ಔಷಧಿಗಳನ್ನು ಸೇವಿಸುವ ಸೂಕ್ತ ವಿಧಾನ ನಿಮಗೆ ಗೊತ್ತೇ?

Update: 2018-02-05 09:34 GMT

ರವಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿ. ಅವರ ತಾಯಿ ಕೆಲ ಸಮಯದಿಂದ ರಕ್ತದೊತ್ತಡದಿಂದ ಬಳಲುತ್ತಿದ್ದು, ಅದಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದಾರೆ. ಆದರೆ ಆಗಾಗ್ಗೆ ಔಷಧಿ ಸೇವನೆಯ ಬಳಿಕ ತಲೆ ಸುತ್ತುತ್ತದೆ ಎನ್ನುವುದು ಅವರ ದೂರು. ರವಿ ತಾಯಿಯ ಸಮಸ್ಯೆಯ ಬಗ್ಗೆ ತನ್ನ ವೈದ್ಯಮಿತ್ರರಲ್ಲಿ ಚರ್ಚಿಸಿದಾಗ ಔಷಧಿಯೊಂದಿಗೆ ಪೊಟ್ಯಾಷಿಯಂ ಸಮೃದ್ಧ ಆಹಾರವನ್ನೇನಾದರೂ ಸೇವಿಸುತ್ತಿದ್ದರೆ ಅದನ್ನು ನಿಲ್ಲಿಸುವಂತೆ ಅವರು ಸೂಚಿಸಿದ್ದರು. ಹೌದು, ರವಿಯ ತಾಯಿ ರಕ್ತದೊತ್ತಡದ ಔಷಧಿಯ ಸೇವನೆಯ ಬಳಿಕ ಬಾಳೇಹಣ್ಣನ್ನು ತಿನ್ನುತ್ತಿದ್ದರು. ಬಾಳೇಹಣ್ಣು ಪೊಟ್ಯಾಷಿಯಂ ಅನ್ನು ಹೇರಳವಾಗಿ ಹೊಂದಿದೆ. ರವಿಯ ಸೂಚನೆಯಂತೆ ಔಷಧಿಯೊಂದಿಗೆ ಬಾಳೇಹಣ್ಣನ್ನು ತಿನ್ನುವುದನ್ನು ತಾಯಿ ನಿಲ್ಲಿಸಿದ್ದರು. ಇದರಿಂದಾಗಿ ಅವರ ತಲೆ ಸುತ್ತುವಿಕೆಯೂ ಗಣನೀಯವಾಗಿ ತಗ್ಗಿತ್ತು.

ನಾವು ಸೇವಿಸುವ ಆಹಾರಗಳು ನಾವು ತೆಗೆದುಕೊಳ್ಳುವ ಔಷಧಿಗಳು ಬೀರುವ ಪರಿಣಾಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆಹಾರ ಮತ್ತು ಔಷಧಿಯ ನಡುವಿನ ಕ್ರಿಯೆಯು ಔಷಧಿಯ ಕಾರ್ಯನಿರ್ವಹಣೆಗೆ ತಡೆಯೊಡ್ಡುತ್ತದೆ ಮತ್ತು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ಇದೇ ಕಾರಣದಿಂದ ವೈದ್ಯರು ಖಾಲಿ ಹೊಟ್ಟೆಯಲ್ಲಿ ಅಥವಾ ತುಂಬಿದ ಹೊಟ್ಟೆಯಲ್ಲಿ ಔಷಧಿಗಳನ್ನು ಸೇವಿಸುವಂತೆ ನಮಗೆ ಸಲಹೆಗಳನ್ನು ನೀಡುತ್ತಾರೆ ಅಥವಾ ಔಷಧಿ ಸೇವನೆಯ ಅವಧಿಯಲ್ಲಿ ಕೆಲವು ಆಹಾರಗಳನ್ನು ವರ್ಜಿಸುವಂತೆ ಸೂಚಿಸುತ್ತಾರೆ.

ಆದರೆ ಆಹಾರವು ನಾವು ಸೇವಿಸುವ ಔಷಧಿಯ ಮೇಲೆ ಪರಿಣಾಮವನ್ನು ಹೇಗೆ ಬೀರುತ್ತದೆ? ಆ ಬಗ್ಗೆ ಮಾಹಿತಿಯಿಲ್ಲಿದೆ.....

