ಪಕೋಡಾ ಬಜೆಟ್

Update: 2018-02-03 04:22 GMT

ನರೇಂದ್ರ ಮೋದಿಯವರ ಆರ್ಥಿಕ ನೀತಿಯಿಂದ ಗ್ರಾಮೀಣ ಭಾಗ ತೀವ್ರ ಅಸಮಾಧಾನ ಹೊಂದಿದೆ ಎನ್ನುವ ಅಂಶ ಕಳೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗಿತ್ತು. ನಗರ ಪ್ರದೇಶ ಬಿಜೆಪಿಗೆ ಅಂಟಿಕೊಂಡಿತ್ತಾದರೂ, ಗ್ರಾಮೀಣ ಗುಜರಾತ್ ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ತಿರುಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಭಾರತವೆಂದರೆ ನಗರವಷ್ಟೇ ಅಲ್ಲ ಎನ್ನುವ ವಾಸ್ತವವನ್ನು ಮೋದಿ ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳುತ್ತದೆ ಎಂದು ತಜ್ಞರು ಭಾವಿಸಿದ್ದರು. ವಿತ್ತ ಮಂತ್ರಿ ಅರುಣ್ ಜೇಟ್ಲಿಯವರು ಫೆಬ್ರವರಿ 1ರಂದು ಮಂಡಿಸಿದ 2018-19ರ ಸಾಲಿನ ಕೇಂದ್ರದ ಬಜೆಟ್‌ನ್ನು ಸರಕಾರ ಗ್ರಾಮೀಣ ಪರ, ರೈತರ ಪರ ಎಂಬ ಹೆಸರಿನಲ್ಲಿ ಮಂಡಿಸಿದ್ದು ಬಹುಶಃ ಇದೇ ಕಾರಣಕ್ಕೆ.

ಆದರೆ ಬಜೆಟ್‌ನ ಒಳವಿವರಗಳನ್ನು ನೋಡುತ್ತಾ ಹೋದಂತೆ ಮೋದಿ-ಜೇಟ್ಲಿ ಈ ದೇಶದ ಜನರನ್ನು ಮತ್ತೊಮ್ಮೆ ಮುಠ್ಠಾಳರನ್ನಾಗಿಸಿ ದ್ರೋಹ ಬಗೆದಿರುವುದು ಸ್ಪಷ್ಟವಾಗುತ್ತದೆ. ಈ ವರ್ಷ 24 ಲಕ್ಷ ಕೋಟಿಯಷ್ಟು ಹಣವನ್ನು ವೆಚ್ಚ ಮಾಡುವುದಾಗಿ ಈ ಬಜೆಟ್ ಹೇಳುತ್ತದೆ. ಇದು ಕಳೆದ ವರ್ಷಕ್ಕಿಂತ ಶೇ.9ರಷ್ಟು ಹೆಚ್ಚು. ಆದರೆ ಬಜೆಟ್‌ನಲ್ಲಿ ಅದು ಪ್ರಸ್ತಾಪ ಮಾಡಿರುವ ಯೋಜನೆಗಳ ವೆಚ್ಚವನ್ನೆಲ್ಲಾ ಸೇರಿಸಿದರೆ ಆ ಯೋಜನೆಗಳನ್ನು ಜಾರಿ ಮಾಡಲು ಕನಿಷ್ಠ ಇದರ ಎರಡು ಪಟ್ಟು ಹೆಚ್ಚು ಮೊತ್ತದ ಅಗತ್ಯವಿದೆ. ಆದರೆ ಈ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಮೋದಿಯವರ ಜನವಿರೋಧಿ ನೋಟು ನಿಷೇಧ ಮತ್ತು ಜಿಎಸ್‌ಟಿ ನೀತಿಗಳಿಂದಾಗಿ, ಭಾರತದ ಒಟ್ಟಾರೆ ಆರ್ಥಿಕ ಬೆಳವಣಿಗೆಯ ದರವು ಹೋದವರ್ಷಕ್ಕಿಂತ ಕಡಿಮೆಯಾಗಿದೆ. ಆರ್ಥಿಕ ಬೆಳವಣಿಗೆ ದರ ಕಳೆದ ವರ್ಷಕ್ಕಿಂತ ಕಡಿಮೆ ಇದ್ದಾಗ, ತೆರಿಗೆ ಸಂಗ್ರಹ ಪ್ರಮಾಣ ಕಳೆದ ವರ್ಷಕ್ಕಿಂತ ಹೇಗೆ ಹೆಚ್ಚಾಗಬಲ್ಲದು? ಅದರ ನಡುವೆಯೂ ಬಜೆಟ್‌ನ ವೆಚ್ಚಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಎರಡು ದಾರಿಗಳಿವೆ. ಒಂದು, ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕುವುದು. ಈ ಬಜೆಟ್‌ನಲ್ಲಿ ಅತಿ ಶ್ರೀಮಂತರ ಮೇಲೆ ಯಾವುದೇ ಹೆಚ್ಚಿನ ತೆರಿಗೆ ಹಾಕಿಲ್ಲ. ಎರಡನೆಯದು ಸಾಲ ಮಾಡುವುದು. ಆದರೆ ಸಾಲ ಮಾಡುವುದರ ಮೂಲಕ ಜನರ ಮೇಲಿನ ಭಾರವು ಪರೋಕ್ಷವಾಗಿ ಹೆಚ್ಚುತ್ತದೆ.

