ದಾಳಿಂಬೆಯ ಈ ಆರೋಗ್ಯ ಲಾಭಗಳನ್ನು ನೀವು ತಿಳಿದಿರಲೇಬೇಕು...

Update: 2018-02-03 10:20 GMT

ಸಿಹಿಯಾದ ಬೀಜಗಳನ್ನು ಹೊಂದಿರುವ ದಾಳಿಂಬೆಯನ್ನು ಇಷ್ಟಪಡದವರಿಲ್ಲ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್,ಉರಿಯೂತದಂತಹ ವಿವಿಧ ಸಮಸ್ಯೆಗಳನ್ನು ತಡೆಯುವಲ್ಲಿ ದಾಳಿಂಬೆ ಬೀಜಗಳು ನೆರವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

 ದಾಳಿಂಬೆಯ ಬೀಜಗಳನ್ನು ಹಾಗೆಯೇ ತಿನ್ನಬಹುದು ಅಥವಾ ರಸದ ರೂಪದಲ್ಲಿಯೂ ಸೇವಿಸಬಹುದು. ಒಂದು ದಾಳಿಂಬೆಯಲ್ಲಿ ಏನಿಲ್ಲವೆಂದರೂ 600ಕ್ಕೂ ಅಧಿಕ ಬೀಜಗಳಿದ್ದು, ಸಮೃದ್ಧ ಪೋಷಕಾಂಶಗಳನ್ನು ಹೊಂದಿರುತ್ತವೆ. ಈ ಬೀಜಗಳಿಂದ ತೆಗೆಯಲಾಗುವ ಎಣ್ಣೆಯು ಶರೀರದಲ್ಲಿ ಆಂತರಿಕ ಮತ್ತು ಬಾಹ್ಯವಾಗಿ ಧನಾತ್ಮಕ ಆರೋಗ್ಯ ಪರಿಣಾಮ ಗಳನ್ನು ಬೀರುವ ಕ್ಷಮತೆಯನ್ನು ಹೊಂದಿದೆ.

 ದಾಳಿಂಬೆ ಬೀಜಗಳು ವಿಟಾಮಿನ್ ಬಿ,ಸಿ ಮತ್ತು ಕೆ ಅಂತಹ ಹಲವಾರು ವಿಟಾಮಿನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿವೆ. ವಿಟಾಮಿನ್ ಸಿ ವಯಸ್ಸಾಗುವುದರ ಲಕ್ಷಣಗಳನ್ನು ವಿಳಂಬಿಸುವಲ್ಲಿ ಮತ್ತು ಚರ್ಮದ ಉರಿಯೂತ ನಿವಾರಣೆಯಲ್ಲಿಯೂ ನೆರವಾಗುತ್ತದೆ. ಈ ಅದ್ಭುತ ಬೀಜಗಳು ನೀಡುವ ಆರೋಗ್ಯ ಲಾಭಗಳಿಲ್ಲಿವೆ.

ಸಂಧಿವಾತವನ್ನು ತಗ್ಗಿಸುತ್ತವೆ

ದಾಳಿಂಬೆ ಬೀಜಗಳು ಫ್ಲಾವೊನಾಲ್‌ಗಳೆಂದು ಕರೆಯಲಾಗುವ ಉರಿಯೂತ ನಿವಾರಕಗಳ ಉತ್ತಮ ಮೂಲವಾಗಿರುವುದರಿಂದ ಸಂಧಿವಾತ ಮತ್ತು ಕೀಲುಗಳ ನೋವನ್ನು ಕಡಿಮೆಗೊಳಿಸುತ್ತವೆ. ನೀವು ಸಂದುಗಳ ನೋವಿನಿಂದ ನರಳುತ್ತಿದ್ದರೆ ದಾಳಿಂಬೆಯನ್ನು ಆಗಾಗ್ಗೆ ತಿನ್ನುತ್ತಿರಿ.

► ಕ್ಯಾನ್ಸರ್‌ನ್ನು ತಡೆಯುತ್ತದೆ

ದಾಳಿಂಬೆ ಬೀಜಗಳು ಪ್ರೊಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತವೆ. ಅವುಗಳಲ್ಲಿಯ ಕೆಲವು ಕ್ಯಾನ್ಸರ್ ನಿಗ್ರಹ ಗುಣಗಳಿಂದಾಗಿ ಕ್ಯಾನ್ಸರ್ ಕೋಶಗಳು ಹರಡುವುದನ್ನು ತಡೆಯುತ್ತವೆ ಮತ್ತು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ.

► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ

ದಾಳಿಂಬೆ ಬೀಜಗಳು ಹೃದಯದ ಆರೋಗ್ಯಕ್ಕೆ ಉತ್ತೇಜನಕಾರಿಯಾಗಿವೆ. ಅವುಗಳಲ್ಲಿಯ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಒಳ್ಳೆಯ ಕೊಲೆಸ್ಟ್ರಾಲ್‌ನ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ ಮತ್ತು ಹಾನಿಕಾರಕ ಆಕ್ಸಿಡೈಜ್ಡ್ ಲಿಪಿಡ್‌ಗಳನ್ನು ವಿಭಜಿಸುತ್ತವೆ. ತನ್ಮೂಲಕ ಅಪಧಮನಿಗಳಲ್ಲಿ ಕೊಬ್ಬು ಶೇಖರಗೊಳ್ಳುವ ಅಪಾಯವನ್ನು ತಗ್ಗಿಸುತ್ತವೆ.

