ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವುದು ಹೇಗೆ...?

Update: 2018-02-06 10:55 GMT

ಕ್ರೆಡಿಟ್ ಕಾರ್ಡ್‌ಗಳು ಕೈಯಲ್ಲಿ ಕಾಸಿಲ್ಲದಿದ್ದಾಗ ಆಪತ್ಬಾಂಧವನಂತೆ. ಇಂದು ಹೆಚ್ಚಿನವರು ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಈ ಸೌಲಭ್ಯದಿಂದಾಗಿ ಶಾಪಿಂಗ್ ಮಾಡುವಾಗ ನಗದು ಹಣ ಜೇಬಿನಲ್ಲಿ ಇರಬೇಕೆಂದಿಲ್ಲ. ತುರ್ತು ಖರ್ಚಿಗೆ ನಗದು ಹಣ ಬೇಕಾಗಿದ್ದರೆ ಅದನ್ನೂ ಈ ಕಾರ್ಡ್ ನೀಡುತ್ತದೆ.

 ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಕೆಲವೊಮ್ಮೆ ಒಂದು ನಿರ್ದಿಷ್ಟ ಕಾರ್ಡ್ ನಿಮಗೆ ಹೆಚ್ಚು ಉಪಯೋಗವಿಲ್ಲ ಎಂದು ಅನ್ನಿಸಬಹುದು ಅಥವಾ ಕೆಲವೊಮ್ಮೆ ನಿಮ್ಮ ಬಳಿ ಬಹಳಷ್ಟು ಕ್ರೆಡಿಟ್ ಕಾರ್ಡ್‌ಗಳಿದ್ದು, ಎಲ್ಲವನ್ನೂ ನೀವು ಬಳಸದಿರಬಹುದು. ಹೀಗಾಗಿ ಅಗತ್ಯವಿಲ್ಲದ ಕಾರ್ಡ್‌ಗಳನ್ನು ರದ್ದುಗೊಳಿಸಲು ನೀವು ಬಯಸಬಹುದು.

 ಆದರೆ ಕಾರ್ಡ್ ರದ್ದುಗೊಳಿಸಲು ನೀವು ಕ್ರಮವನ್ನು ತೆಗೆದುಕೊಂಡಿದ್ದರೂ ನಿಮ್ಮ ಖಾತೆಯಲ್ಲಿ ಬಾಕಿಯಿದೆ ಎಂದು ಸೂಚಿಸುವ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ನಿಮಗೆ ಬರುತ್ತಲೇ ಇರಬಹುದು. ಇದಕ್ಕೆ ಕಾರಣವೇನು? ನೀವು ಕಾರ್ಡ್ ರದ್ದುಗೊಳಿಸುವಾಗ ಸರಿಯಾದ ಕ್ರಮವನ್ನು ಅನುಸರಿಸದಿದ್ದುದು ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿರುತ್ತದೆ.

ನಿಮಗೆ ಯಾವುದೇ ಕ್ರೆಡಿಟ್ ಕಾರ್ಡ್ ರದ್ದು ಮಾಡಬೇಕೆಂದಿದ್ದರೆ ಮೊದಲು ಕಾರ್ಡ್‌ನ ಹಿಂಬದಿಯಲ್ಲಿರುವ ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ವಿಭಾಗದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಕಾರ್ಡ್‌ನಲ್ಲಿ ಬಾಕಿಯಿರುವ ನಿಖರವಾದ ಮೊತ್ತವನ್ನು ತಿಳಿದುಕೊಳ್ಳಿ.

ಇದಾದ ಬಳಿಕ ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ ಬ್ಯಾಂಕಿಗೆ ತೆರಳಿ ಕಾರ್ಡ್‌ನ ಅಷ್ಟೂ ಬಾಕಿಯನ್ನು ಚುಕ್ತಾ ಮಾಡಿ. ಸಣ್ಣ ಮೊತ್ತವಾದರೆ ಒಂದೇ ಬಾರಿಗೆ ತೀರಿಸಬಹುದು. ದೊಡ್ಡ ಮೊತ್ತವಾಗಿದ್ದರೆ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಿಯಮಿತವಾಗಿ ಹಣವನ್ನು ತುಂಬಿ ಬಾಕಿಯನ್ನು ಚುಕ್ತಾ ಮಾಡಿ. ಮಾಸಿಕ ಪಾವತಿಯನ್ನು ಮಾಡಿದರೆ ಬಾಕಿಯಿರುವ ಮೊತ್ತದ ಮೇಲೆ ಬಡ್ಡಿ ಬೀಳುತ್ತಲೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಹೀಗಾಗಿ ನಿಮ್ಮ ಅಂತಿಮ ಪಾವತಿಯು ಎಲ್ಲ ಬಾಕಿ ಶುಲ್ಕಗಳನ್ನು ಒಳಗೊಂಡಿರಬೇಕು. ನೀವು ಹಣ ಪಾವತಿ ಮಾಡಿದ ದಾಖಲೆಗಳನ್ನು ಜತನವಾಗಿ ರಿಸಿಕೊಳ್ಳಿ.