ಜೇಟ್ಲಿ ಬಜೆಟ್ 6 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದೆ. ಆದರೆ ಬಜೆಟ್ ಭಾಷಣದಲ್ಲಿ ಜೇಟ್ಲಿಯವರು ಮಾಡಿರುವ ಘೋಷಣೆಯನ್ನು ಜಾರಿಗೆ ತರಲು ಏನಿಲ್ಲವೆಂದರೂ 40 ಲಕ್ಷ ಕೋಟಿಯಿಂದ 50 ಲಕ್ಷ ಕೋಟಿ ರೂಪಾಯಿಗಳು ಈ ಸಾಲಿನಲ್ಲೇ ಬೇಕಾಗುತ್ತದೆ. ಅಷ್ಟು ತೆರಿಗೆ ಸಂಗ್ರಹವೂ ಇಲ್ಲ. ಸಾಲವೂ ಇಲ್ಲ, ಎಂದರೆ ಆ ಯೋಜನೆಗಳು ಜಾರಿಯಾಗುವುದಾದರೂ ಹೇಗೆ? ಹೀಗಾಗಿ ಇದು ಸಂಪನ್ಮೂಲವೇ ಇಲ್ಲದೆ ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಜುಮ್ಲಾ ಬಜೆಟ್ ಇದಾಗಿದೆ.

ಉದಾಹರಣೆಗೆ ರೈತರಿಗೆ ಉತ್ಪಾದನಾ ವೆಚ್ಚದ ಜೊತೆಗೆ ಮತ್ತು ಅದರ ಶೇ.50ರಷ್ಟು ಮೊತ್ತವನ್ನು ಸೇರಿಸಿ ಬೆಂಬಲದರವನ್ನು ಪಾವತಿಸಲಾಗುವುದು ಎಂದು ಜೇಟ್ಲಿ ಬಜೆಟ್ ಹೇಳುತ್ತದೆ. ಆದರೆ ಆಳಕ್ಕೆ ಹೋಗಿ ನೋಡಿದಲ್ಲಿ ಅದಕ್ಕೆ ಎತ್ತಿಟ್ಟಿರುವುದು ಕೇವಲ 672 ಕೋಟಿ ರೂ. ಮಾತ್ರ. ಇದು ಹೋದ ವರ್ಷಕ್ಕಿಂತ ಕಡಿಮೆ! ಮೇಲಾಗಿ ಕಾಳು ಹಾಗೂ ಭತ್ತ ಉತ್ಪಾದಕರಿಗೆ ಇದು ಅನ್ವಯವಾಗುವುದಿಲ್ಲ. ಇಂತಹ ಮೋಸದ ನೀತಿಯಿಂದ 2022ರ ವೇಳೆಗೆ ರೈತನ ಆದಾಯ ದುಪ್ಪಟ್ಟು ಆಗುವುದೇ?

