ಸಮರ್ಪಕ ಸೇವೆ ನೀಡದ ರೊಬೊಟ್ ವಜಾ

Update: 2018-02-04 18:45 GMT

ಗ್ರಾಹಕರಿಗೆ ಸಮರ್ಪಕ ಸೇವೆಯನ್ನು ನೀಡದ ಸಿಬ್ಬಂದಿಗೆ ಕೆಲಸದಿಂದ ಖೊಕ್ ನೀಡುವುದು ಸಾಮಾನ್ಯ. ಆದರೆ ಲಂಡನ್‌ನ ಶಾಪ್ಪಿಂಗ್ ಮಳಿಗೆಯೊಂದ ರಲ್ಲಿ ಗ್ರಾಹಕರಿಗೆ ಸೂಕ್ತ ಸೇವೆ ಒದಗಿಸಲು ವಿಫಲವಾದ ರೊಬೊಟ್‌ನ್ನು ಆಡಳಿತ ಮಂಡಳಿ ಉದ್ಯೋಗದಿಂದ ‘ವಜಾ’ಗೊಳಿಸಿದೆ.
ಎಡಿನ್‌ಬರ್ಗ್ ನಗರದಲ್ಲಿರುವ ಮ್ಯಾರಿಗೊಟ್ಟಾ ಶಾಪ್ಪಿಂಗ್ ಮಳಿಗೆಯಲ್ಲಿ ಈ ರೊಬೊಟ್‌ನ್ನು ಕಳೆದ ವಾರ ನಿಯೋಜಿಸಲಾಗಿತ್ತು. ಮಳಿಗೆಯ ಸಿಬ್ಬಂದಿಯೂ ಸಂತಸ ದಿಂದಲೇ ಅದನ್ನು ಸ್ವಾಗತಿಸಿದ್ದರು.
ಬ್ರಿಟನ್‌ನ ಹೆರಿಯಟ್ ವಾಟ್ ವಿವಿಯ ತಜ್ಞರು ಅಭಿವೃದ್ಧಿಪಡಿಸಿರುವ ಈ ರೊಬೊಟ್‌ಗೆ ಫೆಬಿಯೊ ಎಂದು ಹೆಸರಿಡಲಾಗಿತ್ತು. ಮಳಿಗೆಗೆ ಬರುವ ಗ್ರಾಹಕರಿಗೆ ಫೆಬಿಯೊ, ‘ಹಾಯ್’ ಎಂದು ಹೇಳುತ್ತಿತ್ತಲ್ಲದೆ, ಅವರಿಗೆ ಆಹಾರದ ಸ್ಯಾಂಪಲ್‌ಗಳನ್ನು ನೀಡುತ್ತಿತ್ತು.

ಈ ರೊಬೊಟ್‌ನ ಸಾಫ್ಟ್‌ವೇರ್‌ನ್ನು ಇಂಟರ್‌ನೆಟ್ ಜೊತೆ ಸಂಪರ್ಕಿಸಲಾಗಿತ್ತು. ಆ ಮೂಲಕ ಅದು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಲಾಗಿತ್ತು. ಆದರೆ ಈ ರೊಬೊಟ್‌ಗೆ ಅದರದ್ದೇ ಆದ ಇತಿಮಿತಿಗಳಿದ್ದವು. ಫೆಬಿಯೊಗೆ ಇಡೀ ಮಳಿಗೆಯ ಸುತ್ತ ತಿರುಗಾಡಲು ಆಗುತ್ತಿರಲಿಲ್ಲ. ಹೀಗಾಗಿ ಅದಕ್ಕೆ ಗ್ರಾಹಕರು ಹುಡುಕುವ ವಸ್ತುಗಳನ್ನು ತೋರಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ. ‘‘ದುರದೃಷ್ಟವಶಾತ್ ಫ್ಯಾಬಿಯೊ ನಾವು ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯನಿರ್ವಹಿಸಲಿಲ್ಲ. ನಿಜಹೇಳುವುದಾದರೆ, ಗ್ರಾಹಕರು ಕೂಡಾ ಅದರಿಂದ ದೂರವಿರಲು ಬಯಸುತ್ತಿ ರುವಂತೆ ಕಾಣುತ್ತಿತ್ತು ’’ ಎಂದು ಈ ಶಾಪ್ಪಿಂಗ್ ಮಳಿಗೆಯ ಮ್ಯಾನೇಜರ್ ಲೂಯಿಸಾ ಮಾರ್ಗಿಯೊಟಾ ಹೇಳಿದ್ದಾರೆ.
ತನ್ನ ತಂಡ ಸೃಷ್ಟಿಸಿದ ರೊಬೊಟ್‌ಗೆ , ಮಳಿಗೆಯ ಸಿಬ್ಬಂದಿ ತೋರಿದ ಪ್ರೀತಿಯನ್ನು ಕಂಡು ತಾನು ಭಾವುಕ ನಾಗಿದ್ದೇನೆಂದು ಲ್ಯಾಬ್ ಹೆರಿಯಟ್-ವ್ಯಾಟ್ ವಿವಿಯ ನಿರ್ದೇಶಕ ಡಾ. ಒಲಿವರ್ ಲೆಮನ್ ಹೇಳಿದ್ದಾರೆ.
ಆದರೆ ಈ ಮಳಿಗೆಯ ಸಿಬ್ಬಂದಿ ಮಾತ್ರ ಫ್ಯಾಬಿಯೊನನ್ನು ತುಂಬಾನೆ ಹಚ್ಚಿಕೊಂಡಿದ್ದರಂತೆ. ‘ವಜಾ’ಗೊಂಡ ಫ್ಯಾಬಿಯೊ ರೊಬೊಟ್‌ನನ್ನು ಪ್ಯಾಕ್‌ಮಾಡಿ, ಪೆಟ್ಟಿಗೆಯಲ್ಲಿರಿಸಿದಾಗ, ಮಹಿಳಾ ಉದ್ಯೋಗಿಯೊಬ್ಬರು ದುಃಖ ತಡೆಯಲಾಗದೆ ಅತ್ತೇ ಬಿಟ್ಟರು. ಯಾಕೆಂದರೆ ಅವರೆಲ್ಲರಿಗೂ ಫ್ಯಾಬಿಯೊ ಜೊತೆ ಭಾವನಾತ್ಮಕ ಬಾಂಧವ್ಯ ಬೆಳೆದಿತ್ತು ಎಂದವರು ಹೇಳುತ್ತಾರೆ.
ಆದಾಗ್ಯೂ ಮುಂದಿನ ವರ್ಷಗಳಲ್ಲಿ ಶಾಪ್ಪಿಂಗ್ ಮಾಲ್‌ಗಳಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲ ರೊಬೊಟ್ ಒಂದನ್ನು ಸೃಷ್ಟಿಸುವುದಾಗಿ ಡಾ. ಒಲಿವರ್ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