ಕಾಸ್ಗಂಜ್ ಗಲಭೆಯಲ್ಲಿ ಗುಂಡು ಹಾರಿಸಿದ್ದು ಯಾರು?

Update: 2018-02-05 04:38 GMT

ಲಕ್ನೋ, ಫೆ.4: ಗಣರಾಜ್ಯೋತ್ಸವದ ದಿನ ಕಾಸ್ಗಂಜ್ ನಲ್ಲಿ ನಡೆದ ಗಲಭೆ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಪೊಲೀಸರು ಸಂಘಪರಿವಾರ ಕಾರ್ಯಕರ್ತರು ಗನ್ ಗಳನ್ನು ಹಿಡಿದು ಮುಸ್ಲಿಮ್ ಬಾಹುಳ್ಯದ ಪ್ರದೇಶಕ್ಕೆ ತೆರಳುತ್ತಿರುವ ವಿಡಿಯೋವೊಂದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ thecitizen.in ವರದಿ ಮಾಡಿದೆ. ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ಗುಂಡು ಹಾರಿಸುತ್ತಾ ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಗುಂಪಿನಲ್ಲಿದ್ದ ಹಲವರ ಬಳಿ ದೊಣ್ಣೆಗಳನ್ನೂ ಹಿಡಿದಿದ್ದರು. ಸ್ಥಳೀಯ ಕಟ್ಟಡವೊಂದರಿಂದ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

ಕಾಸ್ಗಂಜ್ ಗಲಭೆಯಲ್ಲಿ ಓರ್ವ ಯುವಕ ಗುಂಡೇಟಿನಿಂದ ಸಾವನ್ನಪ್ಪಿದ್ದರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ದುಷ್ಕರ್ಮಿಗಳು ಹಲವು ವಾಹನಗಳು, ಅಂಗಡಿಗಳು ಹಾಗು ಮನೆಗಳಿಗೆ ಬೆಂಕಿ ಹಚ್ಚಿದ್ದರು.

ವಿಡಿಯೋದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸಂಘಪರಿವಾರದ ಕಾರ್ಯಕರ್ತರು ಬಂದೂಕಿನಿಂದ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ ಹಾಗು ಶಬ್ದವೂ ಕೇಳಿಸುತ್ತದೆ. “ಗುಂಡು ಹಾರಾಟ ನಡೆದ ಅದೇ ಸಮಯದಲ್ಲಿ ಚಂದನ್ ಗುಪ್ತಾ ಸಾವನ್ನಪ್ಪಿದ್ದರು” ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.

“ಅಲ್ಲಿ ಸುಮಾರು 50 ಯುವಕರಿದ್ದರು ಹಾಗು ಅವರಲ್ಲೊಬ್ಬರು ಮಾತ್ರ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದ. ಗುಂಪಿನಲ್ಲಿ ಇಬ್ಬರ ಬಳಿ ರಿವಾಲ್ವರ್ ಇತ್ತು. ಕೆಲವರ ಬಳಿ ದೊಣ್ಣೆಗಳಿತ್ತು. ಉಳಿದವರು ಮುಸ್ಲಿಮ್ ಬಾಹುಳ್ಯದ ಪ್ರದೇಶದೆಡೆಗೆ ಕಲ್ಲೆಸೆಯುತ್ತಿದ್ದರು. ‘ತಿರಂಗಾ ಯಾತ್ರೆ’ಯಲ್ಲಿದ್ದ ಕೆಲ ಯುವಕರ ಗಾಳಿಯಲ್ಲಿ ಗುಂಡು ಹಾರಿಸಿದರು” ಎಂದು ಪೊಲೀಸರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಷ್ಟೇ ಅಲ್ಲದೆ, “ಯುವಕರು (ತಿರಂಗಾ ಯಾತ್ರೆಯಲ್ಲಿದ್ದ) ಇನ್ನೊಂದು ಸಮುದಾಯದವರ ಜೊತೆ ವಾಗ್ವಾದಕ್ಕಿಳಿದರು. ಪೊಲೀಸರು ಮಧ್ಯಪ್ರವೇಶಿಸಿದರೂ ಯಾರೊಬ್ಬರೂ ಪೊಲೀಸರ ಮಾತಿಗೆ ಕಿವಿಗೊಡಲಿಲ್ಲ. ಈ ಸಂದರ್ಭ ಗುಂಡುಹಾರಾಟ ನಡೆಯಿತು. ನಂತರ ಯಾತ್ರೆಯಲ್ಲಿದ್ದ ಯುವಕರು ಇನ್ನೊಂದು ಸಮುದಾಯದವರ ಮೇಲೆ ಕಲ್ಲೆಸೆದರು. ಈ ಸಂದರ್ಭ ಎರಡೂ ಕಡೆಯಿಂದಲೂ ಗುಂಡಿನ ದಾಳಿ ನಡೆಯಿತು” ಎಂದು ಎಫ್ ಐಆರ್ ನಲ್ಲಿ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News