► ಖಾಲಿ ಅಥವಾ ತುಂಬಿದ ಹೊಟ್ಟೆಯಲ್ಲಿ ಔಷಧಿ ಸೇವನೆ

 ನೀವು ಖಾಲಿ ಹೊಟ್ಟೆಯಲ್ಲಿರಲಿ ಅಥವಾ ತುಂಬಿದ ಹೊಟ್ಟೆಯಲ್ಲಿರಲಿ, ಅದು ಕೆಲವು ಔಷಧಿಗಳ ಕಾರ್ಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಅದು ಔಷಧಿಗಳ ಹೀರುವಿಕೆಯನ್ನು ಬದಲಿಸಬಹುದು. ಉದಾಹರಣೆಗೆ ಥೈರಾಯ್ಡೆ ಔಷಧಿಯು ಸಂಪೂರ್ಣವಾಗಿ ಹೀರಲ್ಪಡುವಂತಾಗಲು ಅದನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕು. ಇನ್ನೊಂದೆಡೆ ಕೆಲವು ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅವು ನಿಮ್ಮ ಹೊಟ್ಟೆಯನ್ನು ಹದಗೆಡಿಸಬಹುದು. ಹೀಗಾಗಿ ಔಷಧಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ತುಂಬಿದ ಹೊಟ್ಟೆಯಲ್ಲಿ ಸೇವಿಸಬೇಕೇ ಎನ್ನುವುದನ್ನು ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.

► ಖಾಲಿ ಹೊಟ್ಟೆ ಎಂದರೆ ನಿಜವಾದ ಅರ್ಥವೇನು?

ಖಾಲಿ ಹೊಟ್ಟೆ ಎಂದರೆ ನಿಮ್ಮ ಜಠರವು ಆಹಾರದ ಜೀರ್ಣಕ್ರಿಯೆಯಲ್ಲಿ ತೊಡಗಿಕೊಂಡಿಲ್ಲ ಎಂದು ಅರ್ಥ. ಖಾಲಿ ಹೊಟ್ಟೆಯಲ್ಲಿ ಮಾತ್ರೆಯನ್ನು ಸೇವಿಸುವಂತೆ ವೈದ್ಯರು ನಿಮಗೆ ಸೂಚಿಸಿದ್ದರೆ ಆ ಕೆಲಸವನ್ನು ನೀವು ಆಹಾರ ಸೇವನೆಗೆ ಎರಡು ಗಂಟೆಗಳ ಮೊದಲು ಅಥವಾ ಎರಡು ಗಂಟೆಗಳ ಬಳಿಕ ಮಾಡಬೇಕು. ಇವೆರಡೂ ಸಂದರ್ಭಗಳಲ್ಲಿ ನಿಮ್ಮ ಹೊಟ್ಟೆಯು ಔಷಧಿಯನ್ನು ಹೀರಿಕೊಳ್ಳಲು ಸಾಕಷ್ಟು ಖಾಲಿಯಾಗಿರುತ್ತದೆ.

► ಖಾಲಿ ಹೊಟ್ಟೆಯಲ್ಲಿ ನೋವು ನಿವಾರಕಗಳ ಸೇವನೆ ಹಾನಿಕರವೇ?

ನೋವು ನಿವಾರಕಗಳನ್ನು ವಿವಿಧ ವರ್ಗಗಳಲ್ಲಿ ವಿಭಾಗಿಸಲಾಗಿದ್ದು, ಅವು ವಿಭಿನ್ನ ಕಾರ್ಯಾಚರಣೆ ವ್ಯವಸ್ಥೆಗಳನ್ನು ಹೊಂದಿವೆ. ಪ್ಯಾರಾಸಿಟಮಲ್‌ನಂತಹ ನೋವು ನಿವಾರಕಗಳು ತ್ವರಿತವಾಗಿ ಕಾರ್ಯ ನಿರ್ವಹಿಸುವಂತಾಗಲು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಆದರೆ ಇಬುಪ್ರೊಫೆನ್‌ನಂತಹ ಸ್ಟಿರಾಯ್ಡಿ ಅಲ್ಲದ ಉರಿಯೂತ ನಿವಾರಕ ಔಷಧಿಗಳನ್ನು ಏನಾದರೂ ಆಹಾರ ತಿಂದ ನಂತರವೇ ಸೇವಿಸಬೇಕು, ಇಲ್ಲದಿದ್ದರೆ ಅವು ಹೊಟ್ಟೆಯನ್ನು ಕೆಡಿಸುತ್ತವೆ.