ಕ್ರೆಡಿಟ್ ಕಾರ್ಡ್‌ನ ಬಾಕಿಯನ್ನು ಸಂಪೂರ್ಣವಾಗಿ ತೀರಿಸಿದ ಬಳಿಕ ಮತ್ತೊಮ್ಮೆ ಬ್ಯಾಂಕಿನ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿ ಕಾರ್ಡ್ ರದ್ದುಗೊಳಿಸಲು ಮನವಿಯನ್ನು ಸಲ್ಲಿಸಿ. ಹಾಗೆ ಕರೆ ಮಾಡಿದ ದಿನಾಂಕ, ಸಮಯ ಮತ್ತು ಮನವಿಯನ್ನು ಸ್ವೀಕರಿಸಿದ ವ್ಯಕ್ತಿಯ ಹೆಸರು ಇವುಗಳನ್ನು ನೋಟ್ ಮಾಡಿಕೊಳ್ಳಿ. ನಿಮಗೆ ಮನವಿ ಸ್ವೀಕಾರ ದೃಢೀಕರಣ ಸಂಖ್ಯೆಯನ್ನು ನೀಡಲಾಗುತ್ತದೆ ಮತ್ತು ಮನವಿಗೆ ಸಂಬಂಧಿಸಿದಂತೆ ಭವಿಷ್ಯದ ಎಲ್ಲ ಸಂವಹನಗಳಲ್ಲಿ ಈ ಸಂಖ್ಯೆಯ ಉಲ್ಲೇಖ ಅಗತ್ಯವಾಗಿರುತ್ತದೆ.

ಇಷ್ಟಾದ ಬಳಿಕ ಕ್ರೆಡಿಟ್ ಕಾರ್ಡ್ ಕಂಪನಿಗೆ ಪತ್ರವನ್ನು ಬರೆದು ನಿಮ್ಮ ಖಾತೆ ಮುಚ್ಚುಗಡೆಯ ದೃಢೀಕರಣವನ್ನು ಕೋರಿ. ಇದರಲ್ಲಿ ನೀವು ಗ್ರಾಹಕ ಸೇವಾ ವಿಭಾಗಕ್ಕೆ ಮಾಡಿದ್ದ ಕರೆಯ ವಿವರಗಳನ್ನು ದಾಖಲಿಸಿ. ಈ ಪತ್ರವನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕವೇ ಕಳುಹಿಸುವುದರಿಂದ ನಿಮ್ಮ ಬಳಿ ಕಾನೂನುಬದ್ಧ ದಾಖಲೆಯಿರುತ್ತದೆ.

ಕೆಲವು ವಾರಗಳ ಬಳಿಕ ನಿಮ್ಮ ಕ್ರೆಡಿಟ್ ಕಾರ್ಡ್‌ನ್ನು ರದ್ದುಗೊಳಿಸಲಾಗಿದೆ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚಲಾಗಿದೆ ಎಂದು ಬ್ಯಾಂಕ್ ನಿಮಗೆ ದೃಢೀಕರಣವನ್ನು ನೀಡುತ್ತದೆ. ಇಷ್ಟಾದ ಮೇಲೆ ಕ್ರೆಡಿಟ್ ಕಾರ್ಡ್‌ನ್ನು ಅದರ ಮ್ಯಾಗ್ನೆಟಿಕ್ ಸ್ಟ್ರಿಪ್‌ನ ಭಾಗದಲ್ಲಿ ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿ ವಿಲೇವಾರಿ ಮಾಡಿ. ಅಲ್ಲಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ರದ್ದತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಕಾರ್ಡ್ ರದ್ದು ಮಾಡುವಾಗ ಗಮನದಲ್ಲಿರಬೇಕಾದ ಸಂಗತಿಗಳು

ನಿಮ್ಮ ಬಾಕಿಯನ್ನು ಸಂಪೂರ್ಣವಾಗಿ ತೀರಿಸದಿದ್ದರೆ ಬ್ಯಾಂಕ್ ಕಾರ್ಡ್‌ನ್ನು ರದ್ದುಗೊಳಿಸುವುದಿಲ್ಲ ಎನ್ನುವುದು ನಿಮಗೆ ಗೊತ್ತಿರಬೇಕಾದ ಮುಖ್ಯ ಮಾಹಿತಿಯಾಗಿದೆ. ಕೆಲವೊಮ್ಮ ಬಿಲ್ಲಿಂಗ್ ದಿನಾಂಕದ ಬಳಿಕ ನೀವು ಕಾರ್ಡ್‌ನ್ನು ರದ್ದುಗೊಳಿಸಬಹುದು ಮತ್ತು ನಿಮ್ಮ ಕೊನೆಯ ಸ್ಟೇಟ್‌ಮೆಂಟ್‌ನಲ್ಲಿ ಆ ಬಾಕಿಯು ಪ್ರತಿಫಲಿಸದಿರಬಹುದು. ನೀವು ಬ್ಯಾಂಕಿನ ಬಾಕಿಯನ್ನು ಸಂಪೂರ್ಣವಾಗಿ ತೀರಿಸುವವರೆಗೆ ಬಡ್ಡಿ, ವಿಳಂಬ ಶುಲ್ಕ ಮತ್ತು ಇತರ ಶುಲ್ಕಗಳು ಅನ್ವಯಿಸುತ್ತಲೇ ಇರುತ್ತವೆ.

ಸುಮ್ಮನೆ ಕಾರ್ಡ್‌ನ್ನು ತುಂಡರಿಸಿ ಬ್ಯಾಂಕಿಗೆ ಕಳುಹಿಸುವುದರಿಂದ ನಿಮ್ಮ ಕಾರ್ಡ್ ರದ್ದುಗೊಳ್ಳುವುದಿಲ್ಲ. ಕಾರ್ಡ್‌ನ್ನು ರದ್ದುಮಾಡಲಾಗಿದೆ ಎಂಬ ಹಿಂಬರಹವನ್ನು ಬ್ಯಾಂಕಿನಿಂದ ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News