► ಮಧುಮೇಹಿಗಳಿಗೆ ಒಳ್ಳೆಯದು

ದಾಳಿಂಬೆ ಬೀಜಗಳು ಮಧುಮೇಹಿಗಳಿಗೆ ಒಳ್ಳೆಯದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಇವು ಮಧುಮೇಹ ನಿಗ್ರಹ ಗುಣಗಳನ್ನು ಹೊಂದಿರುವ ಕೆಲವು ಆ್ಯಸಿಡ್‌ಗಳನ್ನು ಒಳಗೊಂಡಿವೆ. ಈ ಬೀಜಗಳಲ್ಲಿರುವ ಸಕ್ಕರೆಯು ಟೈಪ್ 2 ಮಧುಮೇಹವನ್ನು ತಡೆಯಲು ನೆರವಾಗುವ ವಿಶಿಷ್ಟ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

► ಉರಿಯೂತದ ವಿರುದ್ಧ ಹೋರಾಡುತ್ತವೆ

ದಾಳಿಂಬೆ ಬೀಜಗಳ ಸೇವನೆಯು ಉರಿಯೂತ ಮತ್ತು ಸಂಬಂಧಿಸಿದ ಇತರ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಈ ಬೀಜಗಳು ಉರಿಯೂತವನ್ನು ಮತ್ತು ಫ್ರೀ ರ್ಯಾಡಿಕಲ್‌ಗಳು ಉಂಟು ಮಾಡುವ ಹಾನಿಯನ್ನು ತಗ್ಗಿಸುವಲ್ಲಿ ನೆರವಾಗುತ್ತವೆ ಎನ್ನುವುದನ್ನು ಅಧ್ಯಯನಗಳು ಸಿದ್ಧಗೊಳಿಸಿವೆ.

 ► ಹಲ್ಲುಗಳನ್ನು ಬಲಗೊಳಿಸುತ್ತವೆ.

ವಸಡುಗಳನ್ನು ಸದೃಢಗೊಳಿಸುವಲ್ಲಿ ಮತ್ತು ಸಡಿಲಗೊಂಡ ಹಲ್ಲುಗಳನ್ನು ಗಟ್ಟಿಯಾಗಿ ಸುವಲ್ಲಿ ದಾಳಿಂಬೆ ಬೀಜಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಇವು ಸೂಕ್ಷ್ಮಜೀವಿ ನಿಗ್ರಹ ಗುಣಗಳನ್ನು ಹೊಂದಿರುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡುತ್ತವೆ.

► ಪಚನ ಕ್ರಿಯೆಯನ್ನು ಹೆಚ್ಚಿಸುತ್ತವೆ

ಬಿ ಕಾಂಪ್ಲೆಕ್ಸ್ ವಿಟಾಮಿನ್‌ಗಳನ್ನು ಹೊಂದಿರುವ ದಾಳಿಂಬೆ ಬೀಜಗಳು ಪಚನ ಕ್ರಿಯೆಯನ್ನು ಹೆಚ್ಚಿಸುತ್ತವೆ. ಈ ವಿಟಾಮಿನ್‌ಗಳು ನಮ್ಮ ಶರೀರದಲ್ಲಿನ ಕೊಬ್ಬು, ಪ್ರೋಟಿನ್ ಮತ್ತು ಕಾರ್ಬೊಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತವೆ. ಬೀಜಗಳು ಪಚನ ಕ್ರಿಯೆಗೆ ಅಗತ್ಯವಾಗಿರುವ ನಾರನ್ನೂ ಒಳಗೊಂಡಿವೆ.

► ದೇಹದ ತೂಕ ಇಳಿಸಲು ಸಹಕಾರಿ

ದಾಳಿಂಬೆ ಬೀಜಗಳು ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತವೆ. ಅದರಲ್ಲಿಯ ನಾರಿನಂಶ ನಿಮಗೆ ತುಂಬ ಹೊತ್ತು ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಹೀಗಾಗಿ ನಡುನಡುವೆ ಏನಾದರೂ ತಿನ್ನಬೇಕು ಎಂದೆನಿಸುವುದಿಲ್ಲ. ಬೊಜ್ಜು ತಡೆಯುವಲ್ಲಿ ಮತ್ತು ಕೊಬ್ಬನ್ನು ಕರಗಿಸುವಲ್ಲಿಯೂ ಅವು ಪರಿಣಾಮಕಾರಿಯಾಗಿವೆ.

► ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ

ದಾಳಿಂಬೆ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಇವು ವಿವಿಧ ಕಾಯಿಲೆಗಳನ್ನುಂಟು ಮಾಡುವ ಮತ್ತು ನಿರೋಧಕ ಶಕ್ತಿಯನ್ನು ಕುಂದಿಸುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲವು.

► ಪುರುಷತ್ವವನ್ನು ಹೆಚ್ಚಿಸುತ್ತವೆ

ದಾಳಿಂಬೆ ಬೀಜಗಳು ರಕ್ತದೊತ್ತಡ ಮತ್ತು ಮನಃಸ್ಥಿತಿಯ ಮೇಲೆ ಧನಾತ್ಮಕ ಪರಿಣಾಮ ಗಳನ್ನು ಬೀರುತ್ತವೆ. ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ನಿಮಿರು ದೌರ್ಬಲ್ಯವನ್ನು ತಗ್ಗಿಸುವ ಜೊತೆಗೆ ಷಂಡತ್ವಕ್ಕೆ ಉತ್ತಮ ಚಿಕಿತ್ಸೆಯನ್ನು ನೀಡುತ್ತವೆ. ಟೆಸ್ಟೋಸ್ಟೆರೋನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಲೈಂಗಿಕ ವಾಂಛೆಯನ್ನೂ ಹೆಚ್ಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News