ತಿಪ್ಪೆಗುಂಡಿಗೆ ಎಸೆದರೂ ಮರಳಿ ಕೈ ಸೇರಿದ 12 ಲಕ್ಷ ರೂ. ಮೌಲ್ಯದ ಹಣ

Update: 2018-02-06 12:02 GMT

ಚೀನಾದ ಲಿಯಾನಿಂಗ್ ನಗರದ ನಿವಾಸಿಯೊಬ್ಬರು ಆಕಸ್ಮಿಕವಾಗಿ ತನ್ನ 1.24 ಲಕ್ಷ ಚೀನಿ ಯುವಾನ್ (ಅಂದಾಜು 12 ಲಕ್ಷ ರೂ.) ತ್ಯಾಜ್ಯದ ರಾಶಿಗೆ ಎಸೆದಿದ್ದರು. ಆದರೆ ಅವರ ಅದೃಷ್ಟವೆಂಬಂತೆ, ಅವರ ನೆರೆಹೊರೆಯ ಮಹಿಳೆಯೊಬ್ಬರಿಗೆ ಆ ಹಣ ದೊರೆತು, ಅದನ್ನು ಅವರು ಆತನಿಗೆ ಮರಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದೆ. ಲಿಯಾನಿಂಗ್ ನಗರದ ನಿವಾಸಿ ಯಾಂಗ್ ಈ ತಿಂಗಳ ಆರಂಭದಲ್ಲಿ ಎರಡು ಬ್ಯಾಗ್‌ಗಳೊಂದಿಗೆ ಮನೆಯಿಂದ ಹೊರಹೋಗಿದ್ದರು. ಒಂದು ಬ್ಯಾಗ್‌ನಲ್ಲಿ ಬ್ಯಾಂಕ್‌ನಲ್ಲಿ ಠೇವಣಿಯಿಡಲು ಅವರು ಒಯ್ಯುತ್ತಿದ್ದ ಹಣವಿದ್ದರೆ, ಇನ್ನೊಂದರಲ್ಲಿ ಮನೆಯ ತ್ಯಾಜ್ಯಗಳಿದ್ದವು.

ವಾಂಗ್ ಈ ಚೀಲಗಳೊಂದಿಗೆ ಮನೆಯಿಂದ ಹೊರಹೋದಾಗ ಅವರು ಪ್ರಮಾದವಶಾತ್ ಕಸವಿದ್ದ ಬ್ಯಾಗ್‌ನ ಬದಲಿಗೆ ಹಣವಿದ್ದ ಬ್ಯಾಗನ್ನು ತಿಪ್ಪೆಗುಂಡಿಗೆ ಎಸೆದಿದ್ದರು. ಬ್ಯಾಂಕ್ ತಲುಪಿದ ಬಳಿಕವೇ ಅವರಿಗೆ ತನ್ನಿಂದಾದ ಪ್ರಮಾದದ ಅರಿವಾಯಿತು. ಗಾಬರಿಗೊಂಡ ಅವರು ಕೂಡಲೇ ತಾನು ಬ್ಯಾಗನ್ನು ಎಸೆದ ತಿಪ್ಪೆಗುಂಡಿಯ ಬಳಿಗೆ ಧಾವಿಸಿದರು. ಅದರೆ ಎಷ್ಟು ಹುಡುಕಾಡಿದರೂ, ಅವರ ಚೀಲ ಪತ್ತೆಯಾಗಲಿಲ್ಲ. ಕೊನೆಗೆ ವಾಂಗ್ ಪೊಲೀಸರಿಗೆ ಕರೆ ಮಾಡಿದರು. ಈ ಪ್ರದೇಶದ ಸಿಸಿಟಿವಿಯ ದೃಶ್ಯಾವಳಿಗಳನ್ನು ಪೊಲೀಸರು ತಪಾಸಣೆ ನಡೆಸಿದಾಗ ವ್ಯಕ್ತಿಯೊಬ್ಬರು ಹಣದ ಬ್ಯಾಗನ್ನು ತಿಪ್ಪೆಗುಂಡಿಯಿಂದ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು. ಆದರೆ ಚಿತ್ರ ತುಂಬಾ ಅಸ್ಪಷ್ಟವಾಗಿದ್ದರಿಂದ, ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಆನಂತರ ಪೊಲೀಸರು ಹಣಸಿಕ್ಕಿದವರು ಕೂಡಲೇ ಅದನ್ನು ವಾಪಸ್ ಮಾಡುವಂತೆ ಅಥವಾ ಹಣದ ಬಗ್ಗೆ ಯಾವುದೇ ಮಾಹಿತಿಯಿದ್ದರೆ ತಮಗೆ ತಿಳಿಸುವಂತೆ ಪತ್ರಿಕೆಗಳಲ್ಲಿ ಪ್ರಕಟನೆ ನೀಡಿದರು. ಅದೃಷ್ಟವಶಾತ್ ವಾಂಗ್‌ರ ನೆರೆಹೊರೆಯ ಮಹಿಳೆಗೆ ಆ ಹಣ ದೊರೆತಿತ್ತು. ಪ್ರಕಟನೆ ನೋಡಿದ ಆಕೆ ತಡಮಾಡದೆ ಹಣದ ಚೀಲವನ್ನು ವಾಂಗ್‌ಗೆ ಹಸ್ತಾಂತರಿಸಿದರು.
ಬಯಸದೆ ಬಂದ ಭಾಗ್ಯವೆಂಬಂತೆ, ಇಷ್ಟೊಂದು ದೊಡ್ಡ ಮೊತ್ತದ ಹಣ ದೊರೆತ ಬಳಿಕ ತನಗೆ ನಿದ್ದೆಯೇ ಬಂದಿರಲಿಲ್ಲ. ಈಗ ತಾನು ನೆಮ್ಮದಿಯಿಂದ ನಿದ್ರಿಸಬಲ್ಲೆ ಎಂದು ಆ ಮಹಿಳೆ ಹೇಳಿದ್ದಾರೆಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