ಡಿಸ್ಟಿಲ್ಡ್ ವಾಟರ್‌ನಲ್ಲೇಕೆ ಮೀನುಗಳು ಬದುಕುವುದಿಲ್ಲ?

Update: 2018-02-04 13:35 GMT

ಮನೆಯಲ್ಲಿ ಡಿಸ್ಟಿಲ್ಡ್ ವಾಟರ್ ಅಥವಾ ಭಟ್ಟಿಯಿಳಿಸಿದ ನೀರಿನಲ್ಲಿ ಮೀನುಗಳನ್ನು ಸಾಕುವ ಗೋಜಿಗೆ ಹೋಗಬೇಡಿ, ಹಾಗೆ ಮಾಡಿದರೆ ಅವು ಸತ್ತು ಹೋಗುತ್ತವೆ. ಹೀಗೇಕೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಉತ್ತರ...

ಉದಾಹರಣೆಗೆ ತಾಜಾ ದ್ರಾಕ್ಷಿ ಹಣ್ಣೊಂದನ್ನು ಒಂದು ಗಂಟೆಯ ಕಾಲ ಡಿಸ್ಟಿಲ್ಡ್ ವಾಟರ್‌ನಲ್ಲಿಟ್ಟು ನೋಡಿ. ಅದು ಮೊದಲಿಗಿಂತ ದಪ್ಪವಾಗಿರುತ್ತದೆ. ಇದೇ ರೀತಿ ಉಪ್ಪುನೀರಿನಲ್ಲಿ ಒಂದು ಗಂಟೆ ಇಟ್ಟ ದ್ರಾಕ್ಷಿ ಹಣ್ಣು ಗಾತ್ರದಲ್ಲಿ ಕುಗ್ಗಿರುತ್ತದೆ ಮತ್ತು ಸುಕ್ಕುಗಳಿಂದ ಕೂಡಿರುತ್ತದೆ. ದ್ರಾಕ್ಷಿಯ ರಸದಲ್ಲಿ ಕರಗಿರುವ ಖನಿಜಗಳು, ಸಕ್ಕರೆ ಮತ್ತು ಇತರ ಘಟಕಗಳಿರುತ್ತವೆ. ದ್ರಾಕ್ಷಿಯ ಸಿಪ್ಪೆಯು ಅರೆಭೇದ್ಯ ಪೊರೆಯಾಗಿದ್ದು, ನೀರು ಒಸ್ಮೊಸಿಸ್ ಪ್ರಕ್ರಿಯೆಯ ಮೂಲಕ ಸಿಪ್ಪೆಯ ಮೂಲಕ ಒಳಗೆ ಸೇರುತ್ತದೆ.

ದ್ರಾಕ್ಷಿ ಹಣ್ಣನ್ನು ಡಿಸ್ಟಿಲ್ಡ್ ವಾಟರ್‌ನಲ್ಲಿಟ್ಟಾಗ ಅದರ ರಸದ ಸಾಂದ್ರತೆಯು ನೀರಿಗಿಂತ ಹೆಚ್ಚಿರುವುದರಿಂದ ಹೊರಗಡೆಯ ನೀರು ಹಣ್ಣಿನೊಳಗೆ ಸೇರಿಕೊಳ್ಳುತ್ತದೆ ಮತ್ತು ಇದೇ ಕಾರಣದಿಂದ ಅದು ದಪ್ಪವಾಗಿ ತೋರುತ್ತದೆ. ಉಪ್ಪುನೀರಿನ ವಿಷಯದಲ್ಲಿ ಇದಕ್ಕೆ ವಿರುದ್ಧವಾದುದು ನಡೆಯುತ್ತದೆ.

 ಮೀನಿನ ಚರ್ಮವು ದ್ರಾಕ್ಷಿಯ ಸಿಪ್ಪೆಯಂತಿರುತ್ತದೆ. ಮೀನು ಡಿಸ್ಟಿಲ್ಡ್ ವಾಟರ್‌ನಲ್ಲಿದ್ದರೆ ಅದರ ದೇಹದ ಲವಣತೆಯು ನೀರಿಗಿಂತ ಹೆಚ್ಚಿರುವುದರಿಂದ ಹೊರಗಿನ ನೀರು ಒಸ್ಮೊಸಿಸ್‌ನಿಂದಾಗಿ ಅದರ ದೇಹದೊಳಗೆ ಪ್ರವೇಶಿಸುತ್ತದೆ. ಹೀಗಾಗಿ ಮೀನು ಅಧಿಕ ಸಮಯ ಡಿಸ್ಟಿಲ್ಡ್ ವಾಟರ್‌ನಲ್ಲಿದ್ದರೆ ದೇಹದಲ್ಲಿನ ಅಗತ್ಯ ರಸಗಳು ದುರ್ಬಲಗೊಳ್ಳುತ್ತವೆ ಮತ್ತು ಮೀನು ಸಾಯುತ್ತದೆ. ಕ್ರಮೇಣ ಉಬ್ಬುವಿಕೆ ಜಾಸ್ತಿಯಾಗಿ ದೇಹವು ಒಡೆದು ಹೋಗಲೂಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News