×
Ad

ರೊಹಿಂಗ್ಯಾ ಬಿಕ್ಕಟ್ಟು ಪ್ರಾದೇಶಿಕ ಭದ್ರತೆಗೆ ಮಾರಕ

Update: 2018-02-05 22:41 IST

ಜಕಾರ್ತ (ಇಂಡೋನೇಶ್ಯ), ಫೆ. 5: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ರೊಹಿಂಗ್ಯಾ ಮುಸ್ಲಿಮರ ದಮನವು ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝಾಯಿದ್ ರಅದ್ ಅಲ್-ಹುಸೈನ್ ಎಚ್ಚರಿಸಿದ್ದಾರೆ.

 ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷ ನಡೆದ ಸೇನಾ ಕಾರ್ಯಾಚರಣೆಯ ವೇಳೆ ಜನಾಂಗೀಯ ಹತ್ಯೆ ಮತ್ತು ಜನಾಂಗೀಯ ನಿರ್ಮೂಲನೆಯ ಕೃತ್ಯಗಳು ನಡೆದಿರಬಹುದು ಎಂದು ಇಂಡೋನೇಶ್ಯ ಪ್ರವಾಸದಲ್ಲಿರುವ ಝಾಯಿದ್ ಸೋಮವಾರ ಹೇಳಿದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ತಮ್ಮ ವಿರುದ್ಧ ಆರಂಭಗೊಂಡ ಹಿಂಸಾಚಾರಕ್ಕೆ ಬೆದರಿ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

‘‘ಮ್ಯಾನ್ಮಾರ್ ಅತ್ಯಂತ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ. ಇದು ಈ ವಲಯದ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದಾಗಿದೆ’’ ಎಂದರು.

ಅವರು ಇಂಡೋನೇಶ್ಯದ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿ ನಡೆದ ಮಾನವಹಕ್ಕುಗಳ ಸಮ್ಮೇಳನವೊಂದನ್ನು ಉದ್ದೇಶಿಸಿ ಮಾತನಾಡಿದರು.

‘‘ಇಂದಿನ ಮಾನವಹಕ್ಕುಗಳ ಉಲ್ಲಂಘನೆಗಳು ನಾಳೆ ಸಂಘರ್ಷಗಳಾಗುತ್ತವೆ ಎಂದು ಹೇಳಲಾಗುತ್ತಿದೆ’’ ಎಂದರು. ‘‘ರೊಹಿಂಗ್ಯಾ ಬಿಕ್ಕಟ್ಟು ಧಾರ್ಮಿಕ ಆಧಾರದಲ್ಲಿ ಬೃಹತ್ ಸಂಘರ್ಷವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ನಮಗೆ ಎಚ್ಚರಿಕೆಯ ಕರೆಗಂಟೆಯಾಗಬೇಕು’’ ಎಂದರು.

ಆಗಸ್ಟ್‌ನಲ್ಲಿ ಸ್ಫೋಟಗೊಂಡ ಹಿಂಸಾಚಾರವು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ 5 ದಶಕಗಳಿಂದ ನಡೆಯುತ್ತಿದ್ದ ತಾರತಮ್ಯ ಮತ್ತು ಹಿಂಸೆಯ ಅಂತಿಮ ಘಟ್ಟವಾಗಿತ್ತು ಎಂದು ಝಾಯಿದ್ ಹೇಳಿದರು.

ಅದೇ ವೇಳೆ, ಏಶ್ಯ ಖಂಡದಲ್ಲಿ ದೇಶಗಳು ಶ್ರೀಮಂತವಾಗುತ್ತಿದ್ದರೂ, ಪ್ರಜಾಪ್ರಭುತ್ವದ ಸ್ಥಿತಿಗತಿ ಹದಗೆಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News