ಇದೇ ರೀತಿ ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಜೇಟ್ಲಿ ಬಜೆಟ್ ಜನರನ್ನು ಅಂಕಿಸಂಖ್ಯೆಗಳ ಮೋಡಿಯಲ್ಲಿಟ್ಟು ಮುಠ್ಠಾಳರನ್ನಾಗಿಸುವ ಪ್ರಯತ್ನದಲ್ಲಿ ತೊಡಗಿದೆ. ಈಗಾಗಲೇ ಗುತ್ತಿಗೆ ಮತ್ತು ತಾತ್ಕಾಲಿಕ ಉದ್ಯೋಗಗಳಲ್ಲಿರುವ ಉದ್ಯೋಗಿಗಳನ್ನು ಕಳೆದ ವರ್ಷ ಭವಿಷ್ಯ ನಿಧಿ, ಕಾರ್ಮಿಕ ವಿಮೆ ಯೋಜನೆಗಳಲ್ಲಿ ಕಡ್ಡಾಯವಾಗಿ ಭರ್ತಿ ಮಾಡಲಾಗಿದೆ. ಹೀಗಾಗಿ ಭವಿಷ್ಯ ನಿಧಿ, ವಿಮೆ, ಪಿಂಚಣಿ ಲೆಕ್ಕಾಚಾರಗಳಲ್ಲಿ 70 ಲಕ್ಷ ಹೊಸ ಸೇರ್ಪಡೆಗಳಾಗಿವೆ. ಈಗ ಮೋದಿ ಸರಕಾರ ಅದನ್ನೇ ತೋರಿಸಿ ಹೊಸದಾಗಿ 70 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎಂದು ಜನರಿಗೆ ಮೋಸ ಮಾಡುತ್ತಿದೆ. ಈ ಬಜೆಟ್‌ನಲ್ಲೂ ಅದನ್ನೇ ಪುನರುಚ್ಚರಿಸಿರುವ ಜೇಟ್ಲಿ ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುವ ಬದಲು ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಅಂದರೆ ಮೋದಿ-ಜೇಟ್ಲಿ-ಶಾ ತ್ರಿವಳಿಗಳ ಬಳಿ ಉದ್ಯೋಗ ಸೃಷ್ಟಿ ಮಾಡಲು ಪಕೋಡಾ ಮಾರುವುದನ್ನು ಬಿಟ್ಟು ಬೇರೆ ಯೋಜನೆಗಳಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಮೋಸದ ‘ಪಕೋಡಾ ಬಜೆಟ್’ನ ಅತಿ ದೊಡ್ಡ ಉದಾಹರಣೆ ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆಯೆಂಬ ಹೆಗ್ಗಳಿಕೆಯೆಂದು ಜೇಟ್ಲಿಯವರು ಪ್ರಸ್ತಾಪಿಸಿದ ಆರೋಗ್ಯ ಯೋಜನೆ. ದೇಶದ 10 ಕೋಟಿ ಕುಟುಂಬಗಳಿಗೆ ಅಂದರೆ ಅಂದಾಜು 50 ಕೋಟಿ ಜನರಿಗೆ 5 ಲಕ್ಷ ರೂಪಾಯಿಗಳಷ್ಟು ವೈದ್ಯಕೀಯ ವಿಮೆಯನ್ನು ಸರಕಾರವು ಉಚಿತವಾಗಿ ಒದಗಿಸುತ್ತದೆ ಎಂದು ಜೇಟ್ಲಿಯವರು ಈ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಸುಮಾರು 50 ಲಕ್ಷ ಕೋಟಿ ರೂ.ಯಷ್ಟು ಮೊತ್ತದ ಈ ವಿಮಾ ಯೋಜನೆಯ ವಾರ್ಷಿಕ ಪ್ರೀಮಿಯಮ್ಮೇ ಏನಿಲ್ಲವೆಂದರೂ 90,000 ಕೋಟಿ ರೂ.ಯಷ್ಟಾಗುತ್ತದೆ. ಆದರೆ ಬಜೆಟ್‌ನಲ್ಲಿ ಅದಕ್ಕಾಗಿ ತೆಗೆದಿಟ್ಟಿರುವ ಹಣ ಕೇವಲ 2,000 ಕೋಟಿ ರೂ.! ಅಂದರೆ ಪ್ರತಿ ಫಲಾನುಭವಿಗೆ ಕೇವಲ 40ರೂ. ಇದರಿಂದ ವರ್ಷಕ್ಕೆ ಒಮ್ಮೆ ಒಂದು ಕುಟುಂಬವು ಒಂದು ಕ್ರೋಸಿನ್ ಟ್ಯಾಬ್ಲೆಟ್ಟಿನ ಪಟ್ಟಿಯನ್ನು ಖರೀದಿಸಬಹುದಷ್ಟೆ.