► ನಿವಾರಿಸಬೇಕಾದ ಕೆಲವು ಆಹಾರ-ಔಷಧಿ ಅಂತರ್‌ಕ್ರಿಯೆಗಳು

ನಾವು ಏನಾದರೂ ಆಹಾರ ಸೇವಿಸಿದ್ದೇವೆಯೇ ಎನ್ನುವುದು ಔಷಧಿಗಳ ಹೀರುವಿಕೆಯ ಮೇಲೆ ಪರಿಣಾಮವನ್ನು ಬೀರುತ್ತದೆ ನಿಜ. ಆದರೆ ನಾವು ಯಾವ ಆಹಾರವನ್ನು ಸೇವಿಸುತ್ತೇವೆ ಎನ್ನುವುದೂ ಪರಿಣಾಮವನ್ನಂಟು ಮಾಡುತ್ತದೆ. ಉದಾಹರಣೆಗೆ ಆ್ಯಂಟಿಬಯಾಟಿಕ್‌ಗಳನ್ನು ಹಾಲಿನೊಂದಿಗೆ ಸೇವಿಸಿದರೆ ಆ್ಯಂಟಿಬಯಾಟಿಕ್‌ನ್ನು ಹೀರಿಕೊಳ್ಳಲು ಶರೀರಕ್ಕೆ ಕಷ್ಟವಾಗುತ್ತದೆ. ಇದೇ ರೀತಿ ರಕ್ತವನ್ನು ತೆಳುವಾಗಿಸುವ ಬ್ಲಡ್ ಥಿನ್ನರ್‌ಗಳೊಂದಿಗೆ ಹಸಿರು ಎಲೆಗಳ ತರಕಾರಿಯಂತಹ ವಿಟಾಮಿನ್ ಕೆ ಸಮೃದ್ಧ ಆಹಾರಗಳ ಸೇವನೆಯು ಈ ಔಷಧಿಗಳ ಪರಿಣಾಮವನ್ನು ಕಗ್ಗಿಸುತ್ತದೆ.

► ಮದ್ಯ ಮತ್ತು ಔಷಧಿ ಸೇವನೆ

ಮದ್ಯಪಾನವು ಔಷಧಿಗಳ ಕಾರ್ಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಮಾತ್ರೆಗಳನ್ನು ತಿನ್ನುವ ಮೊದಲು ಅಥವಾ ನಂತರ ಮದ್ಯಸೇವನೆಯು ಔಷಧಿಯ ಕಾರ್ಯನಿರ್ವಹಣೆಗೆ ವ್ಯತ್ಯಯಗಳನ್ನುಂಟು ಮಾಡುತ್ತದೆ. ಅದು ಔಷಧಿಯ ಚಟುವಟಿಕೆಗಳನ್ನು ಬದಲಿಸುತ್ತದೆ ಮತ್ತು ಅಡ್ಡ ಪರಿಣಾಮಗಳನ್ನೂ ಉಂಟುಮಾಡುತ್ತದೆ. ನೀವು ಮದ್ಯವನ್ನು ಸೇವಿಸುತ್ತಿದ್ದರೆ ಅದನ್ನೆಂದೂ ವೈದ್ಯರಿಂದ ಮುಚ್ಚಿಡಬೇಡಿ.

ಔಷಧಿಗಳು ಮತ್ತು ಆಹಾರಗಳ ನಡುವಿನ ಸಂಕೀರ್ಣ ಅಂತರ್‌ಕ್ರಿಯೆಯಿಂದಾಗಿ ಔಷಧಿಯು ನಮ್ಮ ಶರೀರದ ಮೇಲೆ ಬೀರುವ ನಿಖರವಾದ ಪರಿಣಾಮವನ್ನು ನಿರ್ಧರಿಸುವುದು ಕಷ್ಟವಾಗುತ್ತದೆ. ಸರಿಯಾದ ಔಷಧಿ ಸೇವನೆ ವಿಧಾನದ ಬಗ್ಗೆ ಅಥವಾ ಆಹಾರದಲ್ಲಿ ಯಾವುದೇ ಬದಲಾವಣೆಯ ಕುರಿತು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಲು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News