ಬ್ರಿಟನ್ ವೀಸಾ: ಭಾರತೀಯರ ಆರೋಗ್ಯ ಸರ್ಚಾರ್ಜ್ ದುಪ್ಪಟ್ಟು
Update: 2018-02-05 23:10 IST
ಲಂಡನ್, ಫೆ. 5: 6 ತಿಂಗಳು ಅಥವಾ ಹೆಚ್ಚಿನ ಅವಧಿಗಾಗಿ ಬ್ರಿಟನ್ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಭಾರತೀಯ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಇತರರು ಈ ವರ್ಷದ ಉತ್ತರಾರ್ಧದಿಂದ ದುಪ್ಪಟ್ಟು ಆರೋಗ್ಯ ಸರ್ಚಾರ್ಜ್ ಪಾವತಿಸಬೇಕಾಗಿದೆ. ಈ ಮೂಲಕ, ಪ್ರಯಾಣ ದಾಖಲೆಗಳ ಒಟ್ಟಾರೆ ವೆಚ್ಚ ಹೆಚ್ಚಾಗಲಿದೆ.
2015ರಲ್ಲಿ ಜಾರಿಗೆ ತರಲಾದ ಪ್ರಸಕ್ತ ಆರೋಗ್ಯ ಸರ್ಚಾರ್ಜ್ ಒರ್ವ ವ್ಯಕ್ತಿಗೆ ಒಂದು ವರ್ಷಕ್ಕೆ 200 ಪೌಂಡ್ (ಸುಮಾರು 18,000 ರೂಪಾಯಿ). ಅದು ಇನ್ನು 400 ಪೌಂಡ್ (ಸುಮಾರು 36,000)ಗೆ ಏರಿಕೆಯಾಗಲಿದೆ. ವಿದ್ಯಾರ್ಥಿಗಳು ಈವರೆಗೆ ರಿಯಾಯಿತಿ ದರದಲ್ಲಿ, ಅಂದರೆ 150 ಪೌಂಡ್ (ಸುಮಾರು 13,500 ರೂ.) ಪಾವತಿಸುತ್ತಿದ್ದು, ಇನ್ನು ಮುಂದೆ ಅದು ವರ್ಷಕ್ಕೆ 300 ಪೌಂಡ್ (ಸುಮಾರು 27,000 ರೂಪಾಯಿ) ಆಗಲಿದೆ.
ಈ ವಿಷಯವನ್ನು ಬ್ರಿಟನ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಪ್ರಕಟಿಸಿದೆ.