ಇದರ ಒಳವಿವರಗಳು ಇನ್ನೂ ಆಘಾತಕಾರಿಯಾಗಿವೆ. ಹೋದ ವರ್ಷವೂ ಇದೇ ರೀತಿ ತಲಾ ಒಂದು ಲಕ್ಷ ರೂಪಾಯಿ ಉಚಿತ ವಿಮೆ ಕೊಡುವ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಎರಡು ತಿಂಗಳ ಕೆಳಗೆ ಸದನದಲ್ಲಿ ಸರಕಾರವೇ ಹೇಳಿಕೊಂಡಂತೆ ಆ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಏಕೆಂದರೆ ಅದಕ್ಕೆ ಬೇಕಾದ ತಯಾರಿಗಳೇ ಆಗಿರಲಿಲ್ಲ. ಹೀಗಿರುವಾಗ ಈ ಹೊಸ ಯೋಜನೆಯನ್ನು ಕೆಲವರು ‘ಸಾರ್ವತ್ರಿಕ ಆರೋಗ್ಯ ಯೋಜನೆ’ಯೆಂಬಂತೆ ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ ಸಾರ್ವತ್ರಿಕವಾದದ್ದೇನೂ ಇಲ್ಲ. ಮೊದಲಿಗೆ ಇದು ಎಲ್ಲಾ ರೋಗಗಳಿಗೂ ವಿಮೆ ನೀಡುವುದಿಲ್ಲ. ಎರಡನೆಯದಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗದ ಹೊರತು ಇದರ ಸೌಲಭ್ಯ ದೊರೆಯುವುದಿಲ್ಲ. ಆದರೆ ಸಾಮಾನ್ಯ ಜನರು ಮಾಡುವ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಿನ ಪಾಲು ಔಷಧಿ ಖರೀದಿಗೆ ಹೋಗುತ್ತದೆಯೇ ವಿನಃ ಹಾಸಿಗೆ ಬಾಡಿಗೆಗಲ್ಲ. ಮೂರನೆಯದಾಗಿ ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಬಡವರೆಂದು ಕಂಡುಬಂದವರಿಗೆ ಮಾತ್ರ ಅನ್ವಯವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ರಾಜ್ಯ ಸರಕಾರಗಳ ಸಮಾಲೋಚನೆಯೊಂದಿಗೆ ಜಾರಿಗೆ ತರಬೇಕಿದ್ದು, ಅದಕ್ಕೆ ಬೇಕಿರುವ ಸಾಂಸ್ಥಿಕ ರಚನೆಯ ಪ್ರಸ್ತಾಪವೂ ಸಿದ್ಧವಾಗಿಲ್ಲ. ಇವೆಲ್ಲ ಸಿದ್ಧವಾದ ಆ ನಂತರವೂ ಅಂದಾಜು 50ಲಕ್ಷ ಕೋಟಿ ರೂ.ಯಷ್ಟಾಗುವ ಈ ವಹಿವಾಟಿನ ಪ್ರಧಾನ ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳು ಮತ್ತು ವಿಮಾ ಕಂಪೆನಿಗಳೇ ಆಗಲಿವೆ.

ಏಕೆಂದರೆ ಈ ಯೋಜನೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಪುನಶ್ಚೇತನಗೊಳಿಸುವ ಬಗ್ಗೆ ಮಾತೇ ಇಲ್ಲ. ಹೀಗಾಗಿ ಜನರ ಆರೋಗ್ಯದ ಬಾಬತ್ತಿನಲ್ಲೂ ಮೋದಿ-ಜೇಟ್ಲಿ ಸರಕಾರ ಕೇವಲ ಸದ್ದನ್ನು ಮಾತ್ರ ಜನರಿಗೆ ಕೊಟ್ಟು ಸಂಪತ್ತನ್ನು ಕಾರ್ಪೊರೇಟ್ ವಿಮಾ ಮತ್ತು ಖಾಸಗಿ ಕಂಪೆನಿಗಳಿಗೆ ಸೇರಿಸುವ ಸನ್ನಾಹ ನಡೆಸಿವೆ. ಇದು ‘ಮೋದಿಯಕಾನಾಮಿಕ್ಸ್’ನ ನೈಜ ಸ್ವರೂಪ. ಈ ಪಕೋಡಾ ಬಜೆಟ್ ಅದರ ತಾಜಾ ಉದಾಹರಣೆ. ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೂ ಇಂತಹದೊಂದು ಮೋಸದ ಬಜೆಟ್‌ನ್ನು ಮಂಡಿಸಿರುವ ನರೇಂದ್ರ ಮೋದಿ ಮುಂದಿನ ಚುನಾವಣೆಯನ್ನೂ ಸುಳ್ಳುಗಳ ಮೂಲಕವೇ ಗೆಲ್ಲುವ ಆತ್ಮವಿಶ್ವಾಸ ಹೊಂದಿದಂತಿದೆ. ಅಥವಾ ಇವಿಎಂ ಕೈ ಬಿಡಲಾರದು ಎಂಬ ನಂಬಿಕೆಯಿಂದ ಇಂತಹದೊಂದು ಪಕೋಡಾ ಬಜೆಟ್‌ನ್ನು ಸರಕಾರ ಮಂಡಿಸಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News