ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ನಟಿಯನ್ನು ಗುಂಡಿಕ್ಕಿ ಕೊಂದರು!
ಪೇಶಾವರ,ಫೆ.4: ತಮ್ಮೊಂದಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ನಿರಾಕರಿಸಿದ ಫಶ್ತೊ ಭಾಷೆಯ ರಂಗಭೂಮಿ ನಟಿಯೊಬ್ಬಳನ್ನು ಮೂವರು ಬಂಧೂಕುದಾರಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಪಾಕಿಸ್ತಾನದ ಖೈಬರ್ ಪಖ್ತೂನ್‌ಖಾವಾ ಪ್ರಾಂತದಲ್ಲಿ ಶನಿವಾರ ನಡೆದಿದೆ.
ರಂಗಭೂಮಿ ನಟಿಯನ್ನು ಹತ್ಯೆಗೈದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಬಂಧನಕ್ಕಾಗಿ ವ್ಯಾಪಕ ಶೋಧಕಾರ್ಯಾಚರಣೆ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಶನಿವಾರ ಸಂಜೆ ನಟಿ ಸುಂಬೂಲ್‌ರ ಮನೆಗೆ ಆಗಮಿಸಿದ್ದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಮ್ಮೊಂದಿಗೆ ತೆರಳಬೇಕೆಂಬ ಅವರ ಕೋರಿಕೆಯನ್ನು ಆಕೆ ನಿರಾಕರಿಸಿದಾಗ ಅವರು ಗುಂಡಿನಮಳೆಗೆರೆದು, ಪರಾರಿಯಾದರೆಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಸಂಬೂಲ್ ಆನಂತರ ಮರ್ದಾನ್‌ನ ಮೆಡಿಕಲ್ ಕಾಂಪ್ಲೆಕ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸುಂಬೂಲ್‌ರ ಹತ್ಯಾ ಆರೋಪಿಗಳ ಪೈಕಿ ನಯೀಮ್ ಎಂಬಾತ ಪೊಲೀಸ್ ಇಲಾಖೆಯ ಮಾಜಿ ಉದ್ಯೋಗಿಯೆನ್ನಲಾಗಿದೆ. ಇನ್ನೋರ್ವ ಆರೋಪಿ ಜಹಾಂಗೀರ್ ಇತ್ತೀಚೆಗೆ ಹತ್ಯೆಯಾದ ಪಶ್ತೋ ಗಾಯಕಿ ಗ್ಝ್ಝಝಾಲ ಜಾವೇದ್‌ರ ಪತಿ ಜೆಹಾಂಗೀರ್ ಎಂದು ಪೊಲೀಸರು ತಿಳಿಸಿದ್ದಾರೆ.