ನಮ್ಮ ನಾಗರಿಕರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಿ: ಪಾಕಿಸ್ತಾನಕ್ಕೆ ಚೀನಾ ಸೂಚನೆ

Update: 2018-02-06 16:52 GMT

ಬೀಜಿಂಗ್, ಫೆ. 6: ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ತನ್ನ ಸಾವಿರಾರು ನಾಗರಿಕರನ್ನು ರಕ್ಷಿಸಲು ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚೀನಾ ಮಂಗಳವಾರ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.

ಕರಾಚಿಯಲ್ಲಿ ಚೀನಾದ ಶಿಪ್ಪಿಂಗ್ ಉದ್ಯೋಗಿಯೋರ್ವ ಗುಂಡಿನ ದಾಳಿಯಲ್ಲಿ ಮೃತಪಟ್ಟ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಇತ್ತೀಚೆಗೆ ಪಾಕಿಸ್ತಾನ ಸರಕಾರ ಮತ್ತು ಸೇನೆ ಹಲವಾರು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಮತ್ತು ಸಾಮಾಜಿಕ ಭದ್ರತೆ ಖಾತರಿ ಕಾರ್ಯಾಚರಣೆಗಳನ್ನು ನಡೆಸಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸೋಮವಾರದ ಹತ್ಯೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲಿರುವ ತನ್ನ ರಾಷ್ಟ್ರೀಯರ ಭದ್ರತೆ ಬಗ್ಗೆ ಚೀನಾಕ್ಕೆ ಭರವಸೆಯಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘‘ಚೀನಾ ನಾಗರಿಕರ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಹಾಗೂ ಈ ಪ್ರಕರಣದ ಬೆಳವಣಿಗೆಯನ್ನು ನಾವು ನಿಕಟವಾಗಿ ಗಮನಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News