ತಲವಾರು ಹಿಡಿದು ಇರಾನ್ ಅಧ್ಯಕ್ಷರ ಕಚೇರಿ ಪ್ರವೇಶಿಸಿದಾತನಿಗೆ ಗುಂಡು
Update: 2018-02-05 23:14 IST
ಟೆಹರಾನ್, ಫೆ. 5: ಇರಾನ್ ರಾಜಧಾನಿ ಟೆಹರಾನ್‌ನಲ್ಲಿರುವ ಅಧ್ಯಕ್ಷೀಯ ಕಚೇರಿ ಆವರಣವನ್ನು ತಲವಾರು ಹಿಡಿದುಕೊಂಡು ಪ್ರವೇಶಿಸಲು ಯತ್ನಿಸಿದ ಓರ್ವ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆ ‘ಇರ್ನಾ’ ವರದಿ ಮಾಡಿದೆ.
35 ವರ್ಷದ ಆಗಂತುಕನು ಮೊದಲ ಸುತ್ತಿನ ತಪಾಸಣಾ ಠಾಣೆಯನ್ನು ಹಾದು ಬರುವಲ್ಲಿ ಯಶಸ್ವಿಯಾದನು ಹಾಗೂ ಮುಂದಿನ ದ್ವಾರದಲ್ಲಿ ಆತನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಲಾಯಿತು ಎಂದು ಭದ್ರತಾ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಗಂತುಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ, ಆತನ ಪರಿಸ್ಥಿತಿಯ ಬಗ್ಗೆ ಅಥವಾ ಆತನ ಉದ್ದೇಶದ ಬಗ್ಗೆ ವಿವರಗಳು ಲಭ್ಯವಾಗಿಲ್ಲ.
ಈ ಸಂದರ್ಭದಲ್ಲಿ ಅಧ್ಯಕ್ಷ ಹಸನ್ ರೂಹಾನಿ ಅಧ್ಯಕ್ಷೀಯ ಆವರಣದಲ್ಲಿ ಇದ್ದರೆ ಎನ್ನುವುದೂ ಸ್ಪಷ್ಟವಾಗಿಲ್ಲ.