'ಭೂಮಿ ಖರೀದಿಸಲು ನಕಲಿ ದಾಖಲೆ ಬಳಸುವಂತೆ ಶಾರುಖ್ ಖಾನ್ ಹೇಳಿದರು’: ಮಾಜಿ ಸಿಎ ಆರೋಪ

Update: 2018-02-02 14:56 GMT

 ಮುಂಬೈ, ಫೆ. 2: ಭೂಮಿ ಖರೀದಿಸಲು ನಕಲಿ ದಾಖಲೆಗಳನ್ನು ಬಳಸಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

 ಶಾರುಖ್ ಖಾನ್ ಅವರ ಸೂಚನೆ ಹಿನ್ನೆಲೆಯಲ್ಲಿ ತಾನು ಅಲಿಬಾಗ್ ಭೂಮಿ ಖರೀದಿಸಲು ನಕಲಿ ದಾಖಲೆಗಳನ್ನು ಬಳಸಿದೆ ಎಂದು ನಟನ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಮೋರೇಶ್ವರ್ ಅಜ್‌ಗಾಂವ್ಕರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೃಷಿಗೆಂದು ಭೂಮಿ ಖರೀದಿಸಿರುವ ಶಾರುಖ್ ಖಾನ್ ಅದರಲ್ಲಿ ಕೃಷಿ ಮಾಡದೆ, ಸೂಪರ್ ಲಕ್ಸುರಿ ಬಂಗಲೆ ಕಟ್ಟಿಸಿದ್ದರು. ಕರಾವಳಿ ಸಂರಕ್ಷಣೆ ನಿಯಮಗಳನ್ನು ಕೂಡ ಶಾರುಖ್ ಖಾನ್ ಉಲ್ಲಂಘಿಸಿದ್ದಾರೆ ಎಂದು ಕೂಡ ಅಧಿಕಾರಿಗಳು ಆರೋಪಿಸಿದ್ದಾರೆ.

ಬಂಗಲೆ ಅಲ್ಲದೆ, ಖಾಸಗಿ ಹೆಲಿಪ್ಯಾಡ್ ಹಾಗೂ ಈಜುಕೊಳ ನಿರ್ಮಿಸಲಾಗಿದೆ. ಶಾರುಖ್ ಖಾನ್‌ನ ಸೂಚನೆ ಮೇರೆಗೆ ತಾನು ಕಾರ್ಯ ನಿರ್ವಹಿಸಿದೆ ಎಂದು 90 ವರ್ಷದ ಅಜ್‌ಗಾಂವ್ಕರ್ ಒಪ್ಪಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೋಂದಣಿ ಮಾಡದ ಮುನ್ನ ಶಾರುಕ್ ಖಾನ್‌ರ ದೆಜಾ ವು ಫಾರ್ಮ್ಸ್ ಕಂಪೆನಿ ಬಂಗಲೆಗೆ 16 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಆದಾಗ್ಯೂ, ಬಂಗಲೆಗೆ 50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಂದಾಜಿಸಿದೆ. ಬಂಗಲೆಗೆ ವೆಚ್ಚ ಮಾಡಲಾದ ಮೊತ್ತ ಹಾಗೂ ಹಣದ ಮೂಲದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಇಲಾಖೆ ಹೇಳಿದೆ.

ಅತ್ಯಗತ್ಯದ ದಾಖಲೆಗಳು, ಬ್ಯಾಂಕ್ ಖಾತೆ ವಿವರ, ಕಂಪೆನಿಯ ಹಣಕಾಸು ವರ್ಗಾವಣೆ ಮೊದಲಾದವುಗಳನ್ನು ದೇಜಾ ವು ಫಾರ್ಮ್ಸ್‌ನಿಂದ ಕೋರಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News