂ ಕಡಿಮೆಗೊಳಿಸಿದ್ದ ರೀತಿಯಲ್ಲಿ ಕ್ವಾಂಟೊ ಕಂಡು ಬರುತ್ತಿತ್ತು. ಅದರ ವಿನ್ಯಾಸವು ಅವಸರದಲ್ಲಿ ಕೊನೆಗೊಳಿಸಿದ್ದಂತಿದ್ದು, ಕಾರಿನ ಹಿಂಬದಿಯನ್ನು ಕತ್ತರಿಸಿ ತೆಗೆದಂತೆ ಕಾಣುತ್ತಿತ್ತು. ಮಾರುಕಟ್ಟೆಗೆ ಬಂದ ಹಾಗೆ ಈ ಕಾರು ಮರಳಿ ತವರು ಸೇರಿಕೊಂಡಿತ್ತು.

► ಮಾರುತಿ ಝೆನ್

ಭಾರತವು ಆಗ ತಾನೇ ಸರಳ ರೇಖೆಗಳಿಂದ ಹೆಚ್ಚು ವಕ್ರ ವಿನ್ಯಾಸಗಳಿರುವ ಕಾರುಗಳನ್ನು ರೂಪಿಸುವ ಮೂಲಕ ಆಗ ತಾನೇ ಆಧುನಿಕ ನೋಟದ ಕಾರುಗಳ ಯುಗವನ್ನು ಪ್ರವೇಶಿಸಿತ್ತು. ಮಾರುತಿ ಬಹುಶಃ ಝೆನ್ ಕಾರನ್ನು ಕ್ಲಾಸಿಕ್‌ನ ವಿನ್ಯಾಸದಲ್ಲಿ ಮರುವಿನ್ಯಾಸಗೊಳಿಸಿ ಎರಡು ದೋಣಿಗಳಲ್ಲಿ ಪ್ರಯಾಣಿಸಲು ಯೋಚಿಸಿದ್ದಿರಬೇಕು. ಆದರೆ ಅಂತಿಮವಾಗಿ ಹೊರಬಿದ್ದಿದ್ದ ಈ ಉತ್ಪನ್ನ ಬಹುಶಃ ಅತ್ಯಂತ ಕೆಟ್ಟ ವಾಹನ ದುಃಸ್ವಪ್ನವಾಗಿತ್ತು.

► ಪ್ರೀಮಿಯರ್ 118 ಎನ್‌ಇ

118 ಎನ್‌ಇ ಭಾರತದಲ್ಲಿ ಪ್ರೀಮಿಯರ್ ಕಂಪನಿಯ ಪದ್ಮಿನಿಯ ಮುಂದಿನ ಅವತಾರವಾಗಿತ್ತು. ಆದರೆ ಇದು ಕುರೂಪಿ ಕಾರು ಆಗಿತ್ತೆನ್ನುವುದನ್ನು ಕೆಲವರು ಒಪ್ಪುವುದಿಲ್ಲವಾದರೂ ಅದು ನಿಜಕ್ಕೂ ಹಾಗೆಯೇ ಇತ್ತು. ಪದ್ಮಿನಿಗೆ ಹೋಲಿಸಿದರೆ ಇನ್ನಷ್ಟು ಶಾರ್ಪ್ ವಿನ್ಯಾಸ ಹೊಂದಿದ್ದ ಅದಕ್ಕೆ ಕಡು ಕಪ್ಪುಬಣ್ಣದ ಚೌಕಾಕೃತಿಯ ಗ್ರಿಲ್, ಮುಂದೆ ಮತ್ತು ಹಿಂಬದಿಗಳಲ್ಲಿ ಕಪ್ಪು ಬಣ್ಣದ ಬಂಪರ್‌ಗಳನ್ನು ಅಳವಡಿಸಿದ್ದು, ಗೋಲಾಕಾರದ ಹೆಡ್‌ಲ್ಯಾಂಪ್‌ಗಳು ಚೌಕಾಕಾರಕ್ಕೆ ಬದಲಾಗಿದ್ದವು.

► ಎಚ್‌ಎಂ ವೀರ್

ಆಗಿನ ಕಾಲದಲ್ಲಿ ಜನಪ್ರಿಯವಾಗಿದ್ದ ತನ್ನ ಅಂಬಾಸಿಡರ್ ಕಾರಿನಲ್ಲಿ ಬದಲಾವಣೆಗಳನ್ನು ತರಲು ಹಿಂದುಸ್ಥಾನ ಮೋಟರ್ಸ್(ಎಚ್‌ಎಂ) ಪ್ರಯತ್ನಿಸಿದ್ದು, ಪಿಕ್-ಅಪ್ ಟ್ರಕ್ ಇವುಗಳಲ್ಲಿ ಒಂದಾಗಿತ್ತು. ಆರಂಭದಲ್ಲಿ ಎಚ್‌ಎಂ ವೀರ್‌ನ್ನು ಪಶ್ಚಿಮ ಬಂಗಾಳದಲ್ಲಿ ಮತ್ತು ನಂತರ ಇಡೀ ದೇಶಾದ್ಯಂತ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಈ ವಾಹನ ಅಂಬಾಸಿಡರ್ ಕಾರನ್ನು ಅದರ ಮನಸ್ಸಿಗೆ ವಿರುದ್ಧವಾಗಿ ಕತ್ತರಿಸಿ ಬಲವಂತದಿಂದ ಪಿಕ್-ಅಪ್‌ನ ರೂಪವನ್ನು ನೀಡಿದ್ದಂತೆ ಕಾಣುತ್ತಿತ್ತು.

► ಹಿಂದುಸ್ಥಾನ ಟ್ರೆಕ್ಕರ್

ಅಂಬಾಸಿಡರ್ ಕಾರನ್ನು ಆಧರಿಸಿ ಟ್ರೆಕ್ಕರ್‌ನ್ನು ನಿರ್ಮಿಸಲಾಗಿದ್ದು, ಅದರ ಹಿಂದಿನ ಉದ್ದೇಶ ಜನರ ಸಾಗಾಟವಾಗಿತ್ತಾದರೂ ಅದು ಹೇಗೆ ಕಾಣಿಸುತ್ತದೆ ಮತ್ತು ಹೇಗೆ ಚಲಿಸುತ್ತದೆ ಎನ್ನುವುದರ ಕಡೆಗೆ ಹೆಚ್ಚಿನ ಗಮನ ನೀಡಿದಂತಿರಲಿಲ್ಲ. ಚೌಕಾಕಾರದ, ನಾಲ್ಕು ಬಾಗಿಲುಗಳ ಅಥವಾ ಓಪನ್ ರೂಫ್ ಮಾದರಿಯ ಎರಡು ಬಾಗಿಲುಗಳ ಬಾಡಿಯನ್ನು ಹೊಂದಿದ್ದ ಟ್ರೆಕ್ಕರ್‌ಗೆ ಪುಷ್ಪಕ್ ಎಂಬ ಸೋದರನೂ ಒಬ್ಬನಿದ್ದ.

► ಡಿಸಿ ಸ್ವಿಫ್ಟ್

ಮಿನಿ ಕೂಪರ್‌ಗೆ ಹೋಲಿಸಿದರೆ ಮಾರುತಿ ಸುಝುಕಿ ಸ್ವಿಫ್ಟ್ ಭಾರತದಲ್ಲಿ ಜನಪ್ರಿಯ ಮಾದರಿಯಾಗಿದೆ. ಸ್ವಿಫ್ಟ್ ತನ್ನ ಪೀಳಿಗೆಗಳುದ್ದಕ್ಕೂ ಜನಪ್ರಿಯತೆಯನ್ನು ಕಾಯ್ದುಕೊಂಡಿತ್ತು. ಆದರೆ ಡಿಸಿ ಡಿಸೈನ್‌ಗೆ ಬದಲಾದ ಬಳಿಕ ಅದರ ಪಾಲಿಗೆ ಎಲ್ಲವೂ ಬದಲಾಗಿಬಿಟ್ಟಿತ್ತು.

► ಡಿಸಿ ಇಂಪರೇಟರ್

ಇಲ್ಲಿದೆ ಆಘಾತಕಾರಿ ವಿಷಯ. ಡಿಸಿ ಇಂಪರೇಟರ್‌ಗೆ ಫೆರಾರಿ ಎಂರೊ ಸ್ಫೂರ್ತಿಯಾಗಿತ್ತು ಎನ್ನಲಾಗಿದೆ. ಅದು ಬುಗಟ್ಟಿ ವೆಯ್ರಿನ್‌ನ ಕೆಲವು ಮತ್ತು ಮಾರ್ಗನ್‌ನ ಕೆಲವು ಲಕ್ಷಣಗಳ ಕಲಬೆರಕೆಯಾಗಿದ್ದು, 6.2 ಲೀ.ವಿ12 ಇಂಜಿನ್ ಮತ್ತು 28 ಇಂಚ್ ಚಕ್ರಗಳನ್ನು ಹೊಂದಿತ್ತು. ಸ್ಪೋರ್ಟ್ಸ್ ಕಾರ್ ಮತ್ತು ಎಸ್‌ಯುವಿಗಳನ್ನು ಸೇರಿಸಿ ಹೊಸತಳಿಯೊಂದನ್ನು ರೂಪಿಸುವುದು ವಿನ್ಯಾಸಕರ ಪರಿಕಲ್ಪನೆಯಾಗಿತ್ತು. ಆದರೆ ಫಲಿತಾಂಶವು ಮಾತ್ರ ಕುರೂಪಿ ಕಾರಿಗೆ ಜನ್ಮ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News