ಕ್ಯಾನ್ಸರ್‌ನ್ನು ತಡೆಯುವ ಈ ಎರಡು ಲಸಿಕೆಗಳು ನಿಮಗೆ ಗೊತ್ತೇ....?

Update: 2018-02-06 09:40 GMT

ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ದೇಶದಲ್ಲಿ ಪ್ರತಿ ವರ್ಷ ಸುಮಾರು ಏಳು ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ಅಂಕಿಅಂಶಗಳಂತೆ ಭಾರತದಲ್ಲಿ 25 ಲಕ್ಷ ಕ್ಯಾನ್ಸರ್ ರೋಗಿಗಳಿದ್ದಾರೆ.

ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಮತ್ತು ಯಕೃತ್ತಿನ ಕ್ಯಾನ್ಸರ್ ಪುರುಷರನ್ನು ಹೆಚ್ಚಾಗಿ ಕಾಡಿದರೆ ಸ್ಥನ, ಗರ್ಭಕಂಠ ಮತ್ತು ಅಂಡಾಶಯ ಕ್ಯಾನ್ಸರ್‌ಗಳು ಮಹಿಳೆಯರನ್ನು ಕಾಡುವ ಸಾಮಾನ್ಯ ಕ್ಯಾನ್ಸರ್‌ಗಳಾಗಿವೆ.

ಕ್ಯಾನ್ಸರ್ ತಡೆಯುವ ಲಸಿಕೆಯ ಅಭಿವೃದ್ಧಿಯೊಂದಿಗೆ ನಾವೀಗ ಕ್ಯಾನ್ಸರ್‌ನ್ನು ದೂರವಿಡ ಬಹುದಾಗಿದೆ. ಬಿಸಿಜಿ ಲಸಿಕೆಗಳಂತೆ ಕ್ಯಾನ್ಸರ್ ಲಸಿಕೆಗಳು ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಕಾಯಿಲೆಗಳನ್ನುಂಟು ಮಾಡುವ ವೈರಸ್‌ಗಳಿಂದ ನಮ್ಮನ್ನು ರಕ್ಷಿಸುತ್ತವೆ.

ಎರಡು ವಿಧದ ಕ್ಯಾನ್ಸರ್ ಲಸಿಕೆಗಳು ಇಂದು ಲಭ್ಯವಿವೆ.

► ಎಚ್‌ಪಿವಿ ಲಸಿಕೆ

ಎಚ್‌ಪಿವಿ ಅಥವಾ ಹ್ಯೂಮನ್ ಪಾಪಿಲೋಮಾವೈರಸ್ ಲೈಂಗಿಕವಾಗಿ ಹರಡುವ ಸೋಂಕು ಆಗಿದ್ದು, ಇದು ಹೆಚ್ಚಾಗಿ ಗರ್ಭಕಂಠ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿದೆ. ಎಚ್‌ಪಿವಿ ಲಸಿಕೆಯನ್ನು ನೀಡುವ ಮೂಲಕ ಇಂತಹ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನು ಒದಗಿಸಬಹುದಾಗಿದೆ. ಎಚ್‌ಪಿವಿ ಲಸಿಕೆಯ ಚುಚ್ಚುಮದ್ದನ್ನು 9ರಿಂದ 12 ವರ್ಷ ಪ್ರಾಯದ ಬಾಲಕಿಯರು ಮತ್ತು ಬಾಲಕರಿಗೆ ಕೊಡಿಸಬೇಕು. ಆದರೂ 26 ವರ್ಷ ಪ್ರಾಯದವರೆಗೆ ಈ ಲಸಿಕೆಯನ್ನು ತೆಗೆದುಕೊಳ್ಳುತ್ತಿದ್ದರೆ ನಮ್ಮ ಶರೀರವು ಈಗಾಗಲೇ ತೆರೆದುಕೊಂಡಿರದ ಎಚ್‌ಪಿವಿ ತಳಿಗಳ ವಿರುದ್ಧ ರಕ್ಷಣೆಯು ದೊರೆಯುತ್ತದೆ. ಆದರೆ ಈಗಾಗಲೇ ವೈರಸ್‌ನಿಂದ ಪೀಡಿತರಾಗಿದ್ದರೆ ಈ ಲಸಿಕೆಯು ಯಾವುದೇ ಪರಿಣಾಮವನ್ನು ನೀಡುವುದಿಲ್ಲ.

ಎಚ್‌ಪಿವಿ ಲಸಿಕೆಯು ಗರ್ಭಕಂಠ, ಗುದದ್ವಾರ ಮತ್ತು ಜನನಾಂಗಗಳಿಗೆ ಸಂಬಂಧಿಸಿದ ಕ್ಯಾನ್ಸರ್ ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಎಚ್‌ಪಿವಿ ಲಸಿಕೆಯಲ್ಲಿ ಬೈವಲಂಟ್ ಮತ್ತು ಕ್ವಾಡ್ರಿವಲಂಟ್ ಎಂದು ಎರಡು ವಿಧಗಳಿವೆ. ಬೈವಲಂಟ್ ಲಸಿಕೆಯು ಎಚ್‌ಪಿವಿ 16 ಮತ್ತು 18ರ ವಿರುದ್ಧ ಹಾಗೂ ಕ್ವಾಡ್ರಿವಲಂಟ್ ಎಚ್‌ಪಿವಿ 16,18,11 ಮತ್ತು 6ರ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ.

ಗರ್ಭಿಣಿಯರು ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಲಸಿಕೆಯನ್ನು ನೀಡಲು ವೈದ್ಯರು ಶಿಫಾರಸು ಮಾಡುವುದಿಲ್ಲ. ಯೀಸ್ಟ್ ಅಥವಾ ಲೇಟೆಕ್ಸ್‌ಗೆ ಅಲರ್ಜಿಯನ್ನು ಹೊಂದಿರುವವರು ಲಸಿಕೆ ತೆಗೆದುಕೊಳ್ಳುವ ಮುನ್ನ ಅದನ್ನು ವೈದ್ಯರಿಗೆ ಅಗತ್ಯವಾಗಿ ತಿಳಿಸಬೇಕು.

► ಹೆಪಟಿಟಿಸ್ ಬಿ ಲಸಿಕೆ

 ತೀವ್ರ ಹೆಪಟಿಟಿಸ್ ಬಿ ವೈರಸ್ ಸೋಂಕನ್ನು ತಡೆಯುವದರಿಂದ ಯಕೃತ್ತಿನ ಕ್ಯಾನ್ಸರ್ ಪ್ರಕರಣಗಳನ್ನು ತಗ್ಗಿಸಬಹುದು. ಕ್ರೋನಿಕ್ ಹೆಪಟಿಟಿಸ್ ಬಿ ಸೋಂಕು ಯಕೃತ್ತಿನ ತೀವ್ರ ಉರಿಯೂತ, ಯಕೃತ್ತಿನ ಸಿರ್ಹೊಸಿಸ್ ಮತ್ತು ಹೆಪಾಟೊಸೆಲ್ಯುಲುರ್ ಕ್ಯಾನ್ಸರ್‌ಗಳಿಗೆ ಕಾರಣವಾಗಬಲ್ಲುದು. ಹೆಪಟಿಟಿಸ್ ಬಿ ವೈರಸ್ ಯಕೃತ್ತಿನ ಕಾಯಿಲೆಗೆ ಮುಖ್ಯ ಕಾರಣವಾಗಿದೆ.

ಹೆಪಟಿಟಿಸ್ ಬಿ ಲಸಿಕೆಯನ್ನು ಆರು ತಿಂಗಳ ಅವಧಿಯಲ್ಲಿ 3-4 ಬಾರಿ ನೀಡಲಾಗುತ್ತದೆ. ಶಿಶುಗಳಿಗೆ ಜನನ ಕಾಲದಲ್ಲಿ ಮೊದಲ ಬಾರಿಗೆ ಲಸಿಕೆಯನ್ನು ನೀಡಬೆಕು. ಈ ಮೊದಲು ತೆಗೆದುಕೊಂಡಿರದ ಮಕ್ಕಳು ಮತ್ತು 19 ವರ್ಷದೊಳಗಿನವರು ಅಗತ್ಯವಾಗಿ ಈ ಲಸಿಕೆಯನ್ನು ತೆಗೆದುಕೊಳ್ಳಲೇಬೇಕು.

ಕ್ರೋನಿಕ್ ಹೆಪಟಿಟಿಸ್ ಬಿ ಸೋಂಕು ಹೊಂದಿರುವರು ಅದರ ಯಾವುದೇ ಲಕ್ಷಣಗಳನ್ನು ತೋರಿಸದಿದ್ದರೂ ವೈರಸ್‌ನ್ನು ಹರಡಬಲ್ಲರು. ಹೀಗಾಗಿ ಸೋಂಕಿನ ವಿರುದ್ಧ ಲಸಿಕೆಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.

 ಕ್ಯಾನ್ಸರ್‌ನಿಂದ ನರಳುತ್ತಿರುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದರಿಂದಾಗಿ ಕ್ಯಾನ್ಸರ್ ಸಂಬಂಧಿತ ಸಾವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎಚ್‌ಪಿವಿ ಮತ್ತು ಹೆಪಟಿಟಿಸ್ ಬಿ ಲಸಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮನ್ನು ಎರಡು ಸಾಮಾನ್ಯ ಕ್ಯಾನ್ಸರ್‌ಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಈ ಕ್ಯಾನ್ಸರ್ ಪ್ರತಿಬಂಧಕ ಲಸಿಕೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ಮತ್ತು ನಿಮ್ಮ ಜೊತೆಗೆ ನಿಮ್ಮ ಕುಟುಂಬಕ್ಕೂ ರಕ್ಷಣೆಯನ್ನು ